ನವ ದೆಹಲಿ (ಸೆಪ್ಟೆಂಬರ್ 21); ಭಾರತದಲ್ಲಿ ಡಿಜಿಟಲ್ ಮಾಧ್ಯಮಗಳು ಪ್ರಸ್ತುತ ವಿಷಪೂರಿತವಾಗಿವೆ. ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಹಿಂಸಾಚಾರ ಮತ್ತು ಭಯೋತ್ಪಾದನೆಗೆ ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡುತ್ತಿವೆ. ಹೀಗಾಗಿ ಸರ್ಕಾರದ ಮೊದಲು ಈ ವೆಬ್ ಆಧಾರಿತ ಮಾಧ್ಯಮಗಳನ್ನು ನಿಯಂತ್ರಿಸಬೇಕು. ಅದೇ ರೀತಿ ಎಲೆಕ್ಟ್ರಾನಿಕ್ ಮಾಧ್ಯಮಗಳೂ ಸಹ ನಿಯಮ ಮೀರಿ ವರ್ತಿಸುತ್ತಿದ್ದು, ಇವುಗಳಿಗೂ ಸೂಕ್ತ ನಿಯಮಾವಳಿಗಳನ್ನು ಸಿದ್ದಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಇತ್ತೀಚೆಗೆ ಸುದರ್ಶನ್ ಎಂಬ ಖಾಸಗಿ ಸುದ್ದಿ ವಾಹಿನಿಯಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಐಎಎಸ್-ಐಪಿಎಸ್ ಉತ್ತೀರ್ಣರಾಗಿ ಸೇವೆಗೆ ನಿಯೋಜನೆಯಾಗುತ್ತಿದ್ದಾರೆ. ಇದು ಸಹ ಒಂದು ರೀತಿಯ "ಯುಪಿಎಸ್ಸಿ ಜಿಹಾದ್" ಎಂದು ಉಲ್ಲೇಖಿಸಿ ಕಾರ್ಯಕ್ರಮ ಮಾಡಿದ್ದರು. ಈ ಕಾರ್ಯಕ್ರಮ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ಪ್ರಕರಣದ ಸಂಬಂಧ ಇಂದು ನಡೆಸಿದ ವಿಚಾರಣೆ ವೇಳೆ ನ್ಯಾಯಾಲಯ, “ಡಿಜಿಟಲ್ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಿಗೆ ನಿಯಂತ್ರಣ ಅಗತ್ಯ” ಎಂದು ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಇಂದು ನ್ಯಾಯಾಲಯಕ್ಕೆ ಎರಡನೇ ಅಫಿಡೆವಿಟ್ ಸಹ ಸಲ್ಲಿಸಿರುವ ಕೇಂದ್ರ ಸರ್ಕಾರ, “ವೆಬ್-ಆಧಾರಿತ ಡಿಜಿಟಲ್ ಮಾಧ್ಯಮದಲ್ಲಿ ಯಾವುದೇ ಪರಿಶೀಲನೆ ಇರುವುದಿಲ್ಲ. ಹೀಗಾಗಿ ಸಮಾಜದಲ್ಲಿ ವಿಷಪೂರಿತ ಸಂದೇಶ ಹಾಗೂ ದ್ವೇಷವನ್ನು ಹರಡುವುದರ ಜೊತೆಗೆ ಹಿಂಸಾಚಾರ ಮತ್ತು ಭಯೋತ್ಪಾದನೆಗೂ ಸಹ ಉದ್ದೇಶಪೂರ್ವಕ ಮತ್ತು ಉದ್ದೇಶಿತ ಪ್ರಚೋದನೆಯನ್ನು ಉಂಟುಮಾಡುತ್ತಿದೆ. ಅಲ್ಲದೆ, ಡಿಜಿಟಲ್ ಮಾಧ್ಯಮಗಳು ವ್ಯಕ್ತಿಗಳು ಮತ್ತು ಸಂಸ್ಥೆಗಳ ಚಿತ್ರಣವನ್ನು ಕಳಂಕಿತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ವಾಸ್ತವವಾಗಿ ಇದು ತೀರಾ ಅತಿರೇಕವಾಗಿದೆ" ಎಂದು ಸರ್ಕಾರ ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ.
ಇದೇ ಸಂದರ್ಭದಲ್ಲಿ, "ಸುಪ್ರೀಂ ಕೋರ್ಟ್ ಮಾಧ್ಯಮಗಳಿಗೆ ಮಾರ್ಗಸೂಚಿಗಳನ್ನು ಹಾಕುವುದನ್ನು ಪರಿಗಣಿಸಲು ಬಯಸಿದರೆ, ನ್ಯಾಯಾಲಯವು ವೆಬ್ ಆಧಾರಿತ ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸಬೇಕು. ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೇಲಿನ ನಿಯಂತ್ರಣದ ಜವಾಬ್ದಾರಿಯನ್ನು ಸಂಸತ್ತಿಗೆ ಬಿಡಬೇಕು” ಎಂದು ತಿಳಿಸಲಾಗಿದೆ.
“ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಯಾವುದೇ ಮಾರ್ಗಸೂಚಿಗಳಿರಬಾರದು. ಒಂದು ವೇಳೆ ಮಾರ್ಗಸೂಚಿಗಳು ಅಗತ್ಯ ಎಂದು ಭಾವಿಸುವುದಾದರೆ ಅದನ್ನು ಶಾಸಕಾಂಗಕ್ಕೆ ಬಿಡಬೇಕು. ಆದರೆ, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಹಾಕಲು ಬಯಸಿದರೆ, ವೆಬ್ ನಿಯತಕಾಲಿಕೆಗಳು, ವೆಬ್ ಆಧಾರಿತ ಸುದ್ದಿ ವಾಹಿನಿಗಳು ಮತ್ತು ವೆಬ್ ಆಧಾರಿತ ಪತ್ರಿಕೆಗಳು ವ್ಯಾಪಕವಾದ ವ್ಯಾಪ್ತಿಯನ್ನು ಹೊಂದಿರುವುದರಿಂದ ಮತ್ತು ಅದು ಸಂಪೂರ್ಣವಾಗಿ ಅನಿಯಂತ್ರಿತವಾಗಿದೆ.
ಈ ಪೋರ್ಟಲ್‌ಗಳು, ವೆಬ್ ನಿಯತಕಾಲಿಕೆಗಳು ಮತ್ತು ಚಾನೆಲ್‌ಗಳು ಚಾಲನೆಯಲ್ಲಿವೆ. ಲಕ್ಷ ಮತ್ತು ಕೋಟಿ ಚಂದಾದಾರರನ್ನು ಹೊಂದಿರುವ ಯೂಟ್ಯೂಬ್‌ನಂತಹ ವೀಡಿಯೊ ಹೋಸ್ಟಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಕೋರ್ಟ್ ನಿಯಂತ್ರಣ ಹೇರಲು ಮಾರ್ಗಸೂಚಿಗಳನ್ನು ಸಿದ್ದಪಡಿಸಲು ತಮ್ಮ ಅಭ್ಯಂತರ ಇಲ್ಲ” ಎಂದು ಕೇಂದ್ರ ಸರ್ಕಾರ ತನ್ನ ಅಫಿಡೆವಿಟ್ನಲ್ಲಿ ತಿಳಿಸಿದೆ.
ತನ್ನ ಹಿಂದಿನ ಅಫಿಡವಿಟ್ನಲ್ಲೂ ಸಹ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ, “ಎಲೆಕ್ಟ್ರಾನಿಕ್ ಮಾಧ್ಯಮದ ಮುಂದೆ ಮಾನದಂಡಗಳನ್ನು ಹಾಕುವಾಗ ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸುವ ಬಗ್ಗೆ ಸುಪ್ರೀಂ ಕೋರ್ಟ್ ಗಮನಹರಿಸಬೇಕು. ಏಕೆಂದರೆ ಯಾವುದೇ ವಿಚಾರಗಳ ಮೇಲೆ ಡಿಜಿಟಲ್ ಮಾಧ್ಯಮ ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ವೈರಲ್ ಆಗುವ ಸಾಮರ್ಥ್ಯವನ್ನು ಹೊಂದಿದೆ” ಎಂದು ತಿಳಿಸಿತ್ತು.
ಸುದರ್ಶನ್ ಎಂಬ ಖಾಸಗಿ ಚಾನೆಲ್ನಲ್ಲಿ “ಬಿಂದಾಸ್ ಬೋಲ್" ಎಂಬ ಕಾರ್ಯಕ್ರಮದಲ್ಲಿ "ಯುಪಿಎಸ್ಸಿ ಜಿಹಾದ್" ಎಂಬ ಹೆಸರಿನಲ್ಲಿ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿತ್ತು. ಈ ವೇಳೆ ಈ ಚಾನೆಲ್ ಅನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ ನ್ಯಾಯಾಲಯವು, “ಈ ಕಾರ್ಯಕ್ರಮದ ಮೂಲಕ ಸುದರ್ಶನ್ ವಾಹಿನಿಯು ಮುಸ್ಲಿಮರನ್ನು ಕೆಣಕಲು ಪ್ರಯತ್ನಿಸುತ್ತಿದೆ” ಎಂದು ಹೇಳಿ ತಡೆಹಿಡಿದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ