ದಿಲ್ಲಿ ಪೋಸ್ಟ್ | ಕೊರೋನಾ ಕಷ್ಟದ ನಡುವೆಯೂ ಬಿಜೆಪಿ ರಾಜಕೀಯ, ಮತ್ತೆ ಫಾರ್ಮ್​ಗೆ ಬಂದ ಮಮತಾ

ರಾಜಕಾರಣಿಗಳು ರಾಜಕಾರಣಿಗಳೇ... ಕೊರೋನಾ ಇರಲಿ, ಮತ್ತೊಂದಿರಲಿ, ಅವರದು ನಿಲ್ಲದ ರಾಜಕೀಯ. ಈ ನಡುವೆ ವರ್ಷಾಂತ್ಯದಲ್ಲಿ ಬಿಹಾರ, ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೆ ಈಗಾಗಲೇ ಲೆಕ್ಕಾಚಾರ, ತಯಾರಿ ಶುರುವಾಗಿದೆ. ಅವುಗಳ ವಿವರ ಧರಣೀಶ್ ಬೂಕನಕೆರೆ ಅವರ ಈ ವಾರದ 'ದಿಲ್ಲಿಪೋಸ್ಟ್' ಕಾಲಂನಲ್ಲಿ...

ದಿಲ್ಲಿ ಪೋಸ್ಟ್.

ದಿಲ್ಲಿ ಪೋಸ್ಟ್.

  • Share this:
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು, ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಿ 6 ವರ್ಷ ಆಯ್ತು. ಆದರೆ ಕೊರೋನಾ ಕಾರಣಕ್ಕೆ ಬಿಜೆಪಿಗೆ ಸಂಭ್ರಮಿಸಲು ಸಾಧ್ಯವಾಗಿಲ್ಲ‌. ಅಬ್ಬರದಿಂದ, ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡುವ ಬದಲು ತಣ್ಣಗೆ ಬೇರೆಯದೇ ತಂತ್ರ ರೂಪಿಸಿದೆ. ಕೊರೋನಾ ಕಷ್ಟದಿಂದ ದೇಶವನ್ನು ಬಚಾವು ಮಾಡಿದ್ದೇ ಮೋದಿ ಎಂಬ ಅಭಿಯಾನ ಆರಂಭಿಸಲು ನಿರ್ಧರಿಸಿದೆ. ಬಹಿರಂಗ ಪ್ರಚಾರದ ಬದಲಿಗೆ ಆರ್ ಎಸ್ ಎಸ್ ಕಾರ್ಯಕರ್ತರನ್ನು ಮತ್ತು ಬಿಜೆಪಿಯ ಪ್ರಮುಖರನ್ನು ಮನೆಮನೆಗೆ ಕಳುಹಿಸಿ ಮನವೊಲಿಸಲು ಮುಂದಾಗಿದೆ. ವಿಷಯವನ್ನು ಪರೋಕ್ಷವಾಗಿ ಪರಿಣಾಮಕಾರಿಯಾಗಿ ಉಣಬಡಿಸುವ ತಯಾರಿ ನಡೆದಿದೆಯಂತೆ.

ರಾಜ್ಯಗಳ ಹೆಗಲಿಗೆ ಕಟ್ಟಲು ತಯಾರಿ

ಕೊರೋನಾ ಸೋಂಕು ವ್ಯಾಪಿಸಿರುವ ರೀತಿಗೆ ಕೇಂದ್ರ ಸರ್ಕಾರ ಕಕ್ಕಾಬಿಕ್ಕಿಯಾಗಿದೆ. ಸದ್ಯಕ್ಕೆ ಕೊರೋನಾ ನಿಯಂತ್ರಣಕ್ಕೆ ಬರುವುದಿಲ್ಲ ಎಂಬುದು ಖಾತರಿಯಾಗಿದೆ. ಹಾಗಾಗಿ ಈಗ ಎಲ್ಲಾ ನಿರ್ಧಾರಗಳನ್ನು ರಾಜ್ಯ ಸರ್ಕಾರಗಳೇ ತೆಗೆದುಕೊಳ್ಳುವಂತೆ ಮಾಡುತ್ತಿದೆ. ಹಸಿರು, ಕಿತ್ತಳೆ, ಕೆಂಪು ವಲಯಗಳನ್ನು ರೂಪಿಸುವ ಅಧಿಕಾರವನ್ನು ತಮಗೆ ಕೊಡಿ ಎಂದು ಕೆಲ ರಾಜ್ಯಗಳು ಹಿಂದೆಯೇ ಕೇಳಿದ್ದವು. ಆಗ ಕೊಟ್ಟಿರಲಿಲ್ಲ. ಈಗ ಕೊಡಲಾಗಿದೆ. ಅಂತರ ರಾಜ್ಯ ಮತ್ತು ಸ್ಥಳೀಯ ಸಂಚಾರ ಆರಂಭಿಸುವ ವಿಚಾರದಲ್ಲೂ ರಾಜ್ಯಗಳು ಪ್ರಸ್ತಾಪಿಸಿದಾಗ ಚಕಾರ ಎತ್ತದ ಕೇಂದ್ರ ಸರ್ಕಾರ ಈಗ ಅಸ್ತು ಎಂದಿದೆ. ಕೊರೋನಾ ವಿಷಯದ ಜವಾಬ್ದಾರಿಗಳು ಹಂತಹಂತವಾಗಿ ರಾಜ್ಯದ ಹೆಗಲು ಹೇರುವ ಸಾಧ್ಯತೆಗಳು ದಟ್ಟವಾಗಿವೆ ಎನ್ನುತ್ತವೆ ಕೇಂದ್ರ ಸರ್ಕಾರದ ಮೂಲಗಳು.

ಕೈ ಕೈ ಹಿಸುಕಿಕೊಳ್ಳುತ್ತಿರುವ ಕೇಂದ್ರ

ಲಾಕ್ಡೌನ್ ಘೋಷಣೆ ಮಾಡಿ ಕೊರೋನಾವನ್ನು ನಿಯಂತ್ರಿಸಲಾಯಿತೋ ಇಲ್ಲವೋ? ಆದರೆ ವಲಸೆ ಕಾರ್ಮಿಕರ ವಿಷಯವೊಂದನ್ನು ಮಾತ್ರ ಸರಿಯಾಗಿ ನಿಭಾಯಿಸಬೇಕಿತ್ತು ಎಂದು ಈಗ ಅನಿಸತೊಡಗಿದೆಯಂತೆ. ಮೊದಲ ಹಂತದ ಲಾಕ್ಡೌನ್ ಘೋಷಣೆ ಮಾಡಿದಾಗಲೇ ವಲಸೆ ಕಾರ್ಮಿಕರು ಅವರವರ ಊರಿಗೆ ಹೋಗಲು ರೈಲುಗಳನ್ನು ವ್ಯವಸ್ಥೆ ಮಾಡಿಬಿಟ್ಟಿದ್ದರೆ ಸಮಸ್ಯೆ ಇಷ್ಟೊಂದು ಸಂಕೀರ್ಣ ಆಗುತ್ತಿರಲಿಲ್ಲ. ವಲಸೆ ಕಾರ್ಮಿಕರು ಮಣಭಾರ ಹೊತ್ತು ಕಾಲ್ನಡಿಗೆಯಲ್ಲೇ ಊರುಗಳಿಗೆ ಹೋಗುತ್ತಿರುವ ಕರುಣಾಜನಕ‌ ಚಿತ್ರಗಳು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿರಲಿಲ್ಲ.  'ವಿಶ್ವಗುರು  ಆಗಲು ಕನಸು ಕಾಣುತ್ತಿರುವವರ' ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿರಲಿಲ್ಲ. ಮೊದಲೇ ವಲಸಿಗರನ್ನು ಊರುಗಳಿಗೆ ತಲುಪಿಸಿಬಿಟ್ಟಿದ್ದರೆ 'ಅವರಿಲ್ಲದೆ ನಮ್ಮ ಕೆಲಸ ನಡೆಯದು, ವಲಸಿಗರನ್ನು ಊರಿಗೆ ಕಳುಹಿಸಬೇಡಿ' ಎಂದು ಪ್ರಭಾವಿಗಳು ಲಾಭಿ ಮಾಡುವುದಕ್ಕೂ ಆಗುತ್ತಿರಲಿಲ್ಲ ಎಂದು ಕೇಂದ್ರ ಸರ್ಕಾರದ ಮುಂಚೂಣಿ ನಾಯಕರು ಕೈ ಕೈ‌ ಹಿಸುಕಿಕೊಳ್ಳುತ್ತಿದ್ದಾರಂತೆ.

ಸದ್ದಿಲ್ಲದೆ ನಡೆಯುತ್ತಿದೆ ಬಿಹಾರದ ತಯಾರಿ

ರಾಜಕಾರಣಿಗಳು ಬಿಜೆಪಿಯವರನ್ನು ನೋಡಿ ಕಲಿಯುವುದು ಬಹಳ ಇದೆ. ಬಿಜೆಪಿ ಕೊರೋನಾ ಕಷ್ಟದ ನಡುವೆಯೂ ಬಿಹಾರ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿದೆ‌. ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರ ಬಿಜೆಪಿ ಕೋರ್ ಕಮಿಟಿ‌ ಜೊತೆ ಜೆ.ಪಿ. ನಡ್ಡ ಚರ್ಚೆ ನಡೆಸಿದ್ದಾರೆ. ರಾಜ್ಯಗಳ ಕೋರ್ ಕಮಿಟಿ ಮೀಟಿಂಗ್ ನಲ್ಲಿ ಸಾಮಾನ್ಯವಾಗಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಉಪಸ್ಥಿತರಿರುವುದಿಲ್ಲ. ಆದರೆ ಬಿಹಾರ ಬಿಜೆಪಿ ಕೋರ್ ಕಮಿಟಿ ಸಭೆ ವೇಳೆ ಬಿ.ಎಲ್. ಸ‌ಂತೋಷ್ ಕೂಡ ಇದ್ದರು. ನಡ್ಡ, ಸಂತೋಷ್ ಇದ್ದ ಕಾರಣಕ್ಕೆ ಇದು ಬಹಳ ಮಹತ್ವದ ಸಭೆಯಾಗಿತ್ತು.

ಜೆಡಿಯು ಜೊತೆಯಲ್ಲೇ ಚುನಾವಣೆ

ನಿತೀಶ್ ಕುಮಾರ್ ಸರಿಯೋ ತಪ್ಪೋ... ಸದ್ಯಕ್ಕಂತೂ ನಿತೀಶ್ ಅವರೇ ಬಿಹಾರಿ ಬಾಬು. ಬಿಹಾರದಲ್ಲಿ ಸದ್ಯಕ್ಕೆ ಅವರಷ್ಟು ಫೇಸ್ ವ್ಯಾಲ್ಯು ಇರುವ ಇನ್ನೊಬ್ಬ ನಾಯಕ  ಇಲ್ಲ. ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಆರಕ್ಕೇರಿಲ್ಲ. ಲಾಲು ಪ್ರಸಾದ್ ಯಾದವ್ ಮಗ ತೇಜಸ್ವಿ ಯಾದವ್ ಗೆ ಅವಕಾಶ ಇತ್ತು. ಅವರು ಸಮಯವನ್ನು ಸದುಪಯೋಗ ಪಡಿಸಿಕೊಂಡಿಲ್ಲ. ಆದುದರಿಂದ ಜೆಡಿಯು-ಬಿಜೆಪಿ‌ ಜೊತೆಯಾಗಿಯೇ ಚುನಾವಣೆ ಎದುರಿಸಲಿವೆ. ವಿಷಯವನ್ನು ರಾಜ್ಯ ನಾಯಕರಿಗೆ ರವಾನಿಸಿಯೂ ಆಗಿದೆ. ಸದ್ಯಕ್ಕೀಗ ನಿತೀಶ್ ಕುಮಾರ್ ಅವರಿಗೂ ಬಿಜೆಪಿ ಬಿಟ್ಟರೆ ವಿಧಿಯಿಲ್ಲ ಎನ್ನುವಂತಾಗಿದೆ.

ಮತ್ತೆ ಫಾರಂಗೆ ಬಂದ ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಹಠವಾದಿ. ಹಠ ಅವರ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಕೆಲವೊಮ್ಮೆ ಯಾಮಾರಿ ಬಿಡುತ್ತಾರೆ. ಕೊರೋನಾ ವಿಚಾರದಲ್ಲೂ ಹಾಗೆ ಆಯಿತು. ಕೇಂದ್ರ ಸರ್ಕಾರದ ಅಸಹಕಾರ ತೋರಿದ ವಿಷಯದಲ್ಲಿ ಕಾದಾಟಕ್ಕಿಳಿದರು. ಕೇಂದ್ರದ ತಪ್ಪುಗಳನ್ನು ಹೇಳುತ್ತಲೇ ಪರಿಣಾಮಕಾರಿಯಾಗಿ ಕೆಲಸ ಆಗುವಂತೆ ನೋಡಿಕೊಳ್ಳಬೇಕಿತ್ತು.‌ ಆದರೆ ಮಮತಾ ಅನಾವಶ್ಯಕ ಗೊಂದಲಕ್ಕೆ ಸೃಷ್ಟಿಸಿದರು. ಗಾಯದ ಮೇಲೆ ಬರೆ ಎನ್ನುವಂತೆ ಪಶ್ಚಿಮ ಬಂಗಾಳಕ್ಕೆ ಈಗ ಅಂಫಾನ್ ಚಂಡಮಾರುತ ಅಪ್ಪಳಿಸಿದೆ. ಅಂಫಾನ್ ಚಂಡಮಾರುತದಿಂದ ಪಶ್ಚಿಮ ಬಂಗಾಳದ ದಕ್ಷಿಣ ಮತ್ತು ಉತ್ತರ ಕರಾವಳಿ ತತ್ತರಿಸಿದೆ. ಆದರೆ ಅಲ್ಲಿ ಲಕ್ಷಾಂತರ ಜನರನ್ನು ಸ್ಥಳಾಂತರ ಮಾಡಿ, ಅವರಿಗೆ ವಸತಿ-ಊಟದ ವ್ಯವಸ್ಥೆ ಮಾಡಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.

ಕೊರೋನಾ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಮತಾ ಬ್ಯಾನರ್ಜಿ ಕದನಕ್ಕಿಳಿದಿದ್ದಾಗ, 'ದೀದಿ ಈ ಬಾರಿ ಬಿಜೆಪಿ ಟ್ರ್ಯಾಪಿಗೆ ಬಿದ್ದಿದ್ದಾರೆ. ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಕಷ್ಟ ಆಗಬಹುದು' ಎನ್ನುತ್ತಿದ್ದವರು ಈಗ 'ಈಯಮ್ಮನ ಬಗ್ಗೆ ಅಂದಾಜು ಮಾಡೋಕಾಗೊಲ್ಲ' ಎಂದು ಉಲ್ಟಾ ಹೊಡೆಯುತ್ತಿದ್ದಾರೆ.

ಇದನ್ನು ಓದಿ: ದಿಲ್ಲಿ ಪೋಸ್ಟ್ | ಡಿಕೆಶಿ ಸ್ಪೀಡ್ ನೋಡಿ ಸೋನಿಯಾಗೆ ಖುಷಿ, ಕೆ.ಸಿ. ವೇಣುಗೋಪಾಲ್​ಗೆ ಕಸಿವಿಸಿ
First published: