ನವ ದೆಹಲಿ (ನವೆಂಬರ್ 26); ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ರಾಷ್ಟ್ರಾಧ್ಯಂತ ಕಳೆದ ಮೂರ್ನಾಲ್ಕು ತಿಂಗಳಿನಿಂದ ರೈತರು ಉಗ್ರವಾಗಿ ಪ್ರತಿಭಟಿಸುತ್ತಿದ್ದಾರೆ. ಇನ್ನೂ ಪಂಜಾಬ್ನಲ್ಲಿ ರೈತರ ಹೋರಾಟ ಉಗ್ರರೂಪ ತಾಳಿದೆ. ಇದಲ್ಲದೆ, ಇಂದು ದೇಶದಾದ್ಯಂತ ರೈತ ಸಂಘಟನೆಗಳು ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿ ಚಲೋ ಹೋರಾಟಕ್ಕೆ ಕರೆ ನೀಡಿತ್ತು. ಇದರ ಭಾಗವಾಗಿ ಉತ್ತರಪ್ರದೇಶ, ಪಂಜಾಬ್, ಹರಿಯಾಣ ರಾಜ್ಯದಿಂದ ಅಸಂಖ್ಯಾತ ರೈತ ಹೋರಾಟಗಾರರು ಇಂದು ದೆಹಲಿಗೆ ಪಾದಯಾತ್ರೆ ಮೂಲಕ ಆಗಮಿಸಿದ್ದಾರೆ. ಆದರೆ, ರೈತರನ್ನು ಹರಿಯಾಣ ಗಡಿಯಲ್ಲಿಯೇ ತಡೆಹಿಡಿದಿರುವ ಪೊಲೀಸರು ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿ ಬ್ಯಾರಿಕೇಡ್ ಹಾಕಿ ತಡೆಯುವ ಮೂಲಕ ಅವರು ದೆಹಲಿ ಪ್ರವೇಶಿಸುವುದನ್ನು ತಡೆದಿದ್ದಾರೆ. ಆದರೆ, ಪೊಲೀಸರ ಇಂತಹ ಕೃತ್ಯದಿಂದ ಕ್ರುದ್ಧರಾಗಿರುವ ರೈತರು ಬ್ಯಾರಿಕೇಡ್‌ಗಳನ್ನು ಮುರಿದು ನದಿಗೆ ಎಸೆದಿರುವ ಘಟನೆ ಇಂದು ನಡೆದಿದೆ.
ಕೇಂದ್ರದ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ನೂರಾರು ರೈತ ಸಂಘಟನೆಗಳು ಹಮ್ಮಿಕೊಂಡಿದ್ದ ದೆಹಲಿ ಚಲೋ ಪ್ರತಿಭಟನೆಗಾಗಿ ಸಾವಿರಾರು ರೈತರು ದೆಹಲಿಗೆ ತೆರಳುತ್ತಿದ್ದರು. ಆದರೆ ಅವರನ್ನು ಗಡಿಯಲ್ಲಿಯೇ ತಡೆಯಲಾಯಿತು. ಇದರಿಂದ ಉದ್ರೇಕಗೊಂಡ ರೈತರು ಬ್ಯಾರಿಕೇಡ್‌ಗಳನ್ನು ಮುರಿದು ನದಿಗೆ ಎಸೆದು ಮುನ್ನುಗ್ಗಿದರು.
ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪೊಲೀಸರು ರೈತರ ಮೇಲೆ ಅಶ್ರುವಾಯು ಮತ್ತು ಜಲಾನಿಲ ದಾಳಿ ಮಾಡಿದ್ದಾರೆ. ಆದರೂ ರೈತರು ತಮ್ಮ ನಿಲುವಿನಿಂದ ಹಿಂದೆ ಸರಿಯಲು ಒಪ್ಪಲಿಲ್ಲ.
ಇಂದು ದೇಶದಾದ್ಯಂತ ರೈತ-ಕಾರ್ಮಿಕ ಸಂಘಟನೆಗಳು ದೆಹಲಿ ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಇದನ್ನು ಎದುರಿಸಲಾಗದೇ ಹರಿಯಾಣ ಸರ್ಕಾರ ತನ್ನೆಲ್ಲಾ ಗಡಿಗಳನ್ನು ಸೀಲ್ ಮಾಡಿಕೊಂಡಿದ್ದು, ರೈತರು ದೆಹಲಿಗೆ ತೆರಳದಂತೆ ತಡೆಯುತ್ತಿದೆ. ಮಧ್ಯಪ್ರದೇಶದಿಂದ ದೆಹಲಿಗೆ ರೈತರೊಂದಿಗೆ ತೆರಳುತ್ತಿದ್ದ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನೂ ಸಹ ಬಂಧಿಸಲಾಗಿದೆ.
ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ್, ರಾಜಸ್ಥಾನ, ಕೇರಳ ಮತ್ತು ಪಂಜಾಬ್ ಸೇರಿದಂತೆ ಆರು ರಾಜ್ಯಗಳಿಂದ ಸಾವಿರಾರು ರೈತರು ಕಾರ್ಮಿಕರು ಟ್ರ್ಯಾಕ್ಟರ್ ಮೂಲಕ, ಕಾಲ್ನಡಿಗೆಯ ಮೂಲಕ ಮತ್ತು ವಿವಿಧ ವಾಹನಗಳ ಮೂಲಕ ದೆಹಲಿಗೆ ತೆರಳುತ್ತಿದ್ದಾರೆ. ಇವರನ್ನು ತಡೆಯುವ ಸಲುವಾಗಿ ಹರಿಯಾಣ ಮತ್ತು ದೆಹಲಿ ಗಡಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸ್ ಪಡೆಯನ್ನು ನೇಮಿಸಲಾಗಿದೆ.
ಇದನ್ನೂ ಓದಿ : ಹೈದ್ರಾಬಾದ್ ಉಸ್ಮಾನಿಯ ವಿವಿಗೆ ಅತಿಕ್ರಮ ಪ್ರವೇಶ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್ಐಆರ್
ದೆಹಲಿಯ ಗುರುಗ್ರಾಂ ಮತ್ತು ಫರೀದಾಬಾದ್ ಗಡಿಗಳಿಗೆ ಸೀಲ್ ಹಾಕಲಾಗಿದೆ. ಕೊರೊನಾ ಸೋಂಕಿನ ಹೆಚ್ಚಳದ ಕಾರಣ ನೀಡಿ ರಾಜಧಾನಿಯಲ್ಲಿ ಯಾವುದೆ ರ್ಯಾಲಿಗಳು ನಡೆಯಲು ಅವಕಾಶ ನೀಡುತ್ತಿಲ್ಲ ಎಂದು ಸರ್ಕಾರ ಹೇಳುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ