ನಿತೀಶ್ ಕುಮಾರ್ ಎನ್ಡಿಎ ಮೈತ್ರಿಯಿಂದ ಹೊರಬರಲಿ, ತೇಜಸ್ವಿಯನ್ನು ಸಿಎಂ ಮಾಡಲಿ; ದಿಗ್ವಿಜಯ್ ಸಿಂಗ್
ದಿಗ್ವಿಜಯ ಸಿಂಗ್ ಅವರು ನಿತೀಶ್ ಕುಮಾರ್ ಅವರಿಗೆ ಬಿಹಾರವನ್ನು ತೊರೆದು ರಾಷ್ಟ್ರ ರಾಜಕೀಯಕ್ಕೆ ಪ್ರವೇಶಿಸುವಂತೆ ಸಲಹೆ ನೀಡಿದ್ದಾರೆ. ನಿತೀಶ್ ಜಿ, ಬಿಹಾರವು ನಿಮಗೆ ಚಿಕ್ಕದಾಗಿದೆ. ನೀವು ರಾಷ್ಟ್ರ ರಾಜಕಾರಣಕ್ಕೆ ಸೇರಬೇಕು ಎನ್ನುವ ಮೂಲಕ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ನವ ದೆಹಲಿ (ನವೆಂಬರ್ 12); ಚುನಾವಣಾ ಸಮೀಕ್ಷೆಗಳನ್ನು ಸುಳ್ಳು ಮಾಡಿರುವ ಬಿಹಾರದ ಮತದಾರರು ಮತ್ತೆ ತಮ್ಮ ನೆಲದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಬಹುಮತ ನೀಡಿದ್ದಾರೆ. ಜೆಡಿಯು ಪಕ್ಷದ ನಿತೀಶ್ ಕುಮಾರ್ ಆರನೇ ಬಾರಿ ಸಿಎಂ ಆಗುವ ತವಕದಲ್ಲಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ತಮ್ಮ ಮನದ ಇಂಗಿತವನ್ನು ಹೊರಹಾಕಿರುವ ಮಧ್ಯಪ್ರದೇಶದ ಮಾಜಿ ಸಿಎಂ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, "ನಿತೀಶ್ ಕುಮಾರ್ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎಡಿಎ) ಯನ್ನು ತ್ಯಜಿಸಬೇಕು ಮತ್ತು ಆರ್ಜೆಡಿ ಜೊತೆಗೆ ಮೈತ್ರಿ ಸಾಧಿಸಿ ತೇಜಶ್ವಿ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಹಾರದಲ್ಲಿ ಸ್ಥಳೀಯ ಪಕ್ಷಗಳ ಪ್ರಾಬಲ್ಯವನ್ನು ನಿಯಂತ್ರಿಸಿ ಬಿಜೆಪಿ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ದಿಗ್ವಿಜಯ್ ಸಿಂಗ್, "ಬಿಹಾರದಲ್ಲಿ ಬಿಜೆಪಿ ತನ್ನ ತಂತ್ರದೊಂದಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪ್ರಬಲ್ಯ ಕಡಿಮೆ ಮಾಡಿದೆ ತಾನು ಹೆಮ್ಮರದಂತೆ ಬೆಳೆಯುತ್ತಿದೆ. ಬಿಜೆಪಿ ಬಳ್ಳಿ ಇದ್ದಂತೆ, ಅದು ಮತ್ತೊಂದು ಮರದ ಬೆಂಬಲವನ್ನು ತೆಗೆದುಕೊಂಡು ಮರ ಒಣಗುತ್ತಿರುವಾಗ ಪ್ರವರ್ಧಮಾನಕ್ಕೆ ಬರುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ನಿತೀಶ್ ಕುಮಾರ್ ಅವರಿಗೆ ಕಿವಿಮಾತು ಹೇಳಿರುವ ದಿಗ್ವಿಜಯ್ ಸಿಂಗ್, "ನಿತೀಶ್ ಜಿ, ಲಾಲು ಯಾದವ್ ಮತ್ತು ನೀವು ಪರಸ್ಪರ ವಿರುದ್ಧ ನಿಂತು ಹೋರಾಡಿದ್ದೀರಿ ನಿಜ. ಪ್ರಸ್ತುತ ಲಾಲೂ ಪ್ರಸಾದ್ ಜೈಲಿನಲ್ಲಿದ್ದಾರೆ. ಆದರೆ, ಬಿಜೆಪಿ ಸೈದ್ದಾಂತಿಕವಾಗಿ ನಿಮ್ಮಿಂದ ಬಲು ದೂರವಿದೆ. ಬಿಜೆಪಿ-ಆರ್ಎಸ್ಎಸ್ ಸಿದ್ಧಾಂತವನ್ನು ಬಿಟ್ಟು ನೀವು ತೇಜಸ್ವಿಯನ್ನು ಆಶೀರ್ವದಿಸಿ. ಈ ಬಳ್ಳಿ ತರಹದ ಬಿಜೆಪಿಯನ್ನು ಬಿಹಾರದಲ್ಲಿ ಬೆಳೆಯಲು ಬಿಡಬೇಡಿ” ಎಂದು ಮನವಿ ಮಾಡಿದ್ದಾರೆ.
ಅಲ್ಲದೆ, ದಿಗ್ವಿಜಯ ಸಿಂಗ್ ಅವರು ನಿತೀಶ್ ಕುಮಾರ್ ಅವರಿಗೆ ಬಿಹಾರವನ್ನು ತೊರೆದು ರಾಷ್ಟ್ರ ರಾಜಕೀಯಕ್ಕೆ ಪ್ರವೇಶಿಸುವಂತೆ ಸಲಹೆ ನೀಡಿದ್ದಾರೆ. “ನಿತೀಶ್ ಜಿ, ಬಿಹಾರವು ನಿಮಗೆ ಚಿಕ್ಕದಾಗಿದೆ. ನೀವು ರಾಷ್ಟ್ರ ರಾಜಕಾರಣಕ್ಕೆ ಸೇರಬೇಕು” ಎನ್ನುವ ಮೂಲಕ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ದಿಗ್ವಿಜಯ ಸಿಂಗ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ ಬೋಪಾಲ್ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್ ಎದುರು ಸೋಲನುಭವಿಸಿದ್ದರು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಕಮಲನಾಥ್ ಮುಖ್ಯಮಂತ್ರಿಯಾಗಿದ್ದರು. ಆದರೆ, ಜ್ಯೋತಿರಾಧಿತ್ಯ ಸಿಂಧಿಯಾ ಅವರು ಕಾಂಗ್ರೆಸ್ನಿಂದ ಗೆದ್ದು, ಕಳೆದ ಮಾರ್ಚ್ನಲ್ಲಿ 22 ಶಾಸಕರೊಂದಿಗೆ ಕಾಂಗ್ರೆಸ್ನಿಂದ ಬಿಜೆಪಿಗೆ ಸೇರ್ಪಡೆಯಾದ ನಂತರ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಉರುಳಿ ಇದೀಗ ಬಿಜೆಪಿ ಅಧಿಕಾರದಲ್ಲಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ