news18-kannada Updated:December 24, 2020, 3:12 PM IST
ರಾಹುಲ್ ಗಾಂಧಿ.
ನವ ದೆಹಲಿ (ಡಿಸೆಂಬರ್ 24); ಭಾರತದಲ್ಲಿ ಪ್ರಜಾಪ್ರಭುತ್ವ ಎಂಬುದು ಅಸ್ಥಿತ್ವದಲ್ಲೇ ಇಲ್ಲ. ಪ್ರಜಾಪ್ರಭುತ್ವ ಇದೆ ಎಂದು ಭಾವಿಸಿದರೆ ಅದು ನಮ್ಮ ಕಲ್ಪನೆಯಷ್ಟೇ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾರೇ ಎದ್ದು ನಿಂತು ಪ್ರಶ್ನೆ ಮಾಡಿದರೂ ಸಹ ಅವರನ್ನು ಭಯೋತ್ಪಾದಕರಂತೆ ಚಿತ್ರಿಸಲಾಗುತ್ತಿದೆ. ಆರ್ಎಸ್ಎಸ್ ಮುಖಂಡ ಮೋಹನ್ ಭಾಗತ್ ಆಗಿದ್ದರೂ ಸಹ ಇದೇ ಪರಿಸ್ಥಿತಿ ಎಂದು ಕಾಂಗ್ರೆಸ್ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಯ ವಿರುದ್ಧ 2 ಕೋಟಿಗೂ ಅಧಿಕ ರೈತರ ಸಹಿಯೊಂದಿಗೆ ಇಂದು ರಾಹುಲ್ ಗಾಂಧಿ ನೇತೃತ್ವದ ನಿಯೋಗ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿ ಈ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರು.
ಕಾಂಗ್ರೆಸ್ ನಾಯಕರಾದ ಗುಲಾಮ್ ನಬಿ ಆಜಾದ್ ಮತ್ತು ಅಧೀರ್ ರಂಜನ್ ಚೌಧರಿ ಅವರೊಂದಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾದ ರಾಹುಲ್ ಗಾಂಧಿ ತಮ್ಮ ಮನವಿಯನ್ನು ನೀಡಿದ್ದಾರೆ. ಈ ನಂತರ ಮಾತನಾಡಿರುವ ರಾಹುಲ್ ಗಾಂಧಿ, "ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ಹಿಂಪಡೆಯುವವರೆಗೆ ರೈತರು ತಮ್ಮ ಹೋರಾಟವನ್ನು ಹಿಂಪಡೆಯುವುದಿಲ್ಲ. ಮನೆಗೆ ಹಿಂದಿರುಗುವುದಿಲ್ಲ.
ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಸಂಸತ್ನ ಜಂಟಿ ಅಧಿವೇಶನ ಕರೆದು ಮೂರು ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು. ಈ ಸಮಸ್ಯೆ ಬಗೆಹರಿಯುವವರೆಗೆ ವಿರೋಧ ಪಕ್ಷಗಳು ರೈತರ ಬೆನ್ನಿಗೆ ನಿಲ್ಲಲಿದೆ" ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧವೂ ಆಕ್ರೋಶ ಹೊರಹಾಕಿರುವ ರಾಹುಲ್ ಗಾಂಧಿ, "ಪ್ರಧಾನಿ ಮೋದಿ ಕ್ರೋನಿ ಬಂಡವಾಳಶಾಹಿಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ರೈತರು, ಕಾರ್ಮಿಕರಷ್ಟೇ ಅಲ್ಲ, ಬಿಜೆಪಿ ಸೈದ್ಧಾಂತಿಕ ಮಾರ್ಗದರ್ಶಕರಾದ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರೇ ಎದುರು ನಿಂತರೂ ಅವರನ್ನು ಭಯೋತ್ಪಾದಕರೆಂಬಂತೆ ಬಿಂಬಿಸಲಾಗುತ್ತಿದೆ" ಎಂದಿದ್ದಾರೆ.
ಇದನ್ನೂ ಓದಿ : ಕೃಷಿ ಸುಧಾರಣೆ ಇನ್ನೂ ಆಗಬೇಕೆಂದ ಕೇಂದ್ರ; ಎಂಎಸ್ಪಿ ಕಾನೂನು ರೂಪಿಸುವಂತೆ ರೈತರ ಹಠ
ಇದಲ್ಲದೆ, ಇಂದು ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಪ್ರಿಯಾಂಕ ಗಾಂಧಿ ನೇತೃತ್ವದ ಪ್ರತಿಭಟನಾನಿರತರನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಸಂಸತ್ತಿನಲ್ಲಿ ಕೃಷಿ ಮಸೂದೆಗಳನ್ನು ತಡೆಯಲು ವಿರೋಧ ಪಕ್ಷಗಳು ಪ್ರಯತ್ನಿಸಿದ್ದವು. ಮಸೂದೆಗಳಿಗೆ ರಾಷ್ಟ್ರಪತಿ ಸಹಿ ಹಾಕಬಾರದು ಎಂದು ಒತ್ತಾಯಿಸಿದ್ದವು. ಆದರೂ ಎಲ್ಲಾ ತಡೆಗಳನ್ನೂ ಮೀರಿ ಬಿಜೆಪಿ ಸರ್ಕಾರ ಈ ಮಸೂದೆಗೆ ಅಂಗೀಕಾರ ಪಡೆದಿತ್ತು. ಆದರೆ, ರೈತರು ಕಳೆದ 28 ದಿನಗಳಿಂದ ಈ ಮಸೂದೆಯ ವಿರುದ್ದ ದೆಹಲಿಯಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ.
Published by:
MAshok Kumar
First published:
December 24, 2020, 3:10 PM IST