ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಮಂಗಳವಾರ (ಫೆ.11)ರಂದು ಪ್ರಕಟವಾಗಲಿದೆ. ಬೆಳಗ್ಗೆ 7 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಮಧ್ಯಾಹ್ನ 12 ಗಂಟೆಯೊಳಗೆ ಬಹುತೇಕ ಫಲಿತಾಂಶದ ಚಿತ್ರಣ ಹೊರಬೀಳಲಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಕಳೆದ ಫೆ.8 (ಶನಿವಾರ) ಮತದಾನ ನಡೆದಿತ್ತು. ಶೇ.62.59ರಷ್ಟು ಮತದಾನವಾಗಿತ್ತು. 70 ಸ್ಥಾನಗಳಿಗೆ ಒಟ್ಟು 672 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ) ಮತ್ತು ಜನತಾ ದಳ ಯುನೈಟೆಡ್ (ಜೆಡಿಯು) ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದೆ. ಕಾಂಗ್ರೆಸ್ ಕೂಡ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಯೊಂದಿಗೆ ಮೈತ್ರಿಯೊಂದಿಗೆ ಚುನಾವಣೆ ಎದುರಿಸಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಮೂರನೇ ಬಾರಿ ದೆಹಲಿ ಗದ್ದುಗೆ ಹಿಡಿಯುವ ಸನಿಹದಲ್ಲಿದೆ.
ಚುನಾವಣೆ ಮುಗಿದ ಬಳಿಕ ಹಲವು ಸುದ್ದಿಸಂಸ್ಥೆಗಳು, ನಡೆಸಿದ ಮತಗಟ್ಟೆ ಸಮೀಕ್ಷೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮೂರನೇ ಬಾರಿಗೆ ದೆಹಲಿ ಗದ್ದುಗೆ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ.
ದೆಹಲಿ ವಿಧಾನಸಭೆಯಲ್ಲಿ ಒಟ್ಟು ಸ್ಥಾನ 70. ಬಹುಮತಕ್ಕೆ ಬೇಕಿರುವುದು 36 ಸ್ಥಾನ. ಎಲ್ಲಾ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷ 40ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಹೇಳಿವೆ.
ಇದನ್ನು ಓದಿ: Exit Poll Result 2020: ದೆಹಲಿ ಮತಗಟ್ಟೆ ಸಮೀಕ್ಷೆ; ಮತ್ತೊಮ್ಮೆ ಮುಖ್ಯಮಂತ್ರಿ ಗದ್ದುಗೆಯತ್ತ ಅರವಿಂದ ಕೇಜ್ರಿವಾಲ್?
2015ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಬರೋಬ್ಬರಿ 67 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿತ್ತು. ಅದಕ್ಕೂ ಹಿಂದೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಬಿಜೆಪಿ 31, ಆಪ್ ಪಕ್ಷ 28 ಹಾಗೂ ಕಾಂಗ್ರೆಸ್ 8 ಸ್ಥಾನ ಗಳಿಸಿದ್ದವು. ಬಿಜೆಪಿ ಸರ್ಕಾರ ರಚಿಸಲು ಮುಂದೆ ಬರಲಿಲ್ಲ. ರಾಷ್ಟ್ರಪತಿ ಆಳ್ವಿಕೆ ಸನ್ನಿಹಿತ ಎಂದನಿಸುತ್ತಿರುವಂತೆಯೇ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಆಮ್ ಆದ್ಮಿ ಅಧಿಕಾರ ರಚಿಸಿತ್ತು. ಕೆಲವೇ ತಿಂಗಳ ಹಿಂದಷ್ಟೇ ಜನ್ಮ ತಾಳಿದ್ದ ಆಮ್ ಆದ್ಮಿ ಪಕ್ಷ ಒಂದೇ ವರ್ಷದ ಅಂತರದಲ್ಲಿ ರಾಜ್ಯವೊಂದರ ಅಧಿಕಾರ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು. ಅರವಿಂದ್ ಕೇಜ್ರಿವಾಲ್ ದಿಲ್ಲಿ ‘ದೊರೆ’ಯಾದರು. ಇದೀಗ ಮತ್ತೊಮ್ಮೆ ರಾಷ್ಟ್ರ ರಾಜಧಾನಿ ದೆಹಲಿ ಅಧಿಕಾರ ಹಿಡಿಯುವ ಸನಿಹದಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ