ರಂಗೇರಿದ ದೆಹಲಿ ಚುನಾವಣಾ ಕಣ; ರಾಷ್ಟ್ರ ರಾಜಧಾನಿ ಗದ್ದುಗೆಗೆ ಸ್ಟಾರ್​ ಪ್ರಚಾರಕರ ಮೊರೆ ಹೋದ ಕಾಂಗ್ರೆಸ್​-ಬಿಜೆಪಿ!

ರಾಷ್ಟ್ರ ರಾಜಧಾನಿಯ ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಪ್ರಚಾರದಲ್ಲಿ ಕ್ರಿಯಾಶೀಲರಾಗಿರುವ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಇಂದು ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿವೆ. ಜನಮಾನಸವನ್ನು ಸೆಳೆಯುವ ನಾಯಕರ ಮುಖಾಂತರ ಮತಭೇಟೆಯಾಡಲು ರಣತಂತ್ರ ರೂಪಿಸಿವೆ.

news18-kannada
Updated:January 22, 2020, 7:42 PM IST
ರಂಗೇರಿದ ದೆಹಲಿ ಚುನಾವಣಾ ಕಣ; ರಾಷ್ಟ್ರ ರಾಜಧಾನಿ ಗದ್ದುಗೆಗೆ ಸ್ಟಾರ್​ ಪ್ರಚಾರಕರ ಮೊರೆ ಹೋದ ಕಾಂಗ್ರೆಸ್​-ಬಿಜೆಪಿ!
ಕಾಂಗ್ರೆಸ್​-ಬಿಜೆಪಿ ಚಿಹ್ನೆ
  • Share this:
ಪ್ರಸ್ತುತ ಇಡೀ ದೇಶದ ಗಮನ ಸೆಳೆಯುತ್ತಿರುವ ಮಹತ್ವದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, ರಾಜಕೀಯ ಪಕ್ಷಗಳು ಈಗ ಪ್ರಚಾರದ ಕಡೆ ಗಮನ ನೀಡುತ್ತಿವೆ. ಅಲ್ಲದೆ ಇಂದು ಎಲ್ಲಾ ಪಕ್ಷಗಳು ಸ್ಟಾರ್ ಪ್ರಚಾರಕರ ಪಟ್ಟಿಯನ್ನೂ ಬಿಡುಗಡೆ ಮಾಡಿವೆ. ಈ ಸ್ಟಾರ್ ಪ್ರಚಾರಕರ ಪಟ್ಟಿಯ ಹಿಂದಿನ ರಾಜಕೀಯ ಲೆಕ್ಕಾಚಾರ ಹೀಗಿವೆ...

ರಾಷ್ಟ್ರ ರಾಜಧಾನಿಯ ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಪ್ರಚಾರದಲ್ಲಿ ಕ್ರಿಯಾಶೀಲರಾಗಿರುವ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಇಂದು ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿವೆ. ಜನಮಾನಸವನ್ನು ಸೆಳೆಯುವ ನಾಯಕರ ಮುಖಾಂತರ ಮತಭೇಟೆಯಾಡಲು ರಣತಂತ್ರ ರೂಪಿಸಿವೆ.

ಬಿಜೆಪಿಯ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಪ್ರಕಾಶ್ ಜಾವಡೇಕರ್, ಸ್ಮೃತಿ ಇರಾನಿ, ಮಥುರಾ ಸಂಸದೆ ಮಾಜಿ ನಟಿ ಹೇಮಾ ಮಾಲಿನಿ, ಗುರುದಾಸ್‌ಪುರದ ಸಂಸದ ನಟ ಸನ್ನಿ ಡಿಯೋಲ್, ಮಾಜಿ ಕ್ರಿಕೆಟಿಗ ಮತ್ತು ಸಂಸದ ಗೌತಮ್ ಗಂಭೀರ್ ಮತ್ತಿತರರ ಹೆಸರನ್ನು ಪ್ರಕಟಿಸಿದೆ.

ಕೇಂದ್ರದ ಸಾಧನೆಯನ್ನು ನೋಡಿ ಬಿಜೆಪಿಗೆ ಮತ ನೀಡಿ ಎಂಬ ಧ್ಯೇಯವಾಕ್ಯದೊಂದಿಗೆ ದೆಹಲಿ ಚುನಾವಣೆ ಪ್ರವೇಶಿಸುತ್ತಿರುವ ಸ್ಥಳೀಯ ಬಿಜೆಪಿ ನಾಯಕರಿಗೆ ಮೋದಿ ಮುಖವೇ ಬಂಡವಾಳವಾಗಿದೆ. ಜೊತೆಗೆ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ‌ ಮುಂದಿಟ್ಟುಕೊಂಡು ಮತ ಸೆಳೆಯುವ ಉದ್ದೇಶ ಇರುವುದರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಂತರದ ಸ್ಥಾನ ನೀಡಲಾಗಿದೆ.

ಉತ್ತರಪ್ರದೇಶದಿಂದ ಕೆಲಸ ಅರಸಿಕೊಂಡು ದೆಹಲಿಗೆ ವಲಸೆ ಬಂದಿರುವವರ ಸಂಖ್ಯೆ ರಾಷ್ಟ್ರ ರಾಜಧಾನಿಯಲ್ಲಿ ಬಹುದೊಡ್ಡದಿದೆ. ಹೀಗಾಗಿ ಈ ಮತಗಳನ್ನು ಸೆಳೆಯುವ ಸಲುವಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಚುನಾವಣಾ ಪ್ರಚಾರಕ್ಕೆ ಮಣೆ ಹಾಕಲಾಗಿದೆ. ಪಂಜಾಬಿಗಳು ಕೂಡ ಈ ಭಾಗದಲ್ಲಿ ನಿರ್ಣಾಯಕ ರಾಗಿರುವುದರಿಂದ ಗುರುದಾಸಪುರದ ಸಂಸದ ಹಾಗು ಚಿತ್ರನಟ ಸನ್ನಿ ಡಿಯೋಲ್ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ಮಾಡಲಾಗಿದೆ.

ಇನ್ನೂ ಸಿನಿಪ್ರಿಯರನ್ನು ಸೆಳೆಯುವ ಸಲುವಾಗಿ ಸಂಸದೆ-ಚಿತ್ರ ನಟಿ ಹೇಮಾಮಾಲಿನಿ ಹಾಗೂ ಯುವಕರು ಮತ್ತು ಕ್ರಿಕೆಟ್​ ಅಭಿಮಾನಿಗಳನ್ನು ಸೆಳೆಯುವ ಸಲುವಾಗಿ ಕ್ರಿಕೆಟಿಗ-ಸಂಸದ ಗೌತಮ್ ಗಂಭೀರ್ ಅವರಿಗೆ ಸ್ಟಾರ್​ ಪ್ರಚಾರಕರ ಪಟ್ಟಿಯಲ್ಲಿ ಅವಕಾಶ ನೀಡಲಾಗಿದೆ.

ದೆಹಲಿಯ ಅಧಿಕಾರವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಲುವಾಗಿ ಒಂದೆಡೆ ಬಿಜೆಪಿ ನಾನಾ ಕಸರತ್ತು ಮಾಡುತ್ತಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್​ ಸಹ ಇಂದು ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಡಾ.‌ ಮನಮೋಹನ್ ಸಿಂಗ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತಿತರ ಹೆಸರನ್ನು ಪ್ರಕಟಿಸಲಾಗಿದೆ.ಇದಲ್ಲದೆ ದೆಹಲಿಯಲ್ಲಿರುವ ಪಂಜಾಬಿ ಮತಗಳ ಬೇಟೆಗೆ ಮುಂದಾಗಿರುವ ಕಾಂಗ್ರೆಸ್​ ಡಾ. ಮನಮೋಹನ್ ಜೊತೆಗೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್​ ಸಿಂಗ್, ನವಜೋತ್ ಸಿಂಗ್ ಸಿಧು ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಿದೆ. ದಕ್ಷಿಣ ಭಾರತೀಯ ಮೂಲದವರ ಮತಗಳನ್ನು ಸೆಳೆಯುವ ಸಲುವಾಗಿ ದಕ್ಷಿಣ ಭಾರತದ ಖ್ಯಾತ ನಟಿಯರಾದ ಖುಷ್ಬು ಮತ್ತು ನಗ್ಮಾ ಅವರನ್ನು ಬಳಸಿಕೊಳ್ಳಲು ಕಾಂಗ್ರೆಸ್​ ಮುಂದಾಗಿದೆ.

ಚುನಾವಣಾ ಕಣದಲ್ಲಿ ಹೆಚ್ಚಿದ ಮಹಿಳಾ ಅಭ್ಯರ್ಥಿಗಳ ಹವಾ:

ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ ಈ ಬಾರಿ ಕಳೆದ ಬಾರಿಗಿಂತ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳಿಂದ ಒಟ್ಟು 240 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಈ ಪೈಕಿ 24 ಜನ ಮಹಿಳೆಯರು ಎಂಬುದು ವಿಶೇಷ.

ಕಾಂಗ್ರೆಸ್ ಕಳೆದ ಬಾರಿ ಐವರು ಮಹಿಳೆಯರಿಗೆ ಮಾತ್ರ ಟಿಕೆಟ್ ನೀಡಿತ್ತು. ಈ ಸಲ 11 ಜನರಿಗೆ ಅವಕಾಶ ನೀಡಿದೆ. ಆಮ್ ಆದ್ಮಿ ಪಕ್ಷ ಕಳೆದ ಬಾರಿ 6 ಮಹಿಳೆಯರಿಗೆ ಅವಕಾಶ ನೀಡಿತ್ತು. ಈ ಸಲ 9 ಮಹಿಳೆಯರಿಗೆ ಟಿಕೆಟ್ ನೀಡಿದೆ. ಆದರೆ ಬಿಜೆಪಿ ಮಾತ್ರ ಮಹಿಳೆಯರ ವಿಷಯದಲ್ಲಿ ಜಿಗುಟುತನ ತೋರಿಸಿದ್ದು, ಕಳೆದ ಬಾರಿ 8 ಮಂದಿಗೆ ಅವಕಾಶ ಕೊಟ್ಟಿದ್ದ ಕಮಲ ಪಾಳಯ ಈ ಸಲ ಕೇಲವ ಐವರು ಮಹಿಳೆಯರಿಗೆ ಮಾತ್ರ ಟಿಕೆಟ್ ‌ನೀಡಿದೆ.

ಇದನ್ನೂ ಓದಿ : ವಾಟ್ಸ್ ಆಪ್ ಗ್ರೂಪ್ ಮೂಲಕ ಒಂದಾಗಿ ನದಿ ಪಾತ್ರದ ಸ್ಥಳವನ್ನು ಸ್ವಚ್ಚಗೊಳಿಸಿ ಇತರರಿಗೆ ಮಾದರಿಯಾದ ದಾವಣಗೆರೆ ನಾಗರೀಕರು
First published: January 22, 2020, 7:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading