ಮೋದಿ ಸರಕಾರಕ್ಕೆ ಕಡಿವಾಣ ಹಾಕುವ ಅವಕಾಶಗಳನ್ನ ಕೈಚೆಲ್ಲಿದ ಪ್ರತಿಪಕ್ಷಗಳು

ಆಡಳಿತರೂಢ ಪಕ್ಷವಾದ ಬಿಜೆಪಿಯನ್ನು ಬಗ್ಗು ಬಡಿಯಬಹುದಾದ, ಅದರಲ್ಲೂ ಖುದ್ದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನೇ ಇಕ್ಕಟ್ಟಿಗೆ ಸಿಲುಕಿಸಬಹುದಾದ, ಮುಜುಗರಕ್ಕೊಳಪಡಿಸಬಹುದಾದ ಒಂದೊಂದೇ ಅವಕಾಶವನ್ನು ವಿರೋಧ ಪಕ್ಷಗಳು ಹೇಗೆ ಕೈಚೆಲ್ಲಿವೆ ಎಂಬುದರತ್ತ ಒಂದು ಅವಲೋಕನ.


Updated:August 13, 2018, 5:34 PM IST
ಮೋದಿ ಸರಕಾರಕ್ಕೆ ಕಡಿವಾಣ ಹಾಕುವ ಅವಕಾಶಗಳನ್ನ ಕೈಚೆಲ್ಲಿದ ಪ್ರತಿಪಕ್ಷಗಳು
ಆಡಳಿತರೂಢ ಪಕ್ಷವಾದ ಬಿಜೆಪಿಯನ್ನು ಬಗ್ಗು ಬಡಿಯಬಹುದಾದ, ಅದರಲ್ಲೂ ಖುದ್ದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನೇ ಇಕ್ಕಟ್ಟಿಗೆ ಸಿಲುಕಿಸಬಹುದಾದ, ಮುಜುಗರಕ್ಕೊಳಪಡಿಸಬಹುದಾದ ಒಂದೊಂದೇ ಅವಕಾಶವನ್ನು ವಿರೋಧ ಪಕ್ಷಗಳು ಹೇಗೆ ಕೈಚೆಲ್ಲಿವೆ ಎಂಬುದರತ್ತ ಒಂದು ಅವಲೋಕನ.

Updated: August 13, 2018, 5:34 PM IST
- ಧರಣೀಶ್ ಬೂಕನಕೆರೆ, ನ್ಯೂಸ್18 ಕನ್ನಡ

ನವದೆಹಲಿ(ಆ. 13): ರಾಷ್ಟ್ರ ರಾಜಕಾರಣದ ಫೋಕಸ್ ನಿಧಾನವಾಗಿ ಲೋಕಸಭಾ ಚುನಾವಣೆ ಕಡೆ ತಿರುಗತ್ತಿದೆ. ಇದಕ್ಕೆ ಬಹಳ ಒಳ್ಳೆಯ ಉದಾಹರಣೆ, ಮೊನ್ನೆಯಷ್ಟೇ ಮುಗಿದ ಈ ಬಾರಿಯ ಸಂಸತ್ತಿನ ಅಧಿವೇಶನ. ಈ ಅಧಿವೇಶನದಲ್ಲಿ ರಫೇಲ್ ಡೀಲ್ ಬಗ್ಗೆ ಚರ್ಚೆ ಆಯ್ತು, ಎನ್​ಆರ್​ಸಿ ಬಗ್ಗೆ ಚರ್ಚೆ ಆಯಿತು. ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು. ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಎಲ್ಲಾ ಬೆಳವಣಿಗೆಗಳು ಒಂದಿಲ್ಲೊಂದು ರೀತಿ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯನ್ನೇ ಟಾರ್ಗೆಟ್ ಮಾಡ್ಕೊಂಡಿದ್ದವು.‌ ಈ ವಿಷಯಗಳ ಮುಖಾಂತರ ಬಿಜೆಪಿಗೆ ಹಿನ್ನಡೆಯಾಗುವಂತೆ ಮಾಡಬೇಕು. ಈ ಹಿನ್ನಡೆಯೇ ಲೋಕಸಭಾ ಚುನಾವಣೆಗೆ ಮುನ್ನುಡಿ ಆಗಬೇಕು ಎಂದು ವಿರೋಧ ಪಕ್ಷಗಳು ಬಹಳ ಪ್ರಯತ್ನ ಪಟ್ಟವು. ಆದರೆ ಫಲ ಸಿಗಲಿಲ್ಲ.‌ ವಿರೋಧ ಪಕ್ಷಗಳು ಎಡವಿದ್ದೆಲ್ಲಿ? ಯಡವಟ್ಟಾಗಿದ್ದೆಲ್ಲಿ? ಯಶಸ್ಸಿಗಾಗಿ ಏನು ಮಾಡಬೇಕಿತ್ತು?

ವಿಪಕ್ಷಗಳಲ್ಲಿ ಮೂಡದ ಒಮ್ಮತ:
ಪ್ರಜಾಪ್ರಭುತ್ವ ಮತ್ತು ಸರ್ಕಾರ ಸರಿಯಾಗಿ ನಡೆಯಬೇಕಾದರೆ ಸಮರ್ಥವಾದ ವಿರೋಧ ಪಕ್ಷ ಕೂಡ ಅಗತ್ಯ. ಈಗ ಅಂಥ ಸಮರ್ಥ ವಿರೋಧ ಪಕ್ಷ ಇಲ್ಲದೇ ಇರುವುದರಿಂದಲೇ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ತಮಿಗಿಷ್ಟ ಬಂದಂತೆ ಮಾಡ್ತಿರೋದು. ಈಗ ಲೋಕಸಭಾ ಚುನಾವಣೆಗೆ ಸಜ್ಜಾಗುವ ಸಮಯವಾದ್ದರಿಂದ ಈಗಲಾದರೂ ವಿಪಕ್ಷಗಳು ಒಂದಾಗ್ತವೆ, ಬಿಜೆಪಿಗೆ ಈ ಸಲ ಪ್ರಬಲ ಪೈಪೋಟಿ ನೀಡುತ್ತವೆ ಎಂದು ಹೇಳಲಾಗ್ತಿತ್ತು. ಜೊತೆಗೆ ಯುಪಿಎ ಇನ್ನೂ ಸ್ಟ್ರಾಂಗ್ ಆಗುತ್ತೆ.‌ ತೃತೀಯ ರಂಗ ರಚನೆ ಆಗುತ್ತೆ. ಪರ್ಯಾಯ ರಂಗ ಹುಟ್ಟಿಕೊಳ್ಳುತ್ತೆ ಅಂತಾನೂ ಹೇಳಲಾಗ್ತಿತ್ತು. ಆದರೆ ಅದ್ಯಾಕೋ ಏನೋ ವಿರೋಧ ಪಕ್ಷಗಳಲ್ಲಿ ಈ ಕ್ಷಣದವರೆಗೂ ಒಮ್ಮತ ಮೂಡಿಲ್ಲ. ಒಟ್ಟಾಗುವ ಲಕ್ಷಣಗಳೂ ಕಾಣಿಸುತ್ತಿಲ್ಲ.

ಪ್ರಬಲ ಅಸ್ತ್ರಗಳನ್ನು ಕೈಚೆಲ್ಲಿದ ವಿಪಕ್ಷ ಪಾಳಯ:
ಪ್ರಧಾನ ಪ್ರತಿಪಕ್ಷವೇ ಇಲ್ಲದ ಪರಿಸ್ಥಿತಿಯಲ್ಲಿ ವಿಪಕ್ಷಗಳೆಲ್ಲಾ ಒಂದಾಗಿ ಸರ್ಕಾರದ ವಿರುದ್ದ ಮತ್ತು ಸರ್ಕಾರದ ಸರದಾರನ ವಿರುದ್ಧ ಸಮರ ಸಾರಬೇಕಿತ್ತು. ಆದರೆ ವಿಪಕ್ಷಗಳಲ್ಲಿ ಒಗ್ಗಟ್ಟು ಇಲ್ಲದ ಕಾರಣಕ್ಕೆ ಸರ್ಕಾರದ ವಿರುದ್ದ ತಿರುಗಿಬೀಳಲು ಸಾಧ್ಯವಾಗ್ತಿಲ್ಲ. ಉದಾಹರಣೆಗೆ ಈಗ ಬಹಳ ಒಳ್ಳೆಯ ಅವಕಾಶ ಇದ್ದವು. ಆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಲು ಕಾಂಗ್ರೆಸ್ಸಿಗೆ ಸಾಧ್ಯವಾಗಿಲ್ಲ.

ಸಿಕ್ಕಿದೆ ರಫೇಲ್ ಡೀಲ್ ಎಂಬ ದೊಡ್ಡ ವಿಷಯ:
Loading...

ರಫೇಲ್ ಯುದ್ಧವಿಮಾನಗಳ ಖರೀದಿಯಲ್ಲಿ ಭಾರಿ ಪ್ರಮಾಣದ ಅಕ್ರಮವಾಗಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಬಹಳ ದೊಡ್ಡ ವಿಷಯ ಸಿಕ್ಕಿದೆ. ಪ್ರತಿಪಕ್ಷಗಳ ಮಾತಿರಲಿ, ಬಿಜೆಪಿಯ ಹಿರಿಯರು‌ ಮತ್ತು ಹಿಂದೆ ಕೇಂದ್ರದಲ್ಲಿ ಹಣಕಾಸು ಸಚಿವರೂ ಆಗಿದ್ದ ಯಶವಂತ ಸಿನ್ಹ ಮತ್ತು ಅರುಣ್ ಶೌರಿ ಕೂಡ ರಫೇಲ್ ಯುದ್ಧ ವಿಮಾನಗಳ ಖರೀದಿ ಹಗರಣವು ಬೋಫೋರ್ಸ್ ಹಗರಣಕ್ಕಿಂತಲೂ ದೊಡ್ಡದು ಎಂದು ಹೇಳಿದ್ದಾರೆ.  ಕಾಂಗ್ರೆಸ್ ಈ ವಿಷಯವನ್ನು ದೊಡ್ಡ ಪ್ರಮಾಣದಲ್ಲಿ ಚರ್ಚಿಸಲು ಮುಂದಾಯಿತು. ಸಂಸತ್ತಿನಲ್ಲಿ ಅವಿಶ್ವಾಸಗೊತ್ತುವಳಿ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚರ್ಚೆ ಮಾಡಿದರು. ಆದರೆ, ಕೇಂದ್ರ ಸರ್ಕಾರ ಚರ್ಚೆಗೆ ಅವಕಾಶ ಅನುವು ಮಾಡಿಕೊಡುವುದಿಲ್ಲ ಎನ್ನುವುದರ ಆಚೆಗೂ ವಿರೋಧ ಪಕ್ಷಗಳು ಈ ವಿಷಯವನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುವಂತೆ ನೋಡಿಕೊಳ್ಳಬಹುದಿತ್ತು‌. ಕಡೆಯ ಪಕ್ಷ ಸಾಮಾಜಿಕ‌ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಬೇಕಿತ್ತು. ಆದರೆ ವಿಪಕ್ಷಗಳು ಇದನ್ನು ಚುನಾವಣಾ ವಿಷಯವನ್ನಾಗಿಸಲು ಪರಿಣಾಮಕಾರಿಯಾಗಿ ಪ್ರಯತ್ನಿಸುತ್ತಲೇ ಇಲ್ಲ.

ರಫೇಲ್​ಗೆ ಪ್ರತಿಯಾಗಿ ಎನ್​ಆರ್​ಸಿ ಅಸ್ತ್ರ:
ರಫೇಲ್ ಯುದ್ಧ ವಿಮಾನಗಳ ಖರೀದಿ ವಿಷಯದಲ್ಲಿ ಪ್ರಧಾನಿ ಮೋದಿಯ ಹೆಸರು ತಳುಕು ಹಾಕಿಕೊಂಡಿದೆ ಎಂಬ ವಿಷಯ ಬಿಜೆಪಿಯನ್ನು ಬೆಚ್ಚಿಬೀಳಿಸಿದ್ದು ಸುಳ್ಳಲ್ಲ. ಅದಕ್ಕಾಗಿಯೇ ಬಿಜೆಪಿ ದಿಢೀರನೇ ರಾಷ್ಟ್ರೀಯ ಪೌರತ್ವ ನೊಂದಣಿ ವಿಷಯವನ್ನು ಎಳಕೊಂಡು ಬಂತು. ರಫೇಲ್ ಡೀಲ್ ಮರೆಸುವ ಜೊತೆಗೆ ಹಿಂದೂ ಮತಗಳನ್ನು ಧ್ರುವೀಕರಣ ಮಾಡುವ ತಂತ್ರ ಹೂಡಿತು. ರಾಷ್ಟ್ರೀಯ ಪೌರತ್ವ ನೊಂದಣಿ ವಿಷಯದಲ್ಲಿ ವಿಪಕ್ಷಗಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದ್ದುದರಿಂದ ಈ ವಿಷಯವನ್ನು ಡೈಲ್ಯೂಟ್ ಮಾಡಲು ಪ್ರಯತ್ನಿಸಬಹುದಿತ್ತು. ಆದರೆ ಪಶ್ಚಿಮ‌ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉರಿಯುವ ಬೆಂಕಿಗೆ ತುಪ್ಪ ಸುರಿದರು. ಬಿಜೆಪಿ ದುರುದ್ದೇಶಪೂರಿತವಾಗಿ ರಾಷ್ಟ್ರೀಯ ಪೌರತ್ವ ನೊಂದಣಿ ಬಹಿರಂಗಪಡಿಸಿದೆ ಎಂಬ ಸಂದೇಶ ಕಳುಹಿಸಬೇಕಿತ್ತು. ಅದಕ್ಕೂ ಮುಖ್ಯವಾಗಿ ರಾಷ್ಟ್ರೀಯ ಪೌರತ್ವ ನೊಂದಣಿ ವಿಷಯದ ಮುಂದೆ ರಫೇಲ್ ಡೀಲ್ ಜನಮಾನಸದಲ್ಲಿ ಮರೆತುಹೋಗದಂತೆ ನೋಡಿಕೊಳ್ಳಬೇಕಿತ್ತು. ಆದರೆ ವಿರೋಧ ಪಕ್ಷಗಳ ಯೋಜನಾರಹಿತ ಕಾರ್ಯವೈಖರಿಯಿಂದ ಆಡಳಿತರೂಢ ಪಕ್ಷವೇ ಮೇಲುಗೈ ಸಾಧಿಸಿತು.

ಅವಿಶ್ವಾಸ ಗೊತ್ತುವಳಿ ವೇಳೆಯೂ ವಿಪಕ್ಷಗಳ ವೈಫಲ್ಯ:
ತೆಲುಗು ದೇಶಂ‌ ಪಕ್ಷ ಹೊತ್ತಿಸಿದ ಅವಿಶ್ವಾಸ ಗೊತ್ತುವಳಿಯ ಕಿಡಿಯನ್ನು ವಿಪಕ್ಷಗಳು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು. ಕೇಂದ್ರ ಸರ್ಕಾರಕ್ಕೆ ಅಗತ್ಯ ಬೆಂಬಲ ಇದೆ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಆದರೂ ಕೇಂದ್ರ ಸರ್ಕಾರದ ವೈಫಲ್ಯವನ್ನು ಬಟಾಬಯಲು ಮಾಡಬೇಕು ಅಂತಾ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ಡೀಲ್ ವಿಷಯ ಪ್ರಸ್ತಾಪಿಸುವ ಮೂಲಕ ನಿಜಕ್ಕೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಅದರಲ್ಲೂ ರಫೇಲ್ ಯುದ್ಧ ವಿಮಾನಗಳ‌ ಖರೀದಿ ಅವ್ಯವಹಾರದಲ್ಲಿ ಪ್ರಧಾನಿ ಮೋದಿ ಅವರ ಪಾತ್ರವೂ ಇದೆ ಎಂದು ಹೇಳುವ ಮೂಲಕ ಒಳ್ಳೆಯ ಚರ್ಚೆಯನ್ನೇ ಆರಂಭಿಸಿದ್ದರು. ಟಿಡಿಪಿ ಸಂಸದರು ಆಂಧ್ರ ಪ್ರದೇಶಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂಬ ವಿಷಯ ಪ್ರಸ್ತಾಪಿಸಿದರು. ಆದರೆ ಇಂಥ ಪ್ರಯತ್ನ ಉಳಿದ ವಿಪಕ್ಷಗಳಿಂದ ಆಗಲಿಲ್ಲ.

ಕಡೆಯದಾಗಿ ರಾಜ್ಯಸಭಾ ಉಪಸಭಾಪತಿ ಚುನಾವಣೆಯಲ್ಲಿ ಸ್ವಲ್ಪ ಪ್ರಯತ್ನಪಟ್ಟಿದ್ದರೆ ವಿಪಕ್ಷಗಳ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇತ್ತು. ಆ ಮುಖಾಂತರ ನಾವೆಲ್ಲಾ ಒಟ್ಟಾಗಿದ್ದೇವೆ, ಲೋಕಸಭಾ ಚುನಾವಣೆಯಲ್ಲೂ ಒಗ್ಗಟ್ಟಾಗೇ ಇರ್ತೇವೆ ಎಂಬ ಸಂದೇಶ ಕೊಡಬಹುದಿತ್ತು. ಬಿಜೆಪಿ ಪಾಳೆಯದಲ್ಲಿ ಭಯ ಉಂಟುಮಾಡಬಹುದಿತ್ತು.‌ ಆದರೆ ಸರಿಯಾದ ಪ್ಲಾನ್ ಮಾಡದೆ ಸಿಕ್ಕಿದ್ದ ಅವಕಾಶವನ್ನು ವಿಪಕ್ಷಗಳು ಮಿಸ್ ಮಾಡ್ಕೊಂಡಿವೆ.

ರಾಜ್ಯಸಭೆಯಲ್ಲಂತೂ ಪ್ರತಿಪಕ್ಷಗಳ ಬಲ ಚೆನ್ನಾಗಿದೆ. ಅದರಿಂದಾಗಿಯೇ ವಿಪಕ್ಷಗಳ ಅಭ್ಯರ್ಥಿ ಕೂಡ ಗೆಲ್ಲಬಹುದು ಎಂಬ ವಾತಾವರಣ ನಿರ್ಮಾಣ ಆಗಿತ್ತು. ಎಲ್ಲಾ ವಿಪಕ್ಷಗಳು ಒಂದಾಗಿದ್ದರೆ ಅದು ಸಾಧ್ಯವೂ ಇತ್ತು. ಉದಾಹರಣೆಗೆ ಚುನಾವಣೆಯಿಂದ ದೂರ ಉಳಿದಿದ್ದ ಆಮ್ ಆದ್ಮಿ ಮತ್ತು ಪಿಡಿಪಿಯ ಬೆಂಬಲ ಪಡೆಯಬಹುದಿತ್ತು. ಅದೇ ರೀತಿ ಕಡೆ ಕ್ಷಣದಲ್ಲಿ ಎನ್​ಡಿಎ ಅಭ್ಯರ್ಥಿಯನ್ನು ಬೆಂಬಲಿಸಿ ಬಿಜೆಡಿ ಮತ್ತು ಟಿಆರ್​ಎಸ್ ಪಕ್ಷಗಳ ಬೆಂಬಲವನ್ನೂ ಪಡೆಯಬಹುದಿತ್ತು. ಅದಕ್ಕಾಗಿ ಸೂಕ್ತರಾದವರು ಬಿಜೆಡಿ ಮುಖ್ಯಸ್ಥ ಮತ್ತು ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಟಿಆರ್​ಎಸ್ ನಾಯಕ,  ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಜೊತೆ ಮಾತನಾಡಬೇಕಿತ್ತು. ಆದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕೆಲವರು ಬೆಂಬಲಿಸುವುದಿಲ್ಲ ಎಂದು ಗೊತ್ತಿದ್ದರೂ ಬಿ.ಕೆ. ಹರಿಪ್ರಸಾದ್ ಅವರನ್ನು ಸ್ಪರ್ಧೆ ಮಾಡಿಸಲಾಯಿತು. ಇದರ ಬದಲು ಮೊದಲ ಯೋಜನೆಯಂತೆ ಎನ್​ಸಿಪಿಯ ವಂದನಾ ಚೌಹಾಣ್ ಉಮೇದುವಾರಿಕೆಯನ್ನೇ ಮುಂದುವರೆಸಬಹುದಿತ್ತು. ಆಗ ಎನ್​ಸಿಪಿ ನಾಯಕ ಶರದ್ ಪವಾರ್ ಖುದ್ದಾಗಿ ನವೀನ್ ಪಟ್ನಾಯಕ್ ಮತ್ತು ಚಂದ್ರಶೇಖರ್ ರಾವ್ ಜೊತೆ ಮಾತನಾಡಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುತ್ತಿದ್ದರು. ಅಥವಾ ಬೇರೆ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದರೂ ಹೀಗೆ ಆಗುತ್ತಿತ್ತು. ಎಲ್ಲರೂ ಒಟ್ಟಾಗಿ ರಾಜ್ಯಸಭಾ ಉಪಸಭಾಪತಿ ಸ್ಥಾನ ಗೆದ್ದುಕೊಂಡಿದ್ದರೆ ವಿಪಕ್ಷಗಳೆಲ್ಲವೂ ಒಂದಾಗಿವೆ; ತಾವೆಲ್ಲಾ ಒಂದಾದರೆ ಗೆಲುವು ನಮ್ಮದೇ ಎಂಬ ಸಂದೇಶ ಕಳುಹಿಸಬಹುದಿತ್ತು.

ವಿರೋಧ ಪಕ್ಷಗಳಿಗೆ ಬಿಜೆಪಿಯನ್ನು ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಮಣಿಸಲಿಕ್ಕೆ  ಸಾಲು ಸಾಲು ಅವಕಾಶಗಳು ಸಿಕ್ಕಿದ್ದವು. ಆದರೆ ವಿಪಕ್ಷಗಳು ಸಿಕ್ಕ ಅವಕಾಶಗಳೆಲ್ಲವನ್ನೂ ಕೈಚೆಲ್ಲಿವೆ. ಯುಪಿಎ ಅಥವಾ ತೃತೀಯ ರಂಗ ರಚನೆಯಾಗೋದು ಅಷ್ಟು ಸುಲಭ ಅಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ.
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...