• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ದೆಹಲಿ ಗಲಭೆ ಪ್ರಕರಣ; ಉಮರ್​ ಖಾಲಿದ್​ಗೆ ಅಕ್ಟೋಬರ್​ 22ರ ವರೆಗೆ ನ್ಯಾಯಾಂಗ ಬಂಧನ ಮುಂದುವರೆಸಿದ ಕೋರ್ಟ್​

ದೆಹಲಿ ಗಲಭೆ ಪ್ರಕರಣ; ಉಮರ್​ ಖಾಲಿದ್​ಗೆ ಅಕ್ಟೋಬರ್​ 22ರ ವರೆಗೆ ನ್ಯಾಯಾಂಗ ಬಂಧನ ಮುಂದುವರೆಸಿದ ಕೋರ್ಟ್​

ಉಮರ್‌ ಖಾಲಿದ್‌.

ಉಮರ್‌ ಖಾಲಿದ್‌.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮತ್ತು ಪೌರತ್ವ ನೋಂದಣಿ ಕಾಯ್ದೆಯ ವಿರುದ್ಧ ಕಳೆದ ಜನವರಿಯಲ್ಲಿ ದೆಹಲಿಯ ಶಾಹಿನ್ ಭಾಗ್​ನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಆರಂಭವಾಗಿತ್ತು. ಇದೇ ಸಂದರ್ಭದಲ್ಲಿ ಬಿಜೆಪಿ ಬೆಂಬಲಿಗರು ಸಿಎಎ ಪರ ಚಳುವಳಿ ನಡೆಸಿದ್ದರು. ಕೊನೆಗೆ ಈ ಪರ-ವಿರೋಧ ಚಳುವಳಿಗಳು ಕೋಮು ಗಲಭೆಗೆ ಕಾರಣವಾಗಿತ್ತು. ಫೆಬ್ರವರಿ 23 ರಿಂದ 26 ರವರೆಗೆ ನಡೆದ ಈಶಾನ್ಯ ದೆಹಲಿಯ ಗಲಭೆಯಲ್ಲಿ ಕನಿಷ್ಟ 50ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

ಮುಂದೆ ಓದಿ ...
  • Share this:

ನವ ದೆಹಲಿ (ಸೆಪ್ಟೆಂಬರ್​ 24); ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆಯಲ್ಲಿ ಪೂರ್ವ ನಿಯೋಜಿತ ಪಿತೂರಿ ಸೇರಿದಂತೆ ಅನೇಕ ಆರೋಪಗಳ ಮೇಲೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (JNU) ಮಾಜಿ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ನನ್ನು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ಕಳೆದ ಸೆಪ್ಟೆಂಬರ್ 13 ರಂದು ಬಂಧನಕ್ಕೊಳಪಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿಚಾರಣೆಗೆ ಸಮನ್ಸ್ ಹೊರಡಿಸಿದ್ದ ಪೊಲೀಸರು, ಲೋಧಿ ಕಾಲೋನಿಯಲ್ಲಿರುವ ವಿಶೇಷ ಸೆಲ್ಗೆ ತನಿಖೆಗೆ ಹಾಜರಾಗುವಂತೆ ತಿಳಿಸಿದ್ದರು. ಈ ವಿಚಾರಣೆಯ ನಂತರ ಅವರನ್ನು ಬಂಧಿಸಲಾಗಿತ್ತು. ಅವರನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಕ್ಕೆ ಹಾಜರು ಪಡಿಸಿ ವಿಚಾರಣೆ ಸಲುವಾಗಿ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಆದರೆ, ಇಂದು ಅವರ ಪೊಲೀಸ್ ಕಸ್ಟಡಿ ಮುಕ್ತಾಯವಾಗಿದ್ದು ಮತ್ತೆ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿರುವ ದೆಹಲಿ ನ್ಯಾಯಾಲಯದ ಉಮರ್ ಖಾಲಿದ್ ಅವರನ್ನು ಅಕ್ಟೋಬರ್ 22ರ ವರೆಗೆ ನ್ಯಾಯಾಂಗ ಬಂಧನದಲ್ಲಿರಿಸಬೇಕು ಎಂದು ತೀರ್ಪು ನೀಡಿದೆ. 


ಈ ಮೊದಲು ಗಲಭೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ UAPA ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಖಾಲಿದ್ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡ ನಂತರ ಜುಲೈ 31 ರಂದು ವಿಚಾರಣೆ ನಡೆಸಲಾಗಿತ್ತು. ಈ ತಿಂಗಳ ಆರಂಭದಲ್ಲಿ ಪೊಲೀಸರು ಉಮರ್ ಖಾಲಿದ್ ಅವರನ್ನು ಬಂಧಿಸಿದ್ದರು.
10 ದಿನಗಳ ಪೊಲೀಸ್ ಕಸ್ಟಡಿ ಇಂದು ಕೊನೆಗೊಂಡ ಕಾರಣ, ಅವರನ್ನು ಕಾರ್ಕಾರ್ಡೂಮಾದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಅಮಿತಾಬ್ ರಾವತ್ ಅವರ ಮುಂದೆ ಹಾಜರುಪಡಿಸಲಾಗಿತ್ತು. ಖಾಲಿದ್‌ರನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೋರಿದ್ದ ದೆಹಲಿ ಪೊಲೀಸರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.


ಆದೇಶದ ನಂತರ, ಉಮರ್ ಖಾಲಿದ್ ತನ್ನ ಹೆತ್ತವರನ್ನು ಭೇಟಿಯಾಗಲು ಮತ್ತು ಅವರ ಕನ್ನಡಕ ಮತ್ತು ಕೆಲವು ಪುಸ್ತಕಗಳನ್ನು ಜೈಲಿಗೆ ಕೊಂಡೊಯ್ಯಲು ಅನುಮತಿ ನೀಡುವಂತೆ ವಿನಂತಿಸಿದ್ದರು. ಆದರೆ, ಇದಕ್ಕಾಗಿ ಸೂಕ್ತ ಅರ್ಜಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಹೇಳಿದೆ.


ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಹೆಸರನ್ನು ದೆಹಲಿ ಪೊಲೀಸರು ಇತ್ತೀಚೆಗೆ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಸೇರಿಸಿದ್ದಾರೆ.


ಸೆಪ್ಟೆಂಬರ್ 17 ರಂದು ಸಲ್ಲಿಸಲಾದ 17,000 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಸಾಕ್ಷಿಯೊಬ್ಬರ ಹೇಳಿಕೆಯಂತೆ, “ಉಮರ್ ಖಾಲಿದ್, ಸಲ್ಮಾನ್ ಖುರ್ಷಿದ್, ನದೀಮ್ ಖಾನ್ ಅವರೆಲ್ಲರೂ, ದೆಹಲಿಯ ಸಿಎಎ/ಎನ್‌ಆರ್‌ಸಿ ವಿರೋಧಿ ಧರಣಿಗಳಲ್ಲಿ ಜನರನ್ನು ಸಜ್ಜುಗೊಳಿಸಲು ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದರು” ಎಂದು ಉಲ್ಲೇಖಿಸಲಾಗಿದೆ.


ಈ ಹೇಳಿಕೆಯನ್ನು CrPC ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ. ಪ್ರತಿಭಟನಾ ಸ್ಥಳಗಳಲ್ಲಿ ಖುರ್ಷಿದ್ ಭಾಷಣ ಮಾಡಿದ್ದರು ಎಂದು ಮತ್ತೊಬ್ಬ ಆರೋಪಿಯೂ ಕೂಡ ಹೇಳಿದ್ದಾನೆ ಎಂದು ಪೊಲೀಸರು ದಾಖಲಿಸಿದೆ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ : ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬ ಮುಫ್ತಿ ಬಂಧನ; ಸುಪ್ರೀಂ ಮೆಟ್ಟಿಲೇರಿದ ಮಗಳು ಇಲ್ತಿಜಾ


ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮತ್ತು ಪೌರತ್ವ ನೋಂದಣಿ ಕಾಯ್ದೆಯ ವಿರುದ್ಧ ಕಳೆದ ಜನವರಿಯಲ್ಲಿ ದೆಹಲಿಯ ಶಾಹಿನ್ ಭಾಗ್​ನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಆರಂಭವಾಗಿತ್ತು. ಇದೇ ಸಂದರ್ಭದಲ್ಲಿ ಬಿಜೆಪಿ ಬೆಂಬಲಿಗರು ಸಿಎಎ ಪರ ಚಳುವಳಿ ನಡೆಸಿದ್ದರು.


ಕೊನೆಗೆ ಈ ಪರ-ವಿರೋಧ ಚಳುವಳಿಗಳು ಕೋಮು ಗಲಭೆಗೆ ಕಾರಣವಾಗಿತ್ತು. ಫೆಬ್ರವರಿ 23 ರಿಂದ 26 ರವರೆಗೆ ನಡೆದ ಈಶಾನ್ಯ ದೆಹಲಿಯ ಗಲಭೆಯಲ್ಲಿ ಕನಿಷ್ಟ 50ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಅಲ್ಲದೆ, ಅನೇಕರು ಮನೆಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದರು. ನೂರಾರು ಕೋಟಿ ಆಸ್ತಿಪಾಸ್ತಿ ಹಾನಿಯಾಗಿತ್ತು.

Published by:MAshok Kumar
First published: