HOME » NEWS » National-international » DELHI POST BJP LEADERS CIRCUS FOR CHIEF MINISTER POST RH

Delhi Post | ಸಿಎಂ ಕುರ್ಚಿಗಾಗಿ ದೇವರ ಮೊರೆ ಹೋಗುತ್ತಿರುವ ನಾಯಕರು, ಖರ್ಗೆಗೆ ಈಗ ದಿಗ್ವಿಜಯ್ ಸಿಂಗ್ ಕಾಟ!

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಲಾಗುತ್ತದೆ ಎಂಬ ಸುದ್ದಿ ಹೊರಬಿದ್ದಿದ್ದೇ ತಡ ಹಲವರು ಹಲವು ರೀತಿಯ ಕನಸು ಕಾಣತೊಡಗಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡದ ನವದೆಹಲಿಯ ಪ್ರತಿನಿಧಿ ಧರಣೀಶ್ ಬೂಕನಕೆರೆ ಈ ವಾರದ ತಮ್ಮ ದಿಲ್ಲಿ ಪೋಸ್ಟ್ ಅಂಕಣದಲ್ಲಿ ಬರೆದಿದ್ದಾರೆ.

news18-kannada
Updated:August 11, 2020, 7:36 AM IST
Delhi Post | ಸಿಎಂ ಕುರ್ಚಿಗಾಗಿ ದೇವರ ಮೊರೆ ಹೋಗುತ್ತಿರುವ ನಾಯಕರು, ಖರ್ಗೆಗೆ ಈಗ ದಿಗ್ವಿಜಯ್ ಸಿಂಗ್ ಕಾಟ!
ದಿಲ್ಲಿ ಪೋಸ್ಟ್
  • Share this:
ಇನ್ನೂ ಮುಖ್ಯಮಂತ್ರಿ ಸ್ಥಾನ ಖಾಲಿಯೇ ಆಗಿಲ್ಲ. ಆಗಲೇ ಕೆಲವರು 'ಮುಖ್ಯಮಂತ್ರಿ ಸ್ಥಾನವನ್ನು ತಮಗೇ ದಯ ಪಾಲಿಸುವಂತೆ' ದೇವರ ಮೊರೆ‌ ಹೋಗುತ್ತಿದ್ದಾರೆ ಎಂಬ ಮಾಹಿತಿಗಳಿವೆ. ಪಾಪ, ಅವರಾದರೂ ಏನು ಮಾಡಬೇಕು? ಅವರಿಗೀಗ  ಯಡಿಯೂರಪ್ಪನನ್ನು ನಂಬಬೇಕೋ, ಸಂತೋಷ್ ಜೊತೆ ಇರಬೇಕೋ ಎಂಬುದೇ ಗೊತ್ತಾಗುತ್ತಿಲ್ಲ. ಆದ್ದರಿಂದಲೇ ಗಪ್ ಚುಪ್ ಆಗಿ‌ ದೇವರ ಮೇಲೆ ಭಾರ ಹಾಕಿ ಕಾಯುತ್ತಾ ಕುಳಿತಿದ್ದಾರೆ.

ಯಡಿಯೂರಪ್ಪನವರನ್ನು ಕಿತ್ತು‌ ಹಾಕಿದರೆ ಲಿಂಗಾಯತರ ಮತದ ಮೇಲೆ ಕಣ್ಣಿಟ್ಟು ಲಿಂಗಾಯತರಿಗೆ ಮುಖ್ಯಮಂತ್ರಿ ಸ್ಥಾನ ಕೊಡುತ್ತಾರೆ ಅಂತಾ ಆ ಸಮುದಾಯದ ನಾಯಕರ  ನಿರೀಕ್ಷೆ. ಆರ್ ಎಸ್ ಎಸ್ ಮತ್ತು ಬಿಜೆಪಿ ಎಂದೂ ಬ್ರಾಹ್ಮಣರನ್ನು ಬಿಟ್ಟುಕೊಡಲ್ಲ, ತಮಗೆ ಈ ಸ್ಥಾನ ಖಚಿತ ಎಂಬುದು ಪ್ರಹ್ಲಾದ್ ‌ಜೋಷಿ ಲೆಕ್ಕಾಚಾರವಂತೆ. ಅದೇ ಹಿನ್ನೆಲೆಯಲ್ಲಿ ಅವರು ಶಾಸಕರ ಜೊತೆ ಸಭೆ ನಡೆಸಿ ಬೆಂಬಲ ಕೇಳಿದ್ದಾರಂತೆ. ಲಿಂಗಾಯತ ಮತಗಳು ಚದುರಿದರೆ ಅದನ್ನು ಸರಿದೂಗಿಸಿಕೊಳ್ಳಲು ಹಿಂದುಳಿದವರಿಗೆ ಅವಕಾಶ ಕೊಡುತ್ತಾರೆ ಎಂದು ಕೆ.ಎಸ್. ಈಶ್ವರಪ್ಪ ಕನಸು ಕಾಣುತ್ತಿದ್ದಾರಂತೆ. ಇದೇ ತರ್ಕದ ಆಧಾರದ ಮೇಲೆ ದಲಿತರಿಗೆ ಅವಕಾಶ ಕೊಡಬಹುದೆಂದು ಗೋವಿಂದ ಕಾರಜೋಳ ಕೂಡ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರಂತೆ.

ಕೈ ಚೆಲ್ಲಿದ ಒಕ್ಕಲಿಗರು

ವರ್ಷದ ಹಿಂದೆ ರಾಜ್ಯ ಬಿಜೆಪಿ ಅಧ್ಯಕ್ಷ ಆಗಬೇಕು ಅಂತಾ ಸಿ.ಟಿ.‌ ರವಿ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಮತ್ತೊಮ್ಮೆ ಉಪಮುಖ್ಯಮಂತ್ರಿ ಆಗಬಹುದೆಂದು ಆರ್. ಅಶೋಕ್ ಕನಸು ಕಂಡಿದ್ದರು.‌ ಅಚ್ಚರಿಯ ರೀತಿಯಲ್ಲಿ ಉಪ ಮುಖ್ಯಮಂತ್ರಿ ಆದ ಡಾ. ಅಶ್ವಥನಾರಾಯಣ್ ಮುಂದೊಂದು ದಿನ ತಾನು ಮುಖ್ಯಮಂತ್ರಿ ಮೆಟಿರೀಯಲ್ ಕೂಡ ಆಗಬಹುದೆಂದು ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೀಗ ಇವರೆಲ್ಲರಿಗೂ 'ಯಾವ ಕಾರಣಕ್ಕೂ ಬಿಜೆಪಿಯಲ್ಲಿ ಒಕ್ಕಲಿಗರನ್ನು ಮುಖ್ಯಮಂತ್ರಿ ಮಾಡುವುದಿಲ್ಲ' ಎಂದು ಮನವರಿಕೆಯಾಗಿದೆಯಂತೆ. ಅದಕ್ಕಾಗಿ ಇವರ ಪೈಕಿ ಯಾರೂ ಕೂಡ ತಲೆ ಕೆಡಿಸಿಕೊಳ್ಳುತ್ತಿಲ್ಲವಂತೆ. ಎಲ್ಲರದೂ ಒಂದೇ ಅಜೆಂಡಾ; ಇರುವ ಹುದ್ದೆಯನ್ನು ಉಳಿಸಿಕೊಳ್ಳುವುದು.

ಇದನ್ನು ಓದಿ: ದಿಲ್ಲಿ ಪೋಸ್ಟ್ | ಹಳ್ಳಿಹಕ್ಕಿ ಗುಟುರಿಗೆ ನಡುಗಿದ ಯಡಿಯೂರಪ್ಪ, ಸಾಹಿತಿಗಳಿಗೂ ರಾಜ್ಯಪಾಲರಾಗುವ ಆಸೆ!

ಖರ್ಗೆಗೆ ಈಗ ದಿಗ್ವಿಜಯ್ ಸಿಂಗ್ ಕಾಟ

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಾಗುತ್ತದೆ ಎಂಬ ಸುದ್ದಿ ದಿಲ್ಲಿ ಸರ್ಕಲ್ ನಲ್ಲಿ ಭಾರೀ ಓಡಾಡುತ್ತಿದೆ. ಏಕೆಂದರೆ ಮುಂದಿನ ವರ್ಷಾರಂಭಕ್ಕೆ ಹಾಲಿ ವಿಪಕ್ಷ ನಾಯಕ ಗುಲಾಂ ನಭಿ ಆಜಾದ್ ಅವರ ಅವಧಿ ಮುಕ್ತಾಯವಾಗಲಿದೆ. ಅವರು ಮತ್ತೆ ಬರಲು ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯೇ ನಡೆದಿಲ್ಲ. ನಡೆಯುವುದಕ್ಕೆ ಮೋದಿ ಮತ್ತು ಅಮಿತ್ ಶಾ ಬಿಡುವುದೂ ಇಲ್ಲ. ಬೇರೆ ಯಾವ ರಾಜ್ಯಗಳಲ್ಲೂ ಇನ್ನೂ ಎರಡು ವರ್ಷ ರಾಜ್ಯಸಭಾ ಚುನಾವಣೆ ಇಲ್ಲ. ಜೊತೆಗೆ ಕಾಂಗ್ರೆಸಿಗೆ ರಾಜ್ಯಸಭೆಯಲ್ಲಿ ಪಕ್ಷವನ್ನು ಮುನ್ನಡೆಸುವ ಸಮರ್ಥ ನಾಯಕ ಇಲ್ಲ. ಡಾ. ಮನಮೋಹನ್ ಸಿಂಗ್, ಅಂಬಿಕಾ ಸೋನಿ‌ ಅವರಿಗೆ ವಯಸ್ಸಾಗಿದೆ. ಕಪಿಲ್ ಸಿಬಲ್ 'ಆಫ್ ಲಾಯರ್ ಆಫ್ ಪೊಲಿಟೀಷಿಯನ್'. ಉಪ ನಾಯಕ ಆನಂದ ಶರ್ಮಾಗೆ ಅಷ್ಟು ವರ್ಚಸ್ಸಿಲ್ಲ. ಹಾಗಾಗಿ ಖರ್ಗೆ ಪ್ರತಿಪಕ್ಷ ನಾಯಕ ಆಗುವುದು ಪಕ್ಕಾ ಎನ್ನಲಾಗುತ್ತಿತ್ತು. ಆದರೆ ಈಗ ದಿಗ್ವಿಜಯ್ ಸಿಂಗ್ ತೀವ್ರ ಪೈಪೋಟಿ ನೀಡುತ್ತಿದ್ದಾರಂತೆ.


ಈಗಾಗಲೇ ದಿಗ್ವಿಜಯ್ ಸಿಂಗ್ ಉನ್ನತ ಮಟ್ಟದಲ್ಲಿ ಲಾಬಿ ನಡೆಸಲು ಆರಂಭಿಸಿದ್ದಾರಂತೆ.‌ ಇದೇ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ರಾಜ್ಯಸಭಾ ಸದಸ್ಯರ ವಿಡಿಯೋ ಕಾನ್ಫರೆನ್ಸ್ ನಲ್ಲಿ ರಾಹುಲ್ ಗಾಂಧಿ ಪಕ್ಷದ ಚುಕ್ಕಾಣಿ ಹಿಡಿಯಬೇಕು ಎಂದು ಬ್ಯಾಟ್ ಮಾಡಿದ್ದಾರಂತೆ. ದಿಗ್ವಿಜಯ್ ಸಿಂಗ್ ಏನೇ ಮಾಡಿದರೂ ಅವರು ವಿವಾದಪ್ರಿಯ. ಮೈಕ್ ಕಂಡೊಡನೆ ಮಾತನಾಡುವ ಚಾಳಿ ಉಳ್ಳವರು. ಮಲ್ಲಿಕಾರ್ಜುನ ಖರ್ಗೆ ಹಾಗಲ್ಲ. ಎಂದೂ ಘನತೆ ಬಿಟ್ಟುಕೊಟ್ಟವರಲ್ಲ. ಪಕ್ಷಕ್ಕೆ ಮುಜುಗರ ಉಂಟುಮಾಡಿದವರಲ್ಲ. ಅವರು ಆಡಿದ್ದಕ್ಕಿಂತ ನುಂಗಿದ್ದೇ ಹೆಚ್ಚು. ಆ ಗುಣ ಕೈಹಿಡಿಯುತ್ತಾ ಎನ್ನುವುದು 2021ರ ಆರಂಭದಲ್ಲೇ ಗೊತ್ತಾಗಲಿದೆ.
Published by: HR Ramesh
First published: August 11, 2020, 7:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories