ಪಿಎಂಸಿ ಬ್ಯಾಂಕ್ ಹಗರಣ: ಡ್ರಾ ಮಾಡುವ ಹಣದ ಮಿತಿ ಹೆಚ್ಚಿಸಿ ಎಂದು ಆರ್‌ಬಿಐ ಕೇಂದ್ರ ಕಚೇರಿ ಎದುರು ಗ್ರಾಹಕರ ಪ್ರತಿಭಟನೆ

ಅವ್ಯವಹಾರ ಹಗರಣಕ್ಕೆ ಸಿಲುಕಿರುವ ಪಿಎಂಸಿ ಬ್ಯಾಂಕ್ ಇದೀಗ ಭಾರೀ ನಷ್ಟದಲ್ಲಿದೆ. ಆರ್​ಬಿಐನ ನಿರ್ದೇಶನದ ಅಡಿಯಲ್ಲಿರುವ ಈ ಬ್ಯಾಂಕಲ್ಲಿ ಠೇವಣಿದಾರರು ಇಟ್ಟಿರುವ ಹಣದ ಮೊತ್ತ 11,000 ಕೋಟಿ ಇದೆ. ತಮ್ಮ ಹಣ ವಾಪಸ್ ನೀಡುವಂತೆ ಠೇವಣಿದಾರರು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ಧಾರೆ. 

news18-kannada
Updated:October 19, 2019, 10:57 PM IST
ಪಿಎಂಸಿ ಬ್ಯಾಂಕ್ ಹಗರಣ: ಡ್ರಾ ಮಾಡುವ ಹಣದ ಮಿತಿ ಹೆಚ್ಚಿಸಿ ಎಂದು ಆರ್‌ಬಿಐ ಕೇಂದ್ರ ಕಚೇರಿ ಎದುರು ಗ್ರಾಹಕರ ಪ್ರತಿಭಟನೆ
ಪ್ರತಿಭಟನೆ ಮಾಡುತ್ತಿರುವ ಗ್ರಾಹಕರು
  • Share this:
ಬೆಂಗಳೂರು(ಅ.19): ಸಂಕಷ್ಟದಲ್ಲಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಕೋಆಪರೇಟಿವ್ (ಪಿಎಂಸಿ) ಬ್ಯಾಂಕ್​ನ ಗ್ರಾಹಕರು ದಕ್ಷಿಣ ಮುಂಬೈಯಲ್ಲಿರುವ ರಿಸರ್ವ್ ಬ್ಯಾಂಕ್ ಕೇಂದ್ರ ಕಚೇರಿ ಮುಂಭಾಗ ಇಂದು ಪ್ರತಿಭಟನೆ ನಡೆಸಿದ್ದಾರೆ. ಬ್ಯಾಂಕ್​​ನಲ್ಲಿ ತಾವು ಜಮಾ ಮಾಡಿರುವ ಹಣವನ್ನು ಹಿಂಪಡೆಯಲು ಆರ್‌ಬಿಐ ಮಿತಿ ವಿಧಿಸಿದೆ. ಈ ಮಿತಿತನ್ನು ಮತ್ತಷ್ಟು ಹೆಚ್ಚಿಸುವಂತೆ ಆಗ್ರಹಿಸಿ ಪ್ರತಿಭಟಿಸಿದ್ದಾರೆ.

ಮುಂಬೈಯಲ್ಲಿರುವ ರಿಸರ್ವ್ ಬ್ಯಾಂಕ್ ಕೇಂದ್ರ ಕಚೇರಿ ಮುಂಭಾಗ ಪ್ರತಿಭಟನಾಕಾರರು ಜಮಾಯಿಸುತ್ತಿದ್ದಂತೆಯೇ ಭಾರೀ ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈ ಪೊಲೀಸರು ನಿಯೋಜನೆಗೊಂಡರು. ಗ್ರಾಹಕರು ಆರ್​​ಬಿಐ ವಿರುದ್ಧ ಘೋಷಣೆ ಕೂಗಿ ಧಿಕ್ಕಾರ ಹಾಕಿದರು. ಈ ವೇಳೆ ಯಾವುದೇ ಅನಾಹುತ ನಡೆಯದಂತೆ ಪೊಲೀಸರು ಎಚ್ಚರವಹಿಸಿದರು.

ಅವ್ಯವಹಾರ ಹಗರಣಕ್ಕೆ ಸಿಲುಕಿರುವ ಪಿಎಂಸಿ ಬ್ಯಾಂಕ್ ಇದೀಗ ಭಾರೀ ನಷ್ಟದಲ್ಲಿದೆ. ಆರ್​ಬಿಐನ ನಿರ್ದೇಶನದ ಅಡಿಯಲ್ಲಿರುವ ಈ ಬ್ಯಾಂಕಲ್ಲಿ ಠೇವಣಿದಾರರು ಇಟ್ಟಿರುವ ಹಣದ ಮೊತ್ತ 11,000 ಕೋಟಿ ಇದೆ. ತಮ್ಮ ಹಣ ವಾಪಸ್ ನೀಡುವಂತೆ ಠೇವಣಿದಾರರು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ಧಾರೆ.

ಪಂಜಾಬ್ ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್ ಅಥವಾ ಪಿಎಂಸಿ ಬ್ಯಾಂಕ್ ಈಗ್ಗೆ ಕೆಲವಾರು ದಿನಗಳಿಂದ ಜೋರು ಸದ್ದು ಮಾಡುತ್ತಿದೆ. ಆ ಸಹಕಾರಿ ಬ್ಯಾಂಕಲ್ಲಿ ಠೇವಣಿ ಇಟ್ಟಿದ್ದ ಇಬ್ಬರು ವ್ಯಕ್ತಿಗಳು ನಿಧನರಾಗಿರುವ ಶಾಕಿಂಗ್ ನ್ಯೂಸ್ ಕೂಡ ಕೇಳಿಬಂದಿದೆ. ಬ್ಯಾಂಕಿಂಗ್ ವಲಯದಲ್ಲಿ ನಡೆದಿರುವ ಹಲವು ಹಗರಣಗಳ ಪಟ್ಟಿಗೆ ಪಿಎಂಸಿಯೂ ಸೇರ್ಪಡೆಯಾಗಿದೆ. 6 ಸಾವಿರ ಕೋಟಿಗೂ ಅಧಿಕ ಹಣದ ಹಗರಣ ಇದಾಗಿದೆ. ಪಿಎಂಸಿ ಬ್ಯಾಂಕ್​ನ ಕೋಟ್ಯಂತರ ಹಣವನ್ನು ಸಂಚು ರೂಪಿಸಿ ಲಪಟಾಯಿಸಿದ ಹೆಚ್​ಡಿಐಎಲ್ ಬ್ಯಾಂಕ್​ನ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್​​ಡಿಐಎಲ್ ಕಂಪನಿಗೆ ಸೇರಿದ ಆಸ್ತಿಗಳನ್ನು ಗುರುತಿಸಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಯತ್ನ ನಡೆದಿದೆ.

ಹಗರಣಗಳ ಮೇಲೆ ಹಗರಣ ಕಾಣುತ್ತಿರುವ ಬ್ಯಾಂಕಿಂಗ್ ವಲಯದ ವಸ್ತು ಸ್ಥಿತಿಗೆ ಪಿಎಂಸಿ ಕೈಗನ್ನಡಿ ಹಿಡಿದಿದೆ. ಕೆಲವಾರು ವರ್ಷಗಳಿಂದ ಎನ್​ಪಿಎ ಅಥವಾ ಅನುತ್ಪಾದಕ ಸಾಲಗಳ ಪ್ರಮಾಣ ತೀವ್ರತರವಾಗಿ ಏರುತ್ತಿದೆ. ಪಿಎಂಸಿ ಬ್ಯಾಂಕ್ ನೀಡಿದ ಶೇ. 70ಕ್ಕಿಂತಲೂ ಹೆಚ್ಚು ಸಾಲ ಎನ್​ಪಿಎ ಆಗಿದೆ. ಇದು ಸಾವಿರಾರು ಬ್ಯಾಂಕ್ ಗ್ರಾಹಕರಿಗೆ ಬರಸಿಡಿಲಿನಂತೆ ಬಡಿದಿದೆ.

ಇದನ್ನೂ ಓದಿ: ಏನಿದು ಪಿಎಂಸಿ ಬ್ಯಾಂಕ್ ಹಗರಣ? ಬ್ಯಾಂಕಿಂಗ್ ವಲಯದ ಕರ್ಮಕಾಂಡದ ಒಂದು ಕಥೆ

ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ 1984ರ ಫೆ. 13ರಂದು ಪ್ರಾರಂಭವಾದಾಗ ಒಂದೇ ಬ್ರ್ಯಾಂಚ್ ಇದ್ದದ್ದು. 35 ವರ್ಷಗಳಲ್ಲಿ ಅದು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ 137 ಬ್ರ್ಯಾಂಚ್​ಗಳನ್ನ ಸ್ಥಾಪಿಸುವ ಮಟ್ಟಕ್ಕೆ ಬೆಳೆದಿದೆ. 1,800ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಬರೋಬ್ಬರಿ 11 ಸಾವಿರ ಕೋಟಿ ರೂ ಠೇವಣಿಗಳನ್ನ ಗ್ರಾಹಕರಿಂದ ಶೇಖರಿಸಿದೆ. ಭಾರತದ ಸಹಕಾರಿ ಬ್ಯಾಂಕುಗಳಲ್ಲೇ ಪಿಎಂಸಿ ನಂಬರ್ ಒನ್ ಎನಿಸಿದೆ. 19 ವರ್ಷಗಳ ಹಿಂದ ಆರ್​ಬಿಐ ಈ ಸಹಕಾರಿ ಬ್ಯಾಂಕನ್ನ ಶೆಡ್ಯೂಲ್ಡ್ ಕಮರ್ಷಿಯಲ್ ಪಟ್ಟಿಗೆ ಸೇರ್ಪಡೆ ಮಾಡಿತು.ಪಿಎಂಸಿ ಬ್ಯಾಂಕ್​ನ ಸಾಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೆಲ ಮಹಿಳಾ ಉದ್ಯೋಗಿಗಳಿಗೆ ಅದೇನೋ ಅನುಮಾನ ಬಂದಿದೆ. ಲೋನ್ ಅಕೌಂಟ್ ಹೆಸರಲ್ಲಿ ಗುಪ್ತ ಖಾತೆಗಳಿವೆ. ಇತ್ತ ಗಮನ ಹರಿಸಿ ಎಂದು ಈ ಮಹಿಳೆಯರು ಆರ್​ಬಿಐಗೆ ತಿಳಿಸಿದ್ದಾರೆ. ಆಗ ಘೋಸ್ಟ್ ಅಕೌಂಟ್​ಗಳ ಕರ್ಮಕಾಂಡ ಮತ್ತು ಸಾವಿರಾರು ಕೋಟಿ ರೂ ವಂಚನೆಯ ಪ್ರಕರಣಗಳು ಬೆಳಕಿಗೆ ಬಂದವು.
-----------
First published:October 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ