• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Tamil Nadu: ರೈತನ ಮನವಿಗೆ ಸ್ಪಂದಿಸದ ಕಂದಾಯ ಇಲಾಖೆ, ಹೆಲಿಕಾಪ್ಟರ್ ಸೇವೆ ನೀಡುವಂತೆ ಜಿಲ್ಲಾಧಿಕಾರಿಗೆ ಮೊರೆ!

Tamil Nadu: ರೈತನ ಮನವಿಗೆ ಸ್ಪಂದಿಸದ ಕಂದಾಯ ಇಲಾಖೆ, ಹೆಲಿಕಾಪ್ಟರ್ ಸೇವೆ ನೀಡುವಂತೆ ಜಿಲ್ಲಾಧಿಕಾರಿಗೆ ಮೊರೆ!

ರೈತ

ರೈತ

ರೈತರೊಬ್ಬರು ಹೆಲಿಕಾಪ್ಟರ್ ಸೇವೆ ನೀಡಲು ಮನವಿ ಮಾಡಿದ್ದಾರಾ? ಆ ರೈತ ಅಷ್ಟೊಂದು ಶ್ರೀಮಂತನಾ ಅಂತ ನೀವೇನಾದ್ರು ಭಾವಿಸಿದ್ರೆ ಅದು ತಪ್ಪಾಗುತ್ತದೆ.

  • News18 Kannada
  • 4-MIN READ
  • Last Updated :
  • Tamil Nadu, India
  • Share this:

ರೈತರೊಬ್ಬರು (Farmer) ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ತನ್ನ ನಿವಾಸ ಎದುರು ಹೆಲಿಕಾಪ್ಟರ್ (Helicopter) ಲ್ಯಾಂಡ್​ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿರುವ ವಿಶೇಷ ಘಟನೆ ತಮಿಳುನಾಡಿನ (Tamil Nadu)  ಧರ್ಮಪುರಿಯಲ್ಲಿ (Dharmapuri) ನಡೆದಿದೆ. 57 ವರ್ಷದ ರೈತ, ಗಣೇಶನ್ ಎಂಬವರು ತಮಿಳುನಾಡಿನ ಧರ್ಮಪುರಿ ಜಿಲ್ಲಾಧಿಕಾರಿಗಳ ಕಚೇರಿಗೆ ತಮ್ಮ ಇಬ್ಬರು ಮಕ್ಕಳು ಹಾಗೂ ಪತ್ನಿಯೊಂದಿಗೆ ಆಗಮಿಸಿ ಮನವಿ ಸಲ್ಲಿಕೆ ಮಾಡಿದ್ದಾರೆ. ಅರೇ, ರೈತರೊಬ್ಬರು ಹೆಲಿಕಾಪ್ಟರ್ ಸೇವೆ ನೀಡಲು ಮನವಿ ಮಾಡಿದ್ದಾರಾ? ಆ ರೈತ ಅಷ್ಟೊಂದು ಶ್ರೀಮಂತನಾ ಅಂತ ನೀವೇನಾದ್ರು ಭಾವಿಸಿದ್ರೆ ಅದು ತಪ್ಪಾಗುತ್ತದೆ.


ತನ್ನ ಸಮಸ್ಯೆ ಹೇಳಿಕೊಳ್ಳಲು ರೈತನಿಂದ ವಿಶೇಷ ಪ್ರಯತ್ನ


ತನ್ನ ಸಮಸ್ಯೆಯನ್ನು ಹೇಳಿಕೊಂಡು ಸರ್ಕಾರಿ ಕಚೇರಿಗಳ ಮೆಟ್ಟಿಲು ಹತ್ತಿ ಇಳಿದು ಸುಸ್ತಾದ ರೈತ, ಅಧಿಕಾರಿಗಳ ಗಮನ ಸೆಳೆದು ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಶೇಷವಾಗಿ ಇಂತಹ ಪ್ರಯತ್ನವನ್ನು ಮಾಡಿದ್ದಾರೆ. ಹಾಗಾದ್ರೆ, ರೈತನ ಸಮಸ್ಯೆ ಏನು ಅಂತ ಯೋಚನೆ ಮಾಡ್ತಿದ್ದೀರಾ? ನಾವು ಹೇಳ್ತೀವಿ ಓದಿ.


57 ವರ್ಷದ ರೈತ ಗಣೇಶನ್​ ಬಳಿ ಯಾವುದೇ ಹೆಲಿಕಾಪ್ಟರ್ ಇಲ್ಲ. ಆದರೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ರೈತನ ಹೆಣ್ಣು ಮಕ್ಕಳು, ಒಂದು ಕೈಯಲ್ಲಿ ಆಟಿಕೆ ಹೆಲಿಕಾಪ್ಟರ್​ ಹಾಗೂ ಹೆಲಿಕಾಪ್ಟರ್ ಫೋಟೋ ಹಿಡಿದುಕೊಂಡಿದ್ದರು. ತನ್ನ ಸ್ಥಿತಿಯನ್ನು ಹೇಳಿಕೊಂಡು ಅಧಿಕಾರಿಗಳ ಗಮನ ಸೆಳೆಯಲು ರೈತ ಗಣೇಶನ್ ವಿಶೇಷ ರೀತಿಯಲ್ಲಿ ಪ್ರಯತ್ನಿಸಿದ್ದಾರೆ.


ರೈತ ಹೇಳೋದೇನು?


ಗಣೇಶನ್​ ಅವರೇ ಹೇಳುವ ಪ್ರಕಾರ, ತಮ್ಮ ಮನೆಗೆ ರಸ್ತೆ ಮಾರ್ಗವೇ ಇಲ್ಲದಿರೋದರಿಂದ ಸಂಚಾರ ಮಾಡಲು ಕಷ್ಟ ಆಗುತ್ತಿದೆ. ಪರಿಣಾಮ ಕುಟುಂಬದೊಂದಿಗೆ ಸಂಬಂಧಿಗಳ ಮನೆಯಲ್ಲಿ ನೆಲೆಸಿದ್ದೇವೆ. ಕಳೆದ ನಾಲ್ಕು ತಿಂಗಳಿಂದ ಮನೆಗೆ ಹೋಗಲು ಆಗುತ್ತಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ, ಅಲ್ಲದೇ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಿ ಗಮನಕ್ಕೆ ತಂದಿದ್ದೇನೆ.


ಆದರೆ ಇದರಿಂದ ಯಾವುದೇ ಪ್ರಯೋಜನ ಆಗಿಲ್ಲ. ಆದ್ದರಿಂದ ಇಂತಹ ವಿಶೇಷ ಪ್ರಯತ್ನ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇನೆ ಎಂದು ತಮ್ಮ ಸಂಕಷ್ಟ ತೊಡಿಕೊಂಡಿದ್ದಾರೆ.


ಆಟಿಕೆ ಹೆಲಿಕಾಪ್ಟರ್


ನೆರೆಮನೆಯವರು ಬೇಲಿ ಹಾಕಿದ್ದರಿಂದ ಸಮಸ್ಯೆ


ಧರ್ಮಪುರಿಯ ಅಗ್ರಹಾರಂ ಗ್ರಾಮದಲ್ಲಿರುವ ಮನೆಗೆ ರಸ್ತೆ ಇಲ್ಲ ಎಂದು ರೈತ ಮನವಿ ಸಲ್ಲಿಕೆ ಮಾಡಿದ್ದು, ಮನೆಯ ನೆರೆಯ ನಿವಾಸಿಗಳು ರಸ್ತೆಯನ್ನು ಬಂದ್ ಮಾಡಿರುವುದರಿಂದ ಸಮಸ್ಯೆ ಎದುರಾಗಿದೆ. ಹಲವು ವರ್ಷಗಳಿಂದ ನಾವು ಅದೇ ಮಾರ್ಗವನ್ನು ಮನೆಗೆ ಬಂದು ಹೋಗಲು ಬಳಸುತ್ತಿದ್ದೇವು.


ಆದರೆ ಕೆಲ ಸಮಯದ ಹಿಂದೆ ಅವರು ನಾಲ್ಕು ಭಾಗಗಳಲ್ಲಿ ಬೇಲಿ ಹಾಕಿದ್ದಾರೆ. ಇದರಿಂದ ಮನೆಗೆ ಹೋಗಲು ಆಗದೆ, ಸಂಬಂಧಿಗಳ ಮನೆಯಲ್ಲಿ ಪತ್ನಿ, ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದೇನೆ. ಈಗ ನನ್ನ ಮನೆಗೆ ಹೋಗಲು ಬೇರೆ ಯಾವುದೇ ದಾರಿ ಇಲ್ಲ. ಹೆಲಿಕಾಪ್ಟರ್​​ನಲ್ಲಿ ಹೋಗೋದು ಒಂದೇ ದಾರಿ ಇದೆ. ಆದ್ದರಿಂದ ಜಿಲ್ಲಾಡಳಿತ ನನಗೆ ಇದಕ್ಕೆ ಅನುಮತಿ ಕೊಡಬೇಕು ಎಂದಿದ್ದಾರೆ. ಆ ಮೂಲಕ ತಮ್ಮ ಸಮಸ್ಯೆಯನ್ನು ಎಲ್ಲರಿಗೂ ತಿಳಿಸುವ ಕಾರ್ಯವನ್ನು ರೈತ ಮಾಡಿದ್ದಾರೆ.


ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದ ರೈತನನ್ನು ಗಮನಿಸಿ ಮಾಧ್ಯಮಗಳು ರೈತನನ್ನು ಮಾತನಾಡಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯ ಮಾಧ್ಯಮಗಳು ಸೇರಿದಂತೆ ರಾಷ್ಟ್ರದಲ್ಲಿ ರೈತನ ವಿನೂತನ ಪ್ರತಿಭಟನೆ ಬಗ್ಗೆ ವರದಿ ಮಾಡಲಾಗಿದೆ. ಈಗಲಾದರೂ ಜಿಲ್ಲಾಡಳಿತ ಅಥವಾ ಕಂದಾಯ ಅಧಿಕಾರಿಗಳು ರೈತನ ಸಮಸ್ಯೆಗೆ ಪರಿಹಾರ ಕೊಡಿಸುತ್ತಾರಾ ಕಾದು ನೋಡಬೇಕಿದೆ.

Published by:Sumanth SN
First published: