ನವದೆಹಲಿ: ಈಗಾಗಲೇ ಕೇಂದ್ರ ಸರ್ಕಾರವು ಅಗ್ನಿಪಥ್ (Agnipath) ಯೋಜನೆಯನ್ನು ಜಾರಿಗೆ ತಂದಿರುವ ವಿಷಯ ಗೊತ್ತೆ ಇದೆ. ಈ ಯೋಜನೆ ಪ್ರಾರಂಭವಾದಾಗಿನಿಂದ ಪರ-ವಿರೋಧದ ಅಲೆಗಳು ಎದ್ದೇ ಇವೆ. ಇನ್ನು ಭಾರತದ ಸೈನ್ಯದಲ್ಲಿ (Indian Army) ಹೊಸ ನೇಮಕಾತಿಗಳನ್ನು (Recruitment) ಮಾಡುವ ನಿಟ್ಟಿನಲ್ಲಿ ಪ್ರಾರಂಭಿಸಲಾಗಿರುವ ಈ ಯೋಜನೆಯನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ದೆಹಲಿ ಉಚ್ಛ ನ್ಯಾಯಾಲಯವು (Delhi high court) ಸೋಮವಾರದಂದು ವಜಾ ಮಾಡಿದೆ.
ಸೋಮವಾರದಂದು ಈ ಬಗ್ಗೆ ಪ್ರಕರಣ ಎತ್ತಿಕೊಂಡ ನ್ಯಾ. ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾ. ಸುಬ್ರಮಣಿಯಮ್ ಪ್ರಸಾದ್ ಅವರಿದ್ದ ದ್ವಿಸದಸ್ಯ ಪೀಠವು ಈ ಯೋಜನೆಗೆ ಅಡ್ಡಿಪಡಿಸುವ ಯಾವುದೇ ಸಕಾರಣಗಳು ಇಲ್ಲದೆ ಇರುವುದರಿಂದ ಈ ಅರ್ಜಿಗಳನ್ನು ವಜಾಗೊಳಿಸಿರುವುದಾಗಿ ಹೇಳಿದರು.
ತನ್ನ ಸ್ಪಷ್ಟನೆಯಲ್ಲಿ ನ್ಯಾಯಾಲಯವು, "ರಾಷ್ಟ್ರೀಯ ಹಿತಾಸಕ್ತಿಯನ್ನು ಪರಿಗಣಿಸಿ ಹಾಗೂ ಸಶಸ್ತ್ರ ಪಡೆಗಳನ್ನು ಸಮರ್ಥರನ್ನಾಗಿರಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಪರಿಚಯಿಸಲಾಗಿದೆ. ಹಾಗಾಗಿ ಇದನ್ನು ತಡೆಯಲು ಯಾವುದೇ ಸಮಂಜಸವಾದ ಕಾರಣಗಳು ಇಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿಗಳ ವಜಾ
ಕಳೆದ ವರ್ಷ ಡಿಸೆಂಬರ್ 15 ರಂದು ಅಗ್ನಿಪಥ್ ಯೋಜನೆ ವಿರೋಧಿಸಿ ಹಲವಾರು ಅರ್ಜಿಗಳು ನ್ಯಾಯಾಲಯದಲ್ಲಿ ದಾಖಲಾಗಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್ ಅಂದು ಇದರ ತೀರ್ಪನ್ನು ಕಾಯ್ದಿರಿಸಿತ್ತು. ಅದರ ಮುಂದಿನ ಭಾಗವಾಗಿ ಇಂದು ನ್ಯಾಯಾಲಯ ಅರ್ಜಿಗಳನ್ನೇ ವಜಾಗೊಳಿಸಿದೆ ಎನ್ನಬಹುದು.
ಬಾಕಿ ಇರುವ ಪ್ರಕರಣಗಳನ್ನು ಕಾಯ್ದಿರಿಸುವಂತೆ ಸೂಚನೆ
ಕಳೆದ ವರ್ಷ ಹಲವು ರಾಜ್ಯಗಳಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ಅರ್ಜಿಗಳನ್ನು ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯವು ಕಳೆದ ಜುಲೈ ತಿಂಗಳಿನಲ್ಲಿ ಕೇರಳ, ಪಂಜಾಬ್, ಹರಿಯಾಣ, ಪಾಟ್ನಾ, ಹಾಗೂ ಉತ್ತರಾಖಂಡದ ಉಚ್ಛ ನ್ಯಾಯಾಲಯಗಳಿಗೆ ತಮ್ಮಲ್ಲಿರುವ ಅಗ್ನಿಪಥ್ ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ದೆಹಲಿ ಉಚ್ಛ ನ್ಯಾಯಾಲಯಕ್ಕೆ ಇಲ್ಲದಿದ್ದರೆ ಈ ಬಗ್ಗೆ ಸ್ಪಷ್ಟ ತೀರ್ಪು ಹೊರಬೀಳುವವರೆಗೆ ತಮ್ಮಲ್ಲೆ ಬಾಕಿ ಇರುವ ಪ್ರಕರಣಗಳಲ್ಲಿ ಕಾಯ್ದಿರಿಸುವಂತೆ ಸೂಚಿಸಿತ್ತು.
ಇದರ ಮುಂದುವರಿದ ಭಾಗವಾಗಿ ಕಳೆದ ಆಗಸ್ಟ್ ನಲ್ಲಿ ದೆಹಲಿ ಹೈಕೋರ್ಟ್ ಮಧ್ಯಂತರ ತೀರ್ಪು ನೀಡುವ ಬದಲು ಈ ಪ್ರಕರಣವನ್ನು ಆಲಿಸುವುದಾಗಿ ಹೇಳಿತ್ತು.
ಆ ಸಂದರ್ಭದಲ್ಲಿ ಅಂದರೆ ಅಕ್ಟೋಬರ್ ನಲ್ಲಿ ಕೇಂದ್ರ ಸರ್ಕಾರವು, ನ್ಯಾಯಾಲಯಕ್ಕೆ, ಭಾರತದ ಸುರಕ್ಷತೆಗೆ ಸಂಬಂಧಿಸಿದಂತೆ ಸೈನ್ಯದಲ್ಲಿ ನೇಮಕಾತಿ ಪ್ರಕ್ರಿಯೆಯು ಕಡ್ಡಾಯವಾದ ಭಾಗವಾಗಿರುವುದಾಗಿ ಮನವರಿಕೆ ಮಾಡಿಸಿತ್ತು.
ಏನಿದು ಅಗ್ನಿಪಥ್ ಯೋಜನೆ?
ಜೂನ್ 14, 2022 ರಂದು ಪರಿಚಯಿಸಲಾದ ಅಗ್ನಿಪಥ್ ಯೋಜನೆಯು ಸೈನ್ಯದಲ್ಲಿ ಯುವ ಶಕ್ತಿಯ ನೇಮಕಾತಿಗಾಗಿ ಹಲವು ನಿಯಮಗಳನ್ನು ಹೊಂದಿದೆ. ಈ ನಿಯಮಗಳ ಪ್ರಕಾರ, ಹದಿನೇಳುವರಿ ವರ್ಷದಿಂದ 21 ವರ್ಷಗಳ ಮಧ್ಯದಲ್ಲಿರುವ ಯುವಕರು ನೇಮಕಾತಿ ಪ್ರಕ್ರಿಯೆಗೆ ಅರ್ಹರಾಗಿರುತ್ತಾರೆ. ಹೀಗೆ ನೇಮಕಗೊಂಡ ಯುವಶಕ್ತಿ ತದಂತರ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಬೇಕಾಗಿರುತ್ತದೆ.
ಈ ಯೋಜನೆಯಡಿಯಲ್ಲಿ ಹೀಗೆ ಸೇವೆ ಸಲ್ಲಿಸುವ ಅಗ್ನಿಪಥ್ ಯೋಜನೆಯಡಿಯಲ್ಲಿ ನೇಮಕಗೊಂಡ ಒಟ್ಟು ಯುವಕರ ಪೈಕಿ, ಕೆಲ ಸಾಮರ್ಥ್ಯ ಪರೀಕ್ಷೆಗಳ ಮೂಲಕ ಶೇ. 25 ರಷ್ಟು ಅಭ್ಯರ್ಥಿಗಳನ್ನು ರೆಗ್ಯೂಲರ್ ಸೇವೆಯಡಿಯಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಮಿಕ್ಕವರಿಗೂ ಕೆಲ ಪ್ರಯೋಜನಗಳನ್ನು ಈ ಯೋಜನೆ ಒದಗಿಸುತ್ತದೆ ಎನ್ನಲಾಗಿದೆ.
21 ರ ಬದಲಾಗಿ 23 ವರ್ಷಕ್ಕೆ ತಿದ್ದುಪಡಿ
ಈ ಯೋಜನೆ ಅನುಷ್ಠಾನಗೊಂಡಿದ್ದೇ ತಡ ದೇಶದ ಹಲವಾರು ಭಾಗಗಳಲ್ಲಿ ಇದರ ವಿರುದ್ಧ ವಿರೋಧದ ಅಲೆಗಳು ಎದ್ದವು. ಮುಖ್ಯವಾಗಿ ಈ ಯೋಜನೆಯಲ್ಲಿ ಗರಿಷ್ಠ ವಯೋಮಾನದ ಮಿತಿಯನ್ನು 21 ಮಾಡಿರುವುದರ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾದವು. ತದನಂತರ ಸರ್ಕಾರವು ಗರಿಷ್ಠ ವಯೋಮಿತಿಯನ್ನು 21ರ ಬದಲು 2022 ರ ವರ್ಷಕ್ಕಾಗಿ 23 ಮಾಡಿ ಜಾರಿಗೊಳಿಸಿತು.
ಇದೀಗ ಅಗ್ನಿಪಥ್ ಯೋಜನೆಗೆ ಸಂಬಂಧಿಸಿದಂತೆ ಅದನ್ನು ವಿರೋಧಿಸಿ ಹಾಕಲಾಗಿದ್ದ ಅರ್ಜಿಗಳನ್ನು ರದ್ದುಗೊಳಿಸುವ ಮೂಲಕ ಹೈಕೋರ್ಟ್ ಇದೀಗ ಈ ಯೋಜನೆಗೆ ಹಸಿರು ನಿಶಾನೆ ತೋರಿದಂತಾಗಿದೆ. ಯಾವುದಕ್ಕೂ ಮುಂದೆ ಏನಾಗಬಹುದು ಎಂಬುದನ್ನು ಕಾದು ನೋಡಬೇಕಷ್ಟೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ