2019ರ ಚುನಾವಣೆ: ಬಿಜೆಪಿ ವರ್ಸಸ್ ಅದರ್ಸ್ ಬಿಗ್ ಫೈಟ್; ಮೋದಿ-ಶಾಗೆ ಶುರುವಾಗಿದೆ ಟೆನ್ಷನ್


Updated:June 16, 2018, 12:20 PM IST
2019ರ ಚುನಾವಣೆ: ಬಿಜೆಪಿ ವರ್ಸಸ್ ಅದರ್ಸ್ ಬಿಗ್ ಫೈಟ್; ಮೋದಿ-ಶಾಗೆ ಶುರುವಾಗಿದೆ ಟೆನ್ಷನ್

Updated: June 16, 2018, 12:20 PM IST
- ಧರಣೀಶ್ ಬೂಕನಕೆರೆ, ನ್ಯೂಸ್18 ಕನ್ನಡ

ನವದೆಹಲಿ (ಜೂನ್ 16): ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆದರೆ ಈಗಾಗಲೇ ತಯಾರಿ ಶುರುವಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು ಹೇಗಾದ್ರೂ ಮಾಡಿ ಅಧಿಕಾರ ಹಿಡಿಯಬೇಕು ಅಂತಾ ಪಣತೊಟ್ಟಿವೆ. ಹಾಗಾಗಿ ರಾಜಕೀಯ ಚಟುವಟಿಕೆಗಳು ರಾಷ್ಟ್ರ ಮಟ್ಟದಲ್ಲಿ ಗರಿಗೆದರಿವೆ. ಅಧಿಕಾರದಲ್ಲಿರುವ ಪಕ್ಷ ಇಷ್ಟು ದಿನ ಎಷ್ಟು ಕೆಲಸ ಮಾಡಿದೆ? ಎಷ್ಟು ಫಾಸ್ಟಾಗಿ ಮಾಡಿದೆ? ನಿದ್ದೆ ಮಾಡಿದೆಯೋ ಇಲ್ವೋ ಅಂತಾ ನಿಮಗೆ ಗೊತ್ತೇ ಇದೆ. ಜೊತೆಗೆ ವಿರೋಧಪಕ್ಷ ಎಷ್ಟರಮಟ್ಟಿಗೆ ಹೋರಾಟ ಮಾಡಿದೆ? ಪಕ್ಷ ಸಂಘಟನೆ ಮಾಡ್ಕೊಂಡಿದೆ? ಎಂಥ ಭರವಸೆ ಮೂಡಿಸಿದೆ ಅನ್ನೋದು ಗೊತ್ತಿದೆ. ಆದರೆ ಚುನಾವಣೆ ತಯಾರಿ ವಿಷಯದಲ್ಲಿ ಮಾತ್ರ ಎರಡೂ ಪಕ್ಷಗಳು ತುಂಬಾ ಆ್ಯಕ್ಟಿವ್ ಆಗಿವೆ. ಜೊತೆಗೆ ತೃತೀಯ ರಂಗದ ನೇತಾರರು ಕೂಡ ಹೊಸ ಹುರುಪಿನೊಂದಿಗೆ ಕಣಕ್ಕಿಳಿದಿದ್ದಾರೆ.

ದಿಢೀರ್ ಅಂತಾ ಶುರುವಾಯಿತು ತಯಾರಿ:
ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಬಹುದಾದ ಲೋಕಸಭಾ ಚುನಾವಣೆಗೆ ಈಗಲೇ ತಯಾರಿ ಶುರುವಾಗುತ್ತೆ ಎನ್ನುವ ಅಂದಾಜು ಇರಲಿಲ್ಲ. ಆದರೆ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ರಾಜಕೀಯ ಪಕ್ಷಗಳ ಲೆಕ್ಕಾಚಾರವನ್ನೇ ಬುಡಮೇಲು ಮಾಡಿಬಿಡ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಎಲ್ಲಾ ರಾಜಕೀಯ ಪಕ್ಷಗಳಿಗೂ ಒಂದಲ್ಲಾ ಒಂದು ರೀತಿಯ ಪಾಠ ಕಲಿಸಿತು. ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರೆ ರಾಷ್ಟ್ರ ರಾಜಕಾರಣದಲ್ಲೂ ಗದ್ದುಗೆ ಏರಬಹುದೆನ್ನುವ ಕನಸು ಕಾಂಗ್ರೆಸ್ ಪಕ್ಷದಲ್ಲಿ ಮೊಳಕೆಯೊಡೆಯಿತು. ಮೈತ್ರಿ ಮಾಡಿಕೊಂಡರೆ ತಮಗೂ ಒಂದು ಅವಕಾಶ ಸಿಗಬಹುದೆಂದು ತೃತೀಯ ರಂಗದ ನಾಯಕರು ಚುರುಕಾದರು. ಇನ್ನೊಂದೆಡೆ ಮೈಮರೆತರೆ ಕಷ್ಟ ಎನ್ನುವ ಆಲೋಚನೆ ಬಿಜೆಪಿಯಲ್ಲೂ ಬಂತು. ಹಾಗಾಗಿ ದಿಢೀರನೇ ಈಗ ಎಲ್ಲಾ ರಾಜಕೀಯ ಪಕ್ಷಗಳು ಕಾರ್ಯಪ್ರವತ್ತವಾಗಿಬಿಟ್ಟವು.

ಬಿಜೆಪಿಗೆ ಕೈಕೊಟ್ಟ ಉಪಚುನಾವಣೆಗಳು:
ರಾಷ್ಟ್ರ ರಾಜಕಾರಣದಲ್ಲಿ ಲೋಕಸಭಾ ಚುನಾವಣೆ ಬಗ್ಗೆ ಚುರುಕಿನ ಚಟುವಟಿಕೆಗಳು ಆರಂಭವಾಗಲು ಇದು ಒಂದು ಕಾರಣ. ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಿಜೆಪಿ, ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲೂ ಸಾಲು ಸಾಲು ವಿಜಯ ಸಾಧಿಸಿದೆ. ಆದರೆ ಉಪ ಚುನಾವಣೆಗಳಲ್ಲಿ ಮಾತ್ರ ದಯನೀಯವಾಗಿ ಸೋತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ, ಹಿಂದುತ್ವದ ಐಕಾನ್ ಯೋಗಿ ಆದಿತ್ಯನಾಥ್ ಪ್ರತಿನಿಧಿಸಿದ್ದ ಗೋರಖಪುರ ಲೋಕಸಭಾ ಕ್ಷೇತ್ರ ಮತ್ತು ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರತಿನಿಧಿಸಿದ್ದ ಪುಲ್ಪುರ್ ಲೋಕಸಭಾ ಕ್ಷೇತ್ರಗಳಲ್ಲೇ ಬಿಜೆಪಿ ಸೋತುಬಿಟ್ಟಿತು. ಇಷ್ಟೇ ಅಲ್ಲ, ಇನ್ನೂ ಅನೇಕ ಉಪ ಚುನಾವಣೆಗಳಲ್ಲಿ ಸಾಲು ಸಾಲು ಸೋಲು ಬಿಜೆಪಿಯ ಪಾಲಾಯಿತು. ಸಹಜವಾಗಿ ಈ ಉಪ ಚುನಾವಣೆಗಳ ಫಲಿತಾಂಶ ಕೇಂದ್ರದ ನಿದ್ದೆಗೆಡಿಸಿದರೆ ವಿರೋಧ ಪಕ್ಷದ ಪಾಳೆಯದಲ್ಲಿ ಆಶಾವಾದ ಮೂಡಿಸಿತು. ಇತ್ತೀಚೆಗೆ ಬಂದ ಕೈರಾನಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ಆರ್ಜೆಡಿ ಮೈತ್ರಿಕೂಟಕ್ಕೆ ಆದ ಗೆಲುವಿನಿಂದ 'ಒಗ್ಗಟ್ಟಿನಲ್ಲಿ ಬಲವಿದೆ' ಎನ್ನುವ ಸ್ಪಷ್ಟ ಸಂದೇಶ ಹೊರಹೊಮ್ಮಿತು. ಹಾಗಾಗಿ ಈ ಉಪ ಚುನಾವಣೆಗಳು ಕೂಡ ಸಾರ್ವತ್ರಿಕ ಚುನಾವಣೆಗೆ ಅಣಿಯುವ ಮುನ್ಸೂಚನೆ ನೀಡಿದವು.

ಸಮೀಕ್ಷೆಗಳು ಮೂಡಿಸಿದ ಸಂಚಲನ:
Loading...

ಇದಲ್ಲದೆ ಇತ್ತೀಚೆಗೆ ಬಂದ ಸಮೀಕ್ಷೆಗಳು ಕೂಡ ಬೇಗ ಚುನಾವಣೆಯ ತಯಾರಿ ನಡೆಸಿ ಎನ್ನುವ ಸಂದೇಶ ಕೊಟ್ಟವು. ಸಮೀಕ್ಷೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕುಸಿಯುತ್ತಿದೆ. ಮತ್ತೊಮ್ಮೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಕಷ್ಟ. ಬಂದರೂ ಮೈತ್ರಿಪಕ್ಷಗಳ ನೆರವಿಲ್ಲದೆ ಬರಲು ಸಾಧ್ಯವಿಲ್ಲ. ಇನ್ನೊಂದೆಡೆ ದಿನೆ ದಿನೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸ್ವೀಕರಿಸುವವರ ಸಂಖ್ಯೆ ವೃದ್ಧಿಸುತ್ತಿದೆ. ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದವರು ಬಿಜೆಪಿಯಿಂದ ದೂರವಾಗುತ್ತಿದ್ದಾರೆ. ಅವರ ಒಲವು ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳೆಡೆಗೆ ಸಾಗುತ್ತಿದೆ ಎಂಬ ಅಂಶಗಳು ಕೇಳಿಬಂದದ್ದರಿಂದ ಬಿಜೆಪಿ ಆತಂಕಗೊಂಡಿದೆ. ವಿರೋಧಿ ಪಾಳೆಯ ಆಶಾವಾದ ಬೆಳಸಿಕೊಂಡಿದೆ. ಪರಿಣಾಮವಾಗಿ ಬಿಜೆಪಿ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಚುನಾವಣಾ ತಯಾರಿ ಕೆಲಸಕ್ಕೆ ಕೈ ಹಾಕಿದೆ. ವಿರೋಧಿಗಳಿಗೆ ಈಗಿನಿಂದಲೇ ಕೆಲಸ ಮಾಡಿದರೆ ಗೆಲುವು ಧಕ್ಕಬಹುದೆಂಬ ಆಸೆ ಕಾರ್ಯಪ್ರವೃತ್ತರನ್ನಾಗಿಸಿದೆ.

ಕಾಂಗ್ರೆಸ್ ಪಾಲಿಗೆ ಚಿಗುರಿದ ಕನಸು:
ಕರ್ನಾಟಕದಲ್ಲಿ ಪಕ್ಷ ಸೋತರೂ ಜೆಡಿಎಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸುವುದರಲ್ಲಿ ಸಿಕ್ಕ ಯಶಸ್ಸು, ದೇಶಾದ್ಯಂತ ಉಪಚುನಾವಣೆಗಳಲ್ಲಿ ಬಿಜೆಪಿಗಾದ ಹಿನ್ನಡೆ, ಸಮೀಕ್ಷೆಗಳು ಬಿಜೆಪಿ ಪರವಾಗಿಲ್ಲ ಎಂಬ ಪೂರಕ ಅಂಶಗಳು ಕಾಂಗ್ರೆಸ್ ಪಕ್ಷದಲ್ಲಿ ಕನಸನ್ನು ಬಿತ್ತಿವೆ. ಶ್ರಮವಹಿಸಿದರೆ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮಿತ್ರ ಪಕ್ಷಗಳ ನೆರವಿನಿಂದ ಅಧಿಕಾರ ಹಿಡಿಯಬಹುದೆಂಬ ಆಸೆ ಹುಟ್ಟಿಸಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಅತ್ಯಂತ ಚುರುಕಿನಿಂದ ಅಖಾಡಕ್ಕಿಳಿದಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮಪಕ್ಷದ ವಾರ್ ರೂಮಿಗೆ 'ಗೆಟ್ ರೆಡಿ' ಎನ್ನುವ ಸಂದೇಶ ಕೊಟ್ಟುಬಿಟ್ಟಿದ್ದಾರೆ. ಇದಲ್ಲದೆ ಹಿರಿಯ ನಾಯಕರ ಜೊತೆ ಸರಣಿ ಸಭೆ ಮಾಡುತ್ತಿದ್ದಾರೆ. ಯಾವ್ಯಾವ ಪಕ್ಷದ ಜೊತೆಗೆ ಮೈತ್ರಿ ಸಾಧಿಸಲು ಸಾಧ್ಯ ಎಂಬ ಶೋಧಕಾರ್ಯ ಕೂಡ ಶುರುವಾಗಿದೆ. ಮೊದಲ ಹಂತದಲ್ಲಿ ಆಮ್ ಆದ್ಮಿ ಪಕ್ಷದ ನಾಯಕರೊಂದಿಗೆ ಮಾತುಕತೆಗೆ ಕಳುಹಿಸಿದ್ದಾರೆ. ಒಡಿಶಾದಲ್ಲಿ ಅಗತ್ಯಬಿದ್ದರೆ ಬಿಜು ಜನತಾದಳದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಸುಳಿವುಗಳು ಸಿಗುತ್ತಿವೆ.

ರಣಕಹಳೆ ಮೊಳಗಿಸಿದ ಅಮಿತ್ ಶಾ:
ಪರಿಸ್ಥಿತಿ ತಮ್ಮ ಪಕ್ಷಕ್ಕೆ ಪೂರಕವಾಗಿಲ್ಲ ಎಂಬ ಮನವರಿಕೆಯಾಗಿದ್ದೇ ತಡ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಖುದ್ದು ಅಖಾಡಕ್ಕಿಳಿದುಬಿಟ್ಟಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ಅಪಸ್ವರ ಎತ್ತಬಲ್ಲವರನ್ನು ಹುಡುಕಿ ಹುಡುಕಿ ತಮ್ಮ ಸಾಧನೆಯನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರನ್ನು ಗುರುತಿಸಿ, ಅವರ ಮನೆಗಳಿಗೇ ತೆರಳಿ ನರೇಂದ್ರ ಮೋದಿ ಸರ್ಕಾರದ ಸಾಧನೆಯನ್ನು ಬಣ್ಣಿಸಿ ಬರುತ್ತಿದ್ದಾರೆ. ಗಣ್ಯರಿಗೆ ತಿಳಿಸಿ, ಅವರ ಮುಖಾಂತರ ಅಭಿಪ್ರಾಯ ರೂಪಿಸುವುದು ಅಮಿತ್ ಶಾ ತಂತ್ರಗಾರಿಕೆ. ಹಾಗಾಗಿ ನಿವೃತ್ತ ನ್ಯಾಯಮೂರ್ತಿಗಳು, ನ್ಯಾಯವಾದಿಗಳು, ಖ್ಯಾತ ಕ್ರೀಡಾಪಟುಗಳು, ಧಾರ್ಮಿಕ ಮುಖಂಡರು, ಸಾಧು-ಸಂತರನ್ನೆಲ್ಲಾ ಎಡತಾಕುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮುನಿದಿದ್ದ ಮಿತ್ರಪಕ್ಷಗಳ ನಾಯಕರ ಮನೆಮನೆಗೆ ತೆರಳುತ್ತಿದ್ದಾರೆ.

ಚುರುಕಾದ ತೃತೀಯ ರಂಗದ ನಾಯಕರು:
ಬಿಜೆಪಿ ಪಕ್ಷದಲ್ಲಿ ಮೂಡಿರುವ ಆತಂಕ ಮತ್ತು ಕಾಂಗ್ರೆಸ್ ಪಾಳೆಯದಲ್ಲಿ ಕೊರತೆಯಾಗಿರುವ ಆತ್ಮವಿಶ್ವಾಸ ತೃತೀಯ ರಂಗದ ನಾಯಕರ ಕನಸುಗಳಿಗೆ ಬಣ್ಣ ತುಂಬಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಮಾಯಾವತಿ, ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ತೆಲಂಗಾಣದ ಸಿಎಂ ಕೆ.ಸಿ. ಚಂದ್ರಶೇಖರ್ ರಾವ್, ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಈಗ ಚುರುಕಾಗಿದ್ದಾರೆ. ಎಲ್ಲರೂ ಸೇರಿ ಕೂಟ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ.

ಆಟ ಶುರುವಿಟ್ಟುಕೊಂಡ ಶಿವಸೇನಾ:
ಬಿಜೆಪಿಯ ಪ್ರಭಾವಳಿ ಕಡಿಮೆಯಾಗುತ್ತಿದೆ ಎಂಬ ಸಿಹಿ ಸುದ್ದಿ ಸಿಕ್ಕಿದ್ದೇ ತಡ, ಶಿವ ಸೇನಾ 2019ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಪ್ರಕಟಿಸಿದೆ. ಹೇಳಿದ ಸಂದರ್ಭ ಕೂಡ ಬಹಳ ಮುಖ್ಯವಾದುದು. ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಮತ್ತು ಶಿವಸೇನೆಯ ಅಧ್ಯಕ್ಷ ಉದ್ಭವ ಠಾಕ್ರೆ ಭೇಟಿ ಮಾಡಿ ಮೈತ್ರಿಕೂಟದಲ್ಲಿನ ಬಿರುಕುಗಳನ್ನು ಮುಚ್ಚಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ ಮರುಘಳಿಗೆ ಶಿವಸೇನೆಯ ವಕ್ತಾರ ಸಂಜಯ್ ರಾವತ್ ಶಿವಸೇನೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದರು. ಆ ಮುಖಾಂತರ

ಬಿಜೆಪಿಗೆ ಸರಿಯಾದ ಏಟನ್ನೇ ಕೊಟ್ಟಿದೆ ಶಿವಸೇನಾ: 
ಇದೆಲ್ಲದರ ನಡುವೆ ಲೋಕಸಭಾ ಚುನಾವಣೆ ಅವಧಿಗೂ ಮುನ್ನವೇ ಬರಬಹುದು ಎಂಬ ಲೆಕ್ಕಾಚಾರ ಕೂಡ ಇದೆ. ಬಿಜೆಪಿ ಮತ್ತು ಪ್ರಧಾನಿ ಮೋದಿಯ ಜನಪ್ರಿಯತೆ ಇನ್ನೂ ಕುಗ್ಗುತ್ತಾ ಸಾಗಿದರೆ ಸುಧಾರಿಸಿಕೊಳ್ಳುವ ದೃಷ್ಟಿಯಿಂದ ಚುನಾವಣೆಯನ್ನು ಮುಂದೂಡಬಹುದು. ಅಥವಾ ಇನ್ನಷ್ಟು ಹೆಸರುಗೆಡುವ ಮೊದಲು ಚುನಾವಣೆಗೆ ಹೋಗಿ ಬಿಡೋಣ ಎಂದು ಬೇಗನೇ ಚುನಾವಣೆ ಎದುರಿಸುವ ಪ್ರಯತ್ನವೂ ಆಗಬಹುದು. ಒಟ್ಟಿನಲ್ಲಿ ಯಾವುದೇ ಪರಿಸ್ಥಿತಿ ಬಂದರೂ ಸನ್ನದ್ಧವಾಗಿರಬೇಕೆಂದು ಎಲ್ಲಾ ಪಕ್ಷಗಳು ಚುನಾವಣಾ ತಯಾರಿಗಿಳಿದಿವೆ.
First published:June 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...