ದಿಲ್ಲಿ ಪೋಸ್ಟ್ | ಈ ಬಾರಿ ಗಾಂಧಿ ಕುಟುಂಬಕ್ಕೆ ಹೊರತಾದ ವ್ಯಕ್ತಿ ಎಐಸಿಸಿ ಅಧ್ಯಕ್ಷರಾಗುವರೇ?

ಬಹಳ ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬಕ್ಕೆ ಹೊರತಾದವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಚರ್ಚೆ ಮೊಳಕೆ ಹೊಡೆಯುತ್ತಿದೆ. ಈ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನ್ಯೂಸ್ 18 ಕನ್ನಡದ ದೆಹಲಿಯ ವಿಶೇಷ ಪ್ರತಿನಿಧಿ ಧರಣೀಶ್ ಬೂಕನಕೆರೆ ಈ ವಾರದ ತಮ್ಮ 'ದಿಲ್ಲಿ ಪೋಸ್ಟ್' ಕಾಲಂನಲ್ಲಿ ಬರೆದಿದ್ದಾರೆ.

ದಿಲ್ಲಿ ಪೋಸ್ಟ್

ದಿಲ್ಲಿ ಪೋಸ್ಟ್

  • Share this:
ಕಾಂಗ್ರೆಸ್ ಪಕ್ಷದ ಬಹುತೇಕ ಹಿರಿಯ-ಕಿರಿಯ ನಾಯಕರು ರಾಹುಲ್ ಗಾಂಧಿ ಅವರೇ ಮತ್ತೊಮ್ಮೆ ಎಐಸಿಸಿ ಅಧ್ಯಕ್ಷರಾಗಬೇಕು ಎಂದು ಹೇಳುತ್ತಿದ್ದಾರೆ. ಕೆಲವರು ಅನಗತ್ಯವಾಗಿ ತಾವು ರಾಹುಲ್ ಗಾಂಧಿ ಪರ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ‌. ಇನ್ನು ಕೆಲವರು 'ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಅಧ್ಯಕ್ಷರಾದರೆ ಪಕ್ಷ ನಡೆಸುವುದೇ ಕಷ್ಟ. ಎಲ್ಲಾ ನಾಯಕರನ್ನು ಜೊತೆಗೆ ಕೊಂಡೊಯ್ಯುವುದು ಕಷ್ಟ' ಎಂಬ ನಿಲುವಿನಿಂದ ಬದಲಾಗುವುದಿಲ್ಲ. ಆದರೆ ರಾಹುಲ್ ಗಾಂಧಿ ಅವರು ಮಾತ್ರ 'ನಾನು ಯಾವ ಕಾರಣಕ್ಕೂ ಮತ್ತೆ ಅಧ್ಯಕ್ಷ ಆಗುವುದಿಲ್ಲ' ಎಂದು ಕಡ್ಡಿ ಮುರಿದ ರೀತಿ ಹೇಳಿದ್ದಾರಂತೆ. ರಾಹುಲ್ ಗಾಂಧಿ ಅವರನ್ನು ಹತ್ತಿರದಿಂದ ಬಲ್ಲವರ ಪ್ರಕಾರ, 'ಅವರು ಒಮ್ಮೆ ನಿರ್ಧಾರಕ್ಕೆ ಬಂತೆಂದರೆ ಎಂಥದೇ ಒತ್ತಡ ಎದುರಾದರೂ ತಮ್ಮ ನಿಲುವನ್ನು ಬದಲಿಸುವವರಲ್ಲ'. ಜೊತೆಗೆ ಅವರು 'ಯಾವಾಗಲೂ ವೈಯಕ್ತಿಕವಾಗಿ ತಾವು ಅಧಿಕಾರದಿಂದ ದೂರ ಇರಬೇಕು, ಪಕ್ಷ ಅಧಿಕಾರಕ್ಕೆ ಬರಬೇಕು' ಎಂದು ಬಯಸುವವರು. ಹಾಗಾಗಿ ಈಗ ಯಾವುದೇ ನಾಯಕರು, ಎಷ್ಟೇ ಒತ್ತಡ ಹೇರಿದರೂ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಎಐಸಿಸಿ ಅಧ್ಯಕ್ಷರಾಗುವುದು ಅನುಮಾನವಾಗಿದೆ.

ಗಾಂಧಿ ಕುಟುಂಬಕ್ಕೆ ಹೊರತಾದ ವ್ಯಕ್ತಿಗೆ ಅವಕಾಶ

ಈ ಬಾರಿ ಗಾಂಧಿ ಕುಟುಂಬಕ್ಕೆ ಹೊರತಾದ ವ್ಯಕ್ತಿಯೇ ಎಐಸಿಸಿ ಅಧ್ಯಕ್ಷರಾಗಬೇಕು ಎಂಬುದು ರಾಹುಲ್ ಗಾಂಧಿ ಅವರ ನಿರ್ಧಾರವಂತೆ. ಈ ವಿಷಯವನ್ನು ಅವರು ಈಗಾಗಲೇ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರಂತೆ‌. 'ಯಾರು ಅಧ್ಯಕ್ಷರಾಗಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿ. ಯಾರೇ ಅಧ್ಯಕ್ಷರಾದರೂ ನಾವು ಸಂಪೂರ್ಣವಾಗಿ ಬೆಂಬಲ ನೀಡೋಣ' ಎಂದು ಕೂಡ ಹೇಳಿದ್ದಾರಂತೆ.

ರಾಹುಲ್ ಗಾಂಧಿ ಅವರ ದೃಢ ನಿರ್ಧಾರದಿಂದ ಕೆಲವರು ಕಕ್ಕಾಬಿಕ್ಕಿಯಾಗಿದ್ದಾರೆ. 'ಮುಂದೆ ಯಾರು?' ಎಂಬ ಪ್ರಶ್ನೆ ಉದ್ಭವಿಸಿದೆ. ಹೈಕಮಾಂಡ್ ಮಟ್ಟದಲ್ಲಿ ಕೆಲ ಹೆಸರುಗಳು ಚಾಲ್ತಿಯಲ್ಲಿ ಇವೆ. ಮಲ್ಲಿಕಾರ್ಜುನ ಖರ್ಗೆ, ಮುಕುಲ್ ವಾಸ್ನಿಕ್, ಅಶೋಕ್ ಗೆಹ್ಲೋಟ್ ಮುಂಚೂಣಿಯಲ್ಲಿದ್ದಾರೆ. ಆದರೆ ರಾಹುಲ್ ಗಾಂಧಿ ಹೆಸರನ್ನು ಬಿಟ್ಟು ಮತ್ತೊಬ್ಬರ ಹೆಸರು ಸೂಚಿಸುವ ಧೈರ್ಯ ಯಾರಿಗೂ ಇಲ್ಲ. ಬಹುಶಃ ಈ ಬಗ್ಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೇ ನಿರ್ಧಾರ ಮಾಡಬೇಕು. ಅಂದರೆ ಒಬ್ಬರು ಹೆಸರು ಸೂಚಿಸಬೇಕು, ಮತ್ತೊಬ್ಬರು ಅನುಮೋದಿಸಬೇಕು.

ಸುಳ್ಳು ಹೇಳಲ್ಲ, ಸುಮ್ಮನೆಯೂ ಇರಲ್ಲ

ಎಐಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತ್ರವಲ್ಲ, ಬೇರೆ ವಿಷಯಗಳಲ್ಲೂ ರಾಹುಲ್ ಗಾಂಧಿ ಖಡಕ್ ಆಗಿದ್ದಾರಂತೆ. ಇತ್ತೀಚೆಗೆ ಭಾರತ-ಚೀನಾ ಗಡಿ ಸಂಘರ್ಷದ ಬಗ್ಗೆ ಮತ್ತು ಕೊರೋನಾ ಕುರಿತು ಕೆಲವರು 'ನಿಮಗ್ಯಾಕೆ ಬೇಕು? ಸುಮ್ಮನಿರಿ, ಮಾತನಾಡಲು ಈಗ ಕಾಲ ಪಕ್ವವಾಗಿಲ್ಲ, ದೇಶ, ಸೇನೆ, ಗಡಿ ಎಂಬ ವಿಷಯವನ್ನು ಮುಟ್ಟಲು ಹೋಗಬೇಡಿ' ಎಂದೆಲ್ಲಾ ಸಲಹೆ ನೀಡಿದ್ದಾರಂತೆ. ಅದಕ್ಕೆ ರಾಹುಲ್ ಗಾಂಧಿ, 'ನಾನು ಸುಳ್ಳು ಹೇಳಲ್ಲ, ಸುಮ್ಮನೆಯೂ ಕೂರುವುದಿಲ್ಲ, ನೀವೂ ಮಾತನಾಡಿ, ಎಲ್ಲರೂ ಮಾತನಾಡಬೇಕು' ಎಂದರಂತೆ. ಬಿಟ್ಟಿ ಸಲಹೆ ಕೊಡಲು ಹೋಗಿದ್ದವರು ಪೆಚ್ಚಾಗಿ ವಾಪಸ್ ಬಂದರಂತೆ. ಈ ಘಟನೆಯ ಬಳಿಕವೇ ರಾಹುಲ್ ಗಾಂಧಿ 'ಸುಳ್ಳು ಹೇಳಲ್ಲ' ಎಂದು ಟ್ವೀಟ್ ಮಾಡಿದ್ದಂತೆ.

ಮಲ್ಲಿಕಾರ್ಜುನ ಖರ್ಗೆ ಫಜೀತಿ

ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾಗುವುದು ಬಹುತೇಕ ಖಚಿತವಾಗಿತ್ತು. ಏಕೆಂದರೆ ಹಾಲಿ ಪ್ರತಿಪಕ್ಷದ ನಾಯಕ ಗುಲಾಂ ನಭಿ ಆಜಾದ್ ಅವರ ಅವಧಿ ಮುಂದಿನ ವರ್ಷಾರಂಭದಲ್ಲಿ ಮುಕ್ತಾಯವಾಗಲಿದೆ. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಖರ್ಗೆ ಅವರನ್ನು ಹೊರತುಪಡಿಸಿ ಸೂಕ್ತ ವ್ಯಕ್ತಿ ಸಿಕ್ಕಿಲ್ಲ. ಅದೇ ರೀತಿ ಗಾಂಧಿ ಕುಟುಂಬದ ಹೊರತಾಗಿ ಯಾರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಪ್ರಶ್ನೆ ಉದ್ಭವಿಸಿದರೆ ಆಗಲೂ ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಸೂಕ್ತವಾದ ವ್ಯಕ್ತಿ ಸಿಗುವ ಸಾಧ್ಯತೆ ಇಲ್ಲ.

ಇದನ್ನು ಓದಿ: ದಿಲ್ಲಿ ಪೋಸ್ಟ್ | ಸಿಎಂ ಬದಲಾವಣೆ ನಿಶ್ಚಿತ, ಯಾವಾಗ? ಯಾರು? ಅಂತಾ ಗೊತ್ತಿಲ್ಲ: ಸರ್ಪ್ರೈಸ್ ಕ್ಯಾಂಡಿಡೆಟ್ ಆಗುವ ಸಾಧ್ಯತೆ

ಗಾಂಧಿ ಕುಟುಂಬಕ್ಕೆ ಹೊರತಾದವರನ್ನು ಮಾಡಬೇಕು ಎಂದು ನಿರ್ಧರಿಸುವುದರ ಜೊತೆಗೆ ಗಾಂಧಿ ಕುಟುಂಬಕ್ಕೆ ನಿಷ್ಠರಾದವರನ್ನು ಮಾಡಬೇಕು ಎಂಬ ನಿರ್ಣಯವೂ ಆಗುವುದು ನಿಶ್ಚಿತ. ಮಲ್ಲಿಕಾರ್ಜುನ ಖರ್ಗೆ ಅವರ ನಿಷ್ಠೆ ಪ್ರಶ್ನಾತೀತವಾಗಿದೆ. ಜೊತೆಗೆ ನರೇಂದ್ರ ಮೋದಿಗೆ ತಿರುಗೇಟು ನೀಡಲು ಸೂಕ್ತ ಅಭ್ಯರ್ಥಿ ಆಗುತ್ತಾರೆ. ದಲಿತರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ ಕ್ರೆಡಿಟ್ ತೆಗೆದುಕೊಳ್ಳಬಹುದು ಎನ್ನುವ ಕಾರಣವೂ ಅಡಗಿರುತ್ತವೆ. ಉಳಿದಂತೆ ಯುವಕ, ದಲಿತ, ಪಕ್ಷ ನಿಷ್ಠ ಎಂಬೆಲ್ಲ ಸಂಗತಿಗಳ ನಡುವೆಯೂ ಮುಕುಲ್ ವಾಸ್ನಿಕ್, ಮುತ್ಸದಿತನದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಹತ್ತಿರಕ್ಕೂ ಬರಲಾರರು. ನಿಷ್ಠೆ ಮತ್ತು ಹಿಂದುಳಿದ ವರ್ಗದವರು ಎನ್ನುವ ಕಾರಣಕ್ಕೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೆಸರು ಚರ್ಚೆಗೆ ಬರಬಹುದು. ಅವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರ ಬಳಿಯೂ ಚೆನ್ನಾಗಿರುವದರಿಂದ ಚರ್ಚೆ ಆಗಬಹುದು. ಆದರೆ ಸ್ವತಃ ಅವರಿಗೆ ಆಸಕ್ತಿ ಇಲ್ಲವಾಗಿದೆ. ಆದರೂ ಮಲ್ಲಿಕಾರ್ಜುನ ಖರ್ಗೆ ಎರಡೆರಡು ಹುದ್ದೆಗಳನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.
Published by:HR Ramesh
First published: