‘ಟುಕುರ್ ಟುಕುರ್’ ಹಾಡಿಗೆ ಹೆಜ್ಜೆ ಹಾಕಿ ನೋಡುಗರ ಮನಸೂರೆಗೊಂಡಿದ್ದ ದಿಲ್ಲಿ ಪೊಲೀಸರಿಗೀಗ ಶೋಕಾಸ್ ನೋಟಿಸ್ನ ಬಿಸಿ ತಟ್ಟಿದೆ. ಸಾಮಾಜಿಕ ಜಾಲತಾಣ ಗಳಲ್ಲಿ ತಮ್ಮ ವಿಡಿಯೋ ಹರಿಬಿಟ್ಟಿದ್ದಕ್ಕಾಗಿ ತೊಂದರೆಗೆ ಸಿಲುಕಿದ್ದಾರೆ. ಪುರುಷ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಬಾಲಿವುಡ್ ಹಾಡಿಗೆ ಆಕರ್ಷಕವಾಗಿ ನೃತ್ಯ ಮಾಡಿ ಜನರ ಮನಸ್ಸನ್ನು ಆಕರ್ಷಿಸಿ ಮುದ ನೀಡಿದ್ದರೂ, ಆದರೆ, ಇದೀಗ ಮೇಲಧಿಕಾರಿಗಳಿಗೆ ಮಾತ್ರ ಕರ್ತವ್ಯದ ವೇಳೆ ನೃತ್ಯ ಮಾಡಿದ್ದಕ್ಕೆ ಈ ಇಬ್ಬರೂ ಪೊಲೀಸ್ ಕಾನ್ಸ್ಟೆಬಲ್ ವಿರುದ್ಧ ಕೆಂಡಾಮಂಡಲ ವಾಗಿದ್ದಾರೆ. ಅದರ ಪರಿಣಾಮವಾಗಿ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಗಳಿಗೂ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.
ವೈರಲ್ ಆಗಿದ್ದ ಡ್ಯಾನ್ಸ್ ವಿಡಿಯೋ:
ಕೆಲ ದಿನಗಳ ಹಿಂದೆ ತಲಾ ಒಬ್ಬ ಪುರುಷ ಹಾಗೂ ಮಹಿಳೆ, ಬಾಲಿವುಡ್ನ ಹಿಟ್ ಹಾಡು ‘ಟುಕುರ್ ಟುಕುರ್ ದೇಖ್ತೆ ಹೊ ಕ್ಯೋ ಎಂಬ ಹಾಡಿಗೆ ಪೊಲೀಸ್ ಸಮವಸ್ತ್ರದಲ್ಲೇ ನೃತ್ಯ ಮಾಡಿದ್ದರು. ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು.
#JUSTIN: A show cause notice has been issued to woman head constable and constable of Delhi Police for making videos in uniform during their official duties during lockdown and sharing on social media - said DCP (north-west) Usha Rangnani in her order. @IndianExpress, @ieDelhi pic.twitter.com/DVwwxYNtoC
— Mahender Singh Manral (@mahendermanral) June 8, 2021
ವರದಿಗಳ ಪ್ರಕಾರ, ನೃತ್ಯ ಮಾಡಿದ್ದು ಹೆಡ್ ಕಾನ್ಸ್ಟೇಬಲ್ ಶಶಿ ಹಾಗೂ ಕಾನ್ಸ್ಟೇಬಲ್ ವಿವೇಕ್ ಮಾಥುರ್. ಅವರಿಬ್ಬರೂ ದಿಲ್ಲಿಯ ಮಾಡೆಲ್ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ. ಇದೀಗ ದಿಲ್ಲಿಯ ವಾಯುವ್ಯ ವಿಭಾಗದ ಡಿಸಿಪಿ ಉಷಾ ರಂಗ್ರಿಯಾನಿ ಅವರಿಗೂ ಈ ನೃತ್ಯದ ವಿಡಿಯೋ ತಲುಪಿದ್ದು, ಕರ್ತವ್ಯದಲ್ಲಿದ್ದಾಗಲೇ ಡ್ಯಾನ್ಸ್ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಹೀಗಾಗಿ ನೃತ್ಯ ಮಾಡಿದ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಗಳಿಗೂ, ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿಗೆ ಮಾಡಿದ್ದಾರೆ.
ಒಂದು ಶಿಸ್ತುಬದ್ಧ ಪೊಲೀಸ್ ಪಡೆಯ ಭಾಗವಾಗಿರುವ ಅವರಿಬ್ಬರ ನಡತೆಯೂ ವೃತ್ತಿಪರವಾಗಿಲ್ಲ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ತಮ್ಮ ಅಧಿಕೃತ ಕರ್ತವ್ಯದ ಸಮಯದಲ್ಲಿ ಇಂಥ ನಡವಳಿಕೆ ಸಹ್ಯವಲ್ಲ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಕೋವಿಡ್ ನಿಯಮಾವಳಿಯ ಉಲ್ಲಂಘನೆ:
ಅಲ್ಲದೆ ಕೋವಿಡ್ 19 ನಿಯಮಾವಳಿಗಳು ಜಾರಿಯಲ್ಲಿರುವ ಸಂದರ್ಭದಲ್ಲಿ ಅವರಿಬ್ಬರೂ ಅದರ ನಿಯಮಗಳನ್ನು ಪಾಲಿಸಿಲ್ಲದೇ ಇರುವುದು ಕೂಡ ಎದ್ದು ಕಾಣಿಸುತ್ತಿದೆ. ವಿಡಿಯೋಗಳ ಪೈಕಿ ಒಂದರಲ್ಲಿ ಮಾಥುರ್ ಅವರು ಮಾಸ್ಕ್ ಕೂಡ ಧರಿಸಿರಲಿಲ್ಲ. ಇದಲ್ಲದೆ ಸಾಮಾಜಿಕ ಅಂತರ ಕಾಪಾಡುವ ನಿಯಮವನ್ನೂ ಅವರಿಬ್ಬರು ಮುರಿದಿರುವುದು ಕಂಡು ಬಂದಿದೆ ಎಂದು ನೋಟಿಸ್ನಲ್ಲಿ ದಿಲ್ಲಿಯ ವಾಯುವ್ಯ ವಿಭಾದ ಡಿಸಿಪಿ ತಮ್ಮ ನೋಟಿಸ್ನಲ್ಲಿ ವಿವರಿಸಿದ್ದಾರೆ.
ಇನ್ನು 15 ದಿನಗಳೊಳಗೆ ಹೆಡ್ ಕಾನ್ ಸ್ಟೇಬಲ್ ಶಶಿ ಹಾಗೂ ಕಾನ್ಸ್ಟೇಬಲ್ ವಿವೇಕ್ ಮಾಥುರ್ ಅವರು ಡಿಸಿಪಿ ಉಷಾ ರಂಗ್ರಿಯಾನಿ ಅವರ ಮುಂದೆ ಮುಖತಃ ಹಾಜರಾಗಿ ತಮ್ಮ ‘ವೃತ್ತಿಪರವಲ್ಲದ ವರ್ತನೆ’ ಬಗ್ಗೆ ವಿವರಣೆ ನೀಡಬೇಕಾಗುತ್ತದೆ. ಒಂದು ವೇಳೆ ಅವರಿಬ್ಬರೂ ನೋಟಿಸ್ಗೆ ಉತ್ತರಿಸಲು ಹಾಜರಾಗದಿದ್ದರೆ ಅವರಿಗೆ ತಮ್ಮ ಪರವಾಗಿ ವಿವರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಹಾಜರಾಗದಿದ್ದರೆ ಅವರಿಗೆ ತಮ್ಮ ಪರವಾಗಿ ಉತ್ತರಿಸಲು ಏನೂ ಉಳಿದಿಲ್ಲ ಎಂದು ಭಾವಿಸಲಾಗುತ್ತದೆ. ಹಾಜರಾಗಿ ಸರಿಯಾದ ವಿವರಣೆ ನೀಡಿದರೆ ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ