ದೆಹಲಿಯಲ್ಲಿ ರಾಜಕೀಯ ವಾತಾವರಣ ಹೆಚ್ಚು ಕಾವು ಪಡೆದುಕೊಳ್ಳುತ್ತಿದೆ. ದೆಹಲಿ ವಿಧಾನಸಭೆಯಲ್ಲಿ (Delhi Vidhana Sabha Protest) ಭ್ರಷ್ಟಾಚಾರದ ಆರೋಪಗಳ ಮಾತಿನ ಸಮರದ ನಡುವೆ, ಎಎಪಿ ಮತ್ತು ಬಿಜೆಪಿ ಶಾಸಕರು ಸೋಮವಾರ ವಿಧಾನಸಭೆಯ ಆವರಣದಲ್ಲೇ ಇಡೀ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಆಮ್ ಆದ್ಮಿ ಪಕ್ಷ (AAP) ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಅಹೋರಾತ್ರಿ ಧರಣಿ ಮಾಡುವುದಾಗಿ ಘೋಷಣೆ ಮಾಡಿತ್ತು. ಈ ಘೋಷಣೆಯ ನಂತರ ಸಿಡಿದೆದ್ದ ಬಿಜೆಪಿ ಶಾಸಕರು ಭ್ರಷ್ಟಾಚಾರ ಆರೋಪದ ಮೇಲೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಸರ್ಕಾರದ ಸಚಿವರಾದ ಮನೀಶ್ ಸಿಸೋಡಿಯಾ (Manish Sisodia) ಮತ್ತು ಸತ್ಯೇಂದ್ರ ಜೈನ್ ಅವರನ್ನು (Satyendar Jain ) ವಜಾಗೊಳಿಸುವಂತೆ ಒತ್ತಾಯಿಸಿ ವಿಧಾನಸಭೆ ಆವರಣದಲ್ಲಿ ರಾತ್ರೋರಾತ್ರಿ ಧರಣಿ ಆರಂಭಿಸಿದರು.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾಗಿದ್ದಾಗ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು 1,400 ಕೋಟಿ ರೂಪಾಯಿ ಮೌಲ್ಯದ ಅಮಾನ್ಯಗೊಂಡ ಕರೆನ್ಸಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ತಮ್ಮ ಇಬ್ಬರು ಉದ್ಯೋಗಿಗಳ ಮೇಲೆ ಒತ್ತಡ ಹೇರಿದ ಆರೋಪದ ಮೇಲೆ ವಿರುದ್ಧ ತನಿಖೆ ಮಾಡುವಂತೆ ಆಮ್ ಆದ್ಮಿ ಪಕ್ಷದ ಶಾಸಕರು ಪ್ರತಿಭಟನೆ ನಡೆಸಿದ್ದಾರೆ.
ಹಾಡು ಹಾಡುತ್ತಾ ಪ್ರತಿಭಟನೆ
ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಹಾಡುಗಳನ್ನು ಹಾಡುತ್ತಾ, ಘೋಷಣೆಗಳನ್ನು ಕೂಗುತ್ತಾ ಎಎಪಿ ಶಾಸಕರು ವಿಧಾನಸಭೆಯ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದರೆ, ಬಿಜೆಪಿ ಶಾಸಕರು ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ್ ಅವರ ಪ್ರತಿಮೆಗಳ ಬಳಿ ಧರಣಿ ನಡೆಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಸಂಸದರು ಇಂದು ಸದನ ಪ್ರವೇಶಿಸದಂತೆ ಉಪ ಸ್ಪೀಕರ್ ರಾಖಿ ಬಿರ್ಲಾ ಅವರು ನಿರ್ಬಂಧ ವಿಧಿಸಿದ್ದಾರೆ.
ಆಪರೇಷನ್ ಕಮಲದ ಆರೋಪ
'ಆಪರೇಷನ್ ಕಮಲ'ದ ಭಾಗವಾಗಿ ಬಿಜೆಪಿ ಆಮ್ ಆದ್ಮಿ ಪಕ್ಷವನ್ನು ಒಡೆಯುವ ಪ್ರಯತ್ನ ನಡೆಸುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪ ಮಾಡಿದ್ದಾರೆ. ಎಲ್ಲಾ ಶಾಸಕರು ತಮ್ಮೊಂದಿಗೆ ಇದ್ದಾರೆ ಎಂಬುದನ್ನು ಸಾಬೀತುಪಡಿಸಲು ಸದನದಲ್ಲಿ ವಿಶ್ವಾಸ ಮತಕ್ಕೆ ಕರೆ ನೀಡಿದ ಕೆಲವೇ ಗಂಟೆಗಳ ನಂತರ ಪ್ರತಿಭಟನೆಗಳು ನಡೆದಿವೆ.
ಇದನ್ನೂ ಓದಿ: Pakistan Flood: ಪಾಕಿಸ್ತಾನಕ್ಕೆ ಪಾಕಿಸ್ತಾನವೇ ನೀರಲ್ಲಿ ಮುಳುಗಡೆ; 1,100ಕ್ಕೂ ಹೆಚ್ಚು ಜನರ ಸಾವು
ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷದ ಶಾಸಕರು ಪ್ರಾಮಾಣಿಕರು ಮತ್ತು ಪಕ್ಷಾಂತರದ ಪ್ರಲೋಭನೆಗೆ ಒಳಗಾಗುವುದಿಲ್ಲ ಎಂದು ಸಾಬೀತುಪಡಿಸಲು ಬಹುಮತದ ಪರೀಕ್ಷೆಯನ್ನು ತೆಗೆದುಕೊಳ್ಳಬೇಕೆಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Nitin Gadkari: ನಿತಿನ್ ಗಡ್ಕರಿಗೆ ಕಾಂಗ್ರೆಸ್ನಿಂದ ಆಹ್ವಾನ! ಕೇಂದ್ರ ಸಚಿವರ ಪ್ರತ್ಯುತ್ತರ ಹೀಗಿತ್ತು
ಮುಂಜಾನೆ ವಿಧಾನಸಭೆ ಕಲಾಪದಲ್ಲಿ, ಎಎಪಿ ವಿರುದ್ಧ ಘೋಷಣೆಗಳನ್ನು ಕೂಗಿದ ಬಿಜೆಪಿ ಶಾಸಕರನ್ನು ಕಲಾಪದಿಂದ ಹೊರ ಹಾಕಲಾಯಿತು. ದೆಹಲಿ ಶಾಲೆಗಳ ನಿರ್ಮಾಣದ ಕುರಿತು ಅಬಕಾರಿ ನೀತಿ ಮತ್ತು ಕೇಂದ್ರ ಜಾಗೃತ ಆಯೋಗ (ಸಿವಿಸಿ) ವರದಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆಗೆ ಒತ್ತಾಯಿಸಲಾಯಿತು. ನಂತರ ಎಎಪಿ ಶಾಸಕರು ಕೂಡ ವಿಧಾನಸಭೆಯ ಬಾವಿಗೆ ಇಳಿದು ಸಕ್ಸೇನಾ ಅವರ ವಿರುದ್ಧ ₹ 1400 ಕೋಟಿ ಖಾದಿ ಹಗರಣದ ಆರೋಪ ಮಾಡಿ ರಾಜೀನಾಮೆಗೆ ಒತ್ತಾಯಿಸಿದರು.
ದೆಹಲಿಯಲ್ಲಿ ವಿಶೇಷ ವಿಧಾನಸಭೆ ಅಧಿವೇಶನ ಸೋಮವಾರ ಆರಂಭವಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿಶ್ವಾಸಮತ ಯಾಚನೆಯನ್ನು ಮಂಡಿಸಿದ್ದಾರೆ. ಇತರ ರಾಜ್ಯಗಳಲ್ಲಿ ‘ಆಪರೇಷನ್ ಕಮಲ’ ಯಶಸ್ವಿಯಾಗಬಹುದೆಂದು ಸಾಬೀತುಪಡಿಸುವ ಉದ್ದೇಶವಾಗಿತ್ತು. ಆದರೆ ಎಲ್ಲಾ ಎಎಪಿ ಶಾಸಕರು ತುಂಬಾ ಪ್ರಾಮಾಣಿಕ ಆಗಿರುವುದರಿಂದ ದೆಹಲಿಯಲ್ಲಿ ಆಪರೇಷನ್ ಕಮಲ ವಿಫಲವಾಗಿದೆ ಎಂದು ಈ ವೇಳೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ