ಜೀವಂತವಾಗಿರುವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ದಾಖಲೆಯಲ್ಲಿ ಹೇಳಿದರೆ ಜೀವಂತವಾಗಿರುವ ಆತ ಏನು ಮಾಡಬೇಕು. ತಾನು ಬದುಕಿದ್ದೇನೆ ಎಂದು ಸಾಬೀತುಪಡಿಸಬೇಕು. ಲಾಲ್ ಬಿಹಾರಿ ಮೃತಕ್ ಎಂಬ ವ್ಯಕ್ತಿ ಈ ವಿಷಯದ ಕಾರಣ ಇದೀಗ ಸುದ್ದಿಯಲಿದ್ದಾರೆ. ಲಾಲ್ ಬಿಹಾರಿ ಮೃತಕ್ ಅವರು ಜೀವಂತವಾಗಿದ್ದೇನೆ ಎಂದು ಸಾಬೀತು ಪಡಿಸಲು ಹರಸಾಹಸವೇ ಪಡಬೇಕಾಯಿತು. ಅಂದರೆ ಸರ್ಕಾರಿ ದಾಖಲೆಗಳಲ್ಲಿ ಇವರು ಸಾವನ್ನಪ್ಪಿದ್ದಾರೆ ಎಂದು ದಾಖಲಾಗಿತ್ತು. ಈಗ ಸರ್ಕಾರಿ ದಾಖಲೆಗಳಲ್ಲಿ ಅವರು 27 ವರ್ಷದ ಯುವಕನಾಗಿ ಬದುಕಿದ್ದಾರೆ.
ಸರ್ಕಾರಿ ದಾಖಲೆಗಳ ಪ್ರಕಾರ 66 ವರ್ಷದ ಮೃತಕ್ 27 ವರ್ಷದವರಾಗಿದ್ದು 2022ರಲ್ಲಿ 28ಕ್ಕೆ ಕಾಲಿಡಲಿದ್ದಾರೆ. ಈಗ ತಮ್ಮ 56 ವರ್ಷದ ಪತ್ನಿ ಕರ್ಮಿ ದೇವಿ ಅವರನ್ನು ಮರು ವಿವಾಹವಾಗಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳು ನಡೆದಿವೆ. ಇವರು ಜೀವಂತವಾಗಿರುವುದನ್ನು ಜೂನ್ 30, 1994ರಲ್ಲಿ ಘೋಷಿಸಿಕೊಂಡಿದ್ದಾರೆ.
ಸರ್ಕಾರಿ ದಾಖಲೆಗಳ ಪ್ರಕಾರ ನಾನು 27 ವರ್ಷದ ಹಿಂದೆ ಜನಿಸಿದ್ದೇನೆ. 2022ರಲ್ಲಿ ನನ್ನ ವಿವಾಹ ಜರುಗಲಿದೆ. ಸರ್ಕಾರಿ ದಾಖಲೆಗಳ ಪ್ರಕಾರ 2022ಕ್ಕೆ ನನಗೆ 28 ವರ್ಷ ತುಂಬಲಿದೆ ಎಂದು ಸ್ವತಃ ಲಾಲ್ ಬಿಹಾರಿ ಮೃತಕ್ ಅವರೇ ತಿಳಿಸಿದ್ದಾರೆ.ಇವರಿಗೆ ಮೂರು ಮಕ್ಕಳಿದ್ದು, ಇಬ್ಬರು ಹೆಣ್ಣು ಮತ್ತು ಒಂದು ಗಂಡು ಮಗ. ಇವರೆಲ್ಲರಿಗೂ ವಿವಾಹವಾಗಿದೆ. ಲಾಲ್ ಬಿಹಾರಿ ಅವರಿಗೆ ಇದೀಗ 66 ವರ್ಷ. ಇವರು ಬದುಕಿರುವ ಬಗ್ಗೆ ಸಾಬೀತು ಪಡಿಸುವ ಸಲುವಾಗಿ ತಮ್ಮ ಪತ್ನಿಯ ಜೊತೆ ಮರು ಮದುವೆಯಾಗಬೇಕಾಗಿದೆ.
ನಾನು ಹೋರಾಡಿ ನನ್ನ ಪ್ರಕರಣವನ್ನು ಗೆದ್ದಿದ್ದರೂ, ವ್ಯವಸ್ಥೆಯಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ. ನಾನು 18 ವರ್ಷಗಳ ಕಾಲ ಸರ್ಕಾರಿ ದಾಖಲೆಗಳಲ್ಲಿ ‘ಸತ್ತಿದ್ದೇನೆ’. ಸತ್ತವರು ಎಂದು ಘೋಷಿಸಲ್ಪಟ್ಟ ಜನರು ಇನ್ನೂ ಇದ್ದಾರೆ ಮತ್ತು ಅವರ ಜಮೀನನ್ನು ಸರ್ಕಾರಿ ಅಧಿಕಾರಿಗಳ ಮೂಲಕ ಸಂಬಂಧಿಕರು ಆಕ್ರಮಿಸಿಕೊಂಡಿದ್ದಾರೆ. ಕಳೆದ ದಶಕಗಳಲ್ಲಿ ನಾನು ಇಂತಹ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದೆ. ಈ ಅಭಿಯಾನವನ್ನು ನಾನು ಮುಂದಿನ ದಿನಗಳಲ್ಲಿ ಮುದುವರಿಸಬೇಕು ಎಂದು ಅವರು ಹೇಳಿದರು.
ಲಾಲ್ ಬಿಹಾರಿ ಅವರು ಉತ್ತರಪ್ರದೇಶದ ಆಜಮ್ಘರ್ ಜಿಲ್ಲೆಯ ಅಮಿಲೋ ಎಂಬ ಗ್ರಾಮದವರು. ಇವರು ಸತ್ತಿದ್ದಾರೆ ಎಂದು 1975ರಲ್ಲಿ ಅಧಿಕೃತವಾಗಿ ಘೋಷಿಸಲಾಗಿತ್ತು. ತಾವು ಸತ್ತಿಲ್ಲ ಬದುಕಿದ್ದೇನೆ ಎಂದು ಸಾಬೀತುಪಡಿಸುವ ಹೋರಾಟದಲ್ಲಿ ಅವರು ತಮ್ಮ ಹೆಸರಿನ ಮುಂದೆ ಮೃತಕ್ ಎಂದು ಸೇರಿಸಿಕೊಂಡಿದ್ದಾರೆ. ಇವರಂತೆಯೇ ಹಲವು ಮಂದಿಗೆ ಈ ರೀತಿ ಮೋಸವಾಗಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿಯೇ ಮೃತಕ್ ಎಂಬ ಸಂಘವನ್ನು ಸ್ಥಾಪಿಸಿ ಈ ಮೂಲಕ ಹಲವು ಮಂದಿಗೆ ಸಹಾಯ ಮಾಡುತ್ತಿದ್ದಾರೆ.
ಚಲನಚಿತ್ರ ನಿರ್ಮಾಪಕ ಸತೀಶ್ ಕೌಶಿಕ್ ‘ಕಾಗಾಜ್’ ಚಿತ್ರವನ್ನು ಮಾಡಿದ್ದು, ನಟ ಪಂಕಜ್ ತ್ರಿಪಾಠಿ ಮೃತಕ್ ಪಾತ್ರವನ್ನು ನಿಭಾಯಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ