ನವದೆಹಲಿ, ಡಿ. 13: ಸಾಮಾನ್ಯವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ವಾಯು ಮಾಲಿನ್ಯ ಬಹಳ ದೊಡ್ಡ ಮಟ್ಟದಲ್ಲಿ ಜಾಸ್ತಿಯಾಗುತ್ತದೆ. ಹಾಗೆ ದಿನ ಕಳೆದಂತೆ ಅದು ಕಡಿಮೆ ಕೂಡ ಆಗುತ್ತದೆ. ಆದರೆ ಈ ಬಾರಿ ದೀಪಾವಳಿ ಹಬ್ಬವಾಗಿ ತಿಂಗಳು ಕಳೆದರೂ ವಾಯು ಮಾಲಿನ್ಯ ಮಾತ್ರ ನಿಯಂತ್ರಣಕ್ಕೆ ಬಾರದೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಮಾಹಿತಿ ಪ್ರಕಾರ ಸರಾಸರಿ 24 ಗಂಟೆಗಳ ವಾಯು ಗುಣಮಟ್ಟದ ಸೂಚ್ಯಂಕ ಭಾನುವಾರ ಬೆಳಿಗ್ಗೆ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಈ ರೀತಿ ಇದೆ.
ದೆಹಲಿ ವಿಶ್ವ ವಿದ್ಯಾಲಯ ಪ್ರದೇಶದಲ್ಲಿ 397, ನೋಯ್ಡಾ ಸುತ್ತಮುತ್ತ 379. ಪೂಸಾ ಪ್ರದೇಶದ ವ್ಯಾಪ್ತಿಯಲ್ಲಿ 353, ದೆಹಲಿ ಐಐಟಿ ಪ್ರದೇಶಗಳಲ್ಲಿ 369 ಇದೆ. ಗಾಳಿಯ ಗುಣಮಟ್ಟವು 300 ಅಂಕದ ಮೇಲಿದ್ದರೆ ಅದನ್ನು 'ಅತ್ಯಂತ ಕಳಪೆ' ಎಂದು ವ್ಯಾಖ್ಯಾನಿಸಲಾಗುತ್ತದೆ. ಅಲ್ಲದೆ ಅಂತಹ ಗಾಳಿಯನ್ನು 'ಉಸಿರಾಡಲು ಅನರ್ಹ' ಎಂದು ಕೂಡ ಹೇಳಲಾಗುತ್ತದೆ. ಹಾಗಾಗಿಯೇ ಶನಿವಾರ ದೆಹಲಿಯಲ್ಲಿ ಸರಾಸರಿ ಏರ್ ಕ್ವಾಲಿಟಿ ಇಂಡೆಕ್ಸ್ 344 ಆಗಿರುವುದರಿಂದ ರಾಷ್ಟ್ರ ರಾಜಧಾನಿಯ ಜನ ಆತಂಕಕ್ಕೆ ಈಡಾಗಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೆಹಲಿಯ ಸುತ್ತ ಇರುವ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಗೋಧಿ ಬೆಳೆಯ ತ್ಯಾಜ್ಯವನ್ನು ಸುಡಲಾಗುತ್ತದೆ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಅಲ್ಲಿ ತ್ಯಾಜ್ಯ ಸುಟ್ಟಾಗ ಹೊಮ್ಮುವ ಹೊಗೆ ದೆಹಲಿಯ ಕಡೆಗೆ ಬರಲಿದೆ. ತ್ಯಾಜ್ಯ ಸುಡುವುದನ್ನು ತಪ್ಪಿಸಲು ಈವರೆಗೆ ಯಾವುದೇ ವೈಜ್ಞಾನಿಕ ಕ್ರಮ ಕೈಗೊಂಡಿಲ್ಲ. ರೈತರಿಗೆ ಪರ್ಯಾಯ ಮಾರ್ಗವನ್ನು ಹೇಳಿಕೊಟ್ಟಿಲ್ಲ. ಪರಿಹಾರದ ವ್ಯವಸ್ಥೆಯನ್ನೂ ಮಾಡಿಕೊಟ್ಟಿಲ್ಲ.
ಇದನ್ನೂ ಓದಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವೇ ಇಲ್ಲ; ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ
ಇದಲ್ಲದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸಲಾಗುತ್ತದೆ. ಜೊತೆಗೆ ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಗಾಳಿಯ ವೇಗ ಕೂಡ ಕಡಿಮೆ ಇರುತ್ತದೆ. ಈ ಎಲ್ಲಾ ಕಾರಣಗಳಿಂದ ದೆಹಲಿಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಯುಮಾಲಿನ್ಯ ಹೆಚ್ಚಾಗುವುದು ಸರ್ವೇ ಸಾಮಾನ್ಯ. ಆದರೆ ಈ ಬಾರಿ ದೆಹಲಿಯಲ್ಲಿ ಬೆಳೆ ತ್ಯಾಜ್ಯ ಸುಡುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಾಗಿತ್ತು. ಅದಕ್ಕೆ ಬದಲಾಗಿ ತಾಜ್ಯದ ಮೇಲೆ ಕೆಮಿಕಲ್ ಸಿಂಪಡಿಸಿ ಅಲ್ಲೇ ಕೊಳೆಯುವ ವ್ಯವಸ್ಥೆ ಮಾಡಲಾಗಿತ್ತು. ಇದಲ್ಲದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿತ್ತು. ಇಷ್ಟೆಲ್ಲ ಕ್ರಮಗಳನ್ನು ಕೈಗೊಂಡಿದ್ದರೂ ಮತ್ತು ದೀಪಾವಳಿ ಹಬ್ಬವಾಗಿ ತಿಂಗಳು ಉರುಳಿದ್ದರೂ ದೆಹಲಿಯ ವಾಯು ಮಾಲಿನ್ಯ ನಿಯಂತ್ರಣ ಬಾರದೇ ಇರುವುದು ಸಹಜವಾಗಿ ಜನರಲ್ಲಿ ಆತಂಕವನ್ನು ಉಂಟುಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ