Dhanbad Judge Murder| ಧನ್ಬಾದ್ ನ್ಯಾಯಾಧೀಶರ ಕೊಲೆ ಪೂರ್ವ ನಿಯೋಜಿತ; ಚಾರ್ಚ್​ಶೀಟ್ ಫೈಲ್ ಮಾಡಿದ CBI

ಸಂಚುಕೋರರು ಕದ್ದ ಫೋನ್‌ಗಳನ್ನು ತಮ್ಮ ಸಂಪರ್ಕಕ್ಕೆ ಬಳಸಿದ್ದಾರೆ ಮತ್ತು ಕದ್ದ ಆಟೋದಿಂದಲೇ ನ್ಯಾಯಾಧೀಶರ ಕೊಲೆಯನ್ನೂ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಕೊಲೆಗೆ ಕಾರಣ ಏನು? ಎಂಬ ಬಗ್ಗೆ ಈವರೆಗೆ ಸಿಬಿಐ ಪೊಲೀಸರು ತುಟಿ ಬಿಚ್ಚಿಲ್ಲ.

ಆಟೋ ಬಳಸಿ ನ್ಯಾಯಾಧೀಶರನ್ನು ಕೊಲೆ ಮಾಡಿರುವ ದೃಶ್ಯ.

ಆಟೋ ಬಳಸಿ ನ್ಯಾಯಾಧೀಶರನ್ನು ಕೊಲೆ ಮಾಡಿರುವ ದೃಶ್ಯ.

 • Share this:
  ಜಾರ್ಖಂಡ್: ಇತ್ತೀಚೆಗೆ ಧನ್ಬಾದ್ ನ್ಯಾಯಾಧೀಶ (Dhanbad Judge Murder Case) ಉತ್ತಮ್ ಆನಂದ್ ಅವರನ್ನು ಕೊಲೆ ಮಾಡಲಾಗಿತ್ತು. ನ್ಯಾಯಾಧೀಶರಿಗೆ ಈ ದೇಶದಲ್ಲಿ ರಕ್ಷಣೆ ಇಲ್ಲವೇ? ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ನಡುವೆ ಪ್ರಕರಣ ಸಂಬಂಧ ವಿಚಾರಣೆ ಮುಗಿಸಿರುವ ಸಿಬಿಐ (CBI Investigation) ಪೊಲೀಸರು ಬುಧವಾರ ಆರೋಪ ಪಟ್ಟಿ (Charge Sheet) ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಆರೋಪ ಪಟ್ಟಿಯಲ್ಲಿ ಇದೊಂದು ಪೂರ್ವನಿಯೋಜಿತ ಕೊಲೆ (Pre Planned Killing) ಎಂದು ಉಲ್ಲೇಖಿಸಲಾಗಿದೆ. ಈ ಹತ್ಯೆಯ ಹಿಂದೆ ದೊಡ್ಡ ಪಿತೂರಿಯೊಂದು ನಡೆದಿದೆ ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಆಟೋ ರಿಕ್ಷಾ ಚಾಲಕ ಲಖನ್ ವರ್ಮಾ ಮತ್ತು ಆತನ ಸಹಚರ ರಾಹುಲ್ ವರ್ಮಾ ನನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳಲಾಗಿದೆ.

  ನ್ಯಾಯಾಧೀಶರ ಕೊಲೆಗೆ ಸ್ಕೆಚ್​:

  ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರನ್ನು ಜಾರ್ಖಂಡ್‌ನಲ್ಲಿ ಜುಲೈ 29 ರಂದು ಕೊಲೆ ಮಾಡಲಾಗಿತ್ತು. ಈ ಕೊಲೆಯಲ್ಲಿ ಭಾಗಿಯಾದ ಇಬ್ಬರೂ ಆರೋಪಿಗಳನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಆಟೋ ರಿಕ್ಷಾ ಚಾಲಕರು. ಆದರೆ, ಅವರು ಉದ್ದೇಶಪೂರ್ವಕವಾಗಿ ನ್ಯಾಯಾಧೀಶರನ್ನು ಕೊಲೆ ಮಾಡಲೆಂದೆ ಬೆಳಗ್ಗೆ ಅವರು ಜಾಗಿಂಗ್ ಮಾಡುತ್ತಿದ್ದ ವೇಳೆ ಅವರನ್ನು ಹಿಂಬಾಲಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

  ಪ್ರಕರಣವನ್ನು ಸಿಬಿಐಗೆ ವಹಿಸಿದ ಸುಪ್ರೀಂ:

  ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸ್ವತಃ ಸುಪ್ರೀಂ ಕೋರ್ಟ್​ ತಿಳಿಸಿತ್ತು. ಅದರಂತೆ ಅಂದಿನ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ವರ್ಗಾಯಿಸಿದ್ದರು.

  ಸಿಬಿಐ ಕಳೆದ ತಿಂಗಳು ಆಟೋ ರಿಕ್ಷಾ ಮತ್ತು ಮೂರು ಮೊಬೈಲ್‌ಗಳ ಕಳ್ಳತನದ ಬಗ್ಗೆ ಎರಡು ಪ್ರಕರಣಗಳನ್ನು ದಾಖಲಿಸಿರುವುದಾಗಿ ಹೇಳಲಾಗಿದೆ. ಸಿಬಿಐ ಸೆಪ್ಟೆಂಬರ್ 7 ರಂದು ಈ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದೆ ಎಂದು ನ್ಯೂಸ್ 18 ಈ ಹಿಂದೆ ವರದಿ ಮಾಡಿತ್ತು. ಅಲ್ಲದೆ, ಈ ಎಫ್​ಐಆರ್​ ಮತ್ತು ನ್ಯಾಯಾಧೀಶರ ಕೊಲೆಗೂ ಸಂಬಂಧ ಇದೆ ಎಂದೂ ಹೇಳಲಾಗಿತ್ತು.

  ಪ್ರಕರಣವನ್ನು ಭೇದಿಸಿದ ಸಿಬಿಐ:

  ಪ್ರಕರಣದ ತನಿಖೆಗಾಗಿ ಸಿಬಿಐ ತನ್ನ ಏಸ್ ತನಿಖಾಧಿಕಾರಿ ವಿಕೆ ಶುಕ್ಲಾ ನೇತೃತ್ವದಲ್ಲಿ 20 ಸದಸ್ಯರ ತಂಡವನ್ನು ಜಾರ್ಖಂಡ್​ಗೆ ಕಳುಹಿಸಿತ್ತು. ಅತ್ಯುತ್ತಮ ತನಿಖಾಧಿಕಾರಿಗಳಲ್ಲಿ ಒಬ್ಬರಾಗಿದ್ದಕ್ಕಾಗಿ ಕೇಂದ್ರ ಗೃಹ ಸಚಿವಾಲಯದಿಂದ ಶುಕ್ಲಾ ಅವರಿಗೆ ಇತ್ತೀಚೆಗೆ ಪ್ರಶಸ್ತಿ ನೀಡಲಾಗಿದೆ. ಹೀಗಾಗಿ ದಕ್ಷ ಅಧಿಕಾರಿ ಈ ಪ್ರಕರಣವನ್ನು ಭೇದಿಸಲಿದ್ದಾರೆ ಎನ್ನಲಾಗಿತ್ತು.

  ಇದನ್ನೂ ಓದಿ: Banashankari Women Murder Twist: 17 ವರ್ಷದ ಬಾಲಕನೊಂದಿಗೆ ಲವ್ವಿಡವ್ವಿ; ಆಂಟಿ ಪ್ರೀತ್ಸೆ ಲವ್ ಕಹಾನಿ ಕೊಲೆಯಲ್ಲಿ ಅಂತ್ಯ!

  ಸಿಬಿಐ ಸೆಪ್ಟೆಂಬರ್ 7 ರಂದು ದಾಖಲಿಸಿದ ಮೊದಲ ಎಫ್‌ಐಆರ್‌ನಲ್ಲಿ ಧನ್ಬಾದ್ ನಿವಾಸಿ ಸುಗಣಿ ದೇವಿ ತನ್ನ ಆಟೋ ರಿಕ್ಷಾ ಸಂಖ್ಯೆ ಜೆಎಚ್ 10 ಆರ್ 0461 ಅನ್ನು ಜುಲೈ 17 ರ ರಾತ್ರಿ 11 ಗಂಟೆಯ ಸುಮಾರಿಗೆ ತನ್ನ ಮನೆಯ ಹೊರಗಿನಿಂದ ಕಳವು ಮಾಡಲಾಗಿದೆ ಎಂದು ದೂರು ನೀಡಿದ್ದರು. ಜುಲೈ 28 ರ ರಾತ್ರಿ ತನ್ನ ಮೂರು ಮೊಬೈಲ್ ಫೋನ್‌ಗಳನ್ನು ತನ್ನ ಮನೆಯಿಂದ ಕಳವು ಮಾಡಲಾಗಿದೆ ಎಂದು ವಿಶ್ವಕರ್ಮ ದೂರಿದರು.

  ಇದನ್ನೂ ಓದಿ:  Haryana politics: ಎಲ್ಲೆನಾಬಾದ್ ಉಪಚುನಾವಣೆ: ರಾಷ್ಟ್ರ ರಾಜಕಾರಣದ ದಿಕ್ಸೂಚಿಯಾಗಲಿದೆಯೇ?!

  ಮರುದಿನ ಬೆಳಿಗ್ಗೆ, ಜುಲೈ 29 ರಂದು ನ್ಯಾಯಾಧೀಶರು ಆಟೋ ರಿಕ್ಷಾದಿಂದ ಗುದ್ದಲ್ಪಟ್ಟು ಕೊಲೆಯಾಗಿದ್ದಾರೆ. ಸಂಚುಕೋರರು ಕದ್ದ ಫೋನ್‌ಗಳನ್ನು ತಮ್ಮ ಸಂಪರ್ಕಕ್ಕೆ ಬಳಸಿದ್ದಾರೆ ಮತ್ತು ಕದ್ದ ಆಟೋದಿಂದಲೇ ನ್ಯಾಯಾಧೀಶರ ಕೊಲೆಯನ್ನೂ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಕೊಲೆಗೆ ಕಾರಣ ಏನು? ಎಂಬ ಬಗ್ಗೆ ಈವರೆಗೆ ಸಿಬಿಐ ಪೊಲೀಸರು ತುಟಿ ಬಿಚ್ಚಿಲ್ಲ.
  Published by:MAshok Kumar
  First published: