ದೆಹಲಿ ಚುನಾವಣೆ: ಬಿಜೆಪಿ, ಎಎಪಿ ಅಬ್ಬರದ ಬಹಿರಂಗ ಪ್ರಚಾರಕ್ಕೆ ತೆರೆ; ಶನಿವಾರದ ಮತದಾನಕ್ಕೆ ಕಾತರ

ಇವತ್ತಿಗೆ ದೆಹಲಿ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಕೊನೆಯಾಗಿದೆ. ವಿಭಿನ್ನ ಪ್ರಚಾರ, ವಿಶಿಷ್ಟ ಕಾರ್ಯತಂತ್ರ ಮತ್ತು ವಿಕೃತಗಳಿಂದ ಕೂಡಿದ ಚುನಾವಣೆ ಇದು. ಇನ್ನೇನಿದ್ದರೂ ಮನಮನೆಗೆ ಭೇಟಿ ಮತ್ತು ಮತಬೇಟೆ...

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

  • News18
  • Last Updated :
  • Share this:
ನವದೆಹಲಿ(ಫೆ. 06): ಈ ಬಾರಿಯ ದೆಹಲಿ ವಿಧಾನಸಭೆ ಚುನಾವಣೆ ಬಹಳಷ್ಟು ದೃಷ್ಟಿಯಿಂದ ವಿಭಿನ್ನವಾಗಿದೆ.‌ ಇಂಥದೊಂದು ವಿಭಿನ್ನ ಚುನಾವಣೆಗೆ ಮುನ್ನುಡಿ ಬರೆದದ್ದು ಆಡಳಿತಾರೂಢ ಆಮ್ ಆದ್ಮಿ ಪಕ್ಷ. ಅದು ಬೇರೆಲ್ಲಾ ಅಸ್ತ್ರಗಳನ್ನು ಬಗಿಲಿಗಿಟ್ಟು ಮಾಡಿದ‌ ಕೆಲಸವನ್ನೇ ಮುಂದಿಟ್ಟುಕೊಂಡು ಮತಬೇಟೆ ಆರಂಭಿಸಿತು. ಅನಿವಾರ್ಯವಾಗಿ ಪ್ರತಿಸ್ಪರ್ಧಿ ಬಿಜೆಪಿ ಕೂಡ ತನ್ನ ಮಾಮೂಲಿ ಆಯುಧಗಳ ಬದಲಿಗೆ ಹೊಸ ಹತಾರಗಳಿಗೆ ಹುಡುಕಾಡಬೇಕಾಯಿತು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದರೆ, ಅವರನ್ನು ಬಿಜೆಪಿ ನಾಯಕರು ಭಯೋತ್ಪಾದಕ ಎಂದು ಹೀಯಾಳಿಸಿದರು. ಇದರಿಂದ ನೊಂದ ಕೇಜ್ರಿವಾಲ್ ಕಣ್ಣೀರು ಹಾಕಿದರು.

'ಕೆಲಸ ನೋಡಿಕೊಂಡು ಓಟು ಕೊಡಿ...' ಎಂಬ ಆಮ್ ಆದ್ಮಿ ಪಕ್ಷದ ಮಂತ್ರ-ತಂತ್ರದ ಮುಂದೆ ಮಂಕಾದ ಬಿಜೆಪಿ ಅದಕ್ಕೆ ಪ್ರತಿಯಾಗಿ ಆರಿಸಿಕೊಂಡಿದ್ದು ಬಹುಕಾಲದಿಂದಲೂ ತನ್ನ ಬತ್ತಳಿಕೆಯಲ್ಲಿ ಬೆಚ್ಚಗಿದ್ದ ಅದೇ ಹಳೆ ಕೋಮುವಾದವನ್ನು. ಆದರೆ ಈ ಬಾರಿ ಆ ಹಳೆಯ ಕೋಮುವಾದದ ಹತಾರನ್ನು ಮಸೆದು ಮಸೆದು ಹೊಸದಾಗಿ ಫಳಫಳಿಸುವಂತೆ ಮಾಡಲಾಗಿತ್ತು. ಹಾಗಾಗಿಯೇ ದೆಹಲಿಯಂಥ ಚಿಕ್ಕ ರಾಜ್ಯ ಗೆಲ್ಲಲು ಬಿಜೆಪಿ ನಾಯಕರು ನೂರಾರು ಬಾರಿ ಪಾಕಿಸ್ತಾನದ ಹೆಸರು ಹೇಳಬೇಕಾಯಿತು. ಶಾಹೀನ್ ಬಾಗ್ ವಿಷಯ ವಿಷಮಗೊಂಡು ಗುಂಡು‌ ಹಾರಿಸುವ ವಿಕೃತಿವರೆಗೂ ಹೋಗಬೇಕಾಯಿತು.

ಇದನ್ನೂ ಓದಿ: ಸಿಎಎ ವಿಚಾರದಲ್ಲಿ ವಿರೋಧ ಪಕ್ಷಗಳು ಪಾಕಿಸ್ತಾನ್ ಭಾಷೆಯಲ್ಲಿ ಮಾತನಾಡುತ್ತಿವೆ; ಸಂಸತ್​ನಲ್ಲಿ ಹರಿಹಾಯ್ದ ಮೋದಿ

ಹಿಂದುತ್ವ ಮತ್ತು ರಾಷ್ಟ್ರೀಯತೆ ಎಂಬ ಸೂಕ್ಷ್ಮ ಸಂಗತಿಗಳನ್ನು ಜನರ ಭಾವನೆಗೆ ಬೆಸೆದು ಮತ ಬಸಿಯುವುದರಲ್ಲಿ ಬಿಜೆಪಿ ಸದಾ ಮುಂದಿತ್ತು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೂಕ್ಷ್ಮಗ್ರಹಿ ಸಿದ್ದರಾಮಯ್ಯ ಅವರಂಥವರು ಬಿಜೆಪಿಯ ಈ ಧರ್ಮಸೂಕ್ಷ್ಮ ಬಲೆಗೆ ಬಿದ್ದುಬಿಟ್ಟಿದ್ದರು. ಚುನಾವಣಾ ರಾಜಕಾರಣದಲ್ಲಿ ಹೀಗೆ ಬಿಜೆಪಿ ಸದಾ ಮುಂಚೂಣಿಯಲ್ಲಿರುತ್ತಿತ್ತು. ಅಜೆಂಡಾ ಸೃಷ್ಟಿಸುತ್ತಿತ್ತು. ಉಳಿದ ಪಕ್ಷಗಳು ಅದಕ್ಕೆ ತಕ್ಕಂತೆ ಅವುಗಳ ಶಕ್ತಾನುಸಾರ ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದವು. ಆದರೆ ದೆಹಲಿಯಲ್ಲಿ ಈ ಬಾರಿ ಆಮ್ ಆದ್ಮಿ ಅಜೆಂಡಾ ಸೆಟ್ ಮಾಡಿತು. ದೊಡ್ಡ ಪಕ್ಷ ಎಂದು ಬೀಗುವ ಬಿಜೆಪಿ, ಆಮ್ ಆದ್ಮಿಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಬೇಕಾಯಿತು.

ದೆಹಲಿ ಚುನಾವಣೆಯಲ್ಲಿ ಈ ಬಾರಿ ಅಬ್ಬರದ ಪ್ರಚಾರ ಕಾಣಸಿಗಲಿಲ್ಲ. ಅದಕ್ಕೆ ಮುಖ್ಯ ಕಾರಣ ಬಿಜೆಪಿ. ಏಕೆಂದರೆ ಬಿಜೆಪಿ ಅಬ್ಬರದಿಂದ ಪ್ರಚಾರ ಮಾಡಿ, ಅಭಿಪ್ರಾಯ ಮೂಡಿಸುವಲ್ಲಿ ಸದಾ ಮುಂದಿರುತ್ತಿತ್ತು. ಆದರೆ ಅದ್ಯಾಕೋ ಏನೋ ಈ ಬಾರಿ ಬಿಜೆಪಿ ಅಖಾಡಕ್ಕೆ ಅಡಿ ಇಟ್ಟಿದ್ದೇ ತಡವಾಗಿ. ಪ್ರಚಾರದ ದೃಷ್ಟಿಯಿಂದ ಮಾತ್ರವಲ್ಲ, ಕಾರ್ಯತಂತ್ರ ರೂಪಿಸುವ ವಿಷಯದಲ್ಲೂ. ಹಾಗಾಗಿ 240 ಸಂಸದರು, ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಸಮುದಾಯದ ನಾಯಕರುಗಳೆಲ್ಲವನ್ನೂ ಇಟ್ಟುಕೊಂಡು ಕಡೆ ದಿನಗಳಲ್ಲಿ ಕಮಾಲ್ ಮಾಡಲು ಹೊರಟ ಕಮಲ ಪಕ್ಷಕ್ಕೆ ಆಶಾಭಾವನೆ ಮಾತ್ರ ಸಿಕ್ಕಿಲ್ಲ.

ಇದನ್ನೂ ಓದಿ: ಶಾಹಿನ್ ಬಾಗ್​ ಗುಂಡಿನ ದಾಳಿಕೋರ ಎಎಪಿಯವನಾಗಿದ್ದರೆ ಆತನಿಗೆ ಎರಡು ಪಟ್ಟು ಶಿಕ್ಷೆ ಕೊಡಿ: ಅರವಿಂದ ಕೇಜ್ರಿವಾಲ್​

ಆಮ್ ಆದ್ಮಿ ಮತ್ತು ಬಿಜೆಪಿ ಎರಡೂ ಪಕ್ಷಗಳು ಕರ್ನಾಟಕದಿಂದಲೂ ಜನ ಕರೆಸಿ ಪ್ರಚಾರ ಮಾಡಿ ಕನ್ನಡಿಗರ ಮತ ಸೆಳೆಯಲು ಪ್ರಯತ್ನಿಸಿವೆ. ಬಿಜೆಪಿ ನಿನ್ನೆ ದೆಹಲಿ ಕನ್ನಡ ಸಂಘದಲ್ಲಿ 'ಸಂಕ್ರಾಂತಿ ಮಿಲನ' ಎಂಬ ಹೆಸರಿನಲ್ಲಿ ಪ್ರಚಾರ ಮಾಡಿತು. ಇಂದು ರಾಜ್ಯದಿಂದ ಬಂದಿದ್ದ ಆಮ್ ಆದ್ಮಿ ಪಕ್ಷದ ಸ್ವಯಂಸೇವಕರು‌ ಇಲ್ಲಿನ ಕನಾಡ್ ಪ್ಲೇಸ್ ನಲ್ಲಿ ಪ್ರಚಾರ ಮಾಡಿದರು‌.

ಇವತ್ತಿಗೆ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಕಡೆಯ ಎರಡು ದಿನಗಳಲ್ಲಿ ಹೇಗೆ ಚುನಾವಣೆ ನಡೆಯುತ್ತೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಬಿಜೆಪಿ ಪರ ಕೆಲಸ ಮಾಡಲು ಇಡೀ ದೇಶದಿಂದ ಜನ ಬಂದಿದ್ದಾರೆ. ಆಪ್ ಪಾರ್ಟಿಯವರು ಈಗಾಗಲೇ ತನ್ನ ಮತದಾರರ ಮೈಂಡ್ ಸೆಟ್ ಮಾಡಿದ್ದಾರೆ. ಈ ನಡುವೆಯೂ ನಡೆಯುವ ಬೆಳವಣಿಗೆಗಳು ಇನ್ನೂ ಕುತೂಹಲಕಾರಿ ಆಗಿರಲಿವೆ.

ದೆಹಲಿಯ 70 ಕ್ಷೇತ್ರಗಳ ವಿಧಾನಸಭೆಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಹ್ಯಾಟ್ರಿಲ್ ಸಿಎಂ ಆಗುವ ನಿರೀಕ್ಷೆಯಲ್ಲಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: