ನವದೆಹಲಿ (ನ.17): ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ನಿಯಂತ್ರಣಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಗರದ ಮಾರುಕಟ್ಟೆಗಳನ್ನು ಮುಚ್ಚಲು ಮುಂದಾಗಿದ್ದಾರೆ. ಇಲ್ಲಿನ ಜನನಿಬಿಡ ಮಾರುಕಟ್ಟೆಗಳು ಕೊರೋನಾ ಹಾಟ್ಸ್ಪಾಟ್ ಆಗಿದ್ದು, ಅವುಗಳನ್ನು ಕೆಲ ದಿನಗಳ ಕಾಲ ಮುಚ್ಚುವ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಮೂರನೇ ಹಂತದ ಕೊರೋನಾ ಸೋಂಕು ಹರಡಿದ್ದು, ಮತ್ತೊಂದು ಲಾಕ್ಡೌನ್ನಡೆಸಿದರೆ ಜನ ಜೀವನ ಸಂಕಷ್ಟಕ್ಕೆ ಒಳಗಾಗಲಿದೆ ಎಂದು ನಿನ್ನೆಯಷ್ಟೆ ಅವರಯ ತಿಳಿಸಿದ್ದರು. ಇದರ ಬೆನ್ನಲ್ಲೇ ಇಂದು ಅವರು ಮಾರುಕಟ್ಟೆ ಮುಚ್ಚುವ ನಿರ್ಣಯಕ್ಕೆ ಮುಂದಾಗಿದ್ದಾರೆ. ಸೋಮವಾರ ದೆಹಲಿಯಲ್ಲಿ 3,797 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 4.89 ಲಕ್ಷ ಗಡಿ ತಲುಪಿದೆ. ರಾಜಧಾನಿಯಲ್ಲಿ ಸೋಂಕಿನ ಪ್ರಕರಣ ಹೆಚ್ಚಿದ್ದರೂ ಜನರು ಸಾಮಾಜಿಕ ಅಂತರ ಕಾಪಾಡದೇ, ಮಾಸ್ಕ್ ಧರಿಸದೇ ಶಾಪಿಂಗ್ ನಡೆಸಿದ್ದರು. ಮಾರುಕಟ್ಟೆಗಳಲ್ಲಿ ಹಬ್ಬದ ಭರಾಟೆಗಳು ಕಂಡು ಬಂದಿದ್ದವು.
Addressing an important Press Conference | LIVE https://t.co/CmMFG42Kqm
— Arvind Kejriwal (@ArvindKejriwal) November 17, 2020
ಅಷ್ಟೇ ಅಲ್ಲದೇ ಸಾರ್ವಜನಿಕ ಸಮಾರಂಭದಲ್ಲಿ ಸೇರುವ ಜನರ ಸಂಖ್ಯೆಯನ್ನು 50ಕ್ಕೆ ಇಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸಾರ್ವಜನಿಕ ಸಮಾರಂಭದಲ್ಲಿ 200 ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈಗ ಸೋಂಕು ನಿಯಂತ್ರಣಕ್ಕೆ ಮುಂದಾಗಿದ್ದು, 50 ಜನರಿಗೆ ಮಾತ್ರ ಅವಕಾಶ ಕಲ್ಪಿಸುವ ಕ್ರಮಕ್ಕೆ ಮುಂದಾಗಲಾಗಿದೆ. ಈ ಕುರಿತು ಅನುಮೋದನೆಗೆ ಲೆಫ್ಟಿನೆಂಟ್ ಗವರ್ನರ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಅವರು ಅನುಮತಿ ನೀಡಲಿದ್ದಾರೆ ಎಂಬ ಭರವಸೆ ಇದೆ.
ಜನರಲ್ಲಿ ತಮಗೆ ಸೋಂಕು ತಗುಲುವುದಿಲ್ಲ ಎಂಬ ನಂಬಿಕೆ ಇದೆ. ಆದರೆ, ಈ ಸೋಂಕು ಯಾರಿಗಾದರೂ, ಯಾವಾಗದರೂ ತಗಲಬಹುದು ಈ ಹಿನ್ನಲೆ ಮುನ್ನೆಚ್ಚರಿಕೆ ಅವಶ್ಯಕ. ಈ ಕಾರಣದಿಂದ ಕೈ ಮುಗಿದು ನಿಮ್ಮಲ್ಲಿ ವಿನಂತಿಸುತ್ತೇನೆ ಸಾಮಾಜಿಕ ಅಂತರ ಸೇರಿದಂತೆ ಸುರಕ್ಷಾ ಕ್ರಮ ಅನುಸರಿಸಿ ಎಂದು ಜನರಲ್ಲಿ ಬೇಡಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ