• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Delhi High Court: ಕನ್ಯತ್ವ ಪರೀಕ್ಷೆಯಿಂದ ಮಹಿಳೆಯ ಘನತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ: ದೆಹಲಿ ಹೈಕೋರ್ಟ್‌

Delhi High Court: ಕನ್ಯತ್ವ ಪರೀಕ್ಷೆಯಿಂದ ಮಹಿಳೆಯ ಘನತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ: ದೆಹಲಿ ಹೈಕೋರ್ಟ್‌

ದೆಹಲಿ ಹೈಕೋರ್ಟ್‌

ದೆಹಲಿ ಹೈಕೋರ್ಟ್‌

1992ರಲ್ಲಿ ಕೇರಳದಲ್ಲಿ ನಡೆದ ಕ್ರೈಸ್ತ ಸನ್ಯಾಸಿ ಅಭಯಾ ಹತ್ಯೆ ಪ್ರಕರಣದ ಆರೋಪಿಯೂ ಆಗಿರುವ ಸಿಸ್ಟರ್ ಸೆಫಿ ಅವರು ಕನ್ಯತ್ವ ಪರೀಕ್ಷೆಯನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಸಂಬಂಧ ತೀರ್ಪು ನೀಡಿರುವ ನ್ಯಾಯಾಲಯ, ಮಹಿಳೆಯು ನ್ಯಾಯಾಂಗ ಬಂಧನದಲ್ಲಿದ್ದಾಗ ಕನ್ಯತ್ವ ಪರೀಕ್ಷೆ ನಡೆಸುವುದು ಕೂಡ ಅಸಾಂವಿಧಾನಿಕ ಎಂದು ಹೇಳಿದೆ.

ಮುಂದೆ ಓದಿ ...
  • Share this:

ನವದೆಹಲಿ: ನ್ಯಾಯಾಂಗ ಬಂಧನ ಅಥವಾ ಪೊಲೀಸ್ ಕಸ್ಟಡಿಯಲ್ಲಿ ಇರುವ ಮಹಿಳೆಯ ಕನ್ಯತ್ವ ಪರೀಕ್ಷೆ (Virginity Test) ಮಾಡುವುದು ಸಂವಿಧಾನ ಬಾಹಿರ (Constitutional Offense) ಕೃತ್ಯ. ಇದು ಸಂವಿಧಾನದ 21ನೇ ವಿಧಿಯಡಿ ನೀಡಿರುವ ಘನತೆಯ ಹಕ್ಕಿನ ಉಲ್ಲಂಘನೆ ಎಂದು ದೆಹಲಿ ಹೈಕೋರ್ಟ್‌ (Delhi High Court) ಮಹತ್ವದ ಆದೇಶ ಹೊರಡಿಸಿದೆ.


ತನ್ನ ಮೇಲೆ 2009ರಲ್ಲಿ ನಡೆಸಲಾಗಿದ್ದ ಕನ್ಯತ್ವ ಪರೀಕ್ಷೆಯ ಸಿಂಧುತ್ವವನ್ನು ಪ್ರಶ್ನಿಸಿ ಸಿಸ್ಟರ್‌ ಸೆಫಿ ಎಂಬುವವರು ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಈ ತೀರ್ಪು ನೀಡಿದೆ. 1992ರಲ್ಲಿ ಕೇರಳದಲ್ಲಿ ನಡೆದ ಕ್ರೈಸ್ತ ಸನ್ಯಾಸಿ ಅಭಯಾ ಹತ್ಯೆ ಪ್ರಕರಣದ ಆರೋಪಿಯೂ ಆಗಿರುವ ಸಿಸ್ಟರ್ ಸೆಫಿ ಅವರು ಕನ್ಯತ್ವ ಪರೀಕ್ಷೆಯನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಸಂಬಂಧ ತೀರ್ಪು ನೀಡಿರುವ ನ್ಯಾಯಾಲಯ, ಮಹಿಳೆಯು ನ್ಯಾಯಾಂಗ ಬಂಧನದಲ್ಲಿದ್ದಾಗ ಕನ್ಯತ್ವ ಪರೀಕ್ಷೆ ನಡೆಸುವುದು ಕೂಡ ಅಸಾಂವಿಧಾನಿಕ ಎಂದು ಹೇಳಿದೆ.


ಇದನ್ನೂ ಓದಿ: Crime News: ಯುವತಿಗೆ ಮೆಸೇಜ್‌ ಮಾಡಿದ ಯುವಕನನ್ನು ಮನೆಗೆ ಕರೆಸಿ ಹಲ್ಲೆ! ಕಿಡ್ನಾಪ್ ಮಾಡಿ, ಕೊಲೆ ಮಾಡಿದ್ದಾರೆಂದು ಪೋಷಕರಿಂದ ದೂರು


ಕನ್ಯತ್ವ ಪರೀಕ್ಷೆ ಅಸಂವಿಧಾನಿಕ


ಈ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸ್ವರ್ಣಕಾಂತಾ ಶರ್ಮಾ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಕಸ್ಟಡಿಯಲ್ಲಿರುವ ಮಹಿಳೆಯ ಘನತೆಗೆ ಧಕ್ಕೆಯಾಗಬಾರದು ಎಂಬ ಪರಿಕಲ್ಪನೆಯು ಪೊಲೀಸ್ ವಶದಲ್ಲಿದ್ದಾಗಲೂ ಆಕೆ ಘನತೆಯಿಂದ ಬದುಕುವ ಹಕ್ಕು ಹೊಂದಿರುತ್ತಾಳೆ ಎಂಬುದನ್ನು ಒಳಗೊಂಡಿದೆ. ಪೊಲೀಸ್‌ ಕಸ್ಟಡಿಯಲ್ಲಿದ್ದಾಗ ಮಾತ್ರವಲ್ಲ, ಮಹಿಳೆಯು ನ್ಯಾಯಾಂಗ ಬಂಧನದಲ್ಲಿದ್ದಾಗ ಕನ್ಯತ್ವ ಪರೀಕ್ಷೆ ನಡೆಸುವುದು ಕೂಡ ಅಸಾಂವಿಧಾನಿಕ. ಆಕೆಯ ವಿರುದ್ಧದ ಆರೋಪಗಳ ಸತ್ಯಾಸತ್ಯತೆಯನ್ನು ಅರಿಯುವ ನೆಪದಲ್ಲಿ ಕನ್ಯತ್ವ ಪರೀಕ್ಷೆ ನಡೆಸುವುದು ಮಹಿಳೆಯು ಸಂವಿಧಾನದತ್ತವಾಗಿ ಹೊಂದಿರುವ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.


ಏನಿದು ಅಭಯಾ ಕೊಲೆ ಪ್ರಕರಣ?


1992ರ ಮಾರ್ಚ್‌17ರಂದು ಕೇರಳದ ಕೊಟ್ಟಾಯಂನಲ್ಲಿರುವ ಸೇಂಟ್ ಪಿಯಸ್ ಎಕ್ಸ್ ಕಾನ್ವೆಂಟ್‌ನ ಬಾವಿಯಲ್ಲಿ ಸಿಸ್ಟರ್ ಅಭಯಾ ಅವರ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಆತ್ಮಹತ್ಯೆ ಎಂದು ಶಂಕೆ ವ್ಯಕ್ತಪಡಿಸಿದ್ದರಾದರೂ ಬಳಿಕ ಸ್ಥಳೀಯ ಕ್ರೈಸ್ತ ಸಮುದಾಯದ ಒತ್ತಡದಿಂದಾಗಿ 1993ರಲ್ಲಿ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಬಿಐ ತಂಡ ಸಾವಿನ ಕಾರಣವನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿತ್ತು. ಬಳಿಕ ಮತ್ತೊಂದು ಸಿಬಿಐ ತಂಡವನ್ನು ರಚಿಸಿ ತನಿಖೆ ನಡೆಸಿದಾಗ ಇದೊಂದು ಕೊಲೆ ಎಂದು ಹೇಳಿತಲ್ಲದೇ ಅಪರಾಧಿಗಳನ್ನು ಹಿಡಿಯಲು ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಹೇಳಿತ್ತು. ಆಗ ನ್ಯಾಯಾಲಯ ವರದಿಯನ್ನು ಸ್ವೀಕರಿಸಲು ಒಪ್ಪದೇ ತನಿಖೆಯನ್ನು ಮುಂದುವರಿಸಲು ಸೂಚಿಸಿತ್ತು.


ಇದನ್ನೂ ಓದಿ: Crime News: ಮದುವೆ ಮಾಡುತ್ತಿಲ್ಲ, ಪಿತ್ರಾರ್ಜಿತ ಆಸ್ತಿ ಹಂಚುತ್ತಿಲ್ಲ ಎಂದು ಅಣ್ಣನನ್ನೇ ಕೊಲೆಗೈದಿದ್ದ ತಮ್ಮ ಅರೆಸ್ಟ್​!


ಈ ಮಧ್ಯೆ 1993ರಿಂದ 2008ರ ತನಕ ನಾಲ್ಕು ಬಾರಿ ಸಿಬಿಐ ತಂಡ ಸಾಕ್ಷ್ಯಾಧಾರಗಳ ಕೊರತೆಯಿಂದ ಈ ಪ್ರಕರಣವನ್ನು ಮುಚ್ಚುವಂತೆ ಕೇಳಿ ವರದಿ ಒಪ್ಪಿಸಿತ್ತು. ಆಗ ಹೈಕೋರ್ಟ್‌ ಸಿಬಿಐನ ರಾಜ್ಯ ಘಟಕಕ್ಕೆ ತನಿಖೆಯನ್ನು ಹಸ್ತಾಂತರಿಸಿತ್ತು. ಬಳಿಕ 2008ರಲ್ಲಿ ಸಿಬಿಐನ ಹೊಸ ತಂಡ ಕಾನ್ವೆಂಟ್‌ನಿಂದ ಇಬ್ಬರು ಫಾದರ್ ಮತ್ತು ಸಿಸ್ಟರ್ ಸೆಫಿಯನ್ನು ಬಂಧಿಸಿ ಅಭಯಾ ಹತ್ಯೆಯ ಆರೋಪವನ್ನು ಹೊರಿಸಿತ್ತು.


ಬಳಿಕ 2020ರಲ್ಲಿ ಸಿಸ್ಟರ್‌ ಅಭಯಾ ಅವರ ಮೃತದೇಹ ಪತ್ತೆಯಾದ 28 ವರ್ಷಗಳ ನಂತರ ಕೊಲೆ ಪ್ರಕರಣದ ಆರೋಪಿಗಳಾದ ಫಾದರ್ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿ ಅವರನ್ನು ಅಪರಾಧಿಗಳೆಂದು ಘೋಷಿಸಿ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿತ್ತು.


ಹೈಕೋರ್ಟ್ ಮೆಟ್ಟಿಲೇರಿದ್ದ ಸಿಸ್ಟರ್ ಸೆಫಿ


ಇದಕ್ಕೂ ಮೊದಲು 2009ರಲ್ಲಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದ ಸಿಸ್ಟರ್ ಸೆಫಿ, ನನ್ನ ಒಪ್ಪಿಗೆ ಇಲ್ಲದೆ ಇಚ್ಛೆಗೆ ವಿರುದ್ಧವಾಗಿ ‘ತನಿಖೆಯ ಭಾಗ’ ಎಂದು ಹೇಳಿ ನನ್ನನ್ನು ಸಿಬಿಐ ತಂಡ ಕನ್ಯತ್ವ ಪರೀಕ್ಷೆಗೆ ಒಳಪಡಿಸಿದೆ ಎಂದು ಆರೋಪ ಮಾಡಿದ್ದರು. ತಾನು ಕಾನ್ವೆಂಟ್‌ನ ಇಬ್ಬರು ಫಾದರ್‌ಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೇನೆ ಎಂಬುದನ್ನು ನಿರೂಪಿಸಲು ಸಿಬಿಐ ತಂಡ ಕನ್ಯತ್ವ ಪರೀಕ್ಷೆಗೆ ಒಳಪಡಿಸಿದೆ ಎಂದು ಆರೋಪಿಸಿದ್ದ ಸಿಸ್ಟರ್ ಸೆಫಿ, ಈ ಕೊಲೆ ಪ್ರಕರಣಕ್ಕೂ ತನ್ನ ಕನ್ಯತ್ವಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ನನ್ನನ್ನು ಅವಮಾನಿಸುವ ಉದ್ದೇಶದಿಂದ ಕನ್ಯತ್ವ ಪರೀಕ್ಷೆಯನ್ನು ನಡೆಸಲಾಗಿದೆ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.




ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠ ತನ್ನ 57 ಪುಟಗಳ ತೀರ್ಪಿನಲ್ಲಿ, ‘ಕನ್ಯತ್ವ ಪರೀಕ್ಷೆಗಳು ಆಧುನಿಕವೂ ಅಲ್ಲ ಅಥವಾ ವೈಜ್ಞಾನಿಕವೂ ಅಲ್ಲ. ಬದಲಿಗೆ, ಅವರು ಪುರಾತನ ಮತ್ತು ಅಗತ್ಯವಿಲ್ಲದ್ದು. ಆಧುನಿಕ ವಿಜ್ಞಾನ ಮತ್ತು ವೈದ್ಯಕೀಯ ಕಾನೂನು ಮಹಿಳೆಯರ ಮೇಲೆ ಇಂತಹ ಪರೀಕ್ಷೆಗಳನ್ನು ನಡೆಸುವುದನ್ನು ನಿರಾಕರಿಸುತ್ತದೆ. ಭಾರತೀಯ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ, ಅಪರಾಧಿ, ವಿಚಾರಣೆಗೆ ಒಳಪಟ್ಟವರು ಅಥವಾ ಬಂಧನಕ್ಕೊಳಗಾದವರು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯ ಘನತೆಯ ಹಕ್ಕನ್ನು ಉಲ್ಲಂಘಿಸುವಂತಿಲ್ಲ ಎಂದು ಹೇಳಿದೆ.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು