ದೆಹಲಿ ಗಲಭೆಯ ಚಾರ್ಚ್‌ಶೀಟ್‌ ಸಲ್ಲಿಸಿದ ಪೊಲೀಸರು; ದ್ವೇಷ ಭಾಷಣ ಮಾಡಿದ್ದ ಬಿಜೆಪಿ ನಾಯಕರ ಹೆಸರು ನಾಪತ್ತೆ!

ದೆಹಲಿ ಹಿಂಸಾಚಾರದ ಬೆನ್ನಿಗೆ ಕಪಿಲ್ ಮಿಶ್ರಾ ಅವರ ಹೇಳಿಕೆಗಳು ತೀವ್ರ ಟೀಕೆಗೆ ಗುರಿಯಾಗಿದ್ದವು. ದೆಹಲಿ ಹೈಕೋರ್ಟ್ ಬಿಜೆಪಿ ನಾಯಕರ ವಿರುದ್ಧದ ನಿಷ್ಕ್ರಿಯತೆಯ ಬಗ್ಗೆ ಪೊಲೀಸರನ್ನು ಪ್ರಶ್ನಿಸಿತ್ತು. ಬಿಜೆಪಿಯ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿತ್ತು. ಆದರೆ, ಈ ಎಲ್ಲಾ ಘಟನೆಗಳನ್ನು ಪ್ರಸ್ತುತ ಚಾರ್ಜ್‌‌ಶೀಟ್‌ನಲ್ಲಿ ಕೈಬಿಡಲಾಗಿದೆ.

news18-kannada
Updated:June 9, 2020, 9:50 PM IST
ದೆಹಲಿ ಗಲಭೆಯ ಚಾರ್ಚ್‌ಶೀಟ್‌ ಸಲ್ಲಿಸಿದ ಪೊಲೀಸರು; ದ್ವೇಷ ಭಾಷಣ ಮಾಡಿದ್ದ ಬಿಜೆಪಿ ನಾಯಕರ ಹೆಸರು ನಾಪತ್ತೆ!
ದೆಹಲಿ ಗಲಭೆಯ ದೃಶ್ಯ.
  • Share this:
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಕಳೆದ ಆಗಸ್ಟ್‌ನಿಂದ ದೆಹಲಿಯಲ್ಲಿ ಸತತ ಪ್ರತಿಭಟನೆಗಳು ನಡೆದಿದ್ದವು. ಇದರ ಬೆನ್ನಿಗೆ ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರವನ್ನು ಭಾಗಶಃ ಯಾರೂ ಮರೆತಿರಲಿಕ್ಕಿಲ್ಲ. ಆದರೆ, ಈ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಂದು ಚಾರ್ಚ್‌‌ಶೀಟ್‌ ಸಲ್ಲಿಸಿದ್ದು, ಈ ಚಾರ್ಚ್‌‌ಶೀಟ್‌ನಲ್ಲಿ ಪ್ರಚೋಧನಾಕಾರಿ ಭಾಷಣ ಮಾಡಿದ್ದ ಬಿಜೆಪಿ ನಾಯಕರ ಹೆಸರನ್ನು ಕೈಬಿಟ್ಟು, ಕೇವಲ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟಿಸಿದವರ ಮೇಲೆ ಮಾತ್ರ ಆಪಾದನೆ ಹೊರಿಸಲಾಗಿದೆ.

ಚಾರ್ಚ್‌ಶೀಟ್‌ನಲ್ಲಿ ದೆಹಲಿ ಕೋಮು ಗಲಭೆಯನ್ನು ಕಾಲಾನಕ್ರಮಣಿಕೆಯಲ್ಲಿ ಉಲ್ಲೇಖಿಸಲಾಗಿದ್ದು, ಡಿಸೆಂಬರ್ 13 ರಿಂದ ಫೆಬ್ರವರಿ 25 ರವರೆಗೆ ನಡೆದ ಘಟನೆಗಳನ್ನು ಪಟ್ಟಿ ಮಾಡಲಾಗಿದೆ. ಆದರೆ, ಈ ಪಟ್ಟಿಯಲ್ಲಿ ಶಾಸಕ ಕಪಿಲ್ ಮಿಶ್ರಾ ಸೇರಿದಂತೆ ಬಿಜೆಪಿ ನಾಯಕರ ದ್ವೇಷದ ಭಾಷಣಗಳನ್ನು ಪೊಲೀಸರು ಎಲ್ಲಿಯೂ ಉಲ್ಲೇಖಿಸಿಲ್ಲ.

ಚಾರ್ಜ್‌ಶೀಟ್‌ನಲ್ಲಿ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಶಾಹೀನ್ ಬಾಗ್ ಮತ್ತು ಸಿಎಎ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಸ್ಥಳದಲ್ಲಿದ್ದ ಪ್ರತಿಭಟನಾಕಾರರ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದೆ.

ಕೋಮುವಾದಿ ಮತ್ತು ದ್ವೇಷದ ಟ್ವೀಟ್‌ಗಳಿಗೆ ಹೆಸರುವಾಸಿಯಾದ ಕಪಿಲ್ ಮಿಶ್ರಾ ಫೆಬ್ರವರಿ 23 ರಂದು ಈಶಾನ್ಯ ದೆಹಲಿಯ ಜಾಫ್ರಾಬಾದ್ ಬಳಿಯ ಮೌಜ್‌ಪುರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ರ್‍ಯಾಲಿಯನ್ನು ನಡೆಸಿದ್ದರು. ಅದೇ ಸ್ಥಳದಲ್ಲಿ ಸಿಎಎ ವಿರೋಧಿ ಹೋರಾಟ ಸಹ ನಡೆಯುತ್ತಿತ್ತು.

ಈ ವೇಳೆ ಪೊಲೀಸರಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದ ಕಪಿಲ್‌ ಮಿಶ್ರಾ, “ಮೂರು ದಿನಗಳೊಳಗೆ ಪೊಲೀಸರು ಇಲ್ಲಿನ ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ತೆರವುಗೊಳಿಸಬೇಕು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಯಲ್ಲಿ ಇರುವವರೆಗೂ ಮಾತ್ರ ನಾವು ತಾಳ್ಮೆ ವಹಿಸುತ್ತೇವೆ. ಆದರೆ, ಆನಂತರವೂ ಇಲ್ಲಿನ ರಸ್ತೆಗಳನ್ನು ತೆರವುಗೊಳಿಸದಿದ್ದರೆ ನಾವು ಪೊಲೀಸರನ್ನು ಕೇಳುವುದಿಲ್ಲ, ನಾವೇ ಬೀದಿಗಿಳಿಯಬೇಕಾಗುತ್ತದೆ” ಎಂದು ಪೊಲೀಸ್ ಅಧಿಕಾರಿಗಳ ಎದುರಿಗೆ ಕಪಿಲ್ ಮಿಶ್ರಾ ಆಡಿದ್ದ ಉದ್ಧಟ ತನದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದವು.

ಕೆಲವು ಗಂಟೆಗಳ ನಂತರ ಸಿಎಎ ವಿರೋಧಿ ಮತ್ತು ಪರ ಎಂಬ ಎರಡು ಗುಂಪುಗಳ ನಡುವೆ ಘರ್ಷಣೆಗಳು ಭುಗಿಲೆದ್ದವು. ನೋಡ ನೋಡುತ್ತಿದ್ದಂತೆ ದೆಹಲಿಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರದಲ್ಲಿ ಕನಿಷ್ಟ 50ಕ್ಕೂ ಹೆಚ್ಚು ಮುಸ್ಲಿಮರು ಕೊಲ್ಲಲ್ಪಟ್ಟಿದ್ದರು.

ದೆಹಲಿ ಹಿಂಸಾಚಾರದ ಬೆನ್ನಿಗೆ ಕಪಿಲ್ ಮಿಶ್ರಾ ಅವರ ಹೇಳಿಕೆಗಳು ತೀವ್ರ ಟೀಕೆಗೆ ಗುರಿಯಾಗಿದ್ದವು. ದೆಹಲಿ ಹೈಕೋರ್ಟ್ ಬಿಜೆಪಿ ನಾಯಕರ ವಿರುದ್ಧದ ನಿಷ್ಕ್ರಿಯತೆಯ ಬಗ್ಗೆ ಪೊಲೀಸರನ್ನು ಪ್ರಶ್ನಿಸಿತ್ತು. ಬಿಜೆಪಿಯ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿತ್ತು. ಆದರೆ, ಈ ಎಲ್ಲಾ ಘಟನೆಗಳನ್ನು ಪ್ರಸ್ತುತ ಚಾರ್ಜ್‌‌ಶೀಟ್‌ನಲ್ಲಿ ಕೈಬಿಡಲಾಗಿದೆ.ಈ ಹಿಂದೆ ವಿಚಾರಣೆಯೊಂದರಲ್ಲಿ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರು ಕೋಪಗೊಂಡು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. “ಕೇಂದ್ರ ಸಚಿವರು, ಸಂಸದರು ಮತ್ತು ಶಾಸಕರು ಸೇರಿದಂತೆ ಈ ಮೂರು ಬಿಜೆಪಿ ನಾಯಕರ ವಿರುದ್ಧ ಏಕೆ ಎಫ್ಐಆರ್ ಹಾಕಿಲ್ಲ? ಅವರ ದ್ವೇಷ ಭಾಷಣಗಳನ್ನು ಪ್ರಕರಣದಲ್ಲಿ ನೀವು ಏಕೆ ನೋಂದಾಯಿಸುತ್ತಿಲ್ಲ? ಅಪರಾಧ ನಡೆದಿದೆ ಎಂಬುದನ್ನು ಅಂಗೀಕರಿಸಲು ಸಹ ನೀವು ಬಯಸುವುದಿಲ್ಲವೇ? ” ಎಂದು ಪ್ರಶ್ನಿಸಿದ್ದರು.

ಆದರೆ ಎರಡೇ ದಿನದಲ್ಲಿ ಆ ನ್ಯಾಯಾಧೀಶರನ್ನು ದೆಹಲಿಯಿಂದ ಹರಿಯಾಣಕ್ಕೆ ವರ್ಗಾಯಿಸಲಾಯಿತು, ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು.
ಇಲ್ಲಿಯವರೆಗೆ ಪೊಲೀಸರು ದಾಖಲಿಸಿದ ಎಫ್‌ಐಆರ್ ಮತ್ತು ಬಂಧನಗಳ ಪ್ರಕಾರ ಗಲಭೆಯ ಸಂಚುಕೋರರು ಸಾಮಾಜಿಕ ಕಾರ್ಯಕರ್ತರು ಅಥವಾ ಸಿಎಎ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿರುವ ಮುಸ್ಲಿಂ ವಿದ್ಯಾರ್ಥಿ ಮುಖಂಡರೇ ಆಗಿದ್ದಾರೆ.

ಈವರೆಗೆ ಗಲಭೆ ಪ್ರಕರಣಗಳಲ್ಲಿ ಪೊಲೀಸರು 783 ಎಫ್‌ಐಆರ್ ಮತ್ತು 70 ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದಾರೆ. 90 ದಿನಗಳ ಗಡುವನ್ನು ಗಮನದಲ್ಲಿಟ್ಟುಕೊಂಡು ಈಗ ಚಾರ್ಚ್‌‌ಶೀಟ್‌ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪೊಲೀಸರಿಂದ ಪ್ರಕರಣದ ಸಂಬಂಧ ಹೆಚ್ಚಿನ ಕ್ರಮವನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ಪಠ್ಯಕ್ರಮ-ಬೋಧನಾ ಸಮಯ ಕಡಿತ; ಮಾನವ ಸಂಪನ್ಮೂಲ ಸಚಿವಾಲಯ
First published: June 9, 2020, 9:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading