ಕೆಂಪು ಕೋಟೆ ತನಗೆ ಸೇರಿದ್ದೆಂದು ಹೈಕೋರ್ಟ್ ಮೆಟ್ಟಿಲೇರಿದ ಮಹಿಳೆ: ಕೋರ್ಟ್ ಹೇಳಿದ್ದೇನು..?

ನ್ಯಾಯಾಲಯವು ದಾವೆದಾರಳು ಬಹದ್ದೂರ್ ಶಾ ಜಾಫರ್ ವಾರಸುದಾರಳೋ ಅಲ್ಲವೋ ಎಂಬುದರ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ಬದಲಿಗೆ ಇಷ್ಟು ದೀರ್ಘಾವಧಿಯ ನಂತರ ಆಕೆ ಹೇಗೆ ನ್ಯಾಯಾಲಯದಲ್ಲಿ ದಾವೆ ಹೂಡಲು ಸಾಧ್ಯ ಎಂಬುದನ್ನಷ್ಟೇ ತಿಳಿಯಲು ಬಯಸುತ್ತದೆ ಎಂದು ಹೇಳಿದೆ

ಕೆಂಪು ಕೋಟೆ

ಕೆಂಪು ಕೋಟೆ

  • Share this:
ಭಾರತವನ್ನು ಅನೇಕ ದೊರೆಗಳು, ಚಕ್ರವರ್ತಿಗಳು, ವಂಶಗಳು ಆಳಿದ್ದು (India is ruled) ಇತಿಹಾಸ ಬಲ್ಲ ಎಲ್ಲರಿಗೂ ತಿಳಿದಿರುವ ಸಂಗತಿ. ಅದರಲ್ಲೂ ಮೊಘಲ್ ದೊರೆಗಳು (Mughal rulers) ಈ ದೇಶಕ್ಕೆ ತಮ್ಮದೇ ಆದ ವಾಸ್ತುಶಿಲ್ಪ, ಸಂಸ್ಕೃತಿ, ಪರಂಪರೆಗಳನ್ನು ನೀಡಿದವರು. ಈಗ ಇದೇ ಮೊಘಲ್ ವಂಶಸ್ಥಳೆಂದು ಹೇಳಿಕೊಂಡಿರುವ ಮಹಿಳೆಯೊಬ್ಬಳು ಕೆಂಪು ಕೋಟೆಯನ್ನು(Red Fort) ತನ್ನ ವಶಕ್ಕೆ ಒಪ್ಪಿಸಬೇಕೆಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ! ಹೌದು!! ಪಶ್ಚಿಮ ಬಂಗಾಳದ ಹೌರಾದ ನಿವಾಸಿಯಾದ ಸುಲ್ತಾನಾ ಎಂಬಾಕೆ ತಾನು ರಂಗೂನ್‌ನಿಂದ ಯಶಸ್ವಿಯಾಗಿ ತಪ್ಪಿಸಿಕೊಂಡ ಮೊಘಲ್ ಚಕ್ರವರ್ತಿಯ ಮರಿ ಮೊಮ್ಮಗ ಮಿರ್ಜಾ ಮೊಹಮ್ಮದ್ ಬೇದಾರ್ (Mirza Mohammed Bedar Bakht) ಬಖ್ತ್‌ನ ವಿಧವೆ ಪತ್ನಿಯಾಗಿದ್ದು, ಮೊಘಲರು ನಿರ್ಮಿಸಿರುವ ಕೆಂಪು ಕೋಟೆಯನ್ನು ತನ್ನ ವಶಕ್ಕೆ ಒಪ್ಪಿಸಬೇಕು ಎಂದು ದೆಹಲಿ ಹೈಕೋರ್ಟ್ (Delhi High Court) ಮೆಟ್ಟಿಲೇರಿದ್ದಾಳೆ.

68 ವರ್ಷದ ಸುಲ್ತಾನಾ ಬೇಗಂ
ತನ್ನನ್ನು ತಾನು ಮೊಘಲರ ಕೊನೆಯ ಚಕ್ರವರ್ತಿ ಬಹದ್ದೂರ್ ಶಾ ಜಾಫರ್ ನ ಕಾನೂನುಬದ್ಧ ವಾರಸುದಾರೆ ಎಂದು ಘೋಷಿಸಿಕೊಂಡಿರುವ 68 ವರ್ಷದ ಸುಲ್ತಾನಾ ಬೇಗಂ, ಅಕ್ರಮವಾಗಿ ಸರ್ಕಾರದ ವಶದಲ್ಲಿರುವ ಕೆಂಪು ಕೋಟೆಯನ್ನು ತನ್ನ ವಶಕ್ಕೆ ಒಪ್ಪಿಸಬೇಕು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆದರೆ, ಈ ದಾವೆಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಕಪ್ಪು ಕೋಟು ಧರಿಸುವುದಕ್ಕೆ ವಿನಾಯಿತಿ ನೀಡಿ ಎಂದು ಮನವಿ ಸಲ್ಲಿಸಿದ ವಕೀಲ

ನ್ಯಾಯಾಧೀಶೆ ರೇಖಾ ಪಾಟೀಲ್ ವಿಚಾರಣೆ
ಸುಲ್ತಾನಾ ಬೇಗಂ ದಾವೆಯನ್ನು ವಜಾಗೊಳಿಸಿರುವ ದೆಹಲಿ ಹೈಕೋರ್ಟ್, “ಮೊದಲು ದಾವೆ ಹೂಡಲು ಇಷ್ಟು ವಿಳಂಬ ಮತ್ತು ತಡೆ ಏಕಾಯಿತೆಂದು ವಿವರಿಸಿ. ನೀವು ಕೆಂಪು ಕೋಟೆಯ ವಾರಸುದಾರರೋ ಅಲ್ಲವೋ ಎಂಬುದನ್ನು ಮೊದಲು ಮರೆತುಬಿಡಿ. ಯಾಕೆಂದರೆ ನೀವು ನಿಮ್ಮ ದಾವೆಯ ಮೊದಲ ಸಾಲಿನಲ್ಲಿ ನನಗೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಮೋಸವಾಗಿದೆ ಎಂದು ತಿಳಿಸಿದ್ದೀರಿ” ಎಂದು ನ್ಯಾಯಾಧೀಶೆ ರೇಖಾ ಪಾಟೀಲ್ ಸುಲ್ತಾನಾ ಬೇಗಂ ವಕೀಲರಿಗೆ ವಿಚಾರಣೆಯ ಸಂದರ್ಭದಲ್ಲಿ ತಿಳಿಸಿದರು.

ವಾದ ತಳ್ಳಿ ಹಾಕಿದ ನ್ಯಾಯಾಲಯ
ಮಹಿಳೆಯು ಅನಕ್ಷರಸ್ಥೆ ಮತ್ತು ಬಡವಳು ಎಂಬ ಸುಲ್ತಾನಾ ಬೇಗಂ ಪರ ವಕೀಲರ ವಾದ ತಳ್ಳಿ ಹಾಕಿದ ನ್ಯಾಯಾಲಯ, “ನ್ಯಾಯಾಲಯವು ದಾವೆದಾರಳು ಬಹದ್ದೂರ್ ಶಾ ಜಾಫರ್ ವಾರಸುದಾರಳೋ ಅಲ್ಲವೋ ಎಂಬುದರ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ಬದಲಿಗೆ ಇಷ್ಟು ದೀರ್ಘಾವಧಿಯ ನಂತರ ಆಕೆ ಹೇಗೆ ನ್ಯಾಯಾಲಯದಲ್ಲಿ ದಾವೆ ಹೂಡಲು ಸಾಧ್ಯ ಎಂಬುದನ್ನಷ್ಟೇ ತಿಳಿಯಲು ಬಯಸುತ್ತದೆ” ಎಂದು ಹೇಳಿತು.

ಮಹಿಳೆಯನ್ನು ತರಾಟೆ
ನಿಮ್ಮ ಪ್ರಕಾರ ನಿಮಗೆ 1857ರಲ್ಲಿ ಅನ್ಯಾಯವೆಸಗಲಾಯಿತು. ಇದಾದ 170 ವರ್ಷಗಳ ನಂತರ ನೀವು ನ್ಯಾಯಾಲಯವನ್ನು ಸಂಧಿಸಿದ್ದೀರಿ. ಇದನ್ನು ಹೇಗೆ ಮಾಡಲು ಸಾಧ್ಯ ದಯವಿಟ್ಟು ವಿವರಿಸಿ. ಇದಾದ ನಂತರ ನಾವು ನಿಮ್ಮ ಅರ್ಹತೆ ಪರಿಶೀಲಿಸಿ, ನೀವು ಹೇಗೆ ಕೆಂಪು ಕೋಟೆಯ ಮಾಲೀಕರಾಗಲು ಸಾಧ್ಯ ಎಂದು ನೋಡುತ್ತೇವೆ. ನಿಮ್ಮ ಅನುಮತಿಯಿಲ್ಲದೆ ಯಾರೂ ಕೆಂಪು ಕೋಟೆ ಬಳಸಬಾರದು ಎಂದು ಎಲ್ಲ ಜನರಿಗೂ ನ್ಯಾಯಾಲಯ ಮಾಹಿತಿ ನೀಡಬೇಕು ಎಂದು ನೀವು ಹೇಳಲು ಬಯಸುತ್ತಿರುವಂತಿದೆ” ಎಂದು ನ್ಯಾಯಾಲಯ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿತು.

ಗಡೀಪಾರು
ಪಶ್ಚಿಮ ಬಂಗಾಳದ ಹೌರಾ ಕೊಳೆಗೇರಿಯಲ್ಲಿ ವಾಸಿಸುತ್ತಿರುವ ಸುಲ್ತಾನಾ ತನ್ನ ದಾವೆಯಲ್ಲಿ, “ಬಖ್ತ್ ಅನ್ನು ಭಾರತ ಸರ್ಕಾರ 1960ರಲ್ಲಿ ಬಹದ್ದೂರ್ ಶಾ IIನ ವಾರಸುದಾರ ಎಂದು ಗುರುತಿಸಿದೆ. ಆತನ ಸಾವಿನ ನಂತರ ನಾನು ಪಿಂಚಣಿಯನ್ನು ಪಡೆಯುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಳು. ಅಲ್ಲದೆ, “ಈಸ್ಟ್ ಇಂಡಿಯಾ ಕಂಪನಿಯು ಬಹದ್ದೂರ್ ಶಾ ಜಾಫರ್ ನನ್ನು ಗಡೀಪಾರು ಮಾಡಿ, ಯಾವುದೇ ಗಣನೆ ಹಾಗೂ ನೈಸರ್ಗಿಕ ನ್ಯಾಯದ ತತ್ವಗಳನ್ನು ಪಾಲಿಸದೆ ಕೆಂಪು ಕೋಟೆಯನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು” ಎಂದೂ ಹೇಳಿದ್ದಳು.

ಇದನ್ನೂ ಓದಿ: ಮುಖ್ಯ ಆಹಾರ ಮಾತ್ರವಲ್ಲ, ಇನ್ಮೇಲೆ ಅದರೊಳಗಿನ ವಸ್ತುಗಳನ್ನೂ ಸಸ್ಯಾಹಾರ-ಮಾಂಸಾಹಾರ ಎಂದು ವಿಂಗಡಿಸಿ: ಹೈಕೋರ್ಟ್

ತನಗೆ ಯಾವುದೇ ಪರಿಹಾರ ನೀಡದೆ ತನ್ನ ಪೂರ್ವಜರ ಆಸ್ತಿಯನ್ನು ಭಾರತ ಸರ್ಕಾರ ಅಕ್ರಮವಾಗಿ ತನ್ನ ವಶದಲ್ಲಿರಿಸಿಕೊಂಡಿದೆ, ಈ ಹಿನ್ನೆಲೆ ಪರಿಹಾರವನ್ನೂ ನೀಡಬೇಕು ಎಂದು ಸುಲ್ತಾನಾ ಬೇಗಂ ಹೂಡಿದ್ದ ದಾವೆಯನ್ನು ಸುದೀರ್ಘಾವಧಿಯ ನಂತರ ದಾವೆ ಹೂಡಲಾಗಿದೆ ಎಂಬ ಕಾರಣ ನೀಡಿ ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
Published by:vanithasanjevani vanithasanjevani
First published: