2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಹಾಗೂ ಶೀವಸೇನೆ ಮೈತ್ರಿ ಅಧಿಕಾರ ಉಳಿಸಿಕೊಂಡರೆ ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳುವುದಾಗಿ ಶಿವಸೇನೆಗೆ ಭರವಸೆ ನೀಡಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.
"ನಾನು ಮುಚ್ಚಿದ ಕೋಣೆಗಳಲ್ಲಿ ಭರವಸೆ ನೀಡುವುದಿಲ್ಲ. ನಾನು ಏನೇ ಮಾಡಿದರೂ ಅದನ್ನು ಬಹಿರಂಗವಾಗಿ ಮಾಡುತ್ತೇನೆ. ಮುಚ್ಚಿದ ಕೋಣೆಗಳಲ್ಲಿ ನಾನು ರಾಜಕೀಯ ಮಾಡುವುದಿಲ್ಲ" ಎಂದು ಸಿಂಧುದರ್ಗ್ ಜಿಲ್ಲೆಯ ಕಂಕವ್ಲಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜನ್ನು ಉದ್ಘಾಟಿಸಿದ ನಂತರ ಶಾ ಹೇಳಿದರು. ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಒಳಗೊಂಡ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ಆಟೋರಿಕ್ಷಾದಂತಿದ್ದು, ಮೂರು ಚಕ್ರಗಳು ವಿಭಿನ್ನ ದಿಕ್ಕುಗಳಲ್ಲಿ ಎಳೆಯುತ್ತಿವೆ ಎಂದು ಅವರು ಹೇಳಿದರು.
"ಮಹಾವಿಕಾಸ್ ಅಘಾಡಿ (ಎಂವಿಎ) ಒಂದು ಅಪವಿತ್ರ ಮೈತ್ರಿ. ಬಿಜೆಪಿಯ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ-ಶಿವಸೇನೆ ಸರ್ಕಾರಕ್ಕೆ ಜನಾದೇಶ ನೀಡಿದ್ದರು. ಆದರೆ, ಅದನ್ನು ಮುರಿದ ಶಿವಸೇನೆ ಅಪವಿತ್ರ ಮೈತ್ರಿ ಮಾಡಿಕೊಂಡಿದೆ ಎಂದು ಶಾ ಹೇಳಿದರು. ಮುಖ್ಯಮಂತ್ರಿ ಸ್ಥಾನ ಹಂಚಿಕೆ ವಿಚಾರವಾಗಿ 2019 ರ ವಿಧಾನಸಭಾ ಚುನಾವಣೆಯ ನಂತರ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಿಜೆಪಿ ಮೈತ್ರಿ ಮುರಿದುಕೊಂಡಿತು. ನಂತರ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು, ಸರ್ಕಾರ ರಚಿಸಿತು.
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಚುನಾವಣೆ ಸಮಯದಲ್ಲಿ ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿದ್ದರು. ಆಗ ಅವರು ಮುಂಬೈನ ಮಾತೋಶ್ರೀ ಬಂಗಲೆಯಲ್ಲಿ ಸಿಎಂ ಸ್ಥಾನವನ್ನು ಎರಡು ಪಕ್ಷಗಳಿಗೆ ಹಂಚಿಕೆ ಮಾಡುವುದಾಗಿ ಮಾತು ನೀಡಿದ್ದರು. ಆದರೆ, ಫಲಿತಾಂಶದ ಬಳಿಕ ಬಿಜೆಪಿ ತಾನು ನೀಡಿದ ಮಾತು ಉಳಿಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದರು. ಇದೇ ವಿಷಯವಾಗಿ ಮಾತನಾಡಿದ ಅಮಿತ್ ಶಾ ಬಿಜೆಪಿ ಮಾತು ನೀಡಿದರೆ ಅದನ್ನು ಪ್ರಾಮಾಣಿಕವಾಗಿ ಗೌರವಿಸುತ್ತದೆ ಎಂದು ತಿರುಗೇಟು ನೀಡಿದ್ದರು.
ಇದನ್ನು ಓದಿ: Narendra Modi: ಕೃಷಿ ಕಾಯ್ದೆ ಬಗ್ಗೆ ಮನಮೋಹನ್ ಸಿಂಗ್ ಹೇಳಿದ್ದನ್ನೇ ನಾವು ಮಾಡಿದ್ದೇವೆ; ಕಾಂಗ್ರೆಸ್ಗೆ ಪ್ರಧಾನಿ ಮೋದಿ ಚಾಟಿ
ನಾವು ಬಿಳಿ ಸುಳ್ಳುಗಳನ್ನು ಹೇಳುವುದಿಲ್ಲ. ನಾವು ಒಮ್ಮೆ ಮಾತು ಕೊಟ್ಟರೆ ಅದಕ್ಕೆ ಬದ್ಧರಾಗಿರುತ್ತೇವೆ. ಬಿಹಾರ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿಯೇ ಹೆಚ್ಚು ಸ್ಥಾನಗಳನ್ನು ಗಳಿಸಿದರೂ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ನಾವು ಹೇಳಿದ್ದೇವು ಎಂದು ಅಮಿತ್ ಶಾ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ