ನವ ದೆಹಲಿ (ಸೆಪ್ಟೆಂಬರ್ 14); ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆಯಲ್ಲಿ ಪೂರ್ವ ನಿಯೋಜಿತ ಪಿತೂರಿ ಸೇರಿದಂತೆ ಅನೇಕ ಆರೋಪಗಳ ಮೇಲೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (JNU) ಮಾಜಿ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್‌ನನ್ನು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ಇಂದು ಬಂಧನಕ್ಕೊಳಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಮನ್ಸ್ ಹೊರಡಿಸಿ, ಲೋಧಿ ಕಾಲೋನಿಯಲ್ಲಿರುವ ವಿಶೇಷ ಸೆಲ್‌ಗೆ ಭಾನುವಾರ ತನಿಖೆಗೆ ಹಾಜರಾಗುವಂತೆ ಉಮರ್ ಖಾಲಿದ್ ಅವರಿಗೆ ನೋಟೀಸ್ ನೀಡಲಾಗಿತ್ತು. ಭಾನುವಾರ ವಿಚಾರಣೆಯ ನಂತರ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿಂದೆ ಜುಲೈ 31 ರಂದು ಸಹ ಈತನನ್ನು ಫೋನ್ ಅನ್ನು ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ, ಆತನನ್ನೂ ವಿಚಾರಣೆಗೊಳಪಡಿಸಲಾಗಿತ್ತು.
ಬಂಧಿತ ಖಲೀದ್‌ನನ್ನು ಸೋಮವಾರ ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಮತ್ತು ಮುಂದಿನ ದಿನಗಳಲ್ಲಿ ಪೊಲೀಸರು ಆತನ ವಿರುದ್ಧ ಚಾರ್ಚ್‌ಶೀಟ್ ಸಲ್ಲಿಸುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಮಾರ್ಚ್ 6 ರಂದು ಖಾಲಿದ್ ವಿರುದ್ಧ ಅಪರಾಧ ವಿಭಾಗದ ಮಾದಕವಸ್ತು ಘಟಕದ ಸಬ್ ಇನ್ಸ್‌ಪೆಕ್ಟರ್ ಅರವಿಂದ್ ಕುಮಾರ್ ಅವರಿಗೆ ಮಾಹಿತಿದಾರರು ನೀಡಿದ ಹೇಳಿಕೆಯ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಎಫ್ಐಆರ್ ಪ್ರಕಾರ, ಫೆಬ್ರವರಿಯಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆಗಳು ಬೇರೆ ಬೇರೆ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದ ಪೂರ್ವನಿಯೋಜಿತ ಪಿತೂರಿಯ ಭಾಗವಾಗಿದೆ. ಇದರಲ್ಲಿ ಖಾಲಿದ್‌ಗೆ ಸಂಬಂಧವಿದೆ ಎಂದು ಮಾಹಿತಿದಾರರು ತಿಳಿಸಿದ್ದಾರೆ ಎಂಬುದಾಗಿ ಅರವಿಂದ್ ಕುಮಾರ್ ಹೇಳಿದ್ದಾರೆ.
"ಖಾಲಿದ್ ಬೇರೆ ಬೇರೆ ಸ್ಥಳಗಳಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾನೆ. ಭಾರತದಲ್ಲಿ ಅಲ್ಪಸಂಖ್ಯಾತರು ಹೇಗೆ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂಬುದರ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತದ ಭೇಟಿಯ ಸಂದರ್ಭದಲ್ಲಿ ಬೀದಿಗೆ ಬಂದು, ರಸ್ತೆಗಳನ್ನು ನಿರ್ಬಂಧಿಸುವಂತೆ ನಾಗರಿಕರಿಗೆ ಮನವಿ ಮಾಡಿದ್ದನು" ಎಂದು ಎಫ್ಐಆರ್ ನಲ್ಲಿ ದಾಖಲಾಗಿದೆ.
ಕಾರ್ಡಂಪುರಿ, ಜಾಫ್ರಾಬಾದ್, ಚಾಂದ್ ಬಾಗ್, ಗೋಕುಲ್ಪುರಿ, ಶಿವ ವಿಹಾರ್ ಮತ್ತು ಹತ್ತಿರದ ಪ್ರದೇಶಗಳಲ್ಲಿನ ಮನೆಗಳಲ್ಲಿ, ಪಿತೂರಿಯ ಭಾಗವಾಗಿ ಬಂದೂಕುಗಳು, ಪೆಟ್ರೋಲ್ ಬಾಂಬುಗಳು, ಆಸಿಡ್ ಬಾಟಲಿಗಳು ಮತ್ತು ಕಲ್ಲುಗಳನ್ನು ಸಂಗ್ರಹಿಸಲಾಗಿದೆ ಎಂದು ಎಫ್ಐಆರ್‌ನಲ್ಲಿ ಆರೋಪಿಸಲಾಗಿದೆ.
ಅಮಾನತುಗೊಂಡ ಎಎಪಿ ಕೌನ್ಸಿಲರ್ ತಾಹಿರ್ ಹುಸೇನ್ ವಿರುದ್ಧ ದೆಹಲಿ ಪೊಲೀಸ್ ಅಪರಾಧ ಶಾಖೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ, "ಗಲಭೆಗೆ ಒಂದು ತಿಂಗಳ ಹಿಂದೆಯೇ ಜನವರಿ 8 ರಂದು ಹುಸೇನ್ ಅವರು ‘ಯುನೈಟೆಡ್ ಎಗೇನ್ಸ್ಟ್ ಹೇಟ್’ ನ ಉಮರ್ ಖಾಲಿದ್ ಮತ್ತು ಖಾಲಿದ್ ಸೈಫಿಯನ್ನು ಭೇಟಿಯಾದರು" ಎಂದು ಆರೋಪಿಸಲಾಗಿದೆ.
"ಖಾಲೀದ್ ವಿರುದ್ಧದ ಆರೋಪಗಳು ಸಂಪೂರ್ಣವಾಗಿ ಸುಳ್ಳು, ಕಟ್ಟುಕಥೆ" ಎಂದು ಖಾಲಿದ್ ಅವರ ವಕೀಲ ತ್ರಿದೀಪ್ ಪೈಸ್ ಶನಿವಾರ ಆರೋಪಿಸಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ತನಿಖೆಯು ಅನ್ಯಾಯದಿಂದ ಕೂಡಿದ್ದು, ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ದೇಶಾದ್ಯಂತದ ಹಲವಾರು ಗಣ್ಯರು ಆಗಸ್ಟ್ 25 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದರು.
ಅದಾಗ್ಯೂ, ಈಶಾನ್ಯ ದೆಹಲಿಯಲ್ಲಿ ಫೆಬ್ರವರಿಯಲ್ಲಿ ಸಂಭವಿಸಿದ ಗಲಭೆಗೆ ಸಂಬಂಧಿಸಿದ ದೂರುಗಳಲ್ಲಿ ದೆಹಲಿ ಪೊಲೀಸರು, ಬಿಜೆಪಿ ನಾಯಕರ ವಿರುದ್ದ ಆರೋಪಗಳಿರುವ ದೂರುಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಕೆಲವು ರಾಷ್ಟ್ರೀಯ ವಾಹಿನಿಗಳು ತನಿಖಾ ವರದಿ ಮಾಡಿದ್ದವು.
"ಬಿಜೆಪಿ ನಾಯಕರು ಜನರನ್ನು ಉದ್ರೇಕಗೊಳಿಸಿದ್ದಾರೆ ಹಾಗೂ ಗಲಭೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಕನಿಷ್ಠ ಎಂಟು ದೂರುಗಳಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅದರಲ್ಲಿ ನಾಲ್ಕು ದೂರುಗಳಲ್ಲಿ ಯಾವುದೇ ಎಫ್ಐಆರ್ ಕೂಡಾ ದಾಖಲಿಸಲಾಗಿಲ್ಲ. ದೆಹಲಿ ಗಲಭೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ಇತ್ತೀಚಿನ ಚಾರ್ಜ್‌ಶೀಟ್‌ನಲ್ಲಿ ಬಿಜೆಪಿ ನಾಯಕರ ಪ್ರಚೋದನಾಕಾರಿ ದ್ವೇಷದ ಬಗ್ಗೆ ಯಾವುದೇ ಉಲ್ಲೇಖ ಮಾಡದೇ, ಆ ಸಮಯದಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟಿಸಿದವರ ಮೇಲೆ ಆಪಾದನೆಯನ್ನು ಹೊರಿಸಲಾಗಿದೆ" ಎಂಬ ಆರೋಪಗಳು ಕೇಳಿಬರುತ್ತಿವೆ.
ಇದನ್ನೂ ಓದಿ : Hindi Diwas 2020: ಹಿಂದಿ ಹೇರಿಕೆ ವಿರುದ್ಧ ದನಿ ಎತ್ತಿದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು..!
2,000 ಪದಗಳ ಕಾಲಾನಕ್ರಮಣಿಕೆಯಲ್ಲಿ ಡಿಸೆಂಬರ್ 13 ರಿಂದ ಫೆಬ್ರವರಿ 25 ರವರೆಗೆ ನಡೆದ ಘಟನೆಗಳನ್ನು ಪಟ್ಟಿ ಮಾಡಿದ್ದು, ಅದರಲ್ಲಿ ಕಪಿಲ್ ಮಿಶ್ರಾ ಸೇರಿದಂತೆ ಬಿಜೆಪಿ ನಾಯಕರ ದ್ವೇಷದ ಭಾಷಣಗಳನ್ನು ಪೊಲೀಸರು ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ