ದೆಹಲಿ ಗದ್ದುಗೆಗೆ ಮುಂದಿನ ವರ್ಷ ಚುನಾವಣೆ; ಈಗಿನಿಂದಲೇ ರಣತಂತ್ರ ಹೆಣೆಯುತ್ತಿರುವ ಸಿಎಂ ಅರವಿಂದ ಕೇಜ್ರಿವಾಲ್

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆಯ ನಡುವೆಯೂ ದೆಹಲಿಯಲ್ಲಿ ಎಎಪಿ ಪಕ್ಷ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಅಖಂಡ ಗೆಲುವು ಸಾಧಿಸಿತ್ತು, ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿ ಎಎಪಿ ಪಕ್ಷಕ್ಕೆ ಅಷ್ಟಾಗಿ ಪೂರಕವಾಗಿಲ್ಲ.

MAshok Kumar | news18-kannada
Updated:December 3, 2019, 1:59 PM IST
ದೆಹಲಿ ಗದ್ದುಗೆಗೆ ಮುಂದಿನ ವರ್ಷ ಚುನಾವಣೆ; ಈಗಿನಿಂದಲೇ ರಣತಂತ್ರ ಹೆಣೆಯುತ್ತಿರುವ ಸಿಎಂ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್.
  • Share this:
ದೆಹಲಿ (ಡಿಸೆಂಬರ್ 02); ಜಾರ್ಖಂಡ್ ಚುನಾವಣೆ ಬೆನ್ನಿಗೆ ಮುಂದಿನ ವರ್ಷ ಏಪ್ರಿಲ್ ವೇಳೆಗೆ ದೆಹಲಿ ಗದ್ದುಗೆಗೆ ಚುನಾವಣೆ ನಡೆಯಲಿದೆ. ರಾಷ್ಟ್ರ ರಾಜಧಾನಿಯ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಆದರೆ, ಲೋಕಸಭಾ ಚುನಾವಣೆಯ ಸೋಲಿನ ನಂತರ ಮತ್ತೆ ತಲೆಕೊಡವಿ ಎದ್ದಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಈಗಿನಿಂದಲೇ ಚುನಾವಣಾ ರಣತಂತ್ರ ಹೆಣೆಯುತ್ತಿದ್ದು, ಗೆಲ್ಲುವ ಅಭ್ಯರ್ಥಿಯ ಆಯ್ಕೆಗೆ ಮುಂದಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಕಳೆದ ಬಾರಿಯ ಶಾಸಕರನ್ನೇ ಮತ್ತೆ ಪುನರಾವರ್ತಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಅಲ್ಲದೆ, ಇತ್ತೀಚೆಗೆ ಪಕ್ಷದಲ್ಲಿ ಅನರ್ಹಗೊಂಡು ಉಚ್ಚಾಟಿತಗೊಂಡಿದ್ದ ಕೆಲವು ಶಾಸಕರ ಕ್ಷೇತ್ರಗಳ ಮೇಲೆ ಹಲವು ನಾಯಕರು ಕಣ್ಣಿಟ್ಟಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಮಾತ್ರ ಆಮ್ ಆದ್ಮಿ ಪಕ್ಷ ಅಭ್ಯರ್ಥಿಗಳನ್ನು ಬದಲಿಸಲಿದೆ ಎಂಬ ಮಾಹಿತಿಗಳು ಇದೀಗ ಲಭ್ಯವಾಗುತ್ತಿದೆ.

ಎಎಪಿ ಪಕ್ಷದಿಂದ ಅನರ್ಹಗೊಂಡು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅಲ್ಕಾ ಲಂಬಾ ಪ್ರತಿನಿಧಿಸುತ್ತಿದ್ದ ಚಾಂದನಿ ಚೌಕ್ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯನ್ನು ಅರವಿಂದ ಕೇಜ್ರಿವಾಲ್ ಹುಡುಕುತ್ತಿದ್ದಾರೆ. ಈ ಹಿಂದೆ ಚಾಂದನಿ ಚೌಕ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಸೋಲನುಭವಿಸಿದ್ದ ಪಂಕಜ್ ಗುಪ್ತ ಮತ್ತೆ ವಿಧಾನಸಭೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತಾದರೂ, “ಪ್ರಸ್ತುತ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವ ಆಲೋಚನೆಯೂ ಇಲ್ಲ” ಎಂದು ಗುಪ್ತಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ಕೇಜ್ರಿವಾಲ್ ಸಮ್ಮುಖದಲ್ಲಿ ಎಎಪಿಗೆ ಸೇರ್ಪಡೆಯಾಗಿದ್ದ ನಾಲ್ಕು ಬಾರಿಯ ಮಾಜಿ ಕಾಂಗ್ರೆಸ್ ಶಾಸಕ ಪ್ರಹ್ಲಾದ್ ಸಿಂಗ್ ಸಾಹ್ನಿ ಅಥವಾ ಅವರ ಪುತ್ರ ಪುರಂದೀಪ್ ಸಿಂಗ್ ಸಾಹ್ನಿ ಚಾಂದಿನಿ ಚೌಕ್ ಕ್ಷೇತ್ರದಿಂದ  ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನೂ ಮತ್ತೋರ್ವ ಎಎಪಿ ಬಂಡಾಯ ಶಾಸಕ ಕಪಿಲ್ ಮಿಶ್ರಾ ಪ್ರತಿನಿಧಿಸುತ್ತಿದ್ದ ಕರಾವಾಲ್ ನಗರ ವಿಧಾನಸಭಾ ಕ್ಷೇತ್ರದಿಂದ ಪಂಜಾಬ್ ರಾಜ್ಯದ ಎಎಪಿ ಉಸ್ತುವಾರಿ ದುರ್ಗೇಶ್ ಪಾಠಕ್ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಬಿಜ್ವಾಸನ್ ದೆಹಲಿ ವಿಧಾನಸಭಾ ಕ್ಷೇತ್ರಗಳ ಪೈಕಿ ಮತ್ತೊಂದು ಆಸಕ್ತಿದಾಯಕ ಕ್ಷೇತ್ರವಾಗಿದ್ದು, ಈ ಕ್ಷೇತ್ರದಿಂದ ಎಎಪಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದ ಕರ್ನಲ್ ದೇವೇಂದರ್ ಅವರನ್ನು ಈಗಾಗಲೇ ಪಕ್ಷದಿಂದ ಉಚ್ಚಾಟಿಸಲಾಗಿದೆ.

ಹೀಗಾಗಿ ಈ ಕ್ಷೇತ್ರದಲ್ಲೂ ಸಹ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾದ ಅನಿವಾರ್ಯತೆ ಎಎಪಿ ಮುಂದಿದೆ. ಕುತೂಹಲಕಾರಿ ಅಂಶವೆಂದರೆ ದೆಹಲಿ ಮುಖ್ಯ ಕಾರ್ಯದರ್ಶಿ ಹಲ್ಲೆ ಪ್ರಕರಣದಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಅವರ ಶಾಸಕರನ್ನು ಸಮರ್ಥಿಸಿಕೊಳ್ಳುತ್ತಿರುವ ಖ್ಯಾತ ಕ್ರಿಮಿನಲ್ ವಕೀಲ ಬಿ.ಎಸ್. ಜೋನ್ ಅವರ ಹೆಸರು ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿದೆ.

ಒಟ್ಟಾರೆ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆಯ ನಡುವೆಯೂ ದೆಹಲಿಯಲ್ಲಿ ಎಎಪಿ ಪಕ್ಷ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಅಖಂಡ ಗೆಲುವು ಸಾಧಿಸಿತ್ತು, ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿ ಎಎಪಿ ಪಕ್ಷಕ್ಕೆ ಅಷ್ಟಾಗಿ ಪೂರಕವಾಗಿಲ್ಲ. ಅಲ್ಲದೆ, ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲು ಎಎಪಿ ಪಕ್ಷವನ್ನು ಕಾಡುತ್ತಿರುವುದು ಸುಳ್ಳಲ್ಲ. ಈ ನಡುವೆ ಎಎಪಿ ಈಗಿನಿಂದಲೇ ಚುನಾವಣಾ ರಣತಂತ್ರ ಹೆಣೆಯುತ್ತಿದ್ದು, ದೆಹಲಿ ಗದ್ದುಗೆ ಕುತೂಹಲದ ಕೇಂದ್ರವಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.ಇದನ್ನೂ ಓದಿ : ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಪತ್ತೆ ಹಚ್ಚಿದ್ದು ಯಾರು ಗೊತ್ತಾ? ನಿಜಕ್ಕೂ ಇದು ಹೆಮ್ಮೆಯ ವಿಚಾರ!
First published: December 3, 2019, 1:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading