ನವ ದೆಹಲಿ (ಜೂನ್ 10); ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ವರ್ಷ ಆತ್ಮಹತ್ಯೆ ಶರಣಾಗಿದ್ದರು. ಇವರ ಸಾವು ಇಡೀ ಭಾರತದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ, ಈ ಸಾವಿನ ಹಿನ್ನೆಲೆಯಲ್ಲಿ ಡ್ರಗ್ ಮಾಫಿಯಾ ಕೆಲಸ ಮಾಡಿದೆ ಎಂದು ಹಲವರು ವಾದಿಸಿದ್ದರು. ನಟಿ ಕಂಗನಾ ರಣಾವತ್ ಸಹ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಒಟ್ಟಾರೆ ಕಳೆದ ವರ್ಷ ಬಾಲಿವುಡ್ ಮಟ್ಟಿಗೆ ಎರಡು ಬಣಗಳ ನಿರ್ಮಾಣ ಮತ್ತು ಜಗಳಕ್ಕೆ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಕಾರಣವಾಗಿತ್ತು. ಈ ನಡುವೆ ಸುಶಾಂತ್ ಸಿಂಗ್ ರಜಪೂತ್ ಅವರ ಜೀವನವನ್ನು ಆಧರಿಸಿ "ನ್ಯಾಯ್: ದಿ ಜಸ್ಟೀಸ್" ಚಿತ್ರವೂ ತಯಾರಾಗಿದೆ. ಈ ಚಿತ್ರ ನಾಳೆ (ಶುಕ್ರವಾರ)ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಆದರೆ, ಈ ಚಿತ್ರಕ್ಕೆ ತಡೆ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ವಜಾಗೊಳಿಸಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ತಂದೆ ಕೃಷ್ಣ ಕಿಶೋರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ. ಈ ಚಿತ್ರವನ್ನು "ಕುಟುಂಬದ ಒಪ್ಪಿಗೆಯಿಲ್ಲದೆ ಚಿತ್ರೀಕರಿಸಲಾಗಿದೆ ಮತ್ತು ಮಗನ ಆತ್ಮಹತ್ಯೆಯಲ್ಲಿ ಪಾತ್ರವಿದೆ ಎಂದು ಆರೋಪಿಸಲ್ಪಟ್ಟ ವ್ಯಕ್ತಿಗಳನ್ನು ಚಿತ್ರದಲ್ಲಿ ವಿಶ್ವಾಸಾರ್ಹರು ಎಂದು ತೋರಿಸಲಾಗಿದೆ. ಇದು ಪ್ರಕರಣ ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ" ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ನ್ಯಾಯಮೂರ್ತಿ ಸಂಜೀವ್ ನರುಲಾ ನೇತೃತ್ವದ ನ್ಯಾಯಪೀಠವು ಕೃಷ್ಣ ಕಿಶೋರ್ ಸಿಂಗ್ ಅರ್ಜಿಯನ್ನು ವಜಾಗೊಳಿಸಿದೆ. ಏಪ್ರಿಲ್‌ನಲ್ಲಿ ದೆಹಲಿ ಹೈಕೋರ್ಟ್ ವಿವಿಧ ಚಲನಚಿತ್ರಗಳ ನಿರ್ಮಾಪಕರಿಗೆ, ನಟ ಸುಶಾಂತ್ ರಜಪೂತ್ ಅವರ ತಂದೆಯ ಮನವಿಗೆ ಸ್ಪಂದಿಸಲು ತಿಳಿಸಿತ್ತು. ತಮ್ಮ ಮಗನ ಹೆಸರು ಅಥವಾ ಹೋಲಿಕೆಯನ್ನು ಬೆಳ್ಳಿ ಪರದೆಯಲ್ಲಿ ಬಳಸದಂತೆ ತಡೆಯಲು ಕೃಷ್ಣ ಕಿಶೋರ್ ಸಿಂಗ್ ಪ್ರಯತ್ನಿಸಿದ್ದರು.
"ನ್ಯಾಯ್: ದಿ ಜಸ್ಟೀಸ್" ಚಿತ್ರದ ಜೊತೆಗೆ, ಸುಶಾಂತ್ ರಜಪೂತ್ ಅವರ ಜೀವನದ ಸುತ್ತ ಸುತ್ತುವ, ಸೂಸೈಡ್ ಆರ್ ಮರ್ಡರ್: ಎ ಸ್ಟಾರ್ ವಾಸ್ ಲಾಸ್ಟ್’, ‘ಶಶಾಂಕ್’ ಮತ್ತು ಇನ್ನೂ ಹೆಸರಿಡದ ಹಲವು ಚಿತ್ರಗಳು ತೆರೆಗೆ ಬರಲು ಸಿದ್ಧವಾಗುತ್ತಿವೆ.
ಇದನ್ನೂ ಓದಿ: Kapil Sibal | ಸಾಯುವವರೆಗೆ ಬಿಜೆಪಿ ಪಕ್ಷಕ್ಕೆ ಸೇರಲಾರೆ: ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿಕೆ
"ಚಲನಚಿತ್ರ ನಿರ್ಮಾಪಕರು ಪರಿಸ್ಥಿತಿಯ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಾಟಕಗಳು, ಚಲನಚಿತ್ರಗಳು, ವೆಬ್-ಸರಣಿಗಳು, ಪುಸ್ತಕಗಳು, ಸಂದರ್ಶನಗಳು ಅಥವಾ ಇತರ ವಸ್ತುಗಳನ್ನು ಪ್ರಕಟಿಸಲಾಗುತ್ತಿದೆ. ಇವುಗಳಿಂದ ತಮ್ಮ ಮಗನ ಪ್ರತಿಷ್ಠೆ ಮತ್ತು ಕುಟುಂಬಕ್ಕೆ ಧಕ್ಕೆ ತರುತ್ತದೆ" ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ಇವುಗಳಿಂದ ಪ್ರತಿಷ್ಠೆ ಕಳೆದುಕೊಳ್ಳುವುದು, ಮಾನಸಿಕ ಆಘಾತ ಮತ್ತು ಕಿರುಕುಳ ಉಂಟಾಗುವುದರಿಂದ 2 ಕೋಟಿ ರೂಪಾಯಿ ನಷ್ಟವನ್ನು ಅರ್ಜಿಯಲ್ಲಿ ಕೋರಲಾಗಿದೆ.
ಬಾಲಿವುಡ್‌ನ ಜನಪ್ರಿಯ ನಟ ಸುಶಾಂತ್ ಸಿಂಗ್ ರಜಪೂತ್ (34) ತಮ್ಮ ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಜೂನ್ 14 ರಂದು ಶವವಾಗಿ ಪತ್ತೆಯಾಗಿದ್ದರು. ಇವರ ಸಾವು ಹಲವು ವಿವಾದಗಳಿಗೆ ಕಾರಣವಾಗಿತ್ತು. ಈ ಪ್ರಕರಣ ಬಿಹಾರ ಮತ್ತು ಮುಂಬೈ ಪೊಲೀಸರ ನಡುವೆ ಹಲವು ಆರೋಪ – ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಇದೀಗ ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತನಿಖಾ ಏಜೆನ್ಸಿಗಳು ಪ್ರಕರಣದ ತನಿಖೆಯಲ್ಲಿ ಸಕ್ರಿಯವಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ