ದೆಹಲಿ ಚುನಾವಣಾ ಕಣದಲ್ಲಿ ಬಡವರ ಬಗ್ಗೆ ಬಾಯಿ ಬಿಟ್ಟು ಬೆತ್ತಲಾದ ಬಿಜೆಪಿ

ಗುರುವಾರ ರಾತ್ರಿ ಟ್ವೀಟ್‌ ಮಾಡಿದ್ದ ಗೃಹ ಸಚಿವ ಅಮಿತ್ ಶಾ, 'ದೆಹಲಿ ಸರ್ಕಾರ ನೀಡಿರುವ ಉಚಿತ ವೈ-ಫೈ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ, ನನ್ನ ಫೋನ್ ಬ್ಯಾಟರಿ ಖಾಲಿ ಆಗಿ ಹೋಯಿತು’ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅರವಿಂದ ಕೇಜ್ರಿವಾಲ್ 'ನಾವು ಉಚಿತ ವೈ-ಫೈ ಜೊತೆಗೆ ಉಚಿತ ಬ್ಯಾಟರಿ ಚಾರ್ಜಿಂಗ್ ಅನ್ನೂ ಕೊಟ್ಟಿದ್ದೇವೆ ಎಂದು ತಿರುಗೇಟು ನೀಡಿದ್ದರು.

ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ.

ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ.

  • Share this:
ನವದೆಹಲಿ: ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು, ರಾಜಕೀಯ ನೇತಾರರು ಬಡವರ ಬಗ್ಗೆ ಕನಿಕರ ತೋರುವ ಬಗ್ಗೆ ಮಾತನಾಡುವುದು ಸಹಜ. ಆದರೆ ಅದೇಕೋ ಏನೋ ದೆಹಲಿಯ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಬಡವರ ಕಡೆಗೆ ಕೆಂಗಣ್ಣು ಬೀರಿದ್ದಾರೆ‌. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸರ್ಕಾರ ನೀಡುತ್ತಿರುವ ಉಚಿತ ನೀರು ಮತ್ತು ವಿದ್ಯುತ್ ಸವಲತ್ತುಗಳಿಂದ ಮತದಾರರು ಹತೋಟಿಯಲ್ಲಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಉಚಿತ ಸೌಲಭ್ಯವನ್ನು ಪಡೆಯುತ್ತಿರುವ ಬಡವರ ಮೇಲೆ ಕಿಡಿಕಾರಿದ್ದಾರೆ.

ಈ ಬಾರಿಯ ಚುನಾವಣೆಯನ್ನು ಬಿಜೆಪಿ ಯಾವ ವಿಷಯಗಳ ಮೇಲೆ ಎದುರಿಸುತ್ತಿದೆ ಎಂದು ಹೇಳುವ ಭರದಲ್ಲಿ ಮನೋಜ್ ತಿವಾರಿ, ಆಮ್ ಆದ್ಮಿ ಪಕ್ಷದ ಸರ್ಕಾರ ನೀಡುತ್ತಿರುವ 'ಉಚಿತ ಸೌಲಭ್ಯಗಳ' ಬದಲು ಬಿಜೆಪಿ “ಸುರಕ್ಷತೆ ಮತ್ತು ಅಭಿವೃದ್ಧಿ”ಯ ಮೇಲೆ ಈ ಚುನಾವಣೆ ಎದುರಿಸಲಿದೆ ಎಂದು ಹೇಳಿದ್ದಾರೆ.‌ ಆದರೀಗ ಇದು ವಿವಾದದ ಸ್ವರೂಪ ಪಡೆದುಕೊಂಡಿದೆ. ಮನೋಜ್ ತಿವಾರಿ ಅವರದ್ದು ಬಡವರ ವಿರೋಧಿ ಹೇಳಿಕೆ ಎಂಬ ವ್ಯಾಖ್ಯಾನ ಪಡೆದುಕೊಳ್ಳುತ್ತಿದೆ.

ಉಚಿತವಾಗಿ ನೀರು ಹಾಗೂ ವಿದ್ಯುತ್ ಕೊಡುತ್ತಿದ್ದೇವೆ ಎಂಬುದು ಕೇಜ್ರಿವಾಲ್ ಸರ್ಕಾರದ ಭ್ರಮೆ. ಪಡೆಯುತ್ತಿರುವ ಫಲಾನುಭವಿಗಳ ಸಂಖ್ಯೆ ಮತ್ತು ಗುಣಮಟ್ಟವನ್ನು ಗಮನಿಸಿದರೆ ನೀರಿನ ಸರಬರಾಜು ಉಚಿತವಾಗಿಲ್ಲ. ಅಲ್ಲದೆ ವಿದ್ಯುತ್ ಅನ್ನು ಉಚಿತವಾಗಿ ಸರಬರಾಜು ಮಾಡುವ ಬಗ್ಗೆ ಸರ್ಕಾರ ಅಧಿಕೃತವಾದ ಅಧಿಸೂಚನೆ ಹೊರಡಿಸಿಲ್ಲ. ಚುನಾವಣೆಗಾಗಿ ತಾತ್ಕಾಲಿಕವಾಗಿ ನೀರು ಹಾಗೂ ವಿದ್ಯುತ್ ಅನ್ನು ಕೊಡಲಾಗುತ್ತಿದೆಯಷ್ಟೇ.‌ ಈ ಯೋಜನೆಗಳನ್ನು ಮತದಾರರಿಗೆ ಆಮಿಷವೊಡ್ಡುವ ಸಲುವಾಗಿಯೇ ಘೋಷಿಸಲಾಗಿದೆ ಎಂದು ಹೇಳಲು ಹೊರಟ ಮನೋಜ್ ತಿವಾರಿ ಸಾರಾಸಗಟಾಗಿ ಉಚಿತ ಸರಬರಾಜೇ ತಪ್ಪು ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದಾರೆ.

ಬಿಜೆಪಿ ನಾಯಕರಿಂದ ಬಡವರ ವಿರೋಧಿ ಹೇಳಿಕೆ ಬಂದಿದ್ದೇ ತಡ ತಕ್ಷಣವೇ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ಮುಂಚೂಣಿ ನಾಯಕ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜನರಿಗೆ ಉಚಿತ ಸವಲತ್ತುಗಳನ್ನು ನೀಡುವ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಉಚಿತವಾಗಿ ನೀಡುವುದು ಅಥವಾ ಸಬ್ಸಿಡಿ ನೀಡುವುದು ಆರ್ಥಿಕತೆಯ ದೃಷ್ಟಿಯಿಂದ ಕೆಟ್ಟೆದ್ದೇನೂ ಅಲ್ಲ. ಇದರಿಂದ ಬಡವರಿಗೆ ಹೆಚ್ಚಿನ ಹಣ ತಲುಪಿ ಮಾರುಕಟ್ಟೆಯ ಬೇಡಿಕೆ ಸಾಮರ್ಥ್ಯ ಹೆಚ್ಚಾಗುತ್ತದೆ. ಆದ ಕಾರಣ ಹೆಚ್ಚುವರಿ ತೆರಿಗೆಯನ್ನೂ ವಿಧಿಸಬಾರದು.‌ ರಾಜ್ಯದ ಬೊಕ್ಕಸಕ್ಕೂ ಯಾವುದೇ ರೀತಿಯ ಕೊರತೆ ಆಗುವುದಿಲ್ಲ. ನಾವು ಬಜೆಟ್‌ ಮಿತಿಯಲ್ಲೇ ಎಲ್ಲವನ್ನೂ ಮಾಡಿದ್ದೇವೆ ಎಂಬರ್ಥದ ಟ್ವಿಟ್ ಮಾಡಿದ್ದಾರೆ.

ನಾವು ನೀಡಿದ್ದ ಎಲ್ಲಾ ಚುನಾವಣಾ ಭರವಸೆಗಳ ಪೈಕಿ 200 ಘಟಕಗಳವರೆಗೆ ವಿದ್ಯುತ್ ಉಚಿತ, ಉಚಿತ ವೈಫೈ, ಮಹಿಳೆಯರಿಗೆ ಉಚಿತ ಬಸ್ ಸವಾರಿ, ಶಾಲಾ ಅಭಿವೃದ್ಧಿ, ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ ಮತ್ತಿತರ ಹಲವು ಪ್ರಮುಖ ಭರವಸೆಗಳನ್ನು ಈಡೇರಿಸಿದ್ದೇವೆ. ಇಂದು ದೆಹಲಿಯ ಸರ್ಕಾರಿ ಶಾಲೆಗಳು ಮತ್ತು ಮೊಹಲ್ಲಾ ಕ್ಲಿನಿಕ್‌ಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ವಿಶೇಷ ಎಂದರೆ ಈ ಎಲ್ಲಾ ಕೆಲಸಗಳನ್ನು ಬಜೆಟ್ ಗೆ ಹೊರೆಯಾಗದಂತೆ ಮಾಡಿದ್ದೇವೆ ಎಂದು ಆಮ್ ಆದ್ಮಿ ಪಕ್ಷದ ನಾಯಕರು ಸಮರ್ಥಿಸಿಕೊಂಡಿದ್ದಾರೆ.

ಇದನ್ನು ಓದಿ: ಬಿಜೆಪಿ ನಾಯಕ ಕಪಿಲ್ ಮಿಶ್ರಾ ವಿವಾದಾತ್ಮಕ ಟ್ವೀಟ್ ಅಳಿಸುವಂತೆ ಟ್ವಿಟರ್​ಗೆ ಚುನಾವಣಾ ಆಯೋಗ ಮನವಿ

ಇದಲ್ಲದೆ ಗುರುವಾರ ರಾತ್ರಿ ಟ್ವೀಟ್‌ ಮಾಡಿದ್ದ ಗೃಹ ಸಚಿವ ಅಮಿತ್ ಶಾ, 'ದೆಹಲಿ ಸರ್ಕಾರ ನೀಡಿರುವ ಉಚಿತ ವೈ-ಫೈ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ, ನನ್ನ ಫೋನ್ ಬ್ಯಾಟರಿ ಖಾಲಿ ಆಗಿ ಹೋಯಿತು’ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅರವಿಂದ ಕೇಜ್ರಿವಾಲ್ 'ನಾವು ಉಚಿತ ವೈ-ಫೈ ಜೊತೆಗೆ ಉಚಿತ ಬ್ಯಾಟರಿ ಚಾರ್ಜಿಂಗ್ ಅನ್ನೂ ಕೊಟ್ಟಿದ್ದೇವೆ. ಅಲ್ಲದೆ ನಮ್ಮ ಸರ್ಕಾರ ದೆಹಲಿ ಜನರಿಗೆ 200 ಘಟಕಗಳವರೆಗೆ ಉಚಿತ ವಿದ್ಯುತ್ ನೀಡಿದ್ದರಿಂದ, ಗೃಹ ಸಚಿವರು ವಿದ್ಯುತ್‌ಗೆ ಹಣ ಪಾವತಿಸುವ ಅಗತ್ಯ ಇಲ್ಲ' ಎಂದು ನಯವಾಗಿಯೇ ತಿರುಗೇಟು ನೀಡಿದ್ದಾರೆ.

ಇದಲ್ಲದೆ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ ತಮ್ಮ ಟ್ವೀಟ್ ನಲ್ಲಿ ಈ ಬಾರಿಯ ದೆಹಲಿ ಚುನಾವಣೆಯನ್ನು ಭಾರತ- ಪಾಕಿಸ್ತಾನ ಯುದ್ದಕ್ಕೆ ಹೋಲಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಚುನಾವಣಾ ಆಯೋಗ ಕೂಡಲೇ ಕೋಮುವಾದಿ ಟ್ವೀಟ್ ಅನ್ನು ಡಿಲೀಟ್‌ ಮಾಡಿ ಎಂದು ನಿರ್ದೇಶನ ನೀಡಿದೆ. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಹೇಳಿದೆ.‌ ಕಪಿಲ್ ಮಿಶ್ರಾ ಟ್ವೀಟ್ ನಿಂದ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ ಕೂಡ ಟ್ವೀಟ್ ಅನ್ನು ವಾಪಸ್ ಪಡೆಯುವಂತೆ ತಾಕೀತು ಮಾಡಿದೆ.
First published: