ಆಧಾರ್ ಮತ್ತು ಆಯುಷ್ಮಾನ್ ಭಾರತ್ ಎಂಬ ಡೆಡ್ಲಿ ಕಾಂಬಿನೇಷನ್

ಆಧಾರ್ ಯೋಜನೆ ಬಗ್ಗೆ ಮೊದಲಿಂದಲೂ ಒಂದಿಲ್ಲೊಂದು ದೂರು ಇದ್ದೇ ಇದೆ. ಆಧಾರ್ ಯೋಜನೆ ಮುಖಾಂತರ ವ್ಯಕ್ತಿಯ ವೈಯಕ್ತಿಕ ಮಾಹಿತಿ ಸಂಗ್ರಹಿಸ್ತಾರೆ. ಅದು ಸೋರಿಕೆಯಾಗುತ್ತೆ ಮತ್ತು ದುರ್ಬಳಕೆ ಆಗುವ ಸಾಧ್ಯತೆ ಕೂಡ ಇದೆ ಎನ್ನೋದು ಬಹಳ ಪ್ರಮುಖವಾದ ದೂರು. ಇನ್ನೊಂದು ದೂರೆಂದರೆ, ಸರ್ಕಾರದ ಪ್ರತಿಯೊಂದು ಯೋಜನೆಗೂ ಆಧಾರ್ ಲಿಂಕ್ ಮಾಡಿಸಲಾಗುತ್ತೆ. ಇದರಿಂದ ಕೆಲವೊಂದು ಯೋಜನೆ ಕೆಲವರಿಗೆ ಕೈತಪ್ಪುತ್ತೆ ಎನ್ನೋದು. ಮುಂದೆ ಆಯುಷ್ಮಾನ್ ಭಾರತ್ ಯೋಜನೆಗೂ ಆಧಾರ್ ಲಿಂಕ್ ಮಾಡ್ಬೇಕಾಗುತ್ತೆ. ಇದರಿಂದ ವ್ಯಕ್ತಿಯ ಆರೋಗ್ಯದ ಮಾಹಿತಿಯೂ ಸೋರಿಕೆಯಾಗುತ್ತೆ ಎನ್ನೋ ಅನುಮಾನ ಶುರುವಾಗಿದೆ.


Updated:August 28, 2018, 6:18 PM IST
ಆಧಾರ್ ಮತ್ತು ಆಯುಷ್ಮಾನ್ ಭಾರತ್ ಎಂಬ ಡೆಡ್ಲಿ ಕಾಂಬಿನೇಷನ್
ಆಧಾರ್ ಯೋಜನೆ ಬಗ್ಗೆ ಮೊದಲಿಂದಲೂ ಒಂದಿಲ್ಲೊಂದು ದೂರು ಇದ್ದೇ ಇದೆ. ಆಧಾರ್ ಯೋಜನೆ ಮುಖಾಂತರ ವ್ಯಕ್ತಿಯ ವೈಯಕ್ತಿಕ ಮಾಹಿತಿ ಸಂಗ್ರಹಿಸ್ತಾರೆ. ಅದು ಸೋರಿಕೆಯಾಗುತ್ತೆ ಮತ್ತು ದುರ್ಬಳಕೆ ಆಗುವ ಸಾಧ್ಯತೆ ಕೂಡ ಇದೆ ಎನ್ನೋದು ಬಹಳ ಪ್ರಮುಖವಾದ ದೂರು. ಇನ್ನೊಂದು ದೂರೆಂದರೆ, ಸರ್ಕಾರದ ಪ್ರತಿಯೊಂದು ಯೋಜನೆಗೂ ಆಧಾರ್ ಲಿಂಕ್ ಮಾಡಿಸಲಾಗುತ್ತೆ. ಇದರಿಂದ ಕೆಲವೊಂದು ಯೋಜನೆ ಕೆಲವರಿಗೆ ಕೈತಪ್ಪುತ್ತೆ ಎನ್ನೋದು. ಮುಂದೆ ಆಯುಷ್ಮಾನ್ ಭಾರತ್ ಯೋಜನೆಗೂ ಆಧಾರ್ ಲಿಂಕ್ ಮಾಡ್ಬೇಕಾಗುತ್ತೆ. ಇದರಿಂದ ವ್ಯಕ್ತಿಯ ಆರೋಗ್ಯದ ಮಾಹಿತಿಯೂ ಸೋರಿಕೆಯಾಗುತ್ತೆ ಎನ್ನೋ ಅನುಮಾನ ಶುರುವಾಗಿದೆ.

Updated: August 28, 2018, 6:18 PM IST
- ಧರಣೀಶ್ ಬೂಕನಕೆರೆ, ನ್ಯೂಸ್18 ಕನ್ನಡ

ಆಧಾರ್ ಯೋಜನೆ ಆರಂಭವಾದಾಗಿನಿಂದಲೂ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತೆ. ಸರ್ಕಾರವೇ ಸಂಗ್ರಹಿಸುವ ಮಾಹಿತಿಗಳು ಕ್ರಮೇಣ ಖಾಸಗಿ ವ್ಯಕ್ತಿಗಳಿಗೆ ಅದರಲ್ಲೂ ಪಟ್ಟಭದ್ರ ಹಿತಾಸಕ್ತಿಗಳ ಕೈ ಸೇರುತ್ತೆ. ಅವರು ಈ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡು ವ್ಯಕ್ತಿಗೆ ತೊಂದರೆ ನೀಡುತ್ತಾರೆ ಎಂಬ ಅನುಮಾನ ಇದ್ದೇ ಇದೆ. ಆಧಾರ್ ಯೋಜನೆಯನ್ನು ಕೆಲ ವಿದೇಶಗಳು ತಿರಸ್ಕರಿಸಿವೆ. ಜೊತೆಗೆ ಭಾರತದ ಆಧಾರ್ ಯೋಜನೆಯಲ್ಲಿ ಭ್ರಷ್ಟಾಚಾರವೂ ನಡೆದಿದೆ ಎಂಬ ಆರೋಪವಿದೆ. ಈ ಮೂರು ವಾದ ಇಟ್ಟುಕೊಂಡು ಬಿಜೆಪಿ ನಾಲ್ಕೂವರೆ ವರ್ಷದವರೆಗೂ ಅಂದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವವರೆಗೂ ಆಧಾರ್ ಯೋಜನೆಯನ್ನು ಉಗ್ರವಾಗಿ ವಿರೋಧಿಸಿತ್ತು. ಅಧಿಕಾರಕ್ಕೆ ಬಂದಮೇಲೆ‌ ಹಿಂದಿನ‌ ಯುಪಿಎ ಸರ್ಕಾರಕ್ಕಿಂತಲೂ‌ ಹೆಚ್ಚು ಮುತುವರ್ಜಿವಹಿಸಿ ಆಧಾರ್ ಯೋಜನೆಯ ಅನುಷ್ಠಾನಕ್ಕಿಳಿಯಿತು. ಈ ಬಗ್ಗೆ ಕಳವಳಗೊಂಡ ಕೆಲವು ವ್ಯಕ್ತಿಗಳು ಮತ್ತು ಸಂಘ-ಸಂಸ್ಥೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದವು. ಈ ಆತಂಕಕಾರಿ ಆಧಾರ್ ಯೋಜನೆ ಕುರಿತು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಸುದೀರ್ಘ ವಿಚಾರಣೆ ನಡೆಸಿ ಕಳೆದ ಮೇ ತಿಂಗಳೇ ತೀರ್ಪನ್ನು ಕಾಯ್ದಿರಿಸಿದೆ. ದೇಶದ ಪ್ರತಿ ಪ್ರಜೆಗೂ ಅನ್ವಯವಾಗುವ, ಪ್ರತಿಪ್ರಜೆಯೂ ಕಾತರದಿಂದ ಕಾದುಕುಳಿತಿರುವ ತೀರ್ಪು ಇನ್ನೂ ಬರವಣಿಗೆಯ ಹಂತದಲ್ಲೇ ಇದೆ.

ಬರೊಬ್ಬರಿ 210 ವೆಬ್ ಸೈಟುಗಳಲ್ಲಿ ಮಾಹಿತಿ ಹರಾಜು:
ಆಧಾರ್ ಯೋಜನೆಯ ಕರಾಳರೂಪವನ್ನು ದೇಶದ ಸರ್ವೋಚ್ಚ ನ್ಯಾಯಾಲಯದ ಮುಂದೆ ಬಿಚ್ಚಿಟ್ಟ ಹಿರಿಯ ನ್ಯಾಯವಾದಿ ಕೆಟಿಎಸ್ ತುಳಸಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ 210 ವಿವಿಧ ವೆಬ್ ಸೈಟ್ ಗಳು ವ್ಯಕ್ತಿಯ ವೈಯಕ್ತಿಕ‌ ಮಾಹಿತಿಯನ್ನು ಹರಾಜು ಹಾಕುತ್ತಿವೆ ಎಂದು ತಿಳಿಸಿದ್ದಾರೆ. ಹೀಗೆ ನಾನಾ ಕಡೆ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳು ಬಹಿರಂಗವಾದರೆ ಸಹಜವಾಗಿಯೇ ದುರುಪಯೋಗ ಆಗುವ ಸಾಧ್ಯತೆ ಇರುತ್ತದೆ. ಅದೇ ಕಾರಣಕ್ಕೆ ಎಲ್ಲರೂ ಈಗ ಸುಪ್ರೀಂ ಕೋರ್ಟಿನ ಕಡೆ ನೋಡುತ್ತಿರುವುದು.

ಆಧಾರ್ ಯೋಜನೆಗೆ ದೇಶದ ಸರ್ವೋಚ್ಚ ನ್ಯಾಯಾಲಯ ನ್ಯಾಯಿಕ ಸಿಂಧುತ್ವ ಕೊಟ್ಟು ತೀರ್ಪು ಪ್ರಕಟಿಸಿಲ್ಲ.‌ ಸಂಸತ್ತು ಕೂಡ ಪೂರ್ಣ ಪ್ರಮಾಣದಲ್ಲಿ ಅನಮೋದನೆ‌ ಕೊಟ್ಟಿಲ್ಲ. ಆದರೂ ಕೇಂದ್ರ ಸರ್ಕಾರ ದೇಶದ ನಾಗರೀಕನ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಬದಲಿಗೆ ತರಾತುರಿಯಲ್ಲಿ ಇನ್ನಷ್ಟು ಯೋಜನೆಗಳನ್ನು ಆಧಾರ್ ಜೊತೆ ಬೆಸೆಯುತ್ತಿದೆ.

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಮತ್ತೊಂದು ಆತಂಕ:
ಮೊನ್ನೆ‌ ಮೊನ್ನೆ ಸ್ವತಂತ್ರ ದಿನಾಚರಣೆ ದಿನ ಪ್ರಧಾನಿ ಮೋದಿ‌ ಕೆಂಪು ಕೋಟೆಯ ಮೇಲೆ ಆಯುಷ್ಮಾನ್ ಯೋಜನೆ ಬಗ್ಗೆ ಭಾಷಣ ಬಿಗಿದಿದ್ದನ್ನು ನೋಡಿದ್ದೀರಿ. ಆದರೆ ಈ ಯೋಜನೆಯ ಹಿಂದೆ ಎಂಥ ಆತಂಕ ಅಡಗಿದೆ‌ ಗೊತ್ತಾ? ಆಯುಷ್ಮಾನ್ ಭಾರತ್ ಯೋಜನೆಯನ್ನೂ ಆಧಾರ್​ಗೆ ಲಿಂಕ್ ಮಾಡಲಾಗುತ್ತದೆ. ನೀತಿ ಆಯೋಗ ಈಗ 'ನ್ಯಾಷನಲ್ ಹೆಲ್ತ್ ಸ್ಟಾಕ್' ಎಂಬ ಹೊಸ ಯೋಜನೆಯನ್ನು ತರುತ್ತಿದೆ. ಅದರ ಕರಡು ಈಗಾಗಲೇ ತಯಾರಾಗಿದೆ. ನ್ಯಾಷನಲ್ ಹೆಲ್ತ್ ಸ್ಟಾಕ್ ಮತ್ತು ಆಯುಷ್ಮಾನ್ ಭಾರತ್ ಯೋಜನೆಯನ್ನು ಲಿಂಕ್ ಮಾಡಲಾಗುತ್ತೆ. ಆಗ ವ್ಯಕ್ತಿಯ ವೈಯಕ್ತಿಕ ವಿವರಗಳ ಜೊತೆ ಆರೋಗ್ಯ ಮಾಹಿತಿಯೂ ಬಟಾಬಯಲಾಗುತ್ತದೆ. ಎಂಥದೇ ಗೌಪ್ಯ ಕಾಯಿಲೆಯಿದ್ದರೂ ಕ್ಷಣಾರ್ಧದಲ್ಲಿ ಹಲವರಿಗೆ ಗೊತ್ತಾಗುತ್ತದೆ. ಅಂದಹಾಗೆ ಆಯುಷ್ಮಾನ್ ಭಾರತ್ ಯೋಜನೆ ಸುಮಾರು ಐವತ್ತು ಕೋಟಿ ಜನರಿಗೆ ಅನ್ವಯವಾಗುತ್ತೆ. ಅಂದರೆ ಐವತ್ತು ಕೋಟಿ ಜನರ ಆರೋಗ್ಯ ಮಾಹಿತಿಗಳು ಜಗಜಾಹೀರಾಗುತ್ತವೆ.
Loading...

ಏನಿದು ನ್ಯಾಷನಲ್ ಹೆಲ್ತ್ ಸ್ಟಾಕ್ ಯೋಜನೆ:
ಈ ನ್ಯಾಷನಲ್ ಹೆಲ್ತ್ ಸ್ಟಾಕ್ ಯೋಜನೆಯಡಿ ರಾಷ್ಟ್ರೀಯ ಗಣಕೀಕೃತ ಆರೋಗ್ಯ ಪ್ರಾಧಿಕಾರ ರಚನೆ ಮಾಡಲಾಗುತ್ತೆ. ನಂತರ ಎಲ್ಲಾ ಆಸ್ಪತ್ರೆಗಳಿಂದ, ವೈದ್ಯರಿಂದ ಮತ್ತು ಅವರು ಬಳಸುವ ಅತ್ಯಾಧುನಿಕವಾದ ಯಂತ್ರೋಪಕರಣಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದೇ ಮಾಹಿತಿಗಳನ್ನು ಆಧರಿಸಿ ಆರೋಗ್ಯ ಮಾಹಿತಿ ಜಾಲ ಸೃಷ್ಟಿಸಲಾಗುತ್ತದೆ. ಕ್ರಮೇಣ ಈ ರೀತಿಯ ಮಾಹಿತಿ ಸಂಗ್ರಹಣೆ ಮತ್ತು ಮಾಹಿತಿಗಳ ವಿಶ್ಲೇಷಣೆ ಖಾಸಗಿಯವರ ಪಾಲಾಗುತ್ತದೆ. ಈಗಾಗಲೇ ಖಾಸಗಿ ವ್ಯಕ್ತಿಗಳ ಕೈಗೆ ಸಿಕ್ಕಿ ಹೈರಾಣವಾಗಿರುವ ಆರೋಗ್ಯ ಕ್ಷೇತ್ರ ಮುಂದೆ ಇನ್ನೂ ಭಯಾನಕ ಸ್ಥಿತಿ ತಲುಪಲಿದೆ. ಅನಾರೋಗ್ಯ ಪೀಡಿತನಾದ ವ್ಯಕ್ತಿ ತನಗೇ ಅರಿವಿಲ್ಲದೆ ಸುಲಿಗೆಗೊಳಗಾಗುವ ಜಾಲಕ್ಕೆ ಸಿಲುಕುತ್ತಾನೆ.

ಒಮ್ಮೆ ಆರೋಗ್ಯ ಮಾಹಿತಿ ಸೋರಿಕೆಯಾದರೆ ಕತೆ ಮುಗಿದಂತೆ!
ಈ ನ್ಯಾಷನಲ್ ಹೆಲ್ತ್ ಸ್ಟಾಕ್ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ ಮುಖಾಂತರ ಕೋಟ್ಯಂತರ ಜನರ ಮತ್ತು ವೈದ್ಯಕೀಯ ಸಂಸ್ಥೆಗಳ ಮಾಹಿತಿ ಕಲೆ ಹಾಕುತ್ತದೆ. ಮತ್ತು ಆ ಮಾಹಿತಿಯನ್ನು ದೊಡ್ಡ ದೊಡ್ಡ ಖಾಸಗಿ ಕಂಪನಿಗಳಿಗೆ ಮತ್ತು ಮುಖ್ಯವಾಗಿ ವಿಮಾ ಕಂಪನಿಗಳಿಗೆ ರವಾನಿಸಲಾಗುತ್ತದೆ. ಈ ಅಮೂಲ್ಯ ಆರೋಗ್ಯ ಮಾಹಿತಿಗಳನ್ನು ಇಟ್ಟುಕೊಂಡು ಈ ದೈತ್ಯ ಕಂಪನಿಗಳು ಮತ್ತು ವಿಮಾ‌ ಕಂಪನಿಗಳು ಜನರನ್ನು ಶೋಷಣೆ ಮಾಡುತ್ತವೆ. ಉದಾಹರಣೆಗೆ ಕೋಟ್ಯಂತರ ಜನರ ಆರೋಗ್ಯದ ಮಾಹಿತಿ ಸಂಗ್ರಹಿಸಿದಾಗ ಯಾವ ರೋಗ ಎಷ್ಟು ಪ್ರಮಾಣದಲ್ಲಿದೆ? ಯಾವ ಔಷಧಕ್ಕೆ ಎಷ್ಟು ಬೇಡಿಕೆ ಇದೆ? ಯಾವ್ಯಾವ ವೈದ್ಯಕೀಯ ಸೇವೆಗಳನ್ನು ವಿಪರೀತ ಜಾಸ್ತಿ ಮಾಡಿದರೂ ಜನ ವಿಧಿಯಿಲ್ಲದೆ ಸ್ವೀಕರಿಸುತ್ತಾರೆ? ಎಂಬ ಅಧ್ಯಯನ ಮಾಡುತ್ತಾರೆ. ಜೊತೆಗೆ ಅನುಷ್ಠಾನವನ್ನೂ ಮಾಡುತ್ತಾರೆ. ವಿಮಾ ಕಂಪನಿಗಳ ಬಳಿ ಈಗಾಗಲೇ ನಿಮ್ಮ ಆರೋಗ್ಯ ಮಾಹಿತಿ ಇರುವುದರಿಂದ ಅವರು ವಿಮಾ ಸೌಲಭ್ಯ ನೀಡಲು ನಿರಾಕರಿಸುತ್ತಾರೆ‌.

ನೀವು ಕೆಲಸ ಮಾಡುವ ಕಂಪನಿಯೂ ಶೋಷಣೆ ಮಾಡುತ್ತೆ!
ನ್ಯಾಷನಲ್ ಹೆಲ್ತ್ ಸ್ಟಾಕ್ ಮೂಲಕ ನೀವು ಕೆಲಸ ಮಾಡುವ ಕಂಪನಿ‌ ತನ್ನ ನೌಕರರ ಆರೋಗ್ಯ ಮಾಹಿತಿಯನ್ನು ಬಲ್ಕ್ ಆಗಿ ಖರೀದಿಸಿರುತ್ತದೆ. ನಿಮಗೆ ಆರೋಗ್ಯದ ಸಮಸ್ಯೆ ಇದೆ, ನೀವು ಕೆಲಸ ಬಿಡಲಾರದ ಪರಿಸ್ಥಿತಿಯಲ್ಲಿ ಇದ್ದೀರಿ ಎಂದು ಗೊತ್ತಾದರೆ ಭಡ್ತಿ ನೀಡುವ ವಿಚಾರದಲ್ಲಿ, ಸಂಬಳ ಹೆಚ್ಚಿಸುವ ವಿಚಾರದಲ್ಲಿ, ರಜೆ ನೀಡುವ ವಿಚಾರದಲ್ಲಿ, ಮುಂಗಡ ಹಣ ನೀಡುವ ವಿಚಾರದಲ್ಲಿ ಶೋಷಣೆ ಮಾಡುತ್ತದೆ. ಜೊತೆಗೆ ಬ್ಯಾಂಕುಗಳು ಕೂಡ ನಿಮ್ಮ ಆರೋಗ್ಯ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಆಗ ಅವು ಕೂಡ ಆರೋಗ್ಯ ಸರಿಯಿಲ್ಲದವರಿಗೆ ಸಾಲ ನೀಡಲು ಹಿಂದೇಟು ಹಾಕುತ್ತವೆ. ಒಟ್ಟಿನಲ್ಲಿ ಆರೋಗ್ಯ ಮಾಹಿತಿ ಸೋರಿಕೆಯಾದ ವ್ಯಕ್ತಿ ಎಲ್ಲೆಡೆ ಶೋಷಣೆಗೆ ಒಳಗಾಗಬೇಕಾಗುತ್ತದೆ.

ಬೆರಳು ಹೊತ್ತಿಸಿ ವಶಕ್ಕೆ ಪಡೆದುಕೊಳ್ಳುವ ಹುನ್ನಾರ:
ನ್ಯಾಷನಲ್ ಹೆಲ್ತ್ ಸ್ಟಾಕ್ ಕರಡನ್ನು ಪ್ರಕಟಿಸಿರುವ ನೀತಿ ಆಯೋಗವು ಇದು ಬಹಳ ಹೆಮ್ಮೆಯ ಆರೋಗ್ಯ ಬಣವೆ ಅಂತಾ ಹೇಳಿಕೊಂಡಿದೆ. ಈ‌ ಹೆಲ್ತ್ ಸ್ಟಾಕ್​ನಲ್ಲಿ ಒಪ್ಪಿಗೆ ಪದರ, ನಗದುರಹಿತ ಪದರ, ಕಾಗದರಹಿತ ಪದರ ಮತ್ತು ಉಪಸ್ಥಿತಿರಹಿತಿ ಪದರ ಎಂಬ ಸಾಮಾನ್ಯರಿಗೆ ಸುಲಭಕ್ಕೆ ಅರ್ಥವಾಗದ ನಾಲ್ಕು ಪದರಗಳನ್ನು ಮಾಡಲಾಗಿದೆ. ಎಲ್ಲದಕ್ಕೂ ಬೆರಳು‌ಹೊತ್ತಿ ಒಪ್ಪಿಗೆ ನೀಡಬೇಕು. ಆಗ ಡಿಜಿಟಲ್ ಮಾದರಿಯಲ್ಲಿ ಎಲ್ಲವೂ ನಗದುರಹಿತವಾಗಿ ನಡೆಯುತ್ತವೆ. ಕಾಗದ-ಪತ್ರಗಳೂ ಇರುವುದಿಲ್ಲ. ಹೀಗೆ ಮಾಡುವುದರಿಂದ ಇನ್ನೂ ಸಂಪೂರ್ಣ ಡಿಜಿಟಲ್ ಜ್ಞಾನದ ಅರಿವಿಲ್ಲದ ಭಾರತದಲ್ಲಿ ಅಮಾಯಕರು, ಅನಕ್ಷರಸ್ಥರು, ಕಡಿಮೆ ಜ್ಞಾನವುಳ್ಳವರು ಮೋಸಹೋಗುವ ಸಂಭವ ಇದ್ದೇ ಇರುತ್ತದೆ. ಯಾವುದೋ ವೈದ್ಯಕೀಯ ಸೇವೆಗೆ ಹೋಗಿ ಒಮ್ಮೆ ಬೆರಳೊತ್ತಿದರೆ ನ್ಯಾಷನಲ್ ಹೆಲ್ತ್ ಸ್ಟಾಕ್ ಯೋಜನೆ ವ್ಯಾಪ್ತಿಗೆ ತಳ್ಳಲ್ಪಡಲಾಗುತ್ತದೆ. ನಂತರ ಅದೇ ಯೋಜನೆ ಮೂಲಕವೇ ಚಿಕಿತ್ಸೆ ಪಡೆಯಬೇಕು. ಅಂದರೆ ನ್ಯಾಷನಲ್ ಹೆಲ್ತ್ ಸ್ಟಾಕ್ ನಿಯಮಾವಳಿಗೇ ಬದ್ಧರಾಗಿರಬೇಕು.

ವಿದೇಶಿಯರ ಕೈಸೇರುತ್ತೆ ದೇಶವಾಸಿಯ ಆರೋಗ್ಯದ ಮಾಹಿತಿ:
ಹೀಗೆ ನಾನಾ ಮಾರ್ಗಗಳಿಂದ ಸಂಗ್ರಹಿಸಲ್ಪಡುವ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳು ಮತ್ತು ಆರೋಗ್ಯದ ಮಾಹಿತಿಗಳು ವಿದೇಶಿ ಮೂಲದ ದೈತ್ಯ ಕಂಪನಿಗಳಿಗೆ ರವಾನೆಯಾಗುತ್ತವೆ. ವೈದ್ಯಕೀಯ ಕ್ಷೇತ್ರ ಮತ್ತು ವಿಮಾ ಕ್ಷೇತ್ರದ ವಿದೇಶಿ ಕಂಪನಿಗಳು ಈ ಮಾಹಿತಿಗಳನ್ನು ಇಟ್ಟುಕೊಂಡು ಮುಂದೊಂದು ದಿನ ಭಾರತದ ಆರೋಗ್ಯವನ್ನೇ ನಿಯಂತ್ರಿಸುವಂತಾಗುತ್ತದೆ. ಈಗಾಗಲೇ ಆರೋಗ್ಯ ಕ್ಷೇತ್ರದಲ್ಲಿ ವಿದೇಶಿ ಕಂಪನಿಗಳ ಉಪಟಳ ಹೆಚ್ಚಾಗುತ್ತಿದೆ. ಈಗ ಅವುಗಳ ಕೈಗೆ ಸಂಪೂರ್ಣ ಆರೋಗ್ಯ ಮಾಹಿತಿಯೂ ಸಿಕ್ಕಿಬಿಟ್ಟರೆ ಕೆಲವೇ ವರ್ಷಗಳಲ್ಲಿ ಭಾರತದ ಆರೋಗ್ಯ ಕ್ಷೇತ್ರದ ಮೇಲೆ ಹಿಡಿತ ಸಾಧಿಸುತ್ತವೆ.

ಬಡ ಭಾರತೀಯನಿಗೆ ಸುಪ್ರೀಂ ಕೋರ್ಟೇ ಆಧಾರ:
ರಕ್ಷಣೆ ಮಾಡಬೇಕಾದ ಸರ್ಕಾರವೇ ಮಾರಕವಾಗುವಂತಹ ಯೋಜನೆ ರೂಪಿಸಿಬಿಟ್ಟಿದೆ. ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗ್ತಿದ್ರೂ ಆಳುವ ಸರ್ಕಾರ ಕೇಳುವ ಸೌಜನ್ಯ ತೋರುತ್ತಿಲ್ಲ. ಮೊದಲು ಆಧಾರ್ ಅನ್ನು ವಿರೋಧ ಮಾಡಿದ್ದ ಪ್ರಧಾನಿ ಮೋದಿಯೇ ಈಗ ಆಧಾರ್ ಪರ ಬಂಡೆಯಂತೆ ನಿಂತಿದ್ದಾರೆ. ಹಾಗಾಗಿ ಈಗ ಸುಪ್ರೀಂ ಕೋರ್ಟ್ ಒಂದೇ ಬಡ ಭಾರತವಾಸಿಯ ಹಿತ ಕಾಪಾಡಬೇಕು. ಆಧಾರ್ ಮೂಲಕ ವೈಯಕ್ತಿಕ ಮಾಹಿತಿ ಮತ್ತು ಆಯುಷ್ಮಾನ್ ಭಾರತ್ ಹಾಗು ನ್ಯಾಷನಲ್ ಹೆಲ್ತ್ ಸ್ಟಾಕ್ ಯೋಜನೆಗಳ ಮೂಲಕ ಆರೋಗ್ಯ ಮಾಹಿತಿ ಸಂಗ್ರಹಿಸಿ ಖಾಸಗಿಯವರ ಕಾಲಡಿಗಿಡುವ ಕೃತ್ಯ ತಪ್ಪಿಸಬೇಕು.

ಶೀಘ್ರವೇ ಹೊರಬೀಳಲಿದೆ ಆಧಾರ್ ಕುರಿತ ಮಹತ್ವದ ತೀರ್ಪು:
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲೇ ಅತ್ಯಂತ ಹೆಚ್ಚು ದಿನ ವಿಚಾರಣೆಯಾದ ಮತ್ತು ಅತ್ಯಂತ ಕುತೂಹಲ-ಕಾತರ ಮೂಡಿಸಿರುವ ಕೇಸುಗಳಲ್ಲಿ ಆಧಾರ್ ಕೇಸ್ ಕೂಡ ಒಂದು. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತ್ರತ್ವದ ಪೀಠದಲ್ಲಿ ವಿಚಾರಣೆಯಾಗಿ ಕಳೆದ ಮೇ ತಿಂಗಳಲ್ಲಿ ತೀರ್ಪನ್ನು ಕಾಯ್ದಿರಿಸಲಾಗಿದೆ. ಇದೇ ಅಕ್ಟೋಬರ್ ಗೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ನಿವೃತ್ತರಾಗುವುದರಿಂದ ಅದಕ್ಕೂ ಮೊದಲು ಈ ಐತಿಹಾಸಿಕ ತೀರ್ಪು ಪ್ರಕಟಿಸುತ್ತಾರೆ ಎಂಬ ಮಾಹಿತಿ ಇದೆ. ಜೊತೆಗೆ ದೇಶದ ನಾಗರೀಕರಲ್ಲಿ ಎಲ್ಲದಕ್ಕೂ ಈ ಆಧಾರ್ ಲಿಂಕ್ ಮಾಡುವ ಅಪಾಯದಿಂದ ಸುಪ್ರೀಂ ಕೋರ್ಟ್ ಮುಕ್ತಿ ನೀಡುತ್ತದೆ ಎಂಬ ನಿರೀಕ್ಷೆಯೂ ಇದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ