9 ವರ್ಷಗಳ ಹಿಂದಿನ ಕೊಲೆ ರಹಸ್ಯ; ಗಂಡನ ಮರ್ಡರ್​ ಹಿಂದೆ ಇತ್ತು ಜೊತೆಗಾರನ ಸಂಚು

ಈ ಪ್ರಕರಣ 2017ರಲ್ಲಿ ಸಂಪೂರ್ಣವಾಗಿ ಹೊಸ ತಿರುವು ಪಡೆದುಕೊಂಡಿತ್ತು. ಪೊಲೀಸರು ಪ್ರಮುಖ ಆರೋಪಿ ಕಮಲ್​ ಮತ್ತು ಕ್ಯಾಬ್​ ಚಾಲಕನನ್ನು ಬ್ರೈನ್ ಮ್ಯಾಪಿಂಗ್​ ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿಗಳು ರವಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು.

Latha CG | news18-kannada
Updated:October 8, 2019, 3:15 PM IST
9 ವರ್ಷಗಳ ಹಿಂದಿನ ಕೊಲೆ ರಹಸ್ಯ; ಗಂಡನ ಮರ್ಡರ್​ ಹಿಂದೆ ಇತ್ತು ಜೊತೆಗಾರನ ಸಂಚು
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ(ಅ.08): 9 ವರ್ಷಗಳ ಹಿಂದಿನ ಕೊಲೆ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಕಮಲ್​​ ಮತ್ತು ಕ್ಯಾಬ್​ ಚಾಲಕ ಬಂಧಿತ ಆರೋಪಿಗಳು. ರವಿ ಕೊಲೆಯಾದ ವ್ಯಕ್ತಿ. ಶಕುಂತಲಾ ತನ್ನ ಪ್ರಿಯಕರ ಕಮಲ್​ ಜೊತೆ ಸೇರಿ ತನ್ನ ಗಂಡ ರವಿಯನ್ನೇ ಸಾಯಿಸಿದ್ದಳು. ಜೊತೆಗೆ ಕ್ಯಾಬ್​ ಡ್ರೈವರ್​ ಸಹಾಯ ಪಡೆದುಕೊಂಡು, ಆತನಿಗೆ 70 ಸಾವಿರ ಹಣ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

2011ರಲ್ಲಿ ಮಾರ್ಚ್​ ತಿಂಗಳಲ್ಲಿ 22 ವರ್ಷದ ರವಿ ದೆಹಲಿಯ ಸಮಲ್ಕಾ ಹಳ್ಳಿಯಿಂದ ಕಾಣೆಯಾಗಿದ್ದ. ವ್ಯಕ್ತಿಯ ತಂದೆ ಮತ್ತು ಪೊಲೀಸರು, ಆತನ ಪತ್ನಿ ಹಾಗೂ ಇನ್ನೊಬ್ಬ ವ್ಯಕ್ತಿ ಸೇರಿ ಕೊಲೆ ಮಾಡಿದ್ಧಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಅದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿರಲಿಲ್ಲ.

ಪ್ರಮುಖ ಆರೋಪಿ ಕಮಲ್​ ಶಕುಂತಲಾ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ 2011ರಲ್ಲಿ ರವಿ ಜೊತೆ ಶಕುಂತಲಾ ಮದುವೆಯಾಗಿದ್ದಳು. ಮದುವೆಯ ಬಳಿಕವೂ ಶಕುಂತಲಾ ತನ್ನ ಮಾಜಿ ಪ್ರಿಯಕರ ಕಮಲ್​ ಜೊತೆ ಸಂಪರ್ಕದಲ್ಲಿದ್ದಳು. ವಿವಾಹವಾದ ಇಂದೇ ತಿಂಗಳಲ್ಲಿ ಶಕುಂತಲಾ ಮತ್ತು ಕಮಲ್​ ಇಬ್ಬರೂ ಸೇರಿ ರವಿಯನ್ನು ಕೊಲೆ ಮಾಡಿದ್ದರು.

ಅವರ ಪ್ಲಾನ್​ ಪ್ರಕಾರ, ಶಕುಂತಲಾ ತನ್ನ ತಂಗಿಯನ್ನು ಭೇಟಿ ಮಾಡಲು ಗಂಡನ ಜೊತೆ ಹೋಗಿದ್ದಳು. ಆಗ ಕಮಲ್ ಕೂಡ ಅವರ ಜೊತೆ ಸೇರಿದ್ದ. ರವಿಯನ್ನು ಕೊಲೆ ಮಾಡಲು ಮೊದಲೇ ಪ್ಲಾನ್​ ಮಾಡಿದ್ದ ಅವರು, ಕ್ಯಾಬ್​ ಡ್ರೈವರ್ ಸಹಾಯವನ್ನೂ ಸಹ ಪಡೆದಿದ್ದರು. ಹೀಗಾಗಿ ಆತನಿಗೆ 70 ಸಾವಿರ ಹಣ ನೀಡಿದ್ದರು ಎನ್ನಲಾಗಿದೆ.

2011ರಲ್ಲಿ ರವಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ದೆಹಲಿ ಪೊಲೀಸ್​ ಕ್ರೈಂ ಬ್ರಾಂಚ್​ಗೆ ನೀಡಲಾಗಿತ್ತು. ಈ ಪ್ರಕರಣ 2017ರಲ್ಲಿ ಸಂಪೂರ್ಣವಾಗಿ ಹೊಸ ತಿರುವು ಪಡೆದುಕೊಂಡಿತ್ತು. ಪೊಲೀಸರು ಪ್ರಮುಖ ಆರೋಪಿ ಕಮಲ್​ ಮತ್ತು ಕ್ಯಾಬ್​ ಚಾಲಕನನ್ನು ಬ್ರೈನ್ ಮ್ಯಾಪಿಂಗ್​ ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿಗಳು ರವಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಬಳಿಕ ಕಮಲ್​ ಮತ್ತು ಶಕುಂತಲಾ ಮನೆಯಿಂದ ನಾಪತ್ತೆಯಾಗಿದ್ದರು. ಆದರೆ ಕಮಲ್​ ಅಲ್ವಾರ್​ನಲ್ಲಿ ಸಿಕ್ಕಿಬಿದ್ದಿದ್ದ.

ವಿಚಾರಣೆ ವೇಳೆ ಕಮಲ್, ಉದ್ದೇಶಪೂರ್ವಕವಾಗಿ ರವಿಯನ್ನು ಕೊಲೆ ಮಾಡಿ, ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಗುಂಡಿ ತೋಡಿ ಹೂತಿದ್ದೆವು. ಬಳಿಕ ಶವವನ್ನು ಹೊರತೆಗೆದು, ತುಂಡರಿಸಿ ಅಲ್ವಾರ್​ನಿಂದ ರೇವಾರಿವರೆಗೆ ಬಿಸಾಡಿದ್ದೆವು, ಎಂದು ಒಪ್ಪಿಕೊಂಡಿದ್ದಾನೆ. ರವಿ ದೇಹವನ್ನು ಹೂತಿದ್ದ ಸ್ಥಳದಿಂದ 25 ಮೂಳೆ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈಗ ಗರ್ಭಿಣಿಯಾಗಿರುವ ಶಕುಂತಲಾ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
First published:October 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ