HOME » NEWS » National-international » DELHI POST SACHIN PILOT IS NOT GET HIS FATHER INTELLIGENCE RH

ದಿಲ್ಲಿ ಪೋಸ್ಟ್ | ಅಪ್ಪನಂತೆ ಬಂಡೆದ್ದರೆ ಸಾಕೇ ಸಚಿನ್ ಪೈಲಟ್, ಅವರ ಚಾಣಾಕ್ಷತನವೂ ಬೇಕಲ್ಲವೇ?; ದೆಹಲಿಗೆ ಶಾ ಸೂಪರ್ ಸಿಎಂ

ಸಚಿನ್ ಪೈಲಟ್​ಗೆ​ ಬಂಡಾಯ ಅವರಿಗೆ ಅಪ್ಪನಿಂದ ಬಳುವಳಿಯೇ. ಆದರೆ, ರಾಜಸ್ಥಾನ‌ ರಾಜಕಾರಣದಲ್ಲಿ ಸಚಿನ್ ಪೈಲಟ್ ಏನೋ ಮಾಡಲು‌‌ ಹೋಗಿ ಏನೋ ಮಾಡಿಕೊಂಡಿದ್ದಾರೆ. ಈ ಬಗ್ಗೆ ‌ನ್ಯೂಸ್ 18 ಕನ್ನಡದ ದೆಹಲಿ ವಿಶೇಷ ಪ್ರತಿನಿಧಿ ಧರಣೀಶ್ ಬೂಕನಕೆರೆ ಈ ವಾರದ ದಿಲ್ಲಿ ಪೋಸ್ಟ್ ಕಾಲಂನಲ್ಲಿ ಬರೆದಿದ್ದಾರೆ.

news18-kannada
Updated:July 18, 2020, 7:10 AM IST
ದಿಲ್ಲಿ ಪೋಸ್ಟ್ | ಅಪ್ಪನಂತೆ ಬಂಡೆದ್ದರೆ ಸಾಕೇ ಸಚಿನ್ ಪೈಲಟ್, ಅವರ ಚಾಣಾಕ್ಷತನವೂ ಬೇಕಲ್ಲವೇ?; ದೆಹಲಿಗೆ ಶಾ ಸೂಪರ್ ಸಿಎಂ
ದಿಲ್ಲಿ ಪೋಸ್ಟ್
  • Share this:
ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಶತ್ರುವಿನ ಎರಡು ಕಣ್ಣು ಕೀಳಬೇಕೆಂಬ ಥಿಯರಿಯನ್ನು ಸಚಿನ್ ಪೈಲಟ್ ಉಲ್ಟಾ ಅರ್ಥ ಮಾಡಿಕೊಂಡಂತಿದೆ. ಶತ್ರು ಅಶೋಕ್ ಗೆಹ್ಲೋಟ್ ಅವರ ಒಂದು ಕಣ್ಣು ಕೀಳಲು‌ ಹೋಗಿ ಸಚಿನ್ ಪೈಲಟ್ ತಮ್ಮ ಎರಡು ಕಣ್ಣುಗಳನ್ನೂ ಕಳೆದುಕೊಂಡಿದ್ದಾರೆ. ಇದನ್ನು ಇತ್ತ ಬಿಜೆಪಿಗೆ ಹೋಗಲೂ ಆಗದೆ ಕಾಂಗ್ರೆಸ್​ಗೆ ಮರಳಲೂ ಆಗದ ಸ್ಥಿತಿ ಎಂದು ಅರ್ಥ ಮಾಡಿಕೊಳ್ಳಬಹುದು. ಅನಾನುಭವ ಎನ್ನುವುದು ಇದಕ್ಕೆ.

ಅನುಭವ ಎನ್ನುವುದು ಸಚಿನ್ ಪೈಲಟ್ ತಂದೆ ರಾಜೇಶ್ ಪೈಲಟ್ ಅವರ ರಾಜಕಾರಣಕ್ಕೆ.‌ ರಾಜೇಶ್ ಪೈಲಟ್ ಕೂಡ ಬಂಡಾಯ‌ ಮನೋಸ್ಥಿತಿಯವರು.‌ ಅವರೊಳಗಿದ್ದ ಬಂಡಾಯಗಾರ ಅವರನ್ನು ನಾಯಕನನ್ನಾಗಿ ರೂಪಿಸಿತು. ಕೇಂದ್ರ ಸಚಿವ ಸ್ಥಾನವನ್ನು ದಯಪಾಲಿಸಿತು. ಅಷ್ಟೇಯಲ್ಲ ರಾಜೀವ್ ಗಾಂಧಿ ಅವರ ಆಪ್ತವಲಯ ಸೇರುವುದಕ್ಕೂ ಕಾರಣವಾಯಿತು.‌ ಆದರೆ ಅವರು ಬಂಡೆದ್ದಿದ್ದು ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವಕ್ಕಾಗಿ. ಅವರೆಂದೂ ಪಕ್ಷ ತೊರೆಯುವ ಯೋಚನೆ ಮಾಡಿರಲಿಲ್ಲ.‌ ಇವರದೇ ರೀತಿ ರಾಜೀವ್ ಗಾಂಧಿ ಜೊತೆಗೆ ಅತ್ಯಾಪ್ತರಾಗಿದ್ದ ವಿ.ಪಿ.‌ ಸಿಂಗ್, ಅರುಣ್ ನೆಹರು ಅವರಂಥವರು ಪಕ್ಷ ತ್ಯಜಿಸಿದರೂ ರಾಜೇಶ್ ಪೈಲಟ್ ಕಾಂಗ್ರೆಸ್ ಪಕ್ಷದಲ್ಲೇ ಉಳಿದರು. ಇದಾದ ಮೇಲೆ ಸೋನಿಯಾ ಗಾಂಧಿ ಕಾಂಗ್ರೆಸ್ ನೇತೃತ್ವ ವಹಿಸಿಕೊಂಡ ಮೇಲೆ ಶರದ್ ಪವಾರ್, ಪಿ.ಎ. ಸಂಗ್ಮಾ, ತಾರಿಖ್ ಅನ್ವರ್ ಪಕ್ಷ‌ ತ್ಯಜಿಸುವಾಗಲೂ ಅವರನ್ನು ಉಳಿಸಿಕೊಳ್ಳಲು ರಾಜೇಶ್ ಪೈಲಟ್ ಪ್ರಯತ್ನಿಸಿದ್ದರು. ರಾಜೇಶ್ ಪೈಲಟ್ ಹೀಗೆ ಸದಾ ಇರುವಲ್ಲೇ ಹೋರಾಡಿ ಗೆಲ್ಲಬೇಕೆಂಬ ಮನೋಭಾವವನ್ನೇ ಪ್ರದರ್ಶಿಸಿದ್ದರು.

ಸಚಿನ್ ಅಪ್ಪನ ಬಂಡಾಯಗಾರನ ಗುಣ ಬೆಳಸಿಕೊಂಡರೇ ವಿನಃ ಅಪ್ಪನ ಚಾಣಾಕ್ಷತನ ಬೆಳಸಿಕೊಳ್ಳಲಿಲ್ಲ. ಸಚಿನ್ ಪೈಲಟ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದರೇ ವಿನಃ. ಅಧಿಕಾರವನ್ನು ತಾವು ಪಡೆಯಲು ಸಾಧ್ಯವಾಗಲಿಲ್ಲ. ಅಶೋಕ್ ಗೆಹ್ಲೋಟ್ ಬಳಿಕ ರಾಜಸ್ಥಾನದಲ್ಲಿ ಸದ್ಯಕ್ಕೆ ಸಚಿನ್ ಪೈಲಟ್ ಗೆ ಬಲಿಷ್ಠ ಎದುರಾಳಿಗಳಿರಲಿಲ್ಲ. ಗೆಹ್ಲೋಟ್ ಬಳಿಕ ಅನಾಯಾಸವಾಗಿ ಸಚಿನ್ ಪೈಲಟ್ ಹಿಡಿತ ಸಾಧಿಸಬಹುದಿತ್ತು. ಇದು ಗೊತ್ತಿದ್ದೇ ಗೆಹ್ಲೋಟ್, ಸಚಿನ್ ಗೆ ಖೆಡ್ಡಾ ತೋಡಿದ್ದು. ಗೆಹ್ಲೋಟ್ ತನ್ನ ಬಳಿಕ ಮಗನನ್ನು ಮುಂದೆ ತರಲು ಪ್ರಯತ್ನಿಸುತ್ತಿದ್ದಾರೆ‌. ಇದನ್ನು ಸಚಿನ್ ಪಕ್ಷದಲ್ಲಿ ಇದ್ದುಕೊಂಡೇ ಎದುರಿಸಬಹುದಿತ್ತು. ಈಗ ಪಕ್ಷವನ್ನು ಅಧಿಕಾರಕ್ಕೆ ತಂದ, ಮುಖ್ಯಮಂತ್ರಿ ಗಾದಿಯನ್ನು ಗೆಹ್ಲೋಟ್ ಗೆ ಬಿಟ್ಟುಕೊಟ್ಟ ಸಂಗತಿಗಳೇ ಕೈಹಿಡಿಯುತ್ತಿದ್ದವು. ಜೊತೆಗೆ ರಾಹುಲ್ ಗಾಂಧಿ ಅವರ ಕೃಪಾಶೀರ್ವಾದವೂ ಇದ್ದೇ ಇತ್ತು.

ಸಹವಾಸದಿಂದ ಸನ್ಯಾಸಿ ಕೆಟ್ಟಂತೆ

ರಾಜಸ್ಥಾನದ ಸದ್ಯದ ರಾಜಕೀಯ ವಿದ್ಯಮಾನಕ್ಕೆ ಇನ್ನೂ ಒಂದು ಆಯಾಮವಿದೆ. ಸಚಿನ್ ಬಂಡೆದ್ದು ಪಕ್ಷ ತ್ಯಜಿಸುವುದಿದ್ದರೆ ಆ ಕೆಲಸವನ್ನು ಯಾವತ್ತೋ ಮಾಡಿರುತ್ತಿದ್ದರು. ಆ ಉದ್ದೇಶ ಅವರಿಗಿರಲಿಲ್ಲ. ಗೆಹ್ಲೋಟ್ ಮೇಲೆ ದೂರು ಹೇಳಲು ಆಕ್ರೋಶಭರಿತರಾಗಿ ದೆಹಲಿಗೆ ಬಂದ ಸಚಿನ್ ಪೈಲಟ್ ಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸುಲಭಕ್ಕೆ ಸಿಗಲಿಲ್ಲ‌. ಇದು ಗಾಯದ ಮೇಲೆ ತುಪ್ಪ ಸುರಿದಂತಾಯಿತು. ಇಷ್ಟೇ ಆಗಿದ್ದರೆ ಏನಾಗಿರುತ್ತಿತ್ತೋ ಏನೋ? ಆದರೆ ದೆಹಲಿಯಲ್ಲೇ ಇದ್ದ ಜ್ಯೊತಿರಾಧಿತ್ಯ ಸಿಂಧ್ಯ ಭೇಟಿ ಮಾಡಿ ಯಡವಟ್ಟು ಮಾಡಿಕೊಂಡರು. ಆಗಲೇ ಇಡೀ ಪ್ರಹಸನಕ್ಕೆ ತಿರುವು ಸಿಕ್ಕಿದ್ದು. ಆಗಲೇ ಬಿಜೆಪಿ ಸೇರುವ ಬಗ್ಗೆ ಯೋಚನೆ ಮಾಡುವಂತೆ ಆಗಿದ್ದು. ಸಚಿನ್ ಬಿಜೆಪಿ ಸೇರುವುದಿದ್ದರೂ ಯಾವತ್ತೋ ಸೇರಿರುತ್ತಿದ್ದರು‌. ಆದರೆ ಆ ಬಗ್ಗೆ ಎಂದೂ ಯೋಚನೆ ಮಾಡಿರಲಿಲ್ಲ. ಹಾಗೇ ಪ್ರೇರೇಪಿಸಿದವರು ಮತ್ತು ಹಳ್ಳಕ್ಕೆ ತಳ್ಳಿದವರು ಜ್ಯೊತಿರಾಧಿತ್ಯ ಸಿಂಧ್ಯ ಎಂದು ಹೇಳಲಾಗುತ್ತಿದೆ‌. ಇದೊಂಥರಾ ಸಹವಾಸದಿಂದ ಸನ್ಯಾಸಿ ಕೆಟ್ಟಂತೆ.

ಇದನ್ನು ಓದಿ: ದಿಲ್ಲಿ ಪೋಸ್ಟ್ | ದೆಹಲಿಯಲ್ಲಿ ಮಿಂಚುತ್ತಿರುವ ಕನ್ನಡಿಗ ಶ್ರೀನಿವಾಸ್; ಅಧಿವೇಶನ ಬೇಡ ಎನ್ನುತ್ತಿದ್ದಾರೆ ಸಂಸದರು
Youtube Video
ದೆಹಲಿಗೆ ಅಮಿತ್ ಶಾ ಸೂಪರ್ ಸಿಎಂ

ರಾಷ್ಟ್ರ ರಾಜಧಾನಿ ದೆಹಲಿ ಕೊರೋನಾ ಹೊಡೆತಕ್ಕೆ ಅಕ್ಷರಶಃ ನಲುಗಿಹೋಗಿತ್ತು. ಆಗ ಅಖಾಡಕ್ಕಿಳಿದ ಅಮಿತ್ ಶಾ ಕೊರೋನಾ ನಿಯಂತ್ರಣ ಮಾಡುವುದರ ಜೊತೆಜೊತೆಗೆ ದೆಹಲಿ‌ ಆಡಳಿತದ ಮೇಲೂ‌ ಹಿಡಿತ ಸಾಧಿಸಿದರು. ಅಧಿಕಾರಿಗಳು ಮೊದಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದಂತೆ ಕೇಳಬೇಕೋ ಅಥವಾ ಅಮಿತ್ ಶಾ‌ ಹೇಳಿದಂತೆ ಕೇಳಬೇಕೋ ಎಂಬ ಗೊಂದಲಕ್ಕೀಡಾದರೂ ಕ್ರಮೇಣ ಅಮಿತ್ ಶಾ ಸೂಚನೆ ಪಾಲಿಸತೊಡಗಿದರು. ದೆಹಲಿ ಬಾರ್ಡರ್ ಗಳನ್ನು ಮುಚ್ಚುವ-ತೆರೆಯುವ, ಹಾಸಿಗೆಗಳನ್ನು‌ ಹೊಂದಿಸುವ, ಕೊರೋನಾ ಪರೀಕ್ಷೆ ನಡೆಸುವ ಪ್ರತಿಯೊಂದು ವಿಷಯಗಳಲ್ಲೂ ಅಮಿತ್ ಶಾ ಮೇಲುಗೈ ಸಾಧಿಸಿದರು. ಇದಕ್ಕೆ ಪೂರಕವಾಗಿ ದೆಹಲಿಯಲ್ಲಿ ಕೊರೋನಾ ನಿಯಂತ್ರಣಕ್ಕೂ ಬರುತ್ತಿದೆ. ಆದುದರಿಂದ ಈಗ ದೆಹಲಿಗೆ ಅಮಿತ್ ಶಾ ಅವರೇ ಸೂಪರ್ ಸಿಎಂ ಆದಂತಾಗಿದೆ.
Published by: HR Ramesh
First published: July 18, 2020, 7:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories