South Africa Riot - ದಕ್ಷಿಣ ಆಫ್ರಿಕಾ ಹಿಂಸೆ: ಪ್ರತಿಭಟನೆಯ ನೆವದಲ್ಲಿ ಲೂಟಿ; ಕಾಲ್ತುಳಿತದಿಂದಲೇ ಹಲವು ಸಾವು

ತನಿಖೆ ಸಹಕರಿಸದೇ ಕೋರ್ಟ್ ಆದೇಶ ಧಿಕ್ಕರಿಸಿದ ಕಾರಣಕ್ಕೆ ಮಾಜಿ ಅಧ್ಯಕ್ಷರು ಬಂಧನವಾದ ಬಳಿಕ ದಕ್ಷಿಣ ಆಫ್ರಿಕಾದ ಎರಡು ಪ್ರಾಂತ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಆದರೆ, ಪ್ರತಿಭಟನೆಗಿಂತ ಹೆಚ್ಚಾಗಿ ಜನರು ಲೂಟಿಯಲ್ಲಿ ನಿರತರಾಗಿದ್ದಾರೆಂದು ಪೊಲೀಸರು ಹೇಳುತ್ತಿದ್ದಾರೆ.

ದಕ್ಷಿಣ ಆಫ್ರಿಕಾದ ಭದ್ರತಾ ಪಡೆದ ಸಿಬ್ಬಂದಿ

ದಕ್ಷಿಣ ಆಫ್ರಿಕಾದ ಭದ್ರತಾ ಪಡೆದ ಸಿಬ್ಬಂದಿ

  • News18
  • Last Updated :
  • Share this:
ನವದೆಹಲಿ(ಜುಲೈ 14): ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜೇಕಬ್ ಝುಮಾ ಅವರನ್ನ ಕಳೆದ ವಾರ ಬಂಧಿಸಿದ ಬೆನ್ನಲ್ಲೇ ಆ ದೇಶದ ಎರಡು ಪ್ರಾಂತ್ಯಗಳಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ಇನ್ನೂ ಮುಂದುವರಿದಿದೆ. ನಿನ್ನೆ ರಾತ್ರಿಯವರೆಗೆ ಈ ಹಿಂಸಾಚಾರಗಳಿಗೆ 72 ಮಂದಿ ಬಲಿಯಾಗಿರುವ ಮಾಹಿತಿ ಸಿಕ್ಕಿದೆ. ಅಧ್ಯಕ್ಷರ ಬಂಧನವನ್ನು ವಿರೋಧಿಸಿ ಪ್ರತಿಭಟನೆಯ ಜೊತೆಗೆ ಜನರು ವಿವಿಧ ಅಂಗಡಿ ಮುಂಗಟ್ಟುಗಳನ್ನ ಲೂಟಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಲೂಟಿ ವೇಳೆಯಲ್ಲಿ ಜನರ ನೂಕುನುಗ್ಗಲಿನಿಂದಲೇ ಹಲವು ಸಾವುಗಳು ಸಂಭವಿಸಿವೆ ಎನ್ನಲಾಗಿದೆ. ಇನ್ನೊಂದೆಡೆ ಹಿಂಸಾಚಾರ ನಿರತ ಜನರನ್ನ ನಿಯಂತ್ರಿಸಲು ಪೊಲೀಸ್ ಮತ್ತು ಮಿಲಿಟರಿ ಪಡೆಗಳು ಸ್ಟನ್ ಗ್ರೆನೇಡ್ ಹಾಗೂ ರಬ್ಬರ್ ಬುಲೆಟ್​ಗಳನ್ನ ಪ್ರಯೋಗಿಸಿದ್ದಾರೆ. ಈವರೆಗೆ 1,200ಕ್ಕೂ ಹೆಚ್ಚು ಮಂದಿಯನ್ನ ಬಂಧಿಸಲಾಗಿದೆ. ಅದೃಷ್ಟವಶಾತ್, ಈ ಹಿಂಸಾಚಾರ ಘಟನೆಗಳು ದೇಶಾದ್ಯಂತ ಹರಡಿಲ್ಲ. ಕೇವಲ ಎರಡು ಪ್ರಾಂತ್ಯಗಳಿಗೆ ಬಹುತೇಕ ಸೀಮಿತವಾಗಿದೆ.

ಗೌಟೆಂಗ್ ಮತ್ತು ಕ್ವಾಝುಲು-ನಟಾಲ್ ಪ್ರಾಂತ್ಯಗಳಲ್ಲೇ ಹೆಚ್ಚಿನ ಸಾವುಗಳು ಸಂಭವಿಸಿದೆ. ಇಲ್ಲಿ ಜನರು ಮಳಿಗೆಗಳಿಗೆ ನುಗ್ಗಿ ಆಹಾರವಸ್ತು, ಮದ್ಯ, ಬಟ್ಟೆ, ಎಲೆಕ್ಟ್ರಿಕ್ ಉಪಕರಣ ಇತ್ಯಾದಿ ವಸ್ತುಗಳನ್ನ ದೋಚಿದ್ದಾರೆ. ಈ ವೇಳೆ ಭಾರೀ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದಿಂದಲೇ ಹಲವರು ಮೃತಪಟ್ಟಿದ್ದಾರೆ. ಗೌಟೆಂಗ್ ಪ್ರಾಂತ್ಯದಲ್ಲಿ ಸಂಭವಿಸಿದ 45 ಸಾವು ಹಾಗೂ ಕ್ವಾಝುಲು ಪ್ರಾಂತ್ಯದಲ್ಲಿ ಸಂಭವಿಸಿದ 27 ಸಾವುಗಳನ್ನ ತನಿಖೆ ಮಾಡಲಾಗುತ್ತಿದೆ. ಎಟಿಎಂ ಮೆಷಿನ್​​ಗಳನ್ನ ಮುರಿಯಲು ಯತ್ನಿಸಿದ ವೇಳೆ ಸ್ಫೋಟಗೊಂಡೂ ಸಾವು ಸಂಭವಿಸಿದ್ದು, ಅದರ ತನಿಖೆಯನ್ನೂ ಮಾಡಲಾಗುತ್ತಿದೆ ಎಂದು ಪೊಲೀಸ್ ಮುಖ್ಯಸ್ಥ ಮೇಜರ್ ಜನರಲ್ ಮ್ಯಾತಪೆಲೋ ಪೀಟರ್ಸ್ ನಿನ್ನೆ ರಾತ್ರಿ ಹೇಳಿಕೆ ನೀಡಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಧ್ಯಕ್ಷರ ಬಂಧನ ಯಾಕೆ?: ಜೇಕಬ್ ಝುಮಾ ಅವರು 2009ರಿಂದ 2018ರವರೆಗೆ ಸುಮಾರು ಹತ್ತು ವರ್ಷಗಳ ಕಾಲ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದರು. ಈ ವೇಳೆ ಅವರು ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದು, ಈಗಿನ ಸರ್ಕಾರ ತನಿಖೆಗೆ ಆದೇಶಿಸಿದೆ. ಆದರೆ, ಇದಕ್ಕೆ ಝುಮಾ ಸಹಕರಿಸುತ್ತಿಲ್ಲನ್ನಲಾಗಿದೆ. ಈ ವಿಚಾರದಲ್ಲಿ ಕೋರ್ಟ್ ಆದೇಶಕ್ಕೂ ಅವರು ಬೆಲೆ ನೀಡಿಲ್ಲ. ಹೀಗಾಗಿ, ಕಳೆದ ಗುರುವಾರದಂದು ನ್ಯಾಯಾಂಗ ನಿಂದನೆ ಆರೋಪದ ಮೇಲೆ ಅವರಿಗೆ 15 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ: Zika Virus: ಏನಿದು ಜಿಕಾ ವೈರಸ್? ಹೇಗೆ ಹರಡುತ್ತೆ? ಇದಕ್ಕೆ ಚಿಕಿತ್ಸೆ ಇದೆಯಾ? ಮಾಹಿತಿ ಇಲ್ಲಿದೆ..!

ಇದನ್ನ ವಿರೋಧಿಸಿ ಕೆಲವೆಡೆ ಪ್ರತಿಭಟನೆಗಳು ನಡೆದವು. ಆದರೆ, ನಂತರ ಕ್ರಿಮಿನಲ್​ಗಳು ಪರಿಸ್ಥಿತಿಯ ಲಾಭ ಮಾಡಿಕೊಳ್ಳುತ್ತಿದ್ದಾರೆ. ಸಿಕ್ಕ ಸಿಕ್ಕವನ್ನ ಲೂಟಿ ಮಾಡುತ್ತಿದ್ದಾರೆ ಎಂಬುದು ಪೊಲೀಸರ ವಾದ. ದಕ್ಷಿಣ ಆಫ್ರಿಕಾ ದೇಶದಲ್ಲಿ ಒಟ್ಟಾರೆ 6 ಲಕ್ಷ ಜನಸಂಖ್ಯೆ ಇದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಇನ್ನೂ ಬಡತನದಲ್ಲೇ ಜೀವನ ನಡೆಸುತ್ತಿದ್ದಾರೆ. ಅಲ್ಲಿ ಶೇ. 32ರಷ್ಟು ನಿರುದ್ಯೋಗ ಪ್ರಮಾಣ ಇದೆ. ಈಗ ಕೋವಿಡ್ ಬಿಕ್ಕಟ್ಟು, ಉದ್ಯೋಗ ನಷ್ಟ, ಆರ್ಥಿಕ ಕುಸಿತ ಇತ್ಯಾದಿಯಾಗಿ ಬಡಜನರು ಇನ್ನೂ ಬಳಲಿದ್ದಾರೆ. ಹೀಗಾಗಿ, ಪ್ರತಿಭಟನೆಯ ನೆವದಲ್ಲಿ ಅನೇಕ ಜನರು ಲೂಟಿ, ದರೋಡೆ ಕೃತ್ಯಗಳನ್ನ ಎಸಗುತ್ತಿದ್ದಾರೆನ್ನಲಾಗಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: