ನವ ದೆಹಲಿ; ರಾಜಸ್ಥಾನದಲ್ಲಿ ಬಂಡಾಯ ನಾಯಕ ಸಚಿನ್ ಪೈಲಟ್ ಅವರಿಂದ ಕಳೆದ ಒಂದು ವಾರದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಿಸಿದ್ದರು. ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಬಿಜೆಪಿ ಪಕ್ಷದ ಪ್ರಮುಖ ನಾಯಕಿ ಹಾಗೂ ಮಾಜಿ ಸಿಎಂ ವಸುಂಧರಾ ರಾಜೇ ಸ್ವತಃ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉಳಿಸಲು ಸಹಕರಿಸಿದ್ದಾರೆ ಎಂದು ಬಿಜೆಪಿ ಮಿತ್ರ ಪಕ್ಷಗಳು ಇದೀಗ ಆರೋಪಿಸಿವೆ.
ಸಂಸತ್‌ನಲ್ಲಿ ರಾಜಸ್ಥಾನದ ನಾಗೌರ್ ಜಿಲ್ಲೆಯನ್ನು ಪ್ರತಿನಿಧಿಸುವ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಸಂಸದ ಹನುಮಾನ್ ಬೆನಿವಾಲ್ ಅವರು ಈ ಕುರಿತು ಟ್ವೀಟ್ ಮಾಡಿದ್ದು, “ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ತಮ್ಮ ಹತ್ತಿರದ ಕಾಂಗ್ರೆಸ್ ಶಾಸಕರನ್ನು ಕರೆದು ಅಶೋಕ್ ಗೆಹ್ಲೋಟ್ ಅವರನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ. ಅವರು ಸಿಕಾರ್ ಮತ್ತು ನಾಗೌರ್ ಜಿಲ್ಲೆಗೆ ಸೇರಿದ ಪ್ರತಿಯೊಬ್ಬ ಜಾಟ್ ಸಮುದಾಯದ ಶಾಸಕರನ್ನು ಕರೆದು ಸಚಿನ್ ಪೈಲಟ್ ನಿಂದ ದೂರವಿರುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ನನ್ನ ಬಳಿ ಪುರಾವೆಗಳಿವೆ” ಎಂದು ಹೇಳಿಕೊಂಡಿರುವುದು ಇದೀಗ ಬಿಜೆಪಿ ನಾಯಕರಿಗೆ ಇರಿಸು ಮುರಿಸು ಉಂಟಾಗುವಂತೆ ಮಾಡಿದೆ.
ಈ ಕುರಿತು ಖಾಸಗಿ ಸುದ್ದಿ ವಾಹಿನಿಗಳ ಬಳಿ ಮಾತನಾಡಿರುವ ಸಂಸದ ಬೆನಿವಾಲ್, “ಸ್ವತಃ ವಸುಂಧರಾ ರಾಜೇ ಆಪ್ತರು ಮತ್ತು ಕುಟುಂಬ ಸದಸ್ಯರು ತಾವು ಅಶೋಕ್ ಗೆಹ್ಲೋಟ್ ಅವರಿಗೆ ಸಹಕರಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಅವರ ಸರ್ಕಾರವನ್ನು ಬೀಳಲು ಬಿಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಕುರಿತ ದಾಖಲೆ ತಮ್ಮ ಬಳಿ ಇದೆ” ಎಂದು ಹೌಹಾರಿದ್ದಾರೆ.
ಹನುಮಾನ್ ಬೆನಿವಾಲ್ ಮೂಲರ್ತ ಮಾಜಿ ಬಿಜೆಪಿ ನಾಯಕ. ಆದರೆ, ವಸುಂಧರಾ ರಾಜೇ ಅವರ ಪ್ರಮುಖ ವಿಮರ್ಶಕ. ಅವರೊಂದಿಗಿನ ಮನಸ್ಥಾಪದಿಂದಲೇ 2018ರ ಚುನಾವಣೆಯಲ್ಲಿ ಬಿಜೆಪಿ ಸೋಲುವ ಮುನ್ನ ಬಿಜೆಪಿ ಪಕ್ಷದಿಂದಲೇ ಹೊರ ನಡೆದು ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷವನ್ನು ಸೇರಿಕೊಂಡಿದ್ದರು.
ಸಂಸದ ಬೆನಿವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಸತೀಶ್ ಪುನಿಯಾ, “ಬೆನಿವಾಲ್ ಅವರು ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಸೂಚಿಸಲಾಗಿದೆ. ಈ ಕುರಿತು ನಮ್ಮ ರಾಷ್ಟ್ರೀಯ ನಾಯಕರು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ರಾಜಸ್ಥಾನದಲ್ಲಿ ವಸುಂಧರಾ ರಾಜೇ ನಮ್ಮ ಪ್ರಶ್ನಾತೀತ ನಾಯಕಿ” ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಒಂದು ವಾರದಿಂದ ರಾಜಸ್ಥಾನದ ರಾಜಕೀಯ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಒಂದು ಹಂತದಲ್ಲಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ತಮ್ಮ ಬೆಂಬಲಿತ ಶಾಸಕರ ಜೊತೆ ದೆಹಲಿಗೆ ತೆರಳಿ ಬಿಜೆಪಿ ನಾಯಕರ ಜೊತೆಗೆ ಸರ್ಕಾರ ಬೀಳಿಸುವ ಕುರಿತು ಚರ್ಚೆ ನಡೆಸಿದ್ದರು. ಇನ್ನೇನು ಅಶೋಕ್ ಗೆಹ್ಲೋಟ್ ಸರ್ಕಾರ ಕುಸಿಯಲಿದ ಎನ್ನುವಷ್ಟರಲ್ಲಿ ಕಾಂಗ್ರೆಸ್ ಜೈಪುರದಲ್ಲಿ ಶಾಸಕರ ಸಭೆ ಕರೆದು ತಮಗೆ 102 ಶಾಸಕರ ಬೆಂಬಲ ಇದೆ ಎಂದು ತೋರಿಸಿಕೊಳ್ಳುವ ಮೂಲಕ ಸರ್ಕಾರವನ್ನು ಉಳಿಸಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ