NSE ಹಗರಣದ ಚಿತ್ರಾ ರಾಮಕೃಷ್ಣಗೆ 14 ದಿನ ಜೈಲು: ಆಕೆ VIP ಅಲ್ಲ ಅಂದಿದ್ದೇಕೆ ಕೋರ್ಟ್?

ಶ್ರೀಮತಿ ರಾಮಕೃಷ್ಣ ಅವರು ಸುಮಾರು 20 ವರ್ಷಗಳ ಕಾಲ ಎಲ್ಲಾ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ನಿಗೂಢ "ಹಿಮಾಲಯನ್ ಯೋಗಿ" ಅವರಿಂದ ಮಾರ್ಗದರ್ಶನ ಪಡೆದಿದ್ದಾರೆ ಎಂದು ವರದಿ ಹೇಳಿದೆ.  

NSE ಮಾಜಿ ಸಿಇಒ ಚಿತ್ರಾ ರಾಮಕೃಷ್ಣ

NSE ಮಾಜಿ ಸಿಇಒ ಚಿತ್ರಾ ರಾಮಕೃಷ್ಣ

  • Share this:
ನವದೆಹಲಿ: ಭಾರತದ ಅತಿ ದೊಡ್ಡ ಷೇರು ಮಾರುಕಟ್ಟೆಯಲ್ಲಿ (Stock Market) ಗಂಭೀರ ಲೋಪ ಎಸಗಿರುವ ಆರೋಪ ಎದುರಿಸುತ್ತಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಿತ್ರಾ ರಾಮಕೃಷ್ಣ (Chitra Ramakrishna) ಅವರನ್ನು ದೆಹಲಿ ನ್ಯಾಯಾಲಯ ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ವಿಶೇಷ ನ್ಯಾಯಾಧೀಶ ಸಂಜೀವ್ ಅಗರ್ವಾಲ್ ಅವರು ರಾಮಕೃಷ್ಣ ಅವರನ್ನು ಮುಂದಿನ ಮಾರ್ಚ್ 28 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆದೇಶಿಸಿದರು. ಚಿತ್ರಾ 7 ದಿನಗಳ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಿಬಿಐ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತು. ಜೊತೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರ್ಟ್​​ಗೆ ಮನವಿ ಮಾಡಲಾಯಿತು.  ರಾಮಕೃಷ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ ಒಂದು ದಿನದ ನಂತರ ತನಿಖಾ ಸಂಸ್ಥೆ ಮಾರ್ಚ್ 6 ರಂದು ಅವರನ್ನು ಬಂಧಿಸಿತ್ತು.

ಏನಿದು ಪ್ರಕರಣ..?

ಪ್ರಕರಣ ಸಂಬಂಧ ಸಿಬಿಐ ರಾಮಕೃಷ್ಣ ಅವರನ್ನು ವಿಚಾರಣೆ ನಡೆಸಿತ್ತು. ಆದಾಯ ತೆರಿಗೆ (ಐಟಿ) ಇಲಾಖೆ ಈ ಹಿಂದೆ ಮುಂಬೈ ಮತ್ತು ಚೆನ್ನೈನಲ್ಲಿ ರಾಮಕೃಷ್ಣ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಷೇರು ಮಾರುಕಟ್ಟೆ ವಿನಿಮಯ ಕೇಂದ್ರಗಳ ಕಂಪ್ಯೂಟರ್ ಸರ್ವರ್‌ಗಳಿಂದ ಸ್ಟಾಕ್ ಬ್ರೋಕರ್‌ಗಳಿಗೆ ಮಾಹಿತಿಯನ್ನು ಸೋರಿಕೆ ಮಾಡಿದರ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.  ಎನ್‌ಎಸ್‌ಇ ನೀಡುವ ಸಹ-ಸ್ಥಳ ಸೌಲಭ್ಯದಲ್ಲಿ, ದಲ್ಲಾಳಿಗಳು ತಮ್ಮ ಸರ್ವರ್‌ಗಳನ್ನು ಸ್ಟಾಕ್ ಎಕ್ಸ್‌ಚೇಂಜ್ ಆವರಣದಲ್ಲಿ ಇರಿಸಬಹುದು, ಅವರಿಗೆ ಮಾರುಕಟ್ಟೆಗಳಿಗೆ ವೇಗವಾಗಿ ಪ್ರವೇಶವನ್ನು ನೀಡಬಹುದು. ಕೆಲವು ದಲ್ಲಾಳಿಗಳು ಒಳಗಿನವರ ಜೊತೆ ಶಾಮೀಲಾಗಿ ಅಲ್ಗಾರಿದಮ್ ಮತ್ತು ಸಹ-ಸ್ಥಳ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು ಅನಿರೀಕ್ಷಿತ ಲಾಭವನ್ನು ಗಳಿಸುತ್ತಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Kirpan: ಸಿಖ್ಖರು ಈಗ ಏರ್​​ಪೋರ್ಟ್​​ಗಳಲ್ಲಿ ಕಿರ್ಪಾನ್​​ಗಳನ್ನು ಒಯ್ಯಬಹುದು: ಕೇಂದ್ರದ ಹೊಸ ನಿಯಮ

ಈ ಹಿಂದೆ, ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿಯು ಎನ್‌ಎಸ್‌ಇ, ಚಿತ್ರಾ ರಾಮಕೃಷ್ಣ ಮತ್ತು ರವಿ ನಾರಾಯಣ್ ಮತ್ತು ಹಿರಿಯ ಮಟ್ಟದಲ್ಲಿ ನೇಮಕಾತಿಯಲ್ಲಿ ಲೋಪದೋಷಗಳಿಗಾಗಿ ಇತರ ಇಬ್ಬರು ಅಧಿಕಾರಿಗಳಿಗೆ ದಂಡ ವಿಧಿಸಿತ್ತು. ರವಿ ನರೇನ್ ಅವರು ಏಪ್ರಿಲ್ 1994 ರಿಂದ ಮಾರ್ಚ್ 2013 ರವರೆಗೆ ಎನ್‌ಎಸ್‌ಇಯ ಎಂಡಿ ಮತ್ತು ಸಿಇಒ ಆಗಿದ್ದರೆ, ಚಿತ್ರಾ ರಾಮಕೃಷ್ಣ ಅವರು ಏಪ್ರಿಲ್ 2013 ರಿಂದ ಡಿಸೆಂಬರ್ 2016 ರವರೆಗೆ ಎನ್‌ಎಸ್‌ಇಯ ಎಂಡಿ ಮತ್ತು ಸಿಇಒ ಆಗಿದ್ದರು.  ಎನ್‌ಎಸ್‌ಇ ಮತ್ತು ಅದರ ಉನ್ನತ ಅಧಿಕಾರಿಗಳು ಆನಂದ್ ಸುಬ್ರಮಣಿಯನ್ ಅವರನ್ನು ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್‌ಗೆ ಸಲಹೆಗಾರರಾಗಿ ನೇಮಕ ಮಾಡುವ ಸಂಬಂಧ ಸೆಕ್ಯುರಿಟೀಸ್ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸೆಬಿ ಹೇಳಿತ್ತು.

ಕೋರ್ಟ್​​ ಚಾಟಿ..

ಎಲ್ಲಾ ಕೈದಿಗಳು ಒಂದೇ, ಚಿತ್ರಾ ಅವರು ವಿಐಪಿ ಖೈದಿಯಾಗಲು ಸಾಧ್ಯವಿಲ್ಲ. ಆಕೆಗಾಗಿ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ ಸಂಜೀವ್ ಅಗರ್ವಾಲ್ ಹೇಳಿದರು. ಚಿತ್ರಾ ಪರ ವಕೀಲರು ಜೈಲಿನೊಳಗೆ ಚಿತ್ರಾ ಅವರಿಗೆ ವಿಶೇಷ ಸೌಲಭ್ಯಗಳನ್ನು ನೀಡುವಂತೆ ಕೋರ್ಟ್​​ಗೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯವು ಪ್ರಾರ್ಥನಾ ಪುಸ್ತಕಗಳಾದ ಹನುಮಾನ್ ಚಾಲೀಸಾ ಮತ್ತು ಭಗವದ್ಗೀತೆಯ ಪ್ರತಿಯನ್ನು ಕೊಂಡೊಯ್ಯಲು ಚಿತ್ರಾ ಅವರಿಗೆ ಅನುಮತಿ ನೀಡಿದೆ. ಶ್ರೀಮತಿ ರಾಮಕೃಷ್ಣ ಅವರು ಸುಮಾರು 20 ವರ್ಷಗಳ ಕಾಲ ಎಲ್ಲಾ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ನಿಗೂಢ "ಹಿಮಾಲಯನ್ ಯೋಗಿ" ಅವರಿಂದ ಮಾರ್ಗದರ್ಶನ ಪಡೆದಿದ್ದಾರೆ ಎಂದು ವರದಿ ಹೇಳಿದೆ.
Published by:Kavya V
First published: