Air Pollution: ದೆಹಲಿ ಎಂದ ತಕ್ಷಣ ಇತ್ತೀಚೆಗೆ ಕಣ್ಣು ಮುಂದೆ ಬರುವುದು ಅಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಎಂದರೆ ಅತಿಶಯೋಕ್ತಿಯಲ್ಲ. ಅಷ್ಟರ ಮಟ್ಟಿಗೆ ದೆಹಲಿಯ ಜನರು ಅಲ್ಲಿನ ವಾಯು ಮಾಲಿನ್ಯದಿಂದ ಬೇಸತ್ತು ಹೋಗಿದ್ದಾರೆ. ಅದರಲ್ಲೂ ಚಳಿಗಾಲ ಬಂತೆಂದರೆ ಸಾಕು, ಈ ವಾಯು ಮಾಲಿನ್ಯ ಇನ್ನಷ್ಟು ಹೆಚ್ಚಾಗುತ್ತದೆ. ಇದನ್ನುಹತೋಟಿಗೆ ತರಲು ದೆಹಲಿ ಸರ್ಕಾರ ಮಾಡುವ ಕಸರತ್ತು ಅಷ್ಟಿಷ್ಟಲ್ಲ. ಕೆಲವು ವಾರಗಳ ಹಿಂದೆಯೇ ವಾಹನದ ಮಾಲಿನ್ಯ ತಪಾಸಣೆ ಮಾಡಿಸಿ ಪ್ರಮಾಣ ಪತ್ರವನ್ನು ತಮ್ಮ ಜೊತೆಗೆ ಇರಿಸಿಕೊಂಡಿರಬೇಕು. ಪೊಲೀಸರು ಕೇಳಿದಾಗ ಅದನ್ನು ತೋರಿಸದೆ ಹೋದರೆ ಭಾರಿ ದಂಡ ಕಟ್ಟಬೇಕಾಗುತ್ತದೆ ಎಂದು ದೆಹಲಿ ಸರ್ಕಾರವು ವಾಹನ ಸವಾರರಿಗೆ ಎಚ್ಚರಿಸಿತ್ತು.
ಈಗ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಎಲ್ಲಾ ವಾಹನ ಚಾಲಕರಿಗೆ ತಮ್ಮ ವಾಹನಗಳನ್ನು ವಾರದಲ್ಲಿ ಒಂದು ದಿನ ಹೊರಗೆ ತೆಗೆಯಲೇ ಬೇಡಿ. ಅದನ್ನು ಹಾಗೆಯೇ ಮನೆಯಲ್ಲಿಯೇ ನಿಲ್ಲಿಸಬೇಕು ಮತ್ತು ಆ ದಿನ ನೀವು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಬೇಕು ಎಂದು ಮನವಿ ಮಾಡಿದ್ದಾರೆ.
ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೆ ಈ ವಾಹನಗಳು ಹೊರಸೂಸುವ ಹೊಗೆ ಪ್ರಮುಖ ಕಾರಣವಾಗಿದೆ ಎಂದು ಉಲ್ಲೇಖಿಸಿದ ಕೇಜ್ರಿವಾಲ್, ಜನರು ವಾರಕ್ಕೆ ಒಂದು ದಿನವಾದರೂ ತಮ್ಮ ವಾಹನ ಹೊರತೆಗೆಯದೆ ಮೆಟ್ರೋ ಮತ್ತು ಸಾರ್ವಜನಿಕ ಬಸ್ಸುಗಳಲ್ಲಿ ಪ್ರಯಾಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಅಕ್ಟೋಬರ್ 18 ರಿಂದ 'ರೆಡ್ ಲೈಟ್ ಆನ್, ಗಾಡಿ ಆಫ್' ಎಂಬ ಹೆಸರಿನಡಿಯಲ್ಲಿ ಯೋಜನೆಯೊಂದು ರೂಪಿಸಿದ್ದು, ವಾಹನ ಚಾಲಕರು ತಮ್ಮ ವಾಹನಗಳನ್ನು ವಾರಕ್ಕೊಮ್ಮೆಯಾದರೂ ನಿಲ್ಲಿಸಲು ನಿರ್ಧರಿಸಬೇಕು ಎಂದು ಕೇಜ್ರಿವಾಲ್ ಹೇಳಿದರು. "ನಾವು ವಾರಕ್ಕೊಮ್ಮೆಯಾದರೂ ನಮ್ಮ ವಾಹನ ಹೊರತೆಗೆಯದೆ ಮೆಟ್ರೋ, ಬಸ್ ಅಥವಾ ಇತರರೊಂದಿಗೆ ವಾಹನ ಹಂಚಿಕೊಂಡು ಪ್ರಯಾಣ ಬೆಳೆಸಲು ದೃಢವಾಗಿ ನಿರ್ಧರಿಸಬೇಕು. ನಾವು ಇದನ್ನು ಮಾಡಿದರೆ, ಮಾಲಿನ್ಯವನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು ಮತ್ತು ಇಂಧನವನ್ನೂ ಉಳಿಸಬಹುದು ಎಂದು ತಜ್ಞರು ಹೇಳುತ್ತಾರೆ" ಎಂದು ಅವರು ಹೇಳಿದರು.
ಇಷ್ಟೇ ಅಲ್ಲದೆ ದೆಹಲಿಯ ಮುಖ್ಯಮಂತ್ರಿ ‘ಗ್ರೀನ್ ದೆಹಲಿ’ ಮೊಬೈಲ್ ಅಪ್ಲಿಕೇಶನ್ ಅನ್ನು ಎಲ್ಲರೂ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ದೆಹಲಿಯ ಯಾವುದೇ ಭಾಗದಲ್ಲಿ ಯಾರಾದರೂ ಈ ವಾಯು ಮಾಲಿನ್ಯ ಹೆಚ್ಚು ಮಾಡುವ ಕೃತ್ಯಕ್ಕೆ ಕೈ ಹಾಕಿದರೆ ಆ ಘಟನೆಗಳನ್ನು ನೀವು ವರದಿ ಮಾಡಲು ಅದನ್ನು ಬಳಸಬೇಕು ಎಂದು ಹೇಳಿದರು.
"ವಾಯು ಮಾಲಿನ್ಯಕ್ಕೆ ಕಾರಣವಾಗುವ ಟ್ರಕ್, ಮಾಲಿನ್ಯಕ್ಕೆ ಕಾರಣವಾಗುವ ಯಾವುದೇ ಉದ್ಯಮ, ತ್ಯಾಜ್ಯ ಸುಡುವುದನ್ನು ನೀವು ನೋಡಿದರೆ ನೀವು ತಕ್ಷಣ ಈ ಮೊಬೈಲ್ ಅಪ್ಲಿಕೇಶನ್ ಮೂಲಕ ದೂರು ನೀಡಬಹುದು" ಎಂದು ತಿಳಿಸಿದರು.
Read Also: Hero Ev Scooter: ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಉಚಿತವಾಗಿ ಪಡೆಯಿರಿ..! ಹೇಗೆ ಗೊತ್ತಾ..?
ಪ್ರತಿ ಚಳಿಗಾಲದಲ್ಲಿ ದೆಹಲಿಯಲ್ಲಿ ಆಗುವ ವಾಯು ಮಾಲಿನ್ಯ ವಿಶ್ವದ ಯಾವುದೇ ಮಹಾನಗರಗಳಲ್ಲಿಯೂ ಕಂಡು ಬರುವುದಿಲ್ಲ. ಈ ವರ್ಷವು ಸಹ ದೀಪಾವಳಿ ಹಬ್ಬಕ್ಕೆ ಕೆಲವು ವಾರಗಳ ಮುಂಚೆಯೇ ಈ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಇನ್ನಷ್ಟು ಮುಂಜಾಗ್ರತೆ ಕ್ರಮಗಳನ್ನು ಸರ್ಕಾರವು ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ