ತಮಿಳುನಾಡಿನ ರಾಜಕಾರಣದಲ್ಲಿ ಈಗ ತಲ್ಲಣ; ಬಿಜೆಪಿಯಿಂದಲೂ ಮಾಸ್ಟರ್​ಪ್ಲಾನ್


Updated:August 13, 2018, 6:46 PM IST
ತಮಿಳುನಾಡಿನ ರಾಜಕಾರಣದಲ್ಲಿ ಈಗ ತಲ್ಲಣ; ಬಿಜೆಪಿಯಿಂದಲೂ ಮಾಸ್ಟರ್​ಪ್ಲಾನ್

Updated: August 13, 2018, 6:46 PM IST
- ಧರಣೀಶ್ ಬೂಕನಕೆರೆ, ನ್ಯೂಸ್18 ಕನ್ನಡ

ನವದೆಹಲಿ: ಮಾಜಿ‌ ಮುಖ್ಯಮಂತ್ರಿ, ತಲೈವಾರ್ ಎಂದೇ ಖ್ಯಾತರಾಗಿದ್ದ ಎಂ. ಕರುಣಾನಿಧಿ ಸಾವಿನ ನಂತರ ತಮಿಳುನಾಡಿನ ರಾಜಕಾರಣದಲ್ಲಿ ಬಹಳಷ್ಟು ಬೆಳೆವಣಿಗೆಗಳಾಗ್ತವೆ ಎನ್ನಲಾಗುತ್ತಿದೆ. ಆ ಪೈಕಿ ಮೊದಲನೆಯದು ಕರುಣಾನಿಧಿ‌ ಕುಟುಂಬದಲ್ಲಿ ಕೋಲಾಹಲ ಆಗುತ್ತೆ ಎಂಬುದು. ಕರುಣಾನಿಧಿ ಸಾವಿನ‌ ಸಂದರ್ಭದಲ್ಲಿ ಅವರ ಕುಟುಂಬ ಒಗ್ಗಟ್ಟು ಪ್ರದರ್ಶಿಸಿದೆಯಾದರೂ, ಇದು ಹೀಗೆ ಮುಂದುವರೆಯುತ್ತೆ ಎಂದುಕೊಳ್ಳುವಂತಿಲ್ಲ. ಕರುಣಾನಿಧಿ ಬಳಿಕ ಡಿಎಂಕೆ ಮೇಲೆ ಹಿಡಿತ ಸಾಧಿಸಲು ಈಗ ಪುತ್ರರಾದ ಸ್ಟಾಲಿನ್, ಅಳಗಿರಿ ಮತ್ತು ಪುತ್ರಿ ಕನಿಮೋಳಿ ನಡುವೆ ತೀವ್ರ ಪೈಪೋಟಿ ಇದೆ. ಖುದ್ದು ಕರುಣಾನಿಧಿ ಅವರೇ ಸ್ಟಾಲಿನ್ ತನ್ನ ಉತ್ತರಾಧಿಕಾರಿ ಅಂತಾ ಒಮ್ಮೆ ಹೇಳಿದ್ದರು. ಆದಾಗ್ಯೂ ಆ ಮೂವರ ನಡುವೆ ಪೈಪೋಟಿ ನಿಂತಿಲ್ಲ. ಸ್ಟಾಲಿನ್ ಸದ್ಯ ವಿಧಾನಸಭೆಯ ವಿಪಕ್ಷದ ನಾಯಕ. ಹಾಗಾಗಿ ಅವರಿಗೆ ಹೆಚ್ಚಿನ ಅವಕಾಶ ಅಂತಾ ಹೇಳಬಹುದು.‌ ಆದರೆ ಅಳಗಿರಿಯನ್ನು ಉಪೇಕ್ಷಿಸುವಂತಿಲ್ಲ. ತಮಿಳುನಾಡಿನ ದಕ್ಷಿಣದ ಜಿಲ್ಲೆಗಳಲ್ಲಿ ಸ್ಟಾಲಿನ್​ಗಿಂತಲೂ ಹೆಚ್ಚಾಗಿ ಅಳಗಿರಿ ಅವರಿಗೆ ಪಕ್ಷದ ಮೇಲೆ ಹಿಡಿತವಿದೆ. ಆದುದರಿಂದ ಅವರು ಅಷ್ಟು ಸುಲಭಕ್ಕೆ ಸೋಲು ಒಪ್ಪಿಕೊಳ್ಳುವವರಲ್ಲ.‌ ಇನ್ನು, ಕನಿಮೋಳಿ ಅವರದು ಪೊಲಿಟಿಕಲ್ ಮ್ಯಾನೇಜ್ಮೆಂಟ್​ನಲ್ಲಿ ಎತ್ತಿದ ಕೈ. ಹಾಗಾಗಿ ಸ್ಟಾಲಿನ್ ಮತ್ತು ಅಳಗಿರಿ ನಡುವಿನ‌ ಕಿತ್ತಾಟವನ್ನು ಕನಿಮೋಳಿ ಲಾಭಮಾಡಿಕೊಳ್ಳಬಹುದು ಅಂತನೂ ಹೇಳಲಾಗ್ತಿದೆ.

ಎಐಎಡಿಎಂಕೆ ಬಳಿಕ ಡಿಎಂಕೆ ಮೇಲೆ ಬಿಜೆಪಿ‌ಯ ವಕೃದೃಷ್ಟಿ

ದ್ರಾವಿಡ ಸಿದ್ದಾಂತದ ಮೇಲೆ ರೂಪುಗೊಂಡ ತಮಿಳುನಾಡಿನ‌ ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕಾರಣದ ಮೇಲೂ ಹಿಡಿತ ಸಾಧಿಸಿದ್ದುಂಟು. ಅದರಿಂದಾಗಿಯೇ ರಾಷ್ಟ್ರ ಮಟ್ಟದ ರಾಜಕಾರಣಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳ ಬೆಂಬಲ ಅತ್ಯಗತ್ಯ. ಹೀಗೆ ಸಾಗುತ್ತಿದ್ದ ಪರಂಪರೆಯು ಮಾಜಿ‌ ಸಿಎಂ ಜಯಲಲಿತಾ ತೀರಿಕೊಂಡ ಬಳಿಕ ಬದಲಾಯಿತು. ಜಯಲಲಿತಾ ಸಾವಿನ ಬಳಿಕ ಎಐಎಡಿಎಂಕೆ ಪಕ್ಷದಲ್ಲಿ ನಾಯಕತ್ವದ ಸಮಸ್ಯೆ ಉದ್ಭವಿಸಿತು. ಮಾಜಿ ಸಿಎಂ ಪನ್ನೀರ್ ಸೆಲ್ವಂ ಮತ್ತು ರಾಜಭವನವನ್ನು ದುರುಪಯೋಗ ಮಾಡಿಕೊಂಡ ಬಿಜೆಪಿಯ ರಾಷ್ಟ್ರೀಯ ನಾಯಕರು ಎಐಎಡಿಎಂಕೆಯನ್ನು ಸಂಪೂರ್ಣ ನಿಯಂತ್ರಿಸಿದರು. ಮುಂದೆ ಅಲ್ಲಿ ಡಿಎಂಕೆ ಅಧಿಕಾರಕ್ಕೆ ಬರುತ್ತೆ ಅಂತಾ ಹೇಳಲಾಗುತ್ತಿದೆ. ಆಗ ಡಿಎಂಕೆ ಬೆಂಬಲ ಬೇಕಾಗುತ್ತದೆ. ಆದುದರಿಂದ ಈಗ ಡಿಎಂಕೆಯನ್ನು ದುರ್ಬಲಗೊಳಿಸುವುದು ಬಿಜೆಪಿಯ ಪ್ಲಾನ್‌. ಡಿಎಂಕೆಯನ್ನು ದುರ್ಬಲಗೊಳಿಸಲು ಅಳಗಿರಿ ಮತ್ತು ಕನಿಮೋಳಿಯವರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಬಹುದು. ಬೇರೆ ಪಕ್ಷ ಕಟ್ಟುವಂತೆ ಪುಸಲಾಯಿಸಬಹುದು. ಒಂದು ಕಡೆ ಡಿಎಂಕೆಯನ್ನು ದುರ್ಬಲಗೊಳಿಸಿ ಇನ್ನೊಂದೆಡೆ ಎಐಎಡಿಎಂಕೆ ಜೊತೆ ಒಂದಾಣಿಕೆ ಮಾಡಿಕೊಂಡು ತನ್ನ‌ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ಬಿಜೆಪಿಯದು ಎಂಬ ಚರ್ಚೆ ದೆಹಲಿ ವಲಯದಲ್ಲಿ ನಡೆಯುತ್ತಿವೆ. ಅಳಗಿರಿ ಅವರು ಈಗಾಗಲೇ ಧ್ವನಿ ಎತ್ತಿದ್ದಾರೆ. ಡಿಎಂಕೆಯ ನಿಜವಾದ ಬೆಂಬಲಿಗರು ತನ್ನ ಬೆನ್ನಿಗಿದ್ದಾರೆ ಎಂದು ಹೇಳುವ ಮೂಲಕ ಅಳಗಿರಿ ಅವರು ಕಹಳೆ ಊದಲು ಆರಂಭಿಸಿದ್ದಾರೆ.

ರಜನಿಕಾಂತ್ ಮತ್ತು ಕಮಲ್ ಹಾಸನ್ ಕ್ಲಿಕ್ ಆಗ್ತಾರಾ?

ಸಿನಿಮಾ ರಂಗದಲ್ಲಿ ಯಶಸ್ಸಿನ ಶಿಖರವೇರಿರುವ ರಜನಿಕಾಂತ್ ಮತ್ತು ಕಮಲ್ ಹಾಸನ್ ರಾಜಕಾರಣದಲ್ಲೂ ಯಶಸ್ವಿಯಾಗುತ್ತಾರಾ ಎನ್ನುವ ಕುತೂಹಲ ಈಗ ಹುಟ್ಟಿಕೊಂಡಿದೆ. ಒಂದೊಮ್ಮೆ ಜಯಲಲಿತಾ ಮತ್ತು ಕರುಣಾನಿಧಿ ಇದ್ದಿದ್ದರೆ ರಜನಿಕಾಂತ್ ಮತ್ತು ಕಮಲ್ ಹಾಸನ್ ಕ್ಲಿಕ್ ಆಗೋಕೆ ಸಾಧ್ಯವೇ ಇಲ್ಲ ಅಂತಾ ಸ್ಪಷ್ಟವಾಗಿ ಹೇಳಬಹುದಿತ್ತು. ಆದರೆ ಈಗ ಜಯಲಲಿತಾ ಮತ್ತು ಕರುಣಾನಿಧಿ ಇಲ್ಲ. ಅದಕ್ಕಿಂತ ಹೆಚ್ಚಾಗಿ ಜಯಲಲಿತಾ ಅವರ ಎಐಎಡಿಎಂಕೆ ಪಕ್ಷ ಒಡೆದು ಹೋಳಾಗಿದೆ. ಸಿಎಂ ಯಡಪ್ಪಾಡಿ ಪಳನಿಸ್ವಾಮಿ ಮತ್ತು ಮಾಜಿ ಸಿಎಂ ಓ ಪನ್ನೀರ್ ಸೆಲ್ವಂ ಸದ್ಯಕ್ಕೆ ಒಂದಾಗೇ ಇದ್ರೂ ಮುಂದೆ ಬೇರೆಯಾಗೋ ಸಾಧ್ಯತೆಯೇ ಜಾಸ್ತಿ. ಹಾಗಾಗಿ ಅಲ್ಲಿ ನಾಯಕತ್ವದ ಕೊರತೆ ಇದೆ. ಕರುಣಾನಿಧಿ ಅವರ ಡಿಎಂಕೆಯಲ್ಲಿ‌ ಕೌಟುಂಬಿಕ ಕಲಹ ಇದೆ. ಹಾಗಾಗಿ ಇಂಥ ಪರಿಸ್ಥಿತಿಯಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರಿಗೆ ಸ್ವಲ್ಪವಾದರೂ ರಾಜಕೀಯ ಲಾಭ ಆಗಬಹುದು. ಇದಲ್ಲದೆ ರಜನಿಕಾಂತ್ ಎಐಎಡಿಎಂಕೆಗೆ ಹತ್ತಿರವಾಗುತ್ತಿದ್ದಾರೆ. ಕಮಲ್ ಹಾಸನ್ ಡಿಎಂಕೆಗೆ ಹತ್ತಿರವಾಗುತ್ತಿದ್ದಾರೆ. ಅದರಿಂದ ಏನಾದರೂ ಆದರೂ ಆಗಬಹುದು. ಆದರೆ ಇಬ್ಬರು ಇನ್ನೂ ಗಂಭೀರವಾಗಿ ರಾಜಕೀಯ ಮಾಡುತ್ತಿಲ್ಲ.
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ