ನವ ದೆಹಲಿ (ಫೆಬ್ರವರಿ 09); ಬಹು ನಿರೀಕ್ಷೆಯ ದೆಹಲಿ ವಿಧಾನಸಭಾ ಚುನಾವಣೆ ಶುಕ್ರವಾರ ಮುಕ್ತಾಯವಾಗಿದೆ. ಆದರೆ, ಚುನಾವಣೆ ಬೆನ್ನಿಗೆ ಇಂದು ಟ್ವಿಟ್ ಮಾಡಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾರತೀಯ ಚುನಾವಣಾ ಆಯೋಗ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಸಾಮಾನ್ಯವಾಗಿ ಚುನಾವಣೆ ಮುಗಿದ ಒಂದು ಗಂಟೆಯ ಅವಧಿಯ ಒಳಗಾಗಿ ಚುನಾವಣಾ ಆಯೋಗ ಯಾವ ಮತಗಟ್ಟೆಯಲ್ಲಿ ಎಷ್ಟು ಮತ ಚಲಾವಣೆಯಾಗಿದೆ? ಒಟ್ಟಾರೆ ರಾಜ್ಯದಲ್ಲಿ ಚಲಾವಣೆಯಾಗಿರುವ ಶೇಕಡಾವಾರು ಮತ ಎಷ್ಟು? ಎಂಬ ಅಂಕಿ ಅಂಶವನ್ನು ಅಧಿಕೃತ ವೆಬ್ಸೈಟಿನಲ್ಲಿ ಬಿಡುಗಡೆ ಮಾಡುತ್ತದೆ.
ಆದರೆ, ದೆಹಲಿ ಚುನಾವಣೆ ಮುಗಿದು ಒಂದು ದಿನವೇ ಕಳೆದರೂ ಭಾರತೀಯ ಚುನಾವಣಾ ಆಯೋಗ ಈವರೆಗೆ ಒಟ್ಟಾರೆ ಮತದಾನದ ಅಂಕಿಅಂಶವನ್ನು ಬಿಡುಗಡೆ ಮಾಡಿಲ್ಲ.
ಈ ಕುರಿತು ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ ಮತದಾನದ ಅಂಕಿ ಸಂಖ್ಯೆಯ ಕುರಿತು ಲೆಕ್ಕಾಚಾರಗಳು ನಡೆಯುತ್ತಿದ್ದು, ಶನಿವಾರ ಸಂಜೆಯ ವೇಳೆಗೆ ಒಟ್ಟಾರೆ ಮತದಾನದ ಶೇಕಡಾವಾರು ಸಂಖ್ಯೆಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.
ಆದರೆ, ಚುನಾವಣಾ ಆಯೋಗದ ಕ್ರಮಕ್ಕೆ ಟ್ವಿಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, “ ಚುನಾವಣಾ ಆಯೋಗ ಏನು ಮಾಡುತ್ತಿದೆ? ಚುನಾವಣಾ ಮತದಾನ ಮುಗಿದು ಇಷ್ಟು ಗಂಟೆಯಾಗಿದ್ದರೂ ಈವರೆಗೆ ಮತದಾನದ ಶೇಕೆಡಾವಾರು ಸಂಖ್ಯೆಯನ್ನು ಬಿಡುಗಡೆ ಮಾಡಿಲ್ಲವೇಕೆ? ನಿಜಕ್ಕೂ ಈ ವಿಚಾರ ಅಚ್ಚರಿ ಮೂಡಿಸುತ್ತಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ, ಚುನಾವಣಾ ಆಯೋಗದ ಕ್ರಮಕ್ಕೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ