ಕೊಳೆಗೇರಿ ಮಕ್ಕಳಿಗಾಗಿ ಸ್ಮಾರ್ಟ್‌ ಕ್ಲಾಸ್‌ರೂಂ ನಿರ್ಮಿಸಿದ ದೆಹಲಿ ಪೊಲೀಸರು; ಗ್ರಂಥಾಲಯವಾಗಿ ಪರಿವರ್ತನೆಯಾದ ಪೊಲೀಸ್ ಠಾಣೆ

ದೆಹಲಿ ಪೊಲೀಸ್ ಸಾರ್ವಜನಿಕ ಗ್ರಂಥಾಲಯವು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದಿಂದ ಬರುವ ಮಕ್ಕಳಿಗೆ ಜಾಗವನ್ನು ಒದಗಿಸುತ್ತದೆ. ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಾಜೇಶ್ ಶರ್ಮಾ ಈ ಸ್ಥಳವನ್ನು ಮಾರ್ಪಡಿಸಿ ಬೀದಿ ಮಕ್ಕಳಿಗೆ ನಿಯತಕಾಲಿಕೆಗಳು, ಪತ್ರಿಕೆಗಳು, ಪುಸ್ತಕಗಳು ಸಿಗುವಂತೆ ಮಾಡಲು ಸಹಾಯ ಮಾಡುತ್ತಿದ್ದಾರೆ.

ದೆಹಲಿ ಪೊಲೀಸ್ ಠಾಣೆಯ ಗ್ರಂಥಾಲಯದಲ್ಲಿ ಪೊಲೀಸ್

ದೆಹಲಿ ಪೊಲೀಸ್ ಠಾಣೆಯ ಗ್ರಂಥಾಲಯದಲ್ಲಿ ಪೊಲೀಸ್

  • Share this:
    ನವದೆಹಲಿ (ಮಾ. 12): ಕೊರೊನಾ ಸಾಂಕ್ರಾಮಿಕದಿಂದ ಕಳೆದ ಒಂದು ವರ್ಷದಲ್ಲಿ ದೇಶ ಸೇರಿ ಇಡೀ ಜಗತ್ತಿನ ವಿಧಾನಗಳೇ ಬದಲಾಗಿದೆ. ಮಕ್ಕಳ ಶಿಕ್ಷಣವಂತೂ ತೀವ್ರ ಮಟ್ಟದಲ್ಲಿ ತೊಂದರೆಯಾಗಿದೆ. ಆನ್‌ಲೈನ್‌ ಕ್ಲಾಸ್‌ಗಳು ನಡೆಯುತ್ತಿದ್ರೂ ಎಲ್ಲರಿಗೂ ಅದರ ಉಪಯೋಗವಾಗುತ್ತಿಲ್ಲ. ಬಡವರ ಮಕ್ಕಳು, ಕೊಳೆಗೇರಿ ನಿವಾಸಿಗಳ ಮಕ್ಕಳಿಗಂತೂ ಶಾಲೆಯೂ ಇಲ್ಲದೆ, ಆನ್‌ಲೈನ್‌ ಕ್ಲಾಸ್‌ನಲ್ಲೂ ಕೇಳಲು ಆಗದೆ ತೊಂದರೆಗೊಳಗಾಗಿದ್ದಾರೆ. ಹಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದಲೇ ಬಿಡಿಸಿದ್ದಾರೆ. ಇದರಿಂದ ಕೆಲ ಮಕ್ಕಳು ಕೆಲಸ ಮಾಡುತ್ತಿದ್ದರೆ, ಇನ್ನು ಕೆಲವರು ಬಾಲ್ಯ ವಿವಾಹ, ಹಾದಿ ತಪ್ಪುವ ಭೀತಿ ಎದುರಾಗಿದೆ. ಆದರೆ, ರಾಷ್ಟ್ರ ರಾಜಧಾನಿಯಲ್ಲಿರುವ ಕೊಳೆಗೇರಿ ಮಕ್ಕಳಿಗೆ ಕಲಿಯಲು ಪೊಲೀಸ್‌ ಠಾಣೆಯೇ ಸಹಾಯ ಮಾಡುತ್ತಿದೆ.

    ದೆಹಲಿ ಪೊಲೀಸರು ಆರ್‌.ಕೆ. ಪುರಂ ಪೊಲೀಸ್‌ ಠಾಣೆಯ ಹತ್ತಿರದ ಪ್ರದೇಶಗಳಲ್ಲಿನ ಕೊಳೆಗೇರಿ ಮಕ್ಕಳಿಗೆ ಅಪರಾಧದ ಹಾದಿಗೆ ದಾರಿ ತಪ್ಪುವ ಬದಲು ಓದಲು ಮತ್ತು ಬರೆಯಲು ಅವಕಾಶ ಕಲ್ಪಿಸುತ್ತಿದ್ದಾರೆ. ಈ ದೆಹಲಿ ಪೊಲೀಸ್ ಸಾರ್ವಜನಿಕ ಗ್ರಂಥಾಲಯವು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದಿಂದ ಬರುವ ಮಕ್ಕಳಿಗೆ ಜಾಗವನ್ನು ಒದಗಿಸುತ್ತದೆ. ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಾಜೇಶ್ ಶರ್ಮಾ ಈ ಸ್ಥಳವನ್ನು ಮಾರ್ಪಡಿಸಿ ಬೀದಿ ಮಕ್ಕಳಿಗೆ ನಿಯತಕಾಲಿಕೆಗಳು, ಪತ್ರಿಕೆಗಳು, ಪುಸ್ತಕಗಳು ಸಿಗುವಂತೆ ಮಾಡಲು ಸಹಾಯ ಮಾಡುತ್ತಿದ್ದಾರೆ.

    “ಶಿಕ್ಷಣ ಮತ್ತು ಸುರಕ್ಷಿತ ಸ್ಥಳದ ಅನುಪಸ್ಥಿತಿಯಲ್ಲಿ, ಮಕ್ಕಳು ಅಪರಾಧಗಳು ಮತ್ತು ಮಾದಕ ದ್ರವ್ಯಗಳಲ್ಲಿ ಭಾಗಿಯಾಗುತ್ತಾರೆ. ಪೊಲೀಸರಾಗಿ, ಯುವಕರು ತಪ್ಪು ಹಾದಿಯಲ್ಲಿ ಇಳಿಯದಂತೆ ನೋಡಿಕೊಳ್ಳುವುದು ನಮ್ಮ ಪ್ರಾಥಮಿಕ ಕೆಲಸ” ಎಂದು ಶರ್ಮಾ ಹೇಳಿದ್ದಾರೆಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

    ಈ ಸ್ಥಳ ಪ್ರಾರಂಭವಾದಾಗಿನಿಂದ, 70 ಕ್ಕೂ ಹೆಚ್ಚು ಮಕ್ಕಳು ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಗ್ರಂಥಾಲಯವು ಸ್ಮಾರ್ಟ್ ಕ್ಲಾಸ್‌ ರೂಂ, ಕಂಪ್ಯೂಟರ್‌ಗಳು ಮತ್ತು ಇಂಟರ್ನೆಟ್ ಸಂಪರ್ಕವನ್ನು ಸಹ ಹೊಂದಿದೆ.

    ಇದನ್ನೂ ಓದಿ: Crime News: ಇನ್ಷುರೆನ್ಸ್​ ಹಣಕ್ಕಾಗಿ ಹೆಂಡತಿ, ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ಆರೋಪಿಗೆ 212 ವರ್ಷ ಜೈಲು ಶಿಕ್ಷೆ!

    “ಸುಮಾರು ಒಂದು ವರ್ಷದಿಂದ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ವಿದ್ಯಾರ್ಥಿಗಳು, ವಿಶೇಷವಾಗಿ ಹತ್ತಿರದ ಕೊಳೆಗೇರಿಗಳಲ್ಲಿ ವಾಸಿಸುವವರು ಅಧ್ಯಯನ ಮಾಡಲು ವೈಯಕ್ತಿಕ ಮತ್ತು ಶಾಂತಿಯುತ ಸ್ಥಳವನ್ನು ಹೊಂದಿರದ ಕಾರಣ ಅಧ್ಯಯನಗಳತ್ತ ಗಮನ ಹರಿಸಲು ಹೆಣಗಾಡುತ್ತಿದ್ದಾರೆ. ಕಾದಂಬರಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳವರೆಗೆ ಸಾವಿರಾರು ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯವನ್ನು ಸ್ಥಾಪಿಸುವುದು ನಮ್ಮ ಉದ್ದೇಶವಾಗಿತ್ತು ” ಎಂದು ರಾಜೇಶ್ ಶರ್ಮಾ ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೌನ್ಸೆಲಿಂಗ್ ಮತ್ತು ಉಚಿತ ತರಬೇತಿಯನ್ನು ಒದಗಿಸುವ ಎನ್‌ಜಿಒ ಜೊತೆ ಗ್ರಂಥಾಲಯವು ಸಹಭಾಗಿತ್ವವನ್ನು ಹೊಂದಿದೆ.

    ಈ ಗ್ರಂಥಾಲಯವು ಸುಮಾರು 2,300 ಪುಸ್ತಕಗಳನ್ನು ಹೊಂದಿದೆ. ಈ ಪೈಕಿ 1,900 ಕ್ಕೂ ಹೆಚ್ಚು ನಿಯತಕಾಲಿಕೆಗಳು ಮತ್ತು 15 ಪತ್ರಿಕೆಗಳನ್ನು ಹೊಂದಿದೆ. ಇದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ. ಈ ಸ್ಥಳವು ಒಂದು ಸಮಯದಲ್ಲಿ ಸುಮಾರು 100 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತದೆ.

    ಫೆಬ್ರವರಿ 28 ರಂದು ಗೋವಾದ ಏಷ್ಯಾ ಪೆಸಿಫಿಕ್ ಚೇಂಬರ್ ಆಫ್ ಕಾಮರ್ಸ್‌ನಿಂದ ನವೀನ ಶಿಕ್ಷಣಕ್ಕಾಗಿ ಗ್ರಂಥಾಲಯವು ಮೆಚ್ಚುಗೆಯ ಪ್ರಮಾಣಪತ್ರವನ್ನು ಪಡೆದಿದೆ ಎಂದು ದಿ ಪ್ರಿಂಟ್‌ ವರದಿ ಮಾಡಿದೆ. ಆನ್‌ಲೈನ್ ತರಗತಿಗಳಿಗೆ ಅಟೆಂಡ್‌ ಆಗಲು ವಿವಿಧ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

    ಜಾಮಿಯಾ ನಗರ ಪೊಲೀಸ್‌ ಠಾಣೆಯಲ್ಲೂ ಇದೇ ರೀತಿಯ ಗ್ರಂಥಾಲಯ ಮಾಡಲಾಗಿದ್ದು, ಇದರ ನಂತರ ದೆಹಲಿ ಪೊಲೀಸರು ತೆರೆಯುವ ಎರಡನೇ ಗ್ರಂಥಾಲಯ, ಆರ್‌,ಕೆ. ಪುರಂನ ಈ ಲೈಬ್ರರಿ ಎಂದು ಹೇಳಲಾಗಿದೆ.
    Published by:Sushma Chakre
    First published: