ಬೆಂಗಳೂರು (Bangalore) ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ‘ನಮ್ಮ ಮೆಟ್ರೋ’ ಪಿಲ್ಲರ್ (Metro Pillar) ಕೆಳಗೆ ಹೋಗುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಏಕಾಏಕಿ ಬಿದ್ದು ಬೈಕ್ (Bike) ಮೇಲೆ ಕುಳಿತಿದ್ದ ತಾಯಿ (Mother) ಮತ್ತು ಆಕೆಯ ಎರಡೂವರೆ ವರ್ಷದ ಮಗುವಿನ ಮೇಲೆ ಬಿದ್ದು ಅಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆಯೊಂದು ಮಂಗಳವಾರ ನಡೆದಿದೆ. ಈ ದುರ್ಘಟನೆಯು (Accident) ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಕೈಗೊಳ್ಳುತ್ತಿರುವ ಕಾಮಗಾರಿಯ ಗುಣಮಟ್ಟದ ಮೇಲೆ ಒಂದು ದೊಡ್ಡ ಪ್ರಶ್ನೆಯನ್ನು ಜನರ ಮನಸ್ಸಿನಲ್ಲಿ ಮೂಡಿಸಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಇನ್ನೂ ನಿರ್ಮಾಣ ಹಂತದಲ್ಲಿಯೇ ಹೀಗೆ ಮೆಟ್ರೋ ಪಿಲ್ಲರ್ಗಳು ಬೀಳುತ್ತಿದ್ದರೆ, ಇನ್ನೂ ಮೆಟ್ರೋ ರೈಲು ಓಡಿದ ನಂತರ ಅದರ ತೂಕವನ್ನು ಈ ಪಿಲ್ಲರ್ ಗಳು ಸಮರ್ಥವಾಗಿ ಹೊರಬಲ್ಲವೇ ಅಂತ ಅನೇಕ ರೀತಿಯ ಸಂದೇಹಗಳು ಈಗ ಬೆಂಗಳೂರು ನಗರದ ಜನರಲ್ಲಿ ಮೂಡುತ್ತಿವೆ ಅಂತ ಹೇಳಬಹುದು.
ಇತ್ತೀಚೆಗೆ, ಮೆಟ್ರೋ ನಿರ್ಮಾಣವನ್ನು ಪೂರ್ಣಗೊಳಿಸುವಲ್ಲಿನ ವಿಳಂಬ ಮತ್ತು ಬೆಂಗಳೂರಿನ ಮೆಟ್ರೋ ಮಾರ್ಗಗಳ ಕಳಪೆ ಸಂಪರ್ಕವು ಅದರ ನಾಗರಿಕರ ಮತ್ತು ಮೂಲಸೌಕರ್ಯ ತಜ್ಞರ ಪರಿಶೀಲನೆಯಲ್ಲಿದೆ.
ಮೆಟ್ರೋ ನಿರ್ಮಾಣವನ್ನು ನಿಗದಿತ ಗಡುವಿನೊಳಗೆ ಏಕೆ ಪೂರ್ಣಗೊಳಿಸಲಾಗಿಲ್ಲ ಮತ್ತು ನಗರದ ಬೃಹತ್ ಸಂಚಾರ ದಟ್ಟಣೆಯ ಸಮಸ್ಯೆಗಳನ್ನು ನಿಜವಾಗಿಯೂ ಪರಿಹರಿಸದ ಮಾರ್ಗಗಳ ಬಗ್ಗೆ ಅನೇಕ ರೀತಿಯ ಪ್ರಶ್ನೆಗಳು ಎದ್ದಿವೆ.
ಈಗ ಬೆಂಗಳೂರು ಮೆಟ್ರೋ ದೆಹಲಿ ಮೆಟ್ರೋದಷ್ಟು ಯಶಸ್ವಿಯಾಗುತ್ತಿಲ್ಲ ಎಂಬ ಹೋಲಿಕೆಗಳನ್ನು ಸಹ ಮಾಡಲಾಗುತ್ತಿದೆ. ಬೆಂಗಳೂರು ಮೆಟ್ರೋ ಅಧಿಕಾರಿಗಳಿಗೆ ಸಾಧ್ಯವಾಗದ ಕೆಲಸವನ್ನು ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್ಸಿ) ಹೇಗೆ ಯಶಸ್ವಿಯಾಗಿ ಮಾಡಿ ಮುಗಿಸಿದೆ ಅಂತ ಜನರಲ್ಲಿ ಪ್ರಶ್ನೆ ಮೂಡುತ್ತಿವೆ ಅಂತ ಹೇಳಬಹುದು.
ದೆಹಲಿ ಮೆಟ್ರೋ ಯಶಸ್ಸಿನ ಗುಟ್ಟೇನು?
ದೆಹಲಿ ಮೆಟ್ರೋವನ್ನು ಉತ್ತಮವಾಗಿ ಯೋಜಿಸಲಾಯಿತು ಮತ್ತು ಅಷ್ಟೇ ಚೆನ್ನಾಗಿ ಆ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು. 'ಮೆಟ್ರೋ ಮ್ಯಾನ್ ಆಫ್ ಇಂಡಿಯಾ' ಇ ಶ್ರೀಧರನ್ ಅವರ ನೇತೃತ್ವದಲ್ಲಿ ನಿರ್ಮಿಸಲಾದ ದೆಹಲಿ ಮೆಟ್ರೋದ ಅಭಿವೃದ್ಧಿ ಕಾರ್ಯಗಳನ್ನು ಅದರ ಡೆಡ್ಲೈನ್ ಗಳಲ್ಲಿಯೇ ಉತ್ತಮವಾಗಿ ಮಾಡಿ ಮುಗಿಸಲಾಯಿತು.
ದೆಹಲಿ ಮೆಟ್ರೋ ಕೆಲಸವನ್ನು ಸಮಯೋಚಿತವಾಗಿ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು, ಆಯಾ ಕ್ಷೇತ್ರಗಳಲ್ಲಿ ತಜ್ಞರನ್ನು ನೇಮಿಸಿಕೊಳ್ಳಲು, ಟೆಂಡರ್ ಗಳನ್ನು ನಿರ್ಧರಿಸಲು ಮತ್ತು ಹಣವನ್ನು ನಿಯಂತ್ರಿಸಲು ಡಿಎಂಆರ್ಸಿಗೆ ಅವಕಾಶ ನೀಡಲಾಯಿತು. ಡಿಎಂಆರ್ಸಿ ಈ ಯೋಜನೆಗೆ ತಾಂತ್ರಿಕ ಸಲಹೆಗಾರರಾಗಿ ಹಾಂಗ್ಕಾಂಗ್ ಎಂಟಿಆರ್ಸಿಯನ್ನು ನೇಮಿಸಿಕೊಂಡಿತ್ತು.
ಬೆಂಗಳೂರು ಮೆಟ್ರೋ ಬಗ್ಗೆ'ಮೆಟ್ರೋ ಮ್ಯಾನ್ ಆಫ್ ಇಂಡಿಯಾ'ಹೇಳಿದ್ದೇನು?
ಬೆಂಗಳೂರು ಮೆಟ್ರೋ ಪೂರ್ಣಗೊಳಿಸುವುದು ಒಂದು ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಅವರು ಏಕೆ ಭಾವಿಸುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಧರನ್, ನಗರದಲ್ಲಿ ಮೆಟ್ರೋ ಜಾಲದ ನಿಧಾನಗತಿಯಲ್ಲಿ ಪೂರ್ಣಗೊಳ್ಳಲು ಬಿಎಂಆರ್ಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರನ್ನು ಆಗಾಗ್ಗೆ ಬದಲಾಯಿಸುತ್ತಿರುವುದೇ ಮುಖ್ಯವಾದ ಕಾರಣ ಎಂದು ಹೇಳಿದರು.
ಮೆಟ್ರೋ ಅಭಿವೃದ್ಧಿಯಂತಹ ಯೋಜನೆಯನ್ನು ಮುನ್ನಡೆಸಲು ಅಗತ್ಯವಾದ ಉನ್ನತ ಮಟ್ಟದ ತಾಂತ್ರಿಕ ಜ್ಞಾನ ಮತ್ತು ಪರಿಣತಿಯನ್ನು ಹೊಂದಿರದ ಅಧಿಕಾರಿಗಳು ಬಿಎಂಆರ್ಸಿಎಲ್ ಮುಖ್ಯಸ್ಥರಾಗಿದ್ದಾರೆ ಎಂದು ಅವರು ಹೇಳಿದರು.
ಉತ್ತಮ ನಾಯಕತ್ವದ ಕೊರತೆಯೇ ಈ ವಿಳಂಬಕ್ಕೆ ಕಾರಣ ಎಂದು ಹೇಳಿದ ಶ್ರೀಧರನ್, ನಮ್ಮ ಮೆಟ್ರೋದಲ್ಲಿ ಅಧಿಕಾರಿಯ ಬದಲು ತಂತ್ರಜ್ಞರೊಬ್ಬರು ನೇತೃತ್ವ ವಹಿಸಬೇಕು ಎಂದು ಹೇಳಿದರು. ಇದಲ್ಲದೆ, ಬೆಂಗಳೂರಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಈ ಯೋಜನೆ ಪೂರ್ಣಗೊಳ್ಳಲು ಇನ್ನಷ್ಟು ವಿಳಂಬವಾಗುತ್ತಿದೆ.
ಮೆಟ್ರೋ ಅಭಿವೃದ್ಧಿ ಕೆಲಸಗಳಲ್ಲಿ ಒಂದು ದಿನ ವಿಳಂಬವಾದರೆ ಬಿಎಂಆರ್ಸಿಎಲ್ ಗೆ ಸುಮಾರು 1.5 ಕೋಟಿ ರೂಪಾಯಿ ನಷ್ಟವಾಗುತ್ತದೆ ಎಂದು ಇವರು ಹೇಳಿದರು.
ಕಳೆದ 14 ವರ್ಷಗಳಲ್ಲಿ ಬಿಎಂಆರ್ಸಿ ಏಳು ವ್ಯವಸ್ಥಾಪಕ ನಿರ್ದೇಶಕರನ್ನು ಕಂಡಿದೆ, ಅದೇ ಡಿಎಂಆರ್ಸಿ 21 ವರ್ಷಗಳಲ್ಲಿ ಕೇವಲ ಇಬ್ಬರು ವ್ಯವಸ್ಥಾಪಕ ನಿರ್ದೇಶಕರನ್ನು ಕಂಡಿದೆ.
ದೆಹಲಿ ಮೆಟ್ರೋದ ಭೌತಿಕ ನಿರ್ಮಾಣ 24ವರ್ಷಗಳಲ್ಲಿ ಮುಗಿದಿತ್ತು
ದೆಹಲಿ ಮೆಟ್ರೋದ ಭೌತಿಕ ನಿರ್ಮಾಣವು 1998 ರಲ್ಲಿ ಪ್ರಾರಂಭವಾಯಿತು ಮತ್ತು 2022 ರ ಹೊತ್ತಿಗೆ, ನಗರದ ಮೆಟ್ರೋ ಜಾಲವು ಒಟ್ಟು 348.12 ಕಿಲೋಮೀಟರ್ ಉದ್ದದ 255 ನಿಲ್ದಾಣಗಳಿಗೆ ಸೇವೆ ಸಲ್ಲಿಸುವ 10 ಮಾರ್ಗಗಳನ್ನು ಪೂರ್ತಿಗೊಳಿಸಲಾಗಿತ್ತು.
ಏತನ್ಮಧ್ಯೆ, ನಮ್ಮ ಮೆಟ್ರೋ ನಿರ್ಮಾಣವು 2007 ರಲ್ಲಿ ಪ್ರಾರಂಭವಾಯಿತು ಮತ್ತು 2022 ರವರೆಗೆ, ಇದು ಕೇವಲ 51 ನಿಲ್ದಾಣಗಳಿಗೆ ಸೇವೆ ಸಲ್ಲಿಸುವ ಎರಡು ಪೂರ್ಣ ಕ್ರಿಯಾತ್ಮಕ ಮೆಟ್ರೋ ಮಾರ್ಗಗಳ ಕೆಲಸಗಳನ್ನು ಪೂರ್ತಿಗೊಳಿಸಿದೆ.
ಉತ್ತಮ ಸಂಪರ್ಕವನ್ನು ನೀಡುತ್ತಿದೆ ದೆಹಲಿ ಮೆಟ್ರೋ
ರಾಷ್ಟ್ರ ರಾಜಧಾನಿಯಲ್ಲಿನ ಮೆಟ್ರೋ ನಗರದಾದ್ಯಂತ ಹರಡಿದೆ ಮತ್ತು ಅಷ್ಟೇ ಅಲ್ಲದೆ ರಾಷ್ಟ್ರ ರಾಜಧಾನಿ ಪ್ರದೇಶದ ಇತರ ಹಲವಾರು ನಗರಗಳೊಂದಿಗೂ ಸಹ ಮೆಟ್ರೋ ಸಂಪರ್ಕವನ್ನು ಒದಗಿಸುತ್ತದೆ, ಇದು ಜನರಿಗೆ ಪ್ರಯಾಣವನ್ನು ಸುಲಭಗೊಳಿಸುತ್ತದೆ.
ದೆಹಲಿ ಮೆಟ್ರೋ ನಿಜವಾಗಿಯೂ ರಸ್ತೆಗಳಲ್ಲಿ ಸಂಚಾರವನ್ನು ಕಡಿಮೆ ಮಾಡಿದೆ ಮತ್ತು ಸಿಟಿ ಬಸ್ ಗಳಲ್ಲಿದ್ದ ಜನ ದಟ್ಟಣೆಯನ್ನು ಕಡಿಮೆ ಮಾಡಿದೆ.
ಅದೇ ಬೆಂಗಳೂರಿನಲ್ಲಿ ಮೆಟ್ರೋ ಮಾರ್ಗಗಳು ನಗರದ ಪ್ರಮುಖ ಪ್ರದೇಶಗಳಿಗೆ ಉತ್ತಮ ಸಂಪರ್ಕವನ್ನು ನೀಡುವುದಿಲ್ಲ ಎಂದು ನಾಗರಿಕರು ಅನೇಕ ಬಾರಿ ದೂರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ