ದೆಹಲಿಯಲ್ಲಿ ಮುಂದುವರಿದ ಹಿಂಸಾಚಾರ: ಸಾವಿನ ಸಂಖ್ಯೆ 20ಕ್ಕೇರಿಕೆ; ಕೇಂದ್ರ ತುರ್ತು ಸಭೆ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಕೇಂದ್ರ ಸರ್ಕಾರ ತುರ್ತು ಸಂಪುಟ ಸಭೆ ಕರೆದಿದೆ.

news18-kannada
Updated:February 26, 2020, 11:23 AM IST
ದೆಹಲಿಯಲ್ಲಿ ಮುಂದುವರಿದ ಹಿಂಸಾಚಾರ: ಸಾವಿನ ಸಂಖ್ಯೆ 20ಕ್ಕೇರಿಕೆ; ಕೇಂದ್ರ ತುರ್ತು ಸಭೆ
ದೆಹಲಿ ಹಿಂಸಾಚಾರ
  • Share this:
ನವದೆಹಲಿ: ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸುತ್ತಿದ್ದ ಹೋರಾಟವೂ ಹಿಂಸಾರೂಪಕ್ಕೆ ತಿರುಗಿದೆ. ಇದರ ಪರಿಣಾಮ ದೆಹಲಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 20ಕ್ಕೇರಿದೆ. ಇಲ್ಲಿಯವರೆಗೂ ಸುಮಾರು 150ಕ್ಕೂ ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಇಲ್ಲಿನ ಹಿಂಸಾಚಾರದಲ್ಲಿ ಮಂಗಳವಾರ ರಾತ್ರಿಯವರೆಗೂ ಒಬ್ಬ ಪೊಲೀಸ್ ಕಾನ್ಸ್​​ಟೇಬಲ್​​ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದರು. ಇವತ್ತು ಬುಧವಾರ ಲೋಕನಾಯಕ್ ಆಸ್ಪತ್ರೆಯಲ್ಲಿ ದಾಖಲುಗೊಂಡಿದ್ದ ಗಾಯಾಳುಗಳ ಪೈಕಿ ಏಳು ಮಂದಿ ಅಸುನೀಗಿದ್ಧಾರೆ. ಇದರೊಂದಿಗೆ ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಬುಧವಾರ ಬೆಳಗ್ಗೆ ಈಶಾನ್ಯ ದೆಹಲಿಯ ಬ್ರಹ್ಮಪುರಿ-ಮುಸ್ತಫಾಬಾದ್ ಪ್ರದೇಶದಲ್ಲಿ ಕಲ್ಲು ತೂರಾಟ ನಡೆಯುತ್ತಿರುವ ವರದಿಯಾಗಿದೆ. ವಿವಿಧ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತುರ್ತು ಸಭೆಗಳನ್ನು ನಡೆಸಿ ಭದ್ರತಾ ಸ್ಥಿತಿಯನ್ನು ಪರಿಶೀಲಿಸಿದ್ಧಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಕೇಂದ್ರ ಸರ್ಕಾರ ತುರ್ತು ಸಂಪುಟ ಸಭೆ ಕರೆದಿದೆ.

ಇದೇ ವೇಳೆ, ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು. ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹಾಗೆಯೇ ಕೈಮೀರುತ್ತಿರುವ ಹಿಂಸಾಚಾರ ತಹಬದಿಗೆ ತರಲು ಕಠಿಣ ಕ್ರಮವನ್ನು ದೆಹಲಿ ಪೊಲೀಸರು ಕೈಗೊಂಡಿದ್ದು, 'ಕಂಡಲ್ಲಿ ಗುಂಡು' ಆದೇಶವನ್ನು ಜಾರಿಗೊಳಿಸಲಾಗಿದೆ.

ಇನ್ನು, ಬೆಂಕಿ ಹಚ್ಚಿದ ಪ್ರಕರಣದ ಸಂಬಂಧ 11 ಎಫ್ ಐಆರ್ ದಾಖಲಿಸಲಾಗಿದೆ. ಈಶಾನ್ಯ ದೆಹಲಿ ಭಾಗದಲ್ಲಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ಅವಲೋಕಿಸಲು ಡ್ರೋಣ್ ಬಳಸಲಾಗಿದೆ. ನಾವು ಕೂಡಲೇ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿದ್ದೇವೆ ಎಂದು ದೆಹಲಿ ಪೊಲೀಸ್​​ ಅಧಿಕಾರಿ ಎಂಎಸ್ ರಾನ್ ಧಾವ್ ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಸಿಎಎ ಮತ್ತು ಎನ್​​ಆರ್​ಸಿ ಪರ-ವಿರೋಧಿ ಗುಂಪುಗಳ ನಡುವೆ ಶುರುವಾದ ಸಂಘರ್ಷ ಮೂರನೇ ದಿನವೂ ಮುಂದುವರಿದಿದೆ. ಇಲ್ಲಿನ ಈಶಾನ್ಯ ಭಾಗದಲ್ಲಿ ಇರುವ ಮೌಜ್​ಪುರದಲ್ಲಿ ಇಂದು ಕೂಡ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿವೆ. ನಿನ್ನೆ ಕಲ್ಲು ತೂರಾಟದ ವೇಳೆ ಪೊಲೀಸ್ ಕಾನ್ಸ್​ಟೇಬಲ್​​​​ ಓರ್ವ ಸಾವನ್ನಪ್ಪಿದ್ದಾರೆ. ಈಗ ಪೊಲೀಸ್ ಕಾನ್ಸ್​ಟೇಬಲ್ ಬೆನ್ನಲ್ಲೇ 12 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.

ಸೋಮವಾರ(ಫೆ. 24) ಸಿಎಎ ಬೆಂಬಲಿಗರು ಎನ್ನಲಾದ ಗುಂಪೊಂದು ವ್ಯಕ್ತಿಯೊಬ್ಬರ ಮೇಲೆ ದೊಣ್ಣೆಗಳಿಂದ ದಾಳಿ ನಡೆಸಿದ್ದರು. ಹೀಗೊಂದು ಫೋಟೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಪತ್ರಕರ್ತ ದಾನಿಶ್ ಸಿದ್ದಿಕಿ ಎಂಬುವರ ಕ್ಯಾಮರಾದಲ್ಲಿ ಈ ಭಯಾನಕ ದಾಳಿಯ ದೃಶ್ಯ ಸೆರೆಯಾಗಿದೆ ಎಂದು ವರದಿಯಾಗಿದೆ. ಇದರಿಂದ ದೆಹಲಿಯ ಈಶಾನ್ಯ ಭಾಗದಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, 144 ಸೆಕ್ಷನ್​​ ಜಾರಿಗೊಳಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸಿಎಎ ಪರ-ವಿರೋಧಿ ಗುಂಪುಗಳ ನಡುವಿನ ಘರ್ಷಣೆ ತಡೆಯಲು ಪೊಲೀಸರು ಹರಸಾಹಸ ಮಾಡುತ್ತಿದ್ಧಾರೆ.

ಇದನ್ನೂ ಓದಿ: ತಾರಕಕ್ಕೇರಿದ ದೆಹಲಿ ಹಿಂಸಾಚಾರ: ಪತ್ರಕರ್ತರ ಮೇಲೆ ಹಲ್ಲೆ, 9ಕ್ಕೇರಿದ ಸಾವಿನ ಸಂಖ್ಯೆಭಾನುವಾರ ದೆಹಲಿಯ ಈಶಾನ್ಯ ಭಾಗದಲ್ಲಿರುವ ಜಫ್ರಾಬಾದ್​ನಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದಿತ್ತು. ಪರಸ್ಪರ ಕಲ್ಲುತೂರಾಟದಲ್ಲಿ ತೊಡಗಿದ್ದ ಎರಡು ಗುಂಪುಗಳನ್ನು ಚದುರಿಸಲು ಪೊಲೀಸರು ಟಿಯರ್ ಗ್ಯಾಸ್ ಬಳಕೆ ಮಾಡಿದ್ದರು. ಕೆಲ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರವೂ ಕೂಡ ನಡೆಸಲಾಗಿತ್ತು. ಈ ಬೆನ್ನಲ್ಲೇ ಸೋಮವಾರ ಕೂಡ ಇದೀ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಹೀನ್ ಬಾಗ್​ನಲ್ಲಿ ನಿರಂತರ ಪ್ರತಿಭಟನೆ ಕಂಡಿದ್ದ ದೆಹಲಿ ಈಗ ಜಾಫ್ರಾಬಾದ್​ನಲ್ಲೂ ಪ್ರತಿಭಟನೆಯ ಬಿಸಿ ಅನುಭವಿಸುತ್ತಿದೆ. ಸೀಲಂಪುರ್​ನಿಂದ ಮೌಜ್​ಪುರ್ ಮತ್ತು ಯಮುನಾ ವಿಹಾರ್​ಗೆ ಸಂಪರ್ಕ ಸಾಧಿಸುವ ಜಾಫ್ರಾಬಾದ್ ಮೆಟ್ರೋ ಸ್ಟೇಷನ್ ಬಳಿಯ ರಸ್ತೆಯೊಂದನ್ನು ಸಿಎಎ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದು ಸೂಕ್ಷ್ಮ ಪರಿಸ್ಥಿತಿಗೆ ಎಡೆ ಮಾಡಿಕೊಟ್ಟಿದೆ.

ರಸ್ತೆಯನ್ನು ಮುತ್ತಿಗೆ ಹಾಕಿದ ನೂರಾರು ಪ್ರತಿಭಟನಾಕಾರರಲ್ಲಿ ಮಹಿಳೆಯರೇ ಹೆಚ್ಚಾಗಿದ್ದರು. ಭದ್ರತೆಯ ದೃಷ್ಟಿಯಿಂದ ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಯಿತು. ಹಾಗೆಯೇ, ಮೌಜ್​ಪುರ್-ಬಾಬರ್​ಪುರ್ ಮೆಟ್ರೋ ಸ್ಟೇಷನ್​ನ ದ್ವಾರಗಳನ್ನೂ ಬಂದ್ ಮಾಡಲಾಯಿತು.

“ಈ ಪ್ರತಿಭಟನೆಯು ಸಿಎಎ, ಎನ್​ಆರ್​ಸಿ ವಿರುದ್ಧವಾಗಿದೆ. ಹಾಗೆಯೇ, ದಲಿತರಿಗೆ ಮೀಸಲಾತಿ ಒದಗಿಸುವಂತೆ ಕೂಡ ಆಗ್ರಹಿಸುತ್ತಿದ್ದೇವೆ. ಮಹಿಳೆಯರೇ ಈ ಹೋರಾಟದ ನೇತೃತ್ವ ವಹಿಸಿದ್ದಾರೆ. ಪುರುಷರು ಕೇವಲ ಬೆಂಬಲಕ್ಕೆ ನಿಂತಿದ್ಧಾರೆ. ನಾವು ಪ್ರತಿಭಟನೆಯ ಉದ್ದೇಶದಿಂದಷ್ಟೇ ರಸ್ತೆಯನ್ನು ತಡೆದಿದ್ದೇವೆ. ಸಿಎಎ ಹಿಂಪಡೆಯುವವರೆಗೂ ನಾವು ಈ ಸ್ಥಳದಿಂದ ಕದಲುವುದಿಲ್ಲ” ಎಂದು ಶದಾಬ್ ಎಂಬ ಪ್ರತಿಭಟನಾಕಾರರು ಸ್ಪಷ್ಟಪಡಿಸಿದ್ಧಾರೆ.

ಇನ್ನು, ಕಳೆದ ಎರಡು ತಿಂಗಳಿನಿಂದ ದಿನಂಪ್ರತಿ 24 ಗಂಟೆ ಪ್ರತಿಭಟನೆ ಕಂಡಿದ್ದ ಶಾಹೀನ್ ಬಾಗ್​ನಲ್ಲಿ ಪರಿಸ್ಥಿತಿ ಬಹುತೇಕ ಹಾಗೇ ಮುಂದುವರಿದಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಇಬ್ಬರು ಸಂಧಾನಕಾರರು ಬಂದು ಮಾತನಾಡಿದ ಬಳಿಕ ಪ್ರತಿಭಟನಾಕಾರರು ತಾವು ಕುಳಿತಿದ್ದ ರಸ್ತೆಯ ಪಾರ್ಶ್ವ ಭಾಗವನ್ನು ವಾಹನ ಸಂಚಾರಕ್ಕಾಗಿ ತೆರವು ಮಾಡಿದ್ಧಾರೆ. ಆದರೆ, ಪೊಲೀಸರು ಭದ್ರತಾ ದೃಷ್ಟಿಯಿಂದ ರಸ್ತೆಯಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿದ್ಧಾರೆ.
First published: February 25, 2020, 8:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading