ಮುಂಬೈ: ಒಂದೆರಡು ದಿನಗಳ ಹಿಂದೆಯಷ್ಟೇ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ (Social Media) ಶವವೊಂದು ಸಿಕ್ಕಿದ್ದು, ಗುರುತು ಪತ್ತೆ ಹಚ್ಚಲು ಮನವಿ ಮಾಡಿದ್ದಾರೆ. ಪೋಸ್ಟ್ ಗಮನಿಸಿದ ಕುಟುಂಬಸ್ಥರು ಶವವನ್ನು ಗುರುತಿಸಿ ತಮ್ಮೂರಿಗೆ ತೆಗೆದುಕೊಂಡು ಹೋಗಿ ಸಮಾಧಿ (Burial) ಮಾಡಿ ಎಲ್ಲಾ ಕಾರ್ಯಗಳನ್ನು ಮುಗಿಸಿದ್ದಾರೆ. ಆದರೆ ಸಮಾಧಿ ಮಾಡಲಾದ ವ್ಯಕ್ತಿಗೆ ಆತನ ಸ್ನೇಹಿತ ಕರೆಮಾಡಿದ್ದು, ಆ ಕಡೆಯಿಂದ ಸತ್ತದ್ದಾನೆ ಎನ್ನಲಾದ ವ್ಯಕ್ತಿ ಕರೆ ಸ್ವೀಕರಿಸಿದ್ದಾನೆ. ಇದನ್ನು ನೋಡಿ ಆ ವ್ಯಕ್ತಿ ಗಾಬರಿಯಾಗಿದ್ದಾನೆ. ಅವನಷ್ಟೇ ಅಲ್ಲ, ನಿನ್ನೆ ಸಮಾಧಿ ಮಾಡಿದವ ಇಂದು ವಿಡಿಯೋ ಕರೆಯಲ್ಲಿ (Video call) ಮಾಡುತ್ತಾನೆಂದರೆ ಖಂಡಿತಾ ಎಂತಹ ವ್ಯಕ್ತಿಯಾದರೂ ಭಯ ಪಡಲೇಬೇಕು. ಆದರೆ ಈ ಪ್ರಕರಣದಲ್ಲಿ ಫೋನ್ ಮಾಡಿದ್ದು, ದೆವ್ವ- ಭೂತ ಅಲ್ಲ, ಬದಲಾಗಿ ನಿಜವಾದ ವ್ಯಕ್ತಿಯೇ. ಟ್ವಿಸ್ಟ್ ಏನೆಂದರೆ ಕುಟುಂಬಸ್ಥರು ತಂದು ಸಮಾಧಿ ಮಾಡಿದ್ದ ಶವ ಮಾತ್ರ ಬೇರೆ ಯಾರದ್ದೋ. ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಪೊಲೀಸರಿಗೆ ತಲೆನೋವು ತಂದಿದೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ 60 ವರ್ಷದ ಆಟೋ ರಿಕ್ಷಾ ಚಾಲಕ ಸಾವನ್ನಪ್ಪಿದ್ದಾನೆಂದು ಆತನ ಕುಟುಂಬಸ್ಥರು ಸಮಾಧಿ ಮಾಡಿ ಎಲ್ಲಾ ಕಾರ್ಯವನ್ನು ಮುಗಿಸಿದ್ದರು. ಆದರೆ ಶವ ಸಂಸ್ಕಾರ ಮಾಡಲಾದ ವ್ಯಕ್ತಿ ಬದುಕಿದ್ದಾನೆಂದು ಪೊಲೀಸರಿಗೆ ಕುಟುಂಬಸ್ಥರೇ ಮಾಹಿತಿ ನೀಡಿದ್ದಾರೆ. ಆ ವ್ಯಕ್ತಿ ತನ್ನ ಸ್ನೇಹಿತನೊಂದಿಗೆ ವಿಡಿಯೋ ಚಾಟ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಪೊಲೀಸ್ ಸಮಾಧಿ ಮಾಡಲಾಗಿರುವ ವ್ಯಕ್ತಿಯ ಗುರುತು ಪತ್ತೆಗೆ ಮುಂದಾಗಿದ್ದಾರೆ.
ರೈಲು ಡಿಕ್ಕಿಯಾಗಿ ವ್ಯಕ್ತಿ ಸಾವು
ಜನವರಿ 29ರಂದು ಬೋಯ್ಸರ್ ಮತ್ತು ಪಾಲ್ಘರ್ ನಿಲ್ದಾಣಗಳ ನಡುವೆ ಹಳಿ ದಾಟುವಾಗ ಅಪರಿಚಿತ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದ. ಸರ್ಕಾರಿ ರೈಲ್ವೆ ಪೊಲೀಸ್ ವ್ಯಕ್ತಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಗುರುತು ಪತ್ತೆ ಹಚ್ಚುವಂತೆ ಮನವಿ ಮಾಡಿಕೊಂಡಿದ್ದರು. ಈ ಪೋಸ್ಟ್ ನೋಡಿ ಪಾಲ್ಘರ್‌ನ ವ್ಯಕ್ತಿಯೊಬ್ಬರು ರೈಲ್ವೆ ಸಂಪರ್ಕಿಸಿದ್ದು, ಆ ವ್ಯಕ್ತಿ ತನ್ನ ಸಹೋದರ ರಫೀಕ್ ಶೇಖ್ ಎಂದು ಹೇಳಿಕೊಂಡಿದ್ದಾರೆ. ತನ್ನ ಸಹೋದರ ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಈ ಸಂಬಂಧ ಕುಟುಂಬವು ಪೊಲೀಸರಿಗೆ ದೂರನ್ನು ಸಹಾ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾನೆ.
ಇದನ್ನೂ ಓದಿ: Crime news: ಅತ್ಯಾಚಾರಕ್ಕೆ ಯತ್ನಿಸಿದವನ ತುಟಿ ಕಚ್ಚಿ ತುಂಡರಿಸಿದ ಯುವತಿ! ಮಾನಗೇಡಿ ಕೃತ್ಯಕ್ಕೆ ಬಂದವ ಈಗ ಆಸ್ಪತ್ರೆ ಪಾಲು!
ಶವ ಗುರುತಿಸಿ ಕೊಂಡೊಯ್ದ ಕುಟುಂಬ
ಈ ಕರೆಯ ನಂತರ ಪಾಲ್ಘರ್ ರೈಲ್ವೆ ಪೊಲೀಸ್ ಕೇರಳದಲ್ಲಿದ್ದ ಮೃತ ವ್ಯಕ್ತಿಯ ಹೆಂಡತಿಯನ್ನು ಸಂಪರ್ಕಿಸಿದೆ. ವಿಷಯ ತಿಳಿದ ಮೃತನ ಪತ್ನಿ ಪಾಲ್ಘರ್‌ಗೆ ಬಂದು ಶವವನ್ನು ಗುರುತಿಸಿದ ನಂತರ, ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಕುಟುಂಬಸ್ಥರು ಶವವನ್ನು ತೆಗೆದುಕೊಂಡು ಹೋಗಿ ಎರಡು ದಿನಗಳ ಹಿಂದೆ ಶವವನ್ನು ಸಮಾಧಿ ಮಾಡಿದ್ದಾರೆ. ಎಂದು ಜಿಆರ್ಪಿ ಇನ್ಸ್ಪೆಕ್ಟರ್ ನರೇಶ್ ರಣದೀರ್ ಹೇಳಿದರು.
ಕರೆ ಸ್ವೀಕರಿಸಿದ ಸತ್ತಿದ್ದ ವ್ಯಕ್ತಿ
ಆದರೆ ಭಾನುವಾರ ಮೃತಪಟ್ಟಿದ್ದ ಎನ್ನಲ್ಲಾದ ರಫೀಕ್ ಶೇಖ್ ಫೋನ್ಗೆ ಆತನ ಒಬ್ಬ ಸ್ನೇಹಿತ ಸುಮ್ಮನೆ ಕರೆ ಮಾಡಿದ್ದಾನೆ. ಆದರೆ ಈ ಕರೆಯನ್ನು ರಫೀಕ್ ಶೇಖ್ ಸ್ವೀಕರಿಸಿದ್ದಾನೆ. ಇದರಿಂದ ಸ್ನೇಹಿತ ಆಘಾತ ಮತ್ತು ಆಶ್ಚರ್ಯಕ್ಕೆ ಒಳಗಾಗಿದ್ದಾನೆ. ನಂತರ ಇಬ್ಬರು ವಿಡಿಯೋ ಕರೆಯಲ್ಲಿಯೂ ಮಾತನಾಡಿದ್ದಾರೆ. ಈ ವೇಳೆ ತಾನೂ ಸತ್ತಿಲ್ಲ, ಆರಾಮವಾಗಿದ್ದೇನೆ ಶೇಖ್ ಸ್ನೇಹಿತನಿಗೆ ಸ್ಪಷ್ಟಪಡಿಸಿದ್ದಾನೆ ಎಂದು ಪೊಲೀಸ್ ತಿಳಿಸಿದ್ದಾರೆ.
ಕುಟುಂಬಸ್ಥರೊಂದಿಗೂ ಮಾತುಕತೆ
ಶೇಖ್ ಮತ್ತು ಸ್ನೇಹಿತನ ನಡುವಿನ ಫೋನ್ ಚಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಊರೆಲ್ಲಾ ಸುದ್ದಿಯಾದ ನಂತರ, ಈ ವಿಷಯ ಶೇಖ್ ಕುಟುಂಬಸ್ಥರಿಗೂ ತಿಳಿದುಬಂದಿದೆ. ಅವರೂ ಶೇಖ್ರನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ನಂತರ ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸ್ ಅಧಿಕಾರಿಯ ಪ್ರಕಾರ, ಶೇಖ್ ಒಂದೆರಡು ತಿಂಗಳ ಹಿಂದೆ ತನ್ನ ಮನೆಯನ್ನು ತೊರೆದು ಪಾಲ್ಘರ್‌ನ ಸಫಲಾದಲ್ಲಿರುವ ನಿರ್ಗತಿಕರ ಮನೆಯಲ್ಲಿ ಆಶ್ರಯದಲ್ಲಿದ್ದರು ಎಂದು ತಿಳಿದುಬಂದಿದೆ.
ಅಪರಿಚಿತ ಶವದ ಕುಟುಂಬದ ಹುಡುಕಾಟ
ಕುಟುಂಬ ಸದಸ್ಯರು ಶವವನ್ನು ಗುರುತಿಸಿದ್ದರಿಂದ ಮತ್ತು ಅಗತ್ಯವಿರುವ ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಿಯೇ ಅವರಿಗೆ ಶವ ಹಸ್ತಾಂತರಿಸಲಾಗಿದೆ. ನಂತರ ಶೇಖ್ ಬದುಕಿರುವ ಬಗ್ಗೆ ಅದೇ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ, ಸಮಾಧಿ ಮಾಡಲಾದ ಅಪರಿಚಿತ ಮೃತ ವ್ಯಕ್ತಿಯ ಕುಟುಂಬವನ್ನು ಪತ್ತೆಹಚ್ಚುವುದು ನಮ್ಮ ಕಾರ್ಯವಾಗಿದೆ ಎಂದು ನರೇಶ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ