ದೆಹಲಿ ಹಿಂಸಾಚಾರಕ್ಕೆ 46 ಬಲಿ; ಕೋಮುಗಲಭೆಯಲ್ಲಿ ಬಿಜೆಪಿ ಮುಸ್ಲಿಂ ನಾಯಕನ ಮನೆಯೂ ಸುಟ್ಟು ಭಸ್ಮ

ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿರುವ ಕೋಮುಗಲಭೆಯಲ್ಲಿ ಇದುವರೆಗೂ ಒಟ್ಟು 46 ಜನ ಸಾವನ್ನಪ್ಪಿದ್ದಾರೆ. ದೆಹಲಿಯ ಮುಸ್ಲಿಂ ಸಮುದಾಯದ ಬಿಜೆಪಿ ನಾಯಕ ಅಖ್ತರ್ ರಾಝಾ ಅವರ ಮನೆಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ದೆಹಲಿ ಹಿಂಸಾಚಾರದಲ್ಲಿ ಸುಟ್ಟು ಕರಕಲಾದ ಮನೆಗಳು

ದೆಹಲಿ ಹಿಂಸಾಚಾರದಲ್ಲಿ ಸುಟ್ಟು ಕರಕಲಾದ ಮನೆಗಳು

  • Share this:
ನವದೆಹಲಿ (ಮಾ. 2): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಕಳೆದ ಒಂದು ವಾರದಿಂದ ಹಿಂಸಾಚಾರ ರೂಪ ತಾಳಿದ್ದು, ಈಶಾನ್ಯ ದೆಹಲಿಯ ಗಲಭೆಯಲ್ಲಿ 46 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರಾಷ್ಟ್ರ ರಾಜಧಾನಿಯ ಜನ ಮನೆಯಿಂದ ಹೊರಗೆ ಕಾಲಿಡಲು ಸಹ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಪಕ್ಷದ ಮುಸ್ಲಿಂ ನಾಯಕನ ಮನೆ ಕೂಡ ಹೊತ್ತಿ ಉರಿದಿದೆ.

ದೆಹಲಿ ಗಲಭೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಬಿಜೆಪಿ ನಾಯಕ ಅಖ್ತರ್ ರಾಝಾ ಅವರ ಮನೆಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಅವರ ಕೆಲವು ಸಂಬಂಧಿಕರ ಮನೆಗೂ ಬೆಂಕಿ ಹಚ್ಚಲಾಗಿದೆ. ಅಲ್ಲಿಗೆ ಈಶಾನ್ಯ ದೆಹಲಿಯ ಕೋಮು ದಳ್ಳುರಿ ಬಿಜೆಪಿ ನಾಯಕನ ಕುಟುಂಬವನ್ನೂ ಕೂಡ ಬಿಟ್ಟಿಲ್ಲ ಎಂಬುದು ದಾಖಲಾಗಿದೆ.

ದೆಹಲಿ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಉಪಾಧ್ಯಕ್ಷ ಅಖ್ತರ್ ರಾಝಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 'ನಮ್ಮ ಮನೆಗೆ ನುಗ್ಗಿದ ಪಕ್ಕದೂರಿನ ಕಿಡಿಗೇಡಿಗಳ ಗುಂಪೊಂದು ಗಲಾಟೆಯೆಬ್ಬಿಸಿತು. ಸಂಜೆಯ ವೇಳೆ ಮನೆಗೆ ಬೆಂಕಿ ಹಚ್ಚಲಾಯಿತು. ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ, ನನ್ನ ಕಣ್ಣೆದುರೇ ಮನೆಗಳಿಗೆ ಬೆಂಕಿ ಹಚ್ಚಿದರು' ಎಂದು ಹೇಳಿದ್ದಾರೆ.ಇದನ್ನೂ ಓದಿ: ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಖಾಯಂಗೊಳಿಸಿದ ಸುಪ್ರೀಂ; ನಾಳೆ ಬೆಳಗ್ಗೆ 6ಕ್ಕೆ ನೆರವೇರಲಿರುವ ಶಿಕ್ಷೆ

'ನಮ್ಮ ಏರಿಯಾದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ 19 ಮನೆಗಳಿವೆ. ಅದರಲ್ಲಿ ನನ್ನ ಮನೆ ಹಾಗೂ ನಮ್ಮ ಸಂಬಂಧಿಕರ ಮೂರು ಮನೆಗಳೂ ಸೇರಿವೆ. ಆ ಎಲ್ಲ ಮನೆಗಳೂ ದುಷ್ಕರ್ಮಿಗಳ ದಾಳಿಯಿಂದ ಸುಟ್ಟು ಭಸ್ಮವಾಗಿವೆ. ನಮ್ಮ ಮನೆಯಲ್ಲಿದ್ದ 12 ಜನರೂ ಗಾಬರಿಯಿಂದ ಹೊರಗೆ ಓಡಿಬಂದೆವು. ಒಂದಷ್ಟು ಜನರು ನಮ್ಮ ಮನೆಯ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದರು. ಇನ್ನೊಂದೆಡೆ ಮನೆ ಹೊತ್ತಿ ಉರಿಯುತ್ತಿತ್ತು' ಎಂದು ಫೆ. 25ರಂದು ನಡೆದ ಘಟನೆಯನ್ನು ಅಖ್ತರ್ ರಾಝಾ ವಿವರಿಸಿದ್ದಾರೆ.

ಇದನ್ನೂ ಓದಿ: ಮಂತ್ರಿ ಡೆವಲಪರ್ಸ್​ನಿಂದ ಬಿಬಿಎಂಪಿ ಜಾಗ ಒತ್ತುವರಿ; ಅಪಾರ್ಟ್​ಮೆಂಟ್​ನಲ್ಲಿರುವ 215 ಕುಟುಂಬಗಳಿಗೂ ತಟ್ಟಲಿದೆ ಬಿಸಿ

'ಈ ಘಟನೆ ನಡೆದು 5 ದಿನಗಳು ಕಳೆದರೂ ನಮಗಿನ್ನೂ ಯಾರೂ ಫೋನ್ ಮಾಡಿಲ್ಲ. ಘಟನೆಯ ಬಗ್ಗೆ ಮಾಹಿತಿ ನೀಡಿ, ದುಷ್ಕರ್ಮಿಗಳನ್ನು ಹಿಡಿಯುವಂತೆ ತಕ್ಷಣ ಪೊಲೀಸರಿಗೆ ಫೋನ್ ಮಾಡಿದ್ದೆ. ಆದರೆ, ಸ್ಟೇಷನ್​ನಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆ ಇದ್ದುದರಿಂದ ಆ ಕ್ಷಣದಲ್ಲಿ ನಮಗೆ ಯಾರ ನೆರವೂ ಸಿಗಲಿಲ್ಲ. ಇದುವರೆಗೂ ಬಿಜೆಪಿ ಪಕ್ಷದಿಂದ ನನಗೆ ಯಾವ ಪರಿಹಾರವೂ ಘೋಷಣೆಯಾಗಿಲ್ಲ, ಫೋನ್ ಕರೆಯೂ ಬಂದಿಲ್ಲ. ಆದರೆ, ನಮ್ಮ ಪಕ್ಷದಿಂದ ನನಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ' ಎಂದು ಅಖ್ತರ್ ರಝಾ ಹೇಳಿದ್ದಾರೆ.
First published: