ನಿತೀಶ್ ಕುಮಾರ್ ಯಾವ್ಯಾವಾಗ, ಹೇಗೇಗೆ ಮುಖ್ಯಮಂತ್ರಿ ಆದರು? ಇಲ್ಲಿದೆ ಮಾಹಿತಿ

 ನಿತೀಶ್‌ ಕುಮಾರ್‌.

ನಿತೀಶ್‌ ಕುಮಾರ್‌.

ಈಗ (2020ರಲ್ಲಿ) ಜೆಡಿಯು ಹಿಂದೆಂದಿಗಿಂತಲೂ ಅತ್ಯಂತ ಕಳಪೆ ಸಾಧನೆ ಮಾಡಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ 108 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 43 ಸ್ಥಾನಗಳಲ್ಲಿ ಗೆದ್ದಿದೆ. ಆದರೂ ನಿತೀಶ್ ಕುಮಾರ್ ಏಳನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ (ನ. 16): ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಆದರೂ ನಿತೀಶ್ ಕುಮಾರ್ ನಿರಂತರವಾಗಿ ನಾಲ್ಕನೇ ಅವಧಿಗೆ ಹಾಗೂ ಒಟ್ಟು ಏಳನೇ ಬಾರಿಗೆ ಬಿಹಾರ ಮುಖ್ಯಮಂತ್ರಿ ಆಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಏಳು ಬಾರಿ ಯಾವ್ಯಾವಾಗ? ಮತ್ತು ಹೇಗೇಗೆ ಮುಖ್ಯಮಂತ್ರಿ ಆದರು ಎಂಬ ಮಾಹಿತಿ ಇಲ್ಲಿದೆ.


ಪ್ರಥಮ ಚುಂಬನಂ ದಂತ ಭಗ್ನಂ


ನಿತೀಶ್ ಕುಮಾರ್ ಅವರು 2000ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆಗ ಬಿಹಾರ ಮತ್ತು ಜಾರ್ಖಂಡ್ ಒಟ್ಟಾಗಿದ್ದವು.‌ 2000ನೇ ಇಸವಿಯಲ್ಲಿ ಅವಿಭಜಿತ ಬಿಹಾರದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. 324 ಸಂಖ್ಯಾಬಲದ ಬಿಹಾರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 163 ಸದಸ್ಯರ ಬೆಂಬಲ ಅಗತ್ಯವಿತ್ತು. ಜೆಡಿಯು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 151 ಸ್ಥಾನಗಳಲ್ಲಿ ಗೆದ್ದಿತ್ತು. ಹಾಲಿ ಮುಖ್ಯಮಂತ್ರಿ (ಆಗ) ಲಾಲು ಪ್ರಸಾದ್‌ ಯಾದವ್‌ ಅವರ ಆರ್‌ಜೆಡಿ 159 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು. ಹೇಗೂ ಕೇಂದ್ರ ಸರ್ಕಾರ ನಮ್ಮದೆ, ರಾಜಭವನದ 'ಸಹಕಾರ' ಸಿಗುತ್ತದೆ ಎಂದು ಸಂಖ್ಯಾಬಲ ಇಲ್ಲದಿದ್ದರೂ ಎನ್ ಡಿಎ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದ ನಿತೀಶ್ ‌ಕುಮಾರ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿತು. ನಿತೀಶ್ ಕುಮಾರ್ ರಾಜ್ಯಪಾಲರ ಬಳಿ ಸರ್ಕಾರ ರಚಿಸುವ ಹಕ್ಕು ಪ್ರತಿಪಾದಿಸಿದರು. ಆದರೆ ಬಿಹಾರ ರಾಜಕಾರಣವನ್ನು ಚೆನ್ನಾಗಿ ಅರೆದು‌ ಕುಡಿದಿದ್ದ ಲಾಲೂ ಪ್ರಸಾದ್ ಯಾದವ್ ಅವರ ಮುಂದೆ ನಿತೀಶ್ ಕುಮಾರ್ ಮುಗ್ಗರಿಸಿದರು. ಬಹುಮತ ಸಾಬೀತುಪಡಿಸಲು ವಿಫಲರಾದ ನಿತೀಶ್‌ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಎಂಟೇ ದಿನಗಳಲ್ಲಿ ರಾಜೀನಾಮೆ ನೀಡಿದರಲ್ಲದೆ ಮೊದಲ ಪ್ರಯತ್ನದಲ್ಲೇ ಭಾರೀ ಮುಖಭಂಗ ಅನುಭವಿಸಿದರು.


ಆಡಳಿತ ವಿರೋಧಿ ಅಲೆಯ ಲಾಭ


1990ರಿಂದ 15 ವರ್ಷ ನಿರಂತರವಾಗಿ ಅಧಿಕಾರ ನಡೆಸಿದ್ದ ಲಾಲು ಪ್ರಸಾದ್ ಯಾದವ್ ವಿರುದ್ಧ 2005ರಲ್ಲಿ ಆಡಳಿತ ವಿರೋಧಿ ಅಲೆ ಎದ್ದಿತ್ತು. ಇದರ ಉಪಯೋಗ ನಿತೀಶ್ ಕುಮಾರ್ ಅವರಿಗೆ ಆಯಿತು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ ನಿತೀಶ್ ಕುಮಾರ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದರು.


ಸುಶಾಸನ್ ಬಾಬು ಬಿರುದಾಂಕಿತ


ಭೂಮಾಲೀಕರ ದೌರ್ಜನ್ಯಕ್ಕೆ, ದಬ್ಬಾಳಿಕೆಗೆ ಮೊದಲಿಂದಲೂ ಕುಖ್ಯಾತಿ ಪಡೆದಿದ್ದ ಬಿಹಾರದಲ್ಲಿ ಭೂಮಾಲೀಕರ ಅಟ್ಟಹಾಸವನ್ನು ಲಾಲು ಪ್ರಸಾದ್ ಯಾದವ್ ಹಿಮ್ಮೆಟ್ಟಿಸಿದ್ದರು. ಹಾಗೆ ಮಾಡುವ ಪ್ರಯತ್ನದಲ್ಲಿ ಪ್ರಮಾದವೂ ಆಗಿತ್ತು. ಭೂಮಾಲೀಕರ ಅಂದರೆ ಅಲ್ಲಿನ ಠಾಕೂರ್ ಗಳು, ಭೂಮಿಹಾರ್ ಗಳನ್ನು ದಮನ ಮಾಡಲು 'ಮುಳ್ಳನ್ನು ಮುಳ್ಳಿನಿಂದ ತೆಗೆಯುವ' ಸೂತ್ರ ಅನುಸರಿಸಲಾಗಿತ್ತು. ಠಾಕೂರ್ ಗಳು, ಭೂಮಿಹಾರ್ ಗಳನ್ನು ಯಾದವರು ದಮನ ಮಾಡಹೊರಟರು. ಇದರಿಂದ ಬಿಹಾರಕ್ಕೆ 'ಜಂಗಲ್ ರಾಜ್ ಎಂಬ‌' ಕಳಂಕ ತಟ್ಟಿತು. ಇದರಿಂದ ಹದಗೆಟ್ಟಿದ್ದ ಕಾನೂನು ಸುವ್ಯವಸ್ಥೆಯನ್ನು ಸ್ವಲ್ಪಮಟ್ಟಿಗೆ ಸುಧಾರಿಸಿದ ನಿತೀಶ್ ಕುಮಾರ್ ಬಿಹಾರಿಗಳ ಪಾಲಿಗೆ 'ಸುಶಾಸನ್ ಬಾಬು' ಆದರು. ಇದರಿಂದಾಗಿ 2010ರ‌ ಚುನಾವಣೆಯಲ್ಲಿ ಗೆದ್ದು ಮತ್ತೆ‌  ಮುಖ್ಯಮಂತ್ರಿ ಪಟ್ಟ ಏರಿದರು.


ಸೋಲಿನ ಹೊಣೆ ಹೊತ್ತ ನಿತೀಶ್


ಎನ್ ಡಿಎ ರೂಪುಗೊಳ್ಳುವ ಹಂತದಲ್ಲಿ ಕೋಮುವಾದಿ ಹಣೆಪಟ್ಟಿ ಕಟ್ಟಿಕೊಂಡಿರುವ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಾದೇಶಿಕ ಪಕ್ಷಗಳು ಒಪ್ಪದೆ ಇದ್ದಾಗ ಎನ್ ಡಿಎಗೆ ಭಾರೀ ಬೆಂಬಲ‌ ನೀಡಿದವರು ಮತ್ತು ಇತರೆ ಪಕ್ಷಗಳ ನಾಯಕರ ಮನವೊಲಿಸುವಲ್ಲಿ ಮುಂಚೂಣಿಯಲ್ಲಿದ್ದವರು ನಿತೀಶ್ ಕುಮಾರ್. ಕ್ರಮೇಣ ನಿತೀಶ್ ಕುಮಾರ್ ಕೂಡ ಎನ್ ಡಿಎ ಮೂಲಕ ಅಥವಾ ಮೂಲಕ ತೃತೀಯ ರಂಗದ ಮೂಲಕ ಪ್ರಧಾನಿ ಕುರ್ಚಿ ಏರಬೇಕು ಎಂದು ಕನಸು ಕಂಡಿದ್ದರು.  2013ರಲ್ಲಿ ಬಿಜೆಪಿ ನರೇಂದ್ರ ಮೋದಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗ ನಿತೀಶ್ ಕುಮಾರ್ ಬಂಡಾಯ ಎದ್ದರು‌. ಇದರಿಂದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ಬೇರೆಯಾಗಿ ಸ್ಪರ್ಧೆ ಮಾಡಿದವು. ಜೆಡಿಯು ಒಂದೂ ಸ್ಥಾನ ಗೆಲ್ಲಲಿಲ್ಲ ಎಂಬ ಕಾರಣಕ್ಕೆ ನೈತಿಕ ಹೊಣೆ ಹೊತ್ತು‌ ರಾಜೀನಾಮೆ ನೀಡಿದರು. ತಾವು ರಾಜೀನಾಮೆ ನೀಡಿದ ಸ್ಥಾನಕ್ಕೆ ಬೆಂಬಲಿಗ ಜಿತಿನ್ ರಾಮ್ ಮಾಂಜಿಯನ್ನು ಪ್ರತಿಷ್ಠಾಪಿಸಿದ್ದರು‌‌. ಕೆಲವೇ ದಿನಗಳಲ್ಲಿ ನಿತೀಶ್ ಮತ್ತು ಮಾಂಜಿ ನಡುವೆ ಭಿನ್ನಮತ ಉಂಟಾಗಿ ಮಾಂಜಿ ರಾಜೀನಾಮೆ ನೀಡಿದರು. ಮಾಂಜಿ ರಾಜೀನಾಮೆ ನೀಡಿದ ಬಳಿಕ ನಾಲ್ಕನೇ ಬಾರಿಗೆ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿ ಆದರು.


ಆರ್ ಜೆಡಿ ಜತೆ ಕೈಜೋಡಿಸಿದ ನಿತೀಶ್


ಬಿಜೆಪಿಗಿಂತ ಹೆಚ್ಚಾಗಿ ನರೇಂದ್ರ ಮೋದಿ ಜೊತೆ ಮುನಿಸಿಕೊಂಡಿದ್ದ ನಿತೀಶ್ ಕುಮಾರ್ 2015ರ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನದ ಜೊತೆ ಕೈಜೋಡಿಸಿದರು. ಮಹಾಘಟಬಂಧನ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ನಿತೀಶ್ ಐದನೇ ಬಾರಿಗೆ ಮುಖ್ಯಮಂತ್ರಿಯಾದರು.


ಇದನ್ನು ಓದಿ: 4ನೇ ಅವಧಿಗೆ ಬಿಹಾರದ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾವಚನ ಸ್ವೀಕಾರ; ಸುಶೀಲ್ ಮೋದಿಗಿಲ್ಲ ಡಿಸಿಎಂ ಸ್ಥಾನ


ಮತ್ತೆ ಎನ್ ಡಿಎ ತೆಕ್ಕೆಗೆ


ಆರ್ ಜೆಡಿ ನಾಯಕ ಲಾಲುಪ್ರಸಾದ್ ಯಾದವ್ ಬಹಳ ಉದಾರತೆ ತೋರಿ ನಿತೀಶ್ ಕುಮಾರ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದರು. ಆರ್ ಜೆಡಿ ಗೆದ್ದಿದ್ದ ಕೆಲ ಕ್ಷೇತ್ರಗಳನ್ನು ನಿತೀಶ್ ಕುಮಾರ್ ಅವರ ಜೆಡಿಯುಗೆ ಬಿಟ್ಟುಕೊಟ್ಟರು. ಚುನಾವಣೆ ಬಳಿಕ ಆರ್ ಜೆಡಿಗಿಂತ ಜೆಡಿಯು ಕಡಿಮೆ ಗೆದ್ದಿದ್ದರೂ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದರು. ಆದರೂ ಆರ್ ಜೆಡಿಯೊಂದಿಗೆ ಉಳಿಯಲು ಇಷ್ಟಪಡದ ನಿತೀಶ್ ಕುಮಾರ್ 2017ರಲ್ಲಿ ಮತ್ತೆ ಎನ್ ಡಿ ತೆಕ್ಕೆಗೆ ಜಾರಿಕೊಂಡು ಆರನೇ ಬಾರಿಗೆ ಮುಖ್ಯಮಂತ್ರಿ ಆದರು.


ಅತ್ಯಂತ ಕಳಪೆ ಸಾಧನೆ ಬಳಿಕವೂ ಸಿಎಂ

top videos


    ಈಗ (2020ರಲ್ಲಿ) ಜೆಡಿಯು ಹಿಂದೆಂದಿಗಿಂತಲೂ ಅತ್ಯಂತ ಕಳಪೆ ಸಾಧನೆ ಮಾಡಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ 108 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 43 ಸ್ಥಾನಗಳಲ್ಲಿ ಗೆದ್ದಿದೆ. ಆದರೂ ನಿತೀಶ್ ಕುಮಾರ್ ಏಳನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

    First published: