ಮಾಜಿ ಸಿಎಂ ಕರುಣಾನಿಧಿ ನಿಧನದ ನಂತರ ಏನೇನಾಯ್ತು?


Updated:August 8, 2018, 7:33 AM IST
ಮಾಜಿ ಸಿಎಂ ಕರುಣಾನಿಧಿ ನಿಧನದ ನಂತರ ಏನೇನಾಯ್ತು?
ಕರುಣಾನಿಧಿ

Updated: August 8, 2018, 7:33 AM IST
ನ್ಯೂಸ್​ 18 ಕನ್ನಡ

ಚೆನ್ನೈ (ಆ. 8): ತಮಿಳು ನಾಡಿನ ಆರಾಧ್ಯ ದೈವ, ಮಾಜಿ ಮುಖ್ಯಮಂತ್ರಿ, ಕಲೈಙರ್​ ಎಂ. ಕರುಣಾನಿಧಿ 11 ದಿನಗಳ ಸಾವು ಬದುಕಿನ ನಡುವಿನ ಹೋರಾಟದ ನಂತರ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾವೇರಿ ಆಸ್ಪತ್ರೆಯ ಆಡಳಿತ ಮಂಡಳಿ ಅಧಿಕೃತ ಆದೇಶ ಹೊರಡಿಸಿದ್ದು, ತಮಿಳು ನಾಡಿನಾದ್ಯಂತ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ.

ಎರಡು ಮನೆಗಳಲ್ಲಿ ಕರುಣಾನಿಧಿ ಅಂತಿಮ ದರ್ಶನ

ಕರುಣಾನಿಧಿಯವರ ಎರಡೂ ಮನೆಗಳಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ತಡರಾತ್ರಿ 1ರವರೆಗೆ ಗೋಪಾಲಪುರಂನಲ್ಲಿರುವ ಅವರ ಮಗ ಎಂ ಕೆ ಸ್ಟಾಲಿನ್​ ನಿವಾಸದಲ್ಲಿ ಅವರ ಅಂತಿಮ ದರ್ಶನ ನಡೆಯಲಿದೆ. ಬಳಿಕ ತಡರಾತ್ರಿ 1ರಿಂದ 3 ಗಂಟೆಯವರೆಗೆ ಮಗಳು ಕನ್ನಿಮೊಳಿಯವರ ಸಿಐಟಿ ಕಾಲೊನಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ನಸುಕಿನ ಜಾವ 4 ಗಂಟೆಗೆ ರಾಜಾಜಿ ಹಾಲ್​ಗೆ ಕರುಣಾನಿಧಿಯವರ ಮೃತದೇಹ ಸ್ಥಳಾಂತರ ಮಾಡಿ, ಬೆಳಗ್ಗೆ 4ರಿಂದ ರಾಜಾಜಿ ಹಾಲ್​ನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಗಣ್ಯರಿಂದ ಅಂತಿಮ ದರ್ಶನ

ಕರುಣಾನಿಧಿ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಸೇರಿದಂತೆ ಹಲವಾರು ಗಣ್ಯ ನಾಯಕರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್, ಕಾಂಗ್ರೆಸ್​ ನಾಯಕ ಗುಲಾಂ ನಬಿ ಆಜಾದ್, ಕೇಂದ್ರ ಸಚಿವರು ಸೇರಿದಂತೆ ಗಣ್ಯಾತಿಗಣ್ಯರು ಬುಧವಾರದಂದು ಕರುಣಾನಿಧಿಯವರ ಅಂತಿಮದರ್ಶನ ಪಡೆಯಲಿದ್ದಾರೆ.

ಕರುಣಾನಿಧಿ ನಿಧನಕ್ಕೆ ಕರ್ನಾಟಕ ಸರ್ಕಾರ ಸಂತಾಪ
Loading...

ಕರುಣಾನಿಧಿ ನಿಧನಕ್ಕೆ ಕರ್ನಾಟಕ ಸರ್ಕಾರವು ಸಂತಾಪ ಸೂಚಿಸಿದೆ. ಅಲ್ಲದೇ ರಾಜ್ಯ ಸರ್ಕಾರವು ಅಧಿಸೂಚನೆ ಪ್ರಕಟಿಸಿ ಒಂದು ದಿನದ ಶೋಕಾಚರಣೆಗೆ ಆದೇಶ ನೀಡಿದೆ. ರಾಜ್ಯದಲ್ಲಿ ಬುಧವಾರದಂದು ನಿಗದಿಯಾಗಿದ್ದ ಸರ್ಕಾರಿ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನೂ ರದ್ದು ಮಾಡುವಂತೆ ಈ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

ರಾಜ್ಯ ಸಾರಿಗೆ ವಾಹನಗಳ ಸಂಚಾರ ಬಂದ್

ತಮಿಳುನಾಡು ರಾಜಧಾನಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಎರಡು ದಿನಗಳ ಕಾಲ ತಮಿಳು ಚಿತ್ರೋದ್ಯಮ ಬಂದ್ ಮಾಡಲು ಆದೇಶ ನೀಡಲಾಗಿದೆ. ಇನ್ನು ತಮಿಳುನಾಡಿನಾದ್ಯಂತ ಶಾಂತಿ ಕಾಪಾಡುವುದರೊಂದಿಗೆ, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬೇಡಿ ಎಂದು ಕರುಣಾನಿಧಿ ಅಭಿಮಾನಿಗಳಿಗೆ ಎಂ ಕೆ ಅಳಗಿರಿ ಮನವಿ ಮಾಡಿಕೊಂಡಿದ್ದಾರೆ. ಇತ್ತ ಆನೇಕಲ್​, ಅತ್ತಿಬೆಲೆ ಗಡಿಯಲ್ಲಿ ಭಾರೀ ಕಟ್ಟೆಚ್ಚರ ವಹಿಸಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸಾರಿಗೆ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ಪೊಲೀಸರು ಕರ್ನಾಟಕ ವಾಹನಗಳನ್ನು ಗಡಿಯಿಂದಲೇ ವಾಪಸ್ ಕಳುಹಿಸುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರಲ್ಲಿ ಅಲರ್ಟ್​

ಬೆಂಗಳೂರಿನಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆಯದಿರುವಂತೆ, ಪೊಲೀಸರು ಬಿಗಿ ಬಂದೋಬಸ್ತ್​ ಕಲ್ಪಿಸಿದ್ದಾರೆ. ಅಲ್ಲದೇ ತಮಿಳರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೆಶಗಳಲ್ಲಿ ಗಸ್ತು ಹೆಚ್ಚಿಸಿದ್ದಾರೆ. ಎಲ್ಲಾ ಠಾಣೆಗಳ ಇನ್ಸ್‌ಪೆಕ್ಟರ್ಸ್​ 12 ಗಂಟೆವರೆಗೂ ರೌಂಡ್ಸ್ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಆದೇಶ ನೀಡಿದ್ದಾರೆ.

ಮರಿನಾ ಬೀಚ್‌ನಲ್ಲಿ ನಡೆಯಲ್ವಾ ಅಂತ್ಯಕ್ರಿಯೆ?

ಒಂದೆಡೆ ಇಡೀ ದೇಶದ ಹಿರಿಯ ರಾಜಕೀಯ ನಾಯಕರು ಕರುಣಾನಿಧಿಯವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಇನ್ನೊಂದೆಡೆ ತಮಿಳು ನಾಡು ಜನತೆ ನೆಚ್ಚಿನ ನಾಯಕನನ್ನು ಕಳೆದುಕೊಂಡ ದುಖಃದಲ್ಲಿದೆ. ಆದರೆ ಅಗಲಿದ ನಾಯಕನ ಅಂತ್ಯಕ್ರಿಯೆಗೆ ಮರೀನಾ ಬೀಚ್​ನಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಈಗಾಗಲೇ ಮರೀನಾ ಬೀಚಿನಲ್ಲಿ ಎಂಜಿ ರಾಮಚಂದ್ರನ್​, ಜಯಲಲಿತಾ ಸಮಾಧಿಯನ್ನು ಮಾಡಲಾಗಿದೆ. ಆದರೆ ಕರುಣಾನಿಧಿ ಅಂತ್ಯಕ್ರಿಯೆಗೆ ತೊಡಕಾಗಿರುವುದು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುವವರಿಗೆ ಮಾತ್ರ ಮರಿನಾ ಬೀಚ್​ನಲ್ಲಿ ಅಂತ್ಯಕ್ರಿಯೆಗೆ ಅವಕಾಶವಿದೆ ಎಂಬ ಕಾನೂನು. ಹೀಗಾಗಿ ಸರ್ಕಾರವು ಗಾಂಧಿಮಂಟಪದಲ್ಲಿ ಅಂತಿಮ ಕ್ರಿಯೆ ನಡೆಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ತಮಿಳರಿಗಾಗಿ, ತಮಿಳುನಾಡಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟ ಮಹಾ ನಾಯಕ ಕರುಣಾನಿಧಿ ಅಂತ್ಯಕ್ರಿಯೆಗೆ ಮರೀನಾ ಬೀಚಿನಲ್ಲಿ ಅಂತಿಮ ಕ್ರಿಯೆ ನಡೆಸಲು ಅವಖಾಶ ನೀಡುವಂತೆ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಸದ್ಯ ಕರುಣಾನಿಧಿ ಅಂತ್ಯಕ್ರಿಯೆ ಮರೀನಾ ಬೀಚ್​ನಲ್ಲೇ ಅವಕಾಶ ನೀಡುತ್ತಾರೋ ಅಥವಾ ಚೆನ್ನೈನ ಗಿಂಡಿಯಲ್ಲಿರುವ ಗಾಂಧಿಮಂಟಪದಲ್ಲಿ ಕರುಣಾನಿಧಿ ಅಂತ್ಯಕ್ರಿಯೆ ನಡೆಸಲಾಗುತ್ತದೋ ಎಂಬುವುದನ್ನು ಮದ್ರಾಸ್​ ಹೈಕೋರ್ಟ್​ ನಡೆಸಲಿರುವ ತುರ್ತು ವಿಚಾರಣೆಯ ಬಳಿಕವೇ ತಿಳಿದು ಬರಬೇಕಿದೆ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ