ನವದೆಹಲಿ (ಜೂನ್ 10): ಸೊಳ್ಳೆಗಳಿಂದ ಮನುಷ್ಯರಿಗೆ ಹರಡುವ ಮಾರಣಾಂತಿಕ ರೋಗಿ ಡೆಂಘಿ ಇಂದಿಗೂ ಜನರನ್ನು ಕಾಡುತ್ತಲೇ ಇದೆ. ಕೊರೋನಾ ಜೊತೆಗೆ ಡೆಂಘಿ ಪ್ರಕರಣಗಳ ಸಂಖ್ಯೆಯೂ ಇತ್ತೀಚೆಗೆ ಹೆಚ್ಚುತ್ತಿದೆ. ಇನ್ನೇನು ಮಳೆಗಾಲ ಶುರುವಾಗುವುದರಿಂದ ಡೆಂಘಿ ಜ್ವರದ ಪ್ರಕರಣಗಳು ಹೆಚ್ಚೆಚ್ಚು ದಾಖಲಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಸಂಶೋಧನೆಯೊಂದನ್ನು ಮಾಡಿರುವ ವಿಜ್ಞಾನಿಗಳು ಡೆಂಘಿ ವೈರಸ್ ಅನ್ನು ಹರಡುವ ಸೊಳ್ಳೆಗಳ ಮೇಲೆ ಪ್ರಯೋಗವೊಂದನ್ನು ಮಾಡಿದ್ದಾರೆ. ಸೊಳ್ಳೆಗಳಿಗೇ ಸರ್ಜರಿ ಮಾಡಿ ಡೆಂಘಿ ಹರಡುವ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ!
ಇಂಡೋನೇಷ್ಯಾದ ಯೋಗ್ಯಕಾರ್ತಾ ನಗರದಲ್ಲಿ ನಡೆದ ಪ್ರಯೋಗದಲ್ಲಿ ವಿಜ್ಞಾನಿಗಳು ಹೊಸ ಆವಿಷ್ಕಾರವೊಂದನ್ನು ಮಾಡಿದ್ದಾರೆ. ವರ್ಲ್ಡ್ ಮಾಸ್ಕಿಟೋ ಪ್ರೋಗ್ರಾಂ ಅಂಗವಾಗಿ ಇಂಡೋನೇಷ್ಯಾದಲ್ಲಿ ನಡೆದ ಪರೀಕ್ಷಾ ಪ್ರಯೋಗದಲ್ಲಿ ಸೊಳ್ಳೆಗಳಿಂದ ಡೆಂಘಿ ಹರಡುವ ವಿಧಾನವನ್ನು ಶೇ. 77ರಷ್ಟು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೊಲ್ಬಾಚಿಯ ಎಂಬ ಬ್ಯಾಕ್ಟೀರಿಯವನ್ನು ಬಳಸಿ ವಿಜ್ಞಾನಿಗಳು ಪ್ರಯೋಗವೊಂದನ್ನು ಮಾಡಿದ್ದಾರೆ. ಈ ಬ್ಯಾಕ್ಟೀರಿಯ ಪ್ರಾಕೃತಿಕವಾಗಿ ಅದ್ಭುತ ಶಕ್ತಿಯನ್ನು ಹೊಂದಿದೆ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ.
ಈ ವೊಲ್ಬಾಚಿಯಾ ಬ್ಯಾಕ್ಟೀರಿಯಗಳು ಸೊಳ್ಳೆಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ. ಆದರೆ, ಈ ಬ್ಯಾಕ್ಟೀರಿಯಗಳು ಸೊಳ್ಳೆಗಳ ದೇಹದೊಳಗೆ ಸೇರಿ ಡೆಂಘಿ ವೈರಸ್ ಉತ್ಪತ್ತಿಯಾಗುವುದನ್ನು ತಡೆಗಟ್ಟುತ್ತವೆ. ವೊಲ್ಬಾಚಿಯಾ ಬ್ಯಾಕ್ಟೀರಿಯಾ ಇರುವ 50 ಲಕ್ಷ ಸೊಳ್ಳೆಗಳ ಮೊಟ್ಟೆಗಳ ಮೇಲೆ ಈ ಪ್ರಯೋಗವನ್ನು ನಡೆಸಲಾಗಿದೆ. ನಗರದೊಳಗೆ ಪ್ರತಿ 2 ವಾರಕ್ಕೊಮ್ಮೆ ಈ ಸೊಳ್ಳೆಗಳ ಮೊಟ್ಟೆಯನ್ನು ಬಕೆಟ್ನಲ್ಲಿರುವ ನೀರಿಗೆ ಹಾಕಿ ಇಡಲಾಗುತ್ತಿತ್ತು. ಇದೇ ರೀತಿ 9 ತಿಂಗಳ ಕಾಲ ಸೊಳ್ಳೆಗಳ ಮೊಟ್ಟೆಯಿರುವ ನೀರನ್ನು ಇಡುವ ಪ್ರಯೋಗ ನಡೆಸಲಾಯಿತು.
ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ವರದಿ ಮಾಡಿರುವ ಪ್ರಕಾರ, ಈ ಕಾರ್ಯ ವಿಧಾನದಿಂದ ಶೇ. 77ರಷ್ಟು ಡೆಂಘಿ ಪ್ರಕರಣಗಳು ಕಡಿಮೆಯಾಗಿವೆ. ಉಳಿದ ಶೇ. 33ರಷ್ಟು ಡೆಂಘಿ ಪೀಡಿತರಲ್ಲಿ ಶೇ. 86ರಷ್ಟು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಗತ್ಯ ಉಂಟಾಗಿಲ್ಲ ಎಂಬುದು ಕಂಡುಬಂದಿದೆ.
ಇದನ್ನೂ ಓದಿ: Karnataka Unlock: ಕರ್ನಾಟಕದಲ್ಲಿ ಹಂತಹಂತವಾಗಿ ಅನ್ಲಾಕ್?; ಇಂದು ಸಿಎಂ ಯಡಿಯೂರಪ್ಪ ಮಹತ್ವದ ಸಭೆ
ಹೀಗಾಗಿ, ಒಂದುವೇಳೆ ಡೆಂಘಿ ರೋಗ ಬಂದರೂ ಅದು ಈಗಿನಷ್ಟು ತೀವ್ರವಾಗಿರುವುದಿಲ್ಲ, ಅದರಿಂದ ಮನುಷ್ಯರು ಸಾಯುವ ಸಾಧ್ಯತೆ ಕಡಿಮೆ ಎಂದು ಅಧ್ಯಯನದಲ್ಲಿ ವಿಜ್ಞಾನಿಗಳ ತಂಡ ಕಂಡುಹಿಡಿದಿದೆ. ಈ ಸಂಶೋಧನೆ ನಾವು ಊಹಿಸಿದ್ದಕ್ಕಿಂತಲೂ ಹೆಚ್ಚು ಉತ್ತಮ ಫಲಿತಾಂಶ ನೀಡಿದೆ ಎಂದು ವರ್ಲ್ಡ್ ಮೊಸ್ಕಿಟೋ ಪ್ರೋಗ್ರಾಂನ ನಿರ್ದೇಶಕ ಡಾ. ಆ್ಯಂಡರ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.
50 ವರ್ಷಗಳ ಹಿಂದಿನಿಂದಲೂ ಚಾಲ್ತಿಯಲ್ಲಿರುವ ಡೆಂಘಿ ರೋಗವನ್ನು ಇಂದಿಗೂ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. 1970ರಲ್ಲಿ ಕೇವಲ 9 ದೇಶಗಳಲ್ಲಿ ಡೆಂಘಿ ಕಾಣಿಸಿಕೊಂಡಿತ್ತು. ಆದರೆ, ಈಗ ಪ್ರಪಂಚದ ಬಹುತೇಕ ಎಲ್ಲ ದೇಶಗಳಲ್ಲಿ ಒಂದು ವರ್ಷಕ್ಕೆ 40 ಕೋಟಿಗೂ ಅಧಿಕ ಜನರು ಡೆಂಘಿಗೆ ತುತ್ತಾಗುತ್ತಿದ್ದಾರೆ. ಮುಖ್ಯವಾಗಿ ಮೂಳೆ ಮುರಿಯುವ ಜ್ವರ ಎಂದೇ ಹೆಸರಾಗಿರುವ ಡೆಂಘಿ ಮನುಷ್ಯರ ಮಾಂಸಖಂಡಗಳು ಹಾಗೂ ಮೂಳೆಗಳಲ್ಲಿ ಅಸಾಧ್ಯವಾದ ನೋವನ್ನು ಉಂಟುಮಾಡುತ್ತದೆ.
ಇದನ್ನೂ ಓದಿ: Weight Loss Diet: ತೆಳ್ಳಗಾಗಲು ಪರದಾಡ್ತಿದ್ದೀರಾ?; ಕೀಟೋ ಡಯೆಟ್ನಿಂದ ಹತ್ತೇ ದಿನದಲ್ಲಿ ತೂಕ ಇಳಿಸಿ!
ಡೆಂಘಿ ರೋಗ ಸೊಳ್ಳೆಗಳಿಂದ ಹರಡುವ ಸೋಂಕು. ಹೂವಿನ ಕುಂಡ, ಬೀಸಾಕಿದ ಟೈರ್, ಹಳೆಯ ಎಣ್ಣೆಯ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿ ಇವುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಡೆಂಘಿಯನ್ನು ಆರಂಭದಲ್ಲಿಯೇ ಪತ್ತೆ ಮಾಡುವುದರಿಂದ ಮತ್ತು ಸರಿಯಾದ ರೀತಿ ನಿರ್ವಹಣೆ ಮಾಡುವುದರಿಂದ ಈ ರೋಗದ ತೊಡಕುಗಳನ್ನು ತಡೆಯಬಹುದು. ತೀವ್ರ ತಲೆನೋವು, ಕಣ್ಣು ನೋವು, ಗಂಟು ಮತ್ತು ಸ್ನಾಯು ನೋವು, ಹಸಿವಾಗದಿರುವುದು, ಹೊಟ್ಟೆ ಸರಿಯಿಲ್ಲದಿರುವುದು, ತುರಿಕೆ, 103 ಡಿಗ್ರಿಗಿಂತಲೂ ಹೆಚ್ಚಿನ ಜ್ವರ ಇದರ ಮುಖ್ಯ ಲಕ್ಷಣ. ಚಿಕ್ಕ ಮಕ್ಕಳಿಗೆ ಶೀತ , ಭೇದಿ, ತುರಿಕೆ ಮತ್ತು ತೀವ್ರ ಸಂದರ್ಭಗಳಲ್ಲಿ ರೋಗಗ್ರಸ್ತವಾಗುತ್ತದೆ. ಡೆಂಘಿ ಬಂದಾಗ ಪ್ಲೇಟ್ಲೆಟ್ ಕೌಂಟ್ ಇಳಿಕೆಯಾಗುತ್ತದೆ. ಅತಿಯಾದ ಸುಸ್ತು ಉಂಟಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ