ನೂರಾರು ದೂರುಗಳಿದ್ರೂ ಅಹ್ಮದ್ ಪಟೇಲ್​ಗೆ ಖಜಾಂಚಿ ಸ್ಥಾನ ಕೊಟ್ಟಿರುವುದರ ಹಿಂದಿನ ರಹಸ್ಯವೇನು?

ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಮೇಲೆ ನಿಧಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಪರಿವರ್ತನೆ ತರುತ್ತಿದ್ದಾರೆ. ಈಗ ಒಂದು ದೊಡ್ಡ ಬದಲಾವಣೆಯನ್ನೇ ಮಾಡಿದಾರೆ. ದಶಕಗಳ ಕಾಲದಿಂದ ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿದ್ದ ಹಿರಿಯರಾದ ಮೋತಿಲಾಲ್ ವೋರಾ ಅವರ ಜಾಗಕ್ಕೆ ಎರಡು ದಶಕಗಳಿಂದ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಹಮದ್ ಪಟೇಲ್ ಅವರನ್ನು ನೇಮಿಸಿದ್ದಾರೆ. ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಆಗಿದ್ರೂ, ಎಲ್ಲಾ ಅಧಿಕಾರವನ್ನು ಅವರೇ ಚಲಾಯಿಸ್ತಿದ್ರೂ ಅನ್ನೋ ಕಾರಣಕ್ಕೆ ಅಹಮದ್ ಪಟೇಲ್ ಮೇಲೆ ನೂರು ದೂರುಗಳಿವೆ. ಇನ್ನೊಂದೆಡೆ ಅಷ್ಟು ಸುದೀರ್ಘ ಅವಧಿಗೆ ಖಜಾಂಚಿಯಾಗಿದ್ರೂ ಮೋತಿಲಾಲ್ ವೋರಾ ಮೇಲೆ ಯಾರೊಬ್ಬರ ಆಕ್ಷೇಪವೂ ಇಲ್ಲ. ಆದ್ರೂ ರಾಹುಲ್ ಗಾಂಧಿ, ಖಜಾಂಚಿ ಸ್ಥಾನಕ್ಕೆ ಅಹಮದ್ ಪಟೇಲ್ ಅವರನ್ನೇ ತಂದು ಕೂರಿಸಿದಾರೆ.


Updated:August 28, 2018, 3:28 PM IST
ನೂರಾರು ದೂರುಗಳಿದ್ರೂ ಅಹ್ಮದ್ ಪಟೇಲ್​ಗೆ ಖಜಾಂಚಿ ಸ್ಥಾನ ಕೊಟ್ಟಿರುವುದರ ಹಿಂದಿನ ರಹಸ್ಯವೇನು?
ಅಹ್ಮದ್ ಪಟೇಲ್

Updated: August 28, 2018, 3:28 PM IST
- ಧರಣೀಶ್ ಬೂಕನಕೆರೆ, ನ್ಯೂಸ್18 ಕನ್ನಡ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಅವರ ಮಾತನ್ನು ಮೀರಿ ಬಿಜೆಪಿಯಲ್ಲೀಗ ಯಾರೂ ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಅದರಿಂದಾಗಿ ಅವರಿಬ್ಬರ ನೇತೃತ್ವದಲ್ಲಿ ಬಿಜೆಪಿಯನ್ನು ಮುಂಬರುವ ಲೋಕಸಭಾ ಚುನಾವಣೆಗೆ ಅಣಿಮಾಡುವ ಕೆಲಸ ನಡೆಯುತ್ತಿದೆ. ಆದರೆ ಕಾಂಗ್ರೆಸ್ ವಿಚಾರ ಭಿನ್ನ. ರಾಹುಲ್ ಗಾಂಧಿ ಅವರಂಥ ರಾಹುಲ್ ಗಾಂಧಿ ಅವರಿಗೆಯೇ ಎಐಸಿಸಿ ಅಧ್ಯಕ್ಷ ಸ್ಥಾನ ಕೊಡುವುದಕ್ಕೆ ವರ್ಷಗಟ್ಟಲೆ ಸತಾಯಿಸಿದ ಪಕ್ಷ ಕಾಂಗ್ರೆಸ್. ಕಾಂಗ್ರೆಸ್‌ನಲ್ಲಿ ಎಲ್ಲದಕ್ಕೂ ಕಣಿ ಕೇಳಲಾಗುತ್ತೆ. ಅಂದರೆ ಅನಾವಶ್ಯಕವಾಗಿ ಸಮಯ ಹಾಳು ಮಾಡಲಾಗುತ್ತೆ. ಏನೇ ನಿರ್ಧಾರ ತೆಗೆದುಕೊಳ್ಳಬೇಕಿದ್ರೂ ಪಕ್ಷದೊಳಗಿರುವ ಘಟಾನುಘಟಿ ನಾಯಕರ ಅಭಿಪ್ರಾಯ ಕೇಳಬೇಕು. ಒಬ್ಬೊಬ್ಬರೂ ಒಂದೊಂದು ಹಿನ್ನೆಲೆಯವರು. ಥರಾವರಿ ಅಭಿಪ್ರಾಯ ಹೇಳ್ತಾರೆ. ಹೀಗೆ ವ್ಯಕ್ತವಾಗುವ ನಾನಾ ನಮೂನೆಯ ಅಭಿಪ್ರಾಯಗಳೆಲ್ಲವನ್ನೂ ಆಧರಿಸಿ ನಂತರ ಒಂದು ನಿರ್ಧಾರಕ್ಕೆ ಬರಬೇಕು. ಅಷ್ಟರಲ್ಲಿ ಬಹಳ ಸಮಯ ವ್ಯರ್ಥವಾಗಿರುತ್ತೆ. ಬಹಳಷ್ಟು ವಿಷಯದಲ್ಲಿ ಕಾಲ ಮಿಂಚಿಹೋಗಿರುತ್ತೆ. ಒಂದ್ಕಡೆ ಬಿಜೆಪಿಯಲ್ಲಿ ಎಳ್ಳಷ್ಟೂ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಕಾಂಗ್ರೆಸ್‌ನಲ್ಲಿ ಅದು ಅತಿ ಎನಿಸುವಷ್ಟು ಇದೆ. ಅದೂ ಅಗತ್ಯ ಇಲ್ಲದ ವಿಚಾರಗಳಲ್ಲಿ ಇದೆ. ಈ ಪರಿಸ್ಥಿತಿಯನ್ನು ಬದಲಿಸಬೇಕಾದ ಅತ್ಯಂತ ಕಷ್ಟಕರವಾದ ಜವಾಬ್ದಾರಿ ಈಗ ರಾಹುಲ್ ಗಾಂಧಿ ಅವರ ಮೇಲಿದೆ. ರಾಹುಲ್ ಗಾಂಧಿ ಬದಲಾವಣೆ ಕೆಲಸವನ್ನ ಆರಂಭಿಸಿದಾರೆ.

ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಬದಲಾವಣೆ:

ಬಿಜೆಪಿ ಬಳಿ ಈಗ ಅಧಿಕಾರ ಇದೆ. ದೇಶಾದ್ಯಂತ ನೆಟ್ವರ್ಕ್ ಇದೆ. ಸಂಘಟನೆ ಇದೆ. ಜೊತೆಗೆ ಸಂಪನ್ಮೂಲವೂ ಇದೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ಮಾಡ್ತಿದೆ. ಆದ್ರೆ ಕಾಂಗ್ರೆಸ್ ವಿಚಾರ ಭಿನ್ನ. ಕಾಂಗ್ರೆಸ್ ಬಳಿ ಈಗ ಅಧಿಕಾರವೂ ಇಲ್ಲ, ಹಣವೂ ಇಲ್ಲ. ಈ ಎರಡೂ ಇಲ್ಲದಿದ್ರೆ ಸಂಘಟನೆ ಮಾಡೋದು ಕಷ್ಟ ಮತ್ತು ಚುನಾವಣೆ ಎದುರಿಸೋದು ಕಷ್ಟ. ಅದರಿಂದಾಗಿಯೇ ಈಗ ಮುಂಬರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸ್‌ಘಡ ರಾಜ್ಯಗಳ ವಿಧಾನಸಭಾ ಚುನಾವಣೆ, ಆನಂತರ ಬರುವ ಲೋಕಸಭಾ ಚುನಾವಣೆ, ಅದರ ಬಳಿಕ ಬರುವ ಸಾಲು ಸಾಲು ವಿಧಾನಸಭಾ ಚುನಾವಣೆಗಳnfn ದೃಷ್ಟಿ ಇಟ್ಟುಕೊಂಡು ರಾಹುಲ್ ಗಾಂಧಿ ಅದಕ್ಕೆ ತಕ್ಕಂತೆ ಎಐಸಿಸಿಯನ್ನು ಪುನರ್‌ರಚನೆ ಮಾಡಲು ಮುಂದಾಗಿದ್ದಾರೆ. ಈ ವಿಚಾರದಲ್ಲಿ ಈಗಾಗಲೇ ಬಹಳಷ್ಟು ರಾಜ್ಯಗಳ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳನ್ನು ಬದಲು ಮಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಎಐಸಿಸಿಯ ಖಜಾಂಚಿ ಸ್ಥಾನಕ್ಕೆ ಅಹಮದ್ ಪಟೇಲ್ ಅವರನ್ನು ತಂದು ಕೂರಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಹಳ ಮುಖ್ಯವಾದ ಮತ್ತು ನಿರ್ಣಾಯಕವಾದ ಎಐಸಿಸಿ ಖಜಾಂಚಿ ಸ್ಥಾನಕ್ಕೆ ಅಹಮದ್ ಪಟೇಲ್ ಅವರನ್ನೇ ತಂದು ಕೂರಿಸಿರೋದು ಏಕೆ? ಬೇರೆಲ್ಲರನ್ನೂ ಬಿಟ್ಟು ಅಹಮದ್ ಪಟೇಲ್ ಅವರಿಗೇ ಖಜಾಂಚಿ ಸ್ಥಾನ ಕೊಡೋಕೆ ಏನು ಪ್ರಮುಖ ಕಾರಣ?

ಅಹಮದ್ ಪಟೇಲ್ ಎಂಬ ಆಪತ್ಪಾಂಧವ!
Loading...

ಅಧಿಕಾರ ಹೊಂದಿರುವವರ ಬಗ್ಗೆ, ಅಧಿಕಾರಕ್ಕೆ ಬಹಳ ಹತ್ತಿರ ಇರುವವರ ಬಗ್ಗೆ ಆರೋಪ ಬರೋದು, ಅಸಮಾಧಾನ ಬರೋದು, ಅಸೂಯೆ ಬರೋದು ಸಹಜ. ಅದೇ ರೀತಿ ದಶಕಗಳ ಕಾಲ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಹಮದ್ ಪಟೇಲ್ ಬಗ್ಗೆಯೂ ಕಾಂಗ್ರೆಸ್ ಪಕ್ಷದ ಒಳಗೆ ದೊಡ್ಡ ಅಸಮಾಧಾನ ಇದೆ. ಸೋನಿಯಾ ಗಾಂಧಿ ಬಳಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಾಗದೇ ಇರೋರೆಲ್ಲಾ ಅಹಮದ್ ಪಟೇಲ್ ಬಗ್ಗೆ ಕೆಂಡಕಾರುತ್ತಾರೆ. ಇದು ಒಂದು ರೀತಿಯಾದ್ರೆ, ಇನ್ನೊಂದ್ಕಡೆ ಅಹಮದ್ ಪಟೇಲ್‌ಗೆ ದೇಶಾದ್ಯಂತ ಕಾಂಗ್ರೆಸ್ ಪಕ್ಷದೊಳಗೆ ಒಂದು ದೊಡ್ಡ ಬೆಂಬಲಿಗರ ಪಡೆ ಇದೆ. ಅವರು ಎಷ್ಟೋ ಜನರ ರಾಜಕೀಯ ಗುರು ಕೂಡ ಹೌದು. ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಅಹಮದ್ ಪಟೇಲ್ ಆಪತ್ಪಾಂಧವ. ಅದು ರಾಷ್ಟ್ರ ರಾಜಕಾರಣದಲ್ಲಿರಬಹುದು ಅಥವಾ ರಾಜ್ಯಗಳ ಮಟ್ಟದಲ್ಲಿರಬಹುದು ಯಾವುದೇ ಬಿಕ್ಕಟ್ಟು ಸೃಷ್ಟಿಯಾದ್ರೂ ಪಕ್ಷಕ್ಕಾಗಿ ಕೆಲಸ ಮಾಡುವ ವ್ಯಕ್ತಿ. ಅದೇ ಕಾರಣಕ್ಕೆ ಹಿಂದೆ ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ, ಅಹಮದ್ ಪಟೇಲ್ ಅವರನ್ನು ಟ್ರಬಲ್ ಶೂಟರ್ ಆಗಿ ಬಳಸಿಕೊಳ್ಳುತ್ತಿದ್ದರು.‌ ಯುಪಿಎ ಸರ್ಕಾರದ ಅವಧಿಯಲ್ಲೂ ಕೆಲವು ಪ್ರಾದೇಶಿಕ ಪಕ್ಷಗಳ ದೊಡ್ಡ ನಾಯಕರ ಜೊತೆ ಅಹಮದ್ ಪಟೇಲ್ ಸರಾಗವಾಗಿ ಮಾತುಕತೆ ನಡೆಸಿ ಸಮಸ್ಯೆ ಬಾರದಂತೆ ನೋಡಿಕೊಂಡಿದ್ದರು.

ಕಡೆಗೂ ರಾಹುಲ್ ಮನಗೆದ್ದ ಅಹಮದ್ ಪಟೇಲ್:
ರಾಹುಲ್ ಗಾಂಧಿ ಬಗ್ಗೆ ಕೆಲವು ಕಾಂಗ್ರೆಸ್ ಪಕ್ಷದ ಹಿರಿಯರಿಗೆ ಮೊದಲಿಂದಲೂ ಏನೋ ಅಪಸ್ವರ. ಅದೇ ರೀತಿ ರಾಹುಲ್ ಗಾಂಧಿ ಕೂಡ ಕೆಲ ಹಿರಿಯ ನಾಯಕರ ಬಗ್ಗೆ ಕೆಲವು ರಿಸರ್ವೇಷನ್ ಇಟ್ಟುಕೊಂಡಿದ್ದರು. ಕ್ರಮೇಣ ಅವರಿಗೆ ಯಾರ ಸಾಮರ್ಥ್ಯ ಎಂಥದ್ದು? ಯಾರು ಅಸಲಿ? ಯಾರು ನಕಲಿ? ಎಂಬ ಸತ್ಯ ಗೊತ್ತಾಗಿದೆ.‌ ಅದೇ ರೀತಿ ಕಾಂಗ್ರೆಸ್ ಪಕ್ಷದಲ್ಲಿ ಅಹಮದ್ ಪಟೇಲ್ ಪಾತ್ರ ಏನು ಎನ್ನೋದು ಅರಿವಾಗಿದೆ. ಅದರಿಂದಾಗಿ ಈಗ ಕಾಂಗ್ರೆಸ್ ಪಕ್ಷ ಕಡುಕಷ್ಟದಲ್ಲಿರುವಾಗ ಅಹಮದ್ ಪಟೇಲ್ ಅವರಿಗೆ ಬಹಳ ಮಹತ್ತರವಾದ ಖಜಾಂಚಿ ಸ್ಥಾನವನ್ನು ಕೊಟ್ಟಿದ್ದಾರೆ. ಖಾಲಿ ಖಜಾನೆ ಕೊಟ್ಟು ಮುಂಬರುವ ಸಾಲು ಸಾಲು ಚುನಾವಣೆಗೆ ಪಕ್ಷವನ್ನು ಹುರಿಗೊಳಿಸಿ ಅಂತಾ ಸೂಚನೆ ನೀಡಿದ್ದಾರೆ.

ಹಲವು ಶ್ರೀಮಂತರನ್ನೊಳಗೊಂಡ ಬಡ ಪಕ್ಷ ಕಾಂಗ್ರೆಸ್:
ಕಾಂಗ್ರೆಸ್ ಪಕ್ಷ ಈಗ ನಿಜಕ್ಕೂ ಕಷ್ಟದಲ್ಲಿದೆ. ಅದು ಅಧಿಕಾರದಲ್ಲಿ ಇಲ್ಲ ಅನ್ನೋ ಕಾರಣಕ್ಕೆ ಮಾತ್ರವಲ್ಲ. ಅದಕ್ಕೂ ಮಿಗಿಲಾಗಿ ಸಂಘಟನೆಗೆ ಮತ್ತು ಚುನಾವಣೆಗಳನ್ನು ಎದುರಿಸಲು ದುಡ್ಡಿಲ್ಲದೆ. ಕಾಂಗ್ರೆಸ್ ಪಕ್ಷದಲ್ಲಿ ಸಾವಿರಾರು ಕೋಟಿ ಬೆಲೆ ಬಾಳುವ ಸಾವಿರಾರು ಜನ ಇದಾರೆ. ಆದ್ರೆ ಪಕ್ಷಕ್ಕಾಗಿ ದುಡ್ಡು ಬಿಚ್ಚುವವರು ಕಡಿಮೆ. ಚುನಾವಣೆ ಆದ್ಮೇಲೆ ಮಂತ್ರಿ ಆಗೋಕೆ, ಮುಖ್ಯಮಂತ್ರಿ ಆಗೋಕೆ ಎಷ್ಟು ಕೋಟಿ ರೂಪಾಯಿ ಬೇಕಾದ್ರೂ ಸುರಿತಾರೆ. ಆದ್ರೆ ಚುನಾವಣೆಗಾಗಿ ಅಥವಾ ಪಕ್ಷದ ಸಂಘಟನೆಗಾಗಿ ದುಡ್ಡು ಕೊಡುವವರು ಬಹಳ ವಿರಳ. ಇಂಥ ಪರಿಸ್ಥಿತಿ ಇರೋದ್ರಿಂದ ಪಕ್ಷದೊಳಗೆ ಸಂಪನ್ಮೂಲ ಕ್ರೋಢೀಕರಿಸುವ ಶಕ್ತಿ ಯಾರಿಗಿದೆ ಎನ್ನುವುದನ್ನು ರಾಹುಲ್ ಗಾಂಧಿ ಲೆಕ್ಕ ಹಾಕಿದ್ದಾರೆ. ಈಗಾಗಲೇ ಹೇಳಿದಂತೆ ಅಹಮದ್ ಪಟೇಲ್ ಅವರಿಗೆ ದೇಶಾದ್ಯಂತ ದೊಡ್ಡ ಬೆಂಬಲಿಗರ ಪಡೆ ಇದೆ. ಪಕ್ಷದ ಹೊರಗೂ ಅಹಮದ್ ಪಟೇಲ್ ಅವರಿಗೆ ದೊಡ್ಡ ಸಂಪರ್ಕ ಇದೆ. ಪಕ್ಷದ ಒಳಗಿನವರಿರಲಿ, ಹೊರಗಿನವರಿರಲಿ ಅಹಮದ್ ಪಟೇಲ್ ಹೇಳಿದರೆ ದುಡ್ಡು ಕೊಡುವವರು ಬಹಳ ಜನ ಇದಾರೆ. ಅದೇ ಕಾರಣಕ್ಕೆ ಅಹಮದ್ ಪಟೇಲ್ ಅವರಿ‌ಗೆ ಈ ಪ್ರಮುಖ ಜವಾಬ್ದಾರಿ ನೀಡಲಾಗಿದೆ.

ವೀರಪ್ಪ ಮೊಯ್ಲಿ, ಕಮಲ್ ನಾಥ್ ಅವರಿಗೂ ಇತ್ತು ಅವಕಾಶ:
ಇದಕ್ಕೂ ಮೊದಲು ಕೇಂದ್ರದ ಮಾಜಿ ಸಚಿವರಾದ ಕಮಲನಾಥ್ ಮತ್ತು ವೀರಪ್ಪ ಮೊಯ್ಲಿ ಹೆಸರುಗಳ ಬಗ್ಗೆ ಚರ್ಚೆಯಾಗಿದೆ.‌ ಇವರಿಬ್ಬರು ಕಾರ್ಪೂರೇಟ್ ವ್ಯವಹಾರಗಳ ಸಚಿವರಾಗಿದ್ದವರು. ಜೊತೆಗೆ ಕಾರ್ಪೂರೇಟ್ ವಲಯದೊಟ್ಟಿಗೆ ಸಂಪರ್ಕವನ್ನೂ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಆಲೋಚನೆ ಅವರುಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಆದರೆ ಸದ್ಯಕ್ಕೆ ಕಾರ್ಪೂರೇಟ್ ವಲಯ ಕಾಂಗ್ರೆಸ್ ಬಗ್ಗೆ ಮುನಿದಿರುವುದರಿಂದ ಅವರನ್ನು ಮನವೊಲಿಸುವ ಅಥವಾ ಅದು ಸಾಧ್ಯವಾಗದೇ ಇದ್ದರೆ ಬೇರೆ ಮೂಲದಿಂದ ಸಂಪನ್ಮೂಲವನ್ನು ಹುಡುಕುಡುಕಿ ತರುವ ಸಾಮರ್ಥ್ಯವುಳ್ಳ ಅಹಮದ್ ಪಟೇಲ್ ಅವರೇ ಸೂಕ್ತ ಎಂದು ನಿರ್ಧರಿಸಲಾಗಿದೆ.

ಕಾಂಗ್ರೆಸ್ ಬಗ್ಗೆ ಮುನಿದಿರುವ ಕಾರ್ಪೂರೇಟ್ ವಲಯ:
ಅಹಮದ್ ಪಟೇಲ್ ಅವರನ್ನು ಖಜಾಂಚಿಯನ್ನಾಗಿ ಮಾಡಿದ ಮಾತ್ರಕ್ಕೆ ಸಮಸ್ಯೆ ಪೂರ್ತಿ ಬಗೆಹರಿದಿಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷವನ್ನಾಗಲಿ ಅಥವಾ ರಾಹುಲ್ ಗಾಂಧಿಯವರ ವ್ಯಕ್ತಿತ್ವವನ್ನಾಗಲಿ ಉದ್ಯಮಸ್ನೇಹಿ ಎಂದು ಕಾರ್ಪೊರೇಟ್ ವಲಯ ಭಾವಿಸಿಲ್ಲ.‌ ರಾಹುಲ್ ಗಾಂಧಿ ನಿರಂತರವಾಗಿ ಮೋದಿ ಹಾಗೂ ಬಂಡವಾಳಶಾಹಿಗಳ ನಡುವೆ ಅಪವಿತ್ರ ಮೈತ್ರಿಯಾಗಿದೆ ಎಂದು ಆರೋಪ ಮಾಡುತ್ತಿರುತ್ತಾರೆ. ಮೋದಿ ಕಾರ್ಪೊರೇಟ್ ವಲಯದ ಹಿತಾಸಕ್ತಿಗಾಗಿ ಮಾತ್ರ ಕೆಲಸ ಮಾಡುವ ವ್ಯಕ್ತಿ ಎಂದು ಮೂದಲಿಸುತ್ತಾರೆ. ಸೂಟ್ ಬೂಟ್ ಕಿ ಸರ್ಕಾರ್ ಎಂದು ಟೀಕಿಸುತ್ತಿರುತ್ತಾರೆ. ಅದರಿಂದಾಗಿಯೇ ಕಾರ್ಪೊರೇಟ್ ವಲಯ ಕಾಂಗ್ರೆಸ್ ಪಕ್ಷದ ಬಗ್ಗೆ ಮುನಿದಿದೆ.

ಇತ್ತೀಚೆಗೆ ಎಡಿಆರ್ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಕಾರ್ಪೊರೇಟ್ ವಲಯದಿಂದ 2016-17ನೇ ಸಾಲಿನಲ್ಲಿ ಬಿಜೆಪಿಗೆ 1,194 ಕೋಟಿ ರೂಪಾಯಿ ದೇಣಿಗೆ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ಕೇವಲ 599 ಕೋಟಿ ರೂಪಾಯಿ. ಇದರಿಂದನೇ ಗೊತ್ತಾಗುತ್ತೆ ಕಾರ್ಪೊರೇಟ್ ವಲಯ ಬಿಜೆಪಿ ಬಗ್ಗೆ ಯಾವ ನಿಲುವು ಹೊಂದಿದೆ. ಕಾಂಗ್ರೆಸ್ ಬಗ್ಗೆ ಅದರ ನಿಲುವೇನು ಅಂತಾ. ಹಾಗಂತ ಕಾರ್ಪೊರೇಟ್ ವಲಯವನ್ನು ಕಡೆಗಣಿಸುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ಬೇರೆ ಯಾವ ಮೂಲದಿಂದಲೂ ಇಷ್ಟೊಂದು ದೊಡ್ಡ ಪ್ರಮಾಣದ ದೇಣಿಗೆ ಬರುವುದಿಲ್ಲ. ಹಾಗಾಗಿ ಈಗ ಹೇಗಾದರೂ ಮಾಡಿ ಕಾರ್ಪೊರೇಟ್ ವಲಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕಾರ್ಪೊರೇಟ್ ವಲಯದಲ್ಲಿ ಬಿಜೆಪಿ ಬಗ್ಗೆ ಅಸಮಾಧಾನ ಇರುವವರನ್ನು ಹುಡುಕಬೇಕು. ಅಂಥವರಿಂದ ದೇಣಿಗೆ ತರಬೇಕು. ಇಂಥ ಪರಿಸ್ಥಿತಿಯಲ್ಲಿ ಕಾರ್ಪೂರೇಟ್ ವಲಯದಿಂದ ಪಕ್ಷಕ್ಕೆ ದೇಣಿಗೆ ತರಲು ಎಂಥವರಿಗೂ ದಣಿವಾಗುತ್ತದೆ. ಆಗಲೇ ಹೇಳಿದಂತೆ ಅಹಮದ್ ಪಟೇಲ್ ಅವರನ್ನು ಟ್ರಬಲ್ ಶೂಟರ್ ಅಂತಾ ಪರಿಗಣಿಸಿರುವುದರಿಂದ ಈ ಕಷ್ಟದ ಕೆಲಸಕ್ಕೆ ಹಚ್ಚಲಾಗಿದೆ.

ಪಕ್ಷದೊಳಗಿನ ಕುಳಗಳಿಂದಲೂ ದುಡ್ಡು ಪೀಕಿಸಬೇಕು:
ಕಾಂಗ್ರೆಸ್ ಪಕ್ಷದಲ್ಲಿ ಬಹಳ ವರ್ಷ ಅಧಿಕಾರ ಅನುಭವಿಸಿ ಅಪಾರ ಪ್ರಮಾಣದ ಆಸ್ತಿ-ಹಣ ಮಾಡಿರುವವರ ಪಟ್ಟಿ ಬಹಳ ದೊಡ್ಡದಿದೆ. ಮೋತಿಲಾಲ್ ವೋರಾ ಈ ಶ್ರೀಮಂತ ಕುಳಗಳಿಗೆ ಪತ್ರಬರೆದು ವಿನಯದಿಂದ ದುಡ್ಡು ಕೇಳಿದ್ದಾರೆ. ಆದರೆ ಎಐಸಿಸಿಯ ಖಜಾನೆಗೆ ಮಾತ್ರ ಬಿಡಿಗಾಸು ಬಂದಿಲ್ಲ. ಇಂಥವರಿಂದ ಅಹಮದ್ ಪಟೇಲ್ ದೇಣಿಗೆ ವಸೂಲಿ ಮಾಡಬೇಕಿದೆ. ಮೋತಿಲಾಲ್ ಅವರ ಮನವಿಗೆ ಸ್ಪಂದಿಸದಿದ್ದವರು ಅಹಮದ್ ಪಟೇಲ್ ಪ್ರಭಾವಕ್ಕೆ ಮಣಿಯುತ್ತಾರೆ ಎಂಬ ವಿಶ್ವಾಸ ರಾಹುಲ್ ಗಾಂಧಿ ಅವರದ್ದು. ಅದೇ ಕಾರಣಕ್ಕೆ ಎಲ್ಲರನ್ನೂ ಬಿಟ್ಟು ಅಹಮದ್ ಪಟೇಲ್ ಅವರಿಗೆ ಅತ್ಯಂತ ಮಹತ್ವದ ಜವಾಬ್ದಾರಿ ನೀಡಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...