ಹೊಸದಿಲ್ಲಿ: ಈಶಾನ್ಯ ಭಾರತದ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗೆ (Assembly Election 2023) ದಿನಾಂಕ ಘೋಷಣೆಯಾಗಿದೆ. ತ್ರಿಪುರಾ, (Tripura) ಮೇಘಾಲಯ (Meghalaya) ಮತ್ತು ನಾಗಾಲ್ಯಾಂಡ್ (Nagaland) ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ (Election Commission of India) ದಿನಾಂಕ ನಿಗದಿ ಪಡಿಸಿದ್ದು, ಕ್ರಮವಾಗಿ ಫೆಬ್ರವರಿ 16, ಫೆಬ್ರವರಿ 27 ರಂದು ಮೂರು ರಾಜ್ಯಗಳಿಗೆ ಚುನಾವಣೆ ನಡೆಯಲಿದೆ. ಮಾರ್ಚ್ ಎರಡರಂದು ಈ ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ವರ್ಷದ ಮೊದಲ ಚುನಾವಣೆ
ನೂತನ ಸರ್ಕಾರದ ಆಯ್ಕೆಗೆ ತ್ರಿಪುರಾ ರಾಜ್ಯದಲ್ಲಿ ಫೆಬ್ರವರಿ 16ರಂದು ಚುನಾವಣೆ ನಡೆಯಲಿದ್ದು, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ. ವಿಶೇಷ ಅಂದರೆ ಈ ವರ್ಷದ ಮೊದಲ ಚುನಾವಣೆ ಈಶಾನ್ಯ ಭಾರತದ ಮೂರು ರಾಜ್ಯಗಳಲ್ಲಿ ನಡೆಯಲಿದೆ. ಮೂರೂ ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಹೈಸ್ಕೂಲ್, ಕಾಲೇಜುಗಳ ಪರೀಕ್ಷೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳನ್ನು ಗಮನದಲ್ಲಿ ಇಟ್ಟುಕೊಂಡು ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಚುನಾವಣೆ ನಡೆಯಲಿರುವ ಮೂರೂ ರಾಜ್ಯಗಳು ತಲಾ 60 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದ್ದರೆ, ಮೇಘಾಲಯದಲ್ಲಿ ಈಶಾನ್ಯ ಭಾಗದಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದಿರುವ ಏಕೈಕ ಪಕ್ಷವಾಗಿರುವ ದಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಅಧಿಕಾರದ ಚುಕ್ಕಾಣಿಯಲ್ಲಿದೆ. ಇನ್ನು ನಾಗಾಲ್ಯಾಂಡ್ನಲ್ಲಿ ನ್ಯಾಷನಲಿಸ್ಟಿಕ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ ಆಡಳಿತ ನಡೆಸುತ್ತಿದೆ.
ಒಟ್ಟು 62.8 ಲಕ್ಷ ಮತದಾರರು
ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ರಾಜ್ಯದಲ್ಲಿ ಒಟ್ಟು 62.8 ಲಕ್ಷ ಮತದಾರರಿದ್ದು, ಆ ಪೈಕಿ 31.47 ಲಕ್ಷ ಮಹಿಳಾ ಮತದಾರರಿದ್ದಾರೆ. ಇನ್ನು 3 ರಾಜ್ಯಗಳ ಈ ಬಾರಿಯ ಚುನಾವಣೆಯಲ್ಲಿ ಸುಮಾರು 1.76 ಲಕ್ಷಕ್ಕೂ ಹೆಚ್ಚು ಮೊದಲ ಬಾರಿಗೆ ಹಕ್ಕು ಚಲಾಯಿಸುವ ಮತದಾರರು ಇದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತ್ರಿಪುರಾ ಕಡೆ ಹೆಚ್ಚಿದ ಗಮನ
ಇದೇ ಮೊದಲ ಬಾರಿಗೆ ತ್ರಿಪುರಾದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಹಪಾಹಪಿಯಲ್ಲಿದ್ದು, ಆದರೆ ಪಕ್ಷದೊಳಗಿನ ಬಂಡಾಯದ ಕಾವು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಆಂತರಿಕ ಬಂಡಾಯವನ್ನು ಶಮನಗೊಳಿಸಲು ಬಿಜೆಪಿ ಪಾಳಯ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.
ಇದನ್ನೂ ಓದಿ: Election Commission: 17 ವರ್ಷದವರು ಕೂಡ ಈಗ ವೋಟರ್ ಐಡಿಗಾಗಿ ಅರ್ಜಿ ಸಲ್ಲಿಸಬಹುದು; ಚುನಾವಣಾ ಆಯೋಗ ಘೋಷಣೆ
ಕಳೆದ ಬಾರಿಯ ಚುನಾವಣೆಯಲ್ಲಿ 25 ವರ್ಷಗಳ ಕಾಲದ ಕಮ್ಯುನಿಸ್ಟ್ ಆಡಳಿತವನ್ನು ಕೊನೆಗೊಳಿಸಿ ಬಿಜೆಪಿ ಜಯಭೇರಿ ಬಾರಿಸಿತ್ತು. ಬಳಿಕ ಬಿಜೆಪಿಯಿಂದ ಬಿಪ್ಲಬ್ ದೇಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆದರೆ ಪಕ್ಷದೊಳಗೆ ಹೆಚ್ಚಿದ ಆಂತರಿಕ ಕಚ್ಚಾಟದ ಕಾರಣದಿಂದ ಬಿಪ್ಲಬ್ ದೇಬ್ರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಮಾಣಿಕ್ ಸಹಾರನ್ನು ಮುಖ್ಯಮಂತ್ರಿಯಾಗಿ ಬಿಜೆಪಿ ನೇಮಿಸಿತ್ತು.
ಬಂಡಾಯ ಶಮನಕ್ಕೆ ಸ್ವತಃ ಆಗಮಿಸಿದ್ದ ಅಮಿತ್ ಶಾ
ತ್ರಿಪುರಾ ಬಿಜೆಪಿಯಲ್ಲಿ ಬಂಡಾಯದ ಬಿಸಿ ಮಿತಿ ಮೀರುತ್ತಿದ್ದಂತೆ ಕೇಂದ್ರ ಗೃಹ ಸಚಿವ, ಬಿಜೆಪಿಯ ಚಾಣಕ್ಯ ಅಮಿತ್ ಶಾ ಅವರೇ ತ್ರಿಪುರಾಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಪಕ್ಷದ ಒಳಗೆ ನಡೆಯುತ್ತಿದ್ದ ಆಂತರಿಕ ಕಚ್ಚಾಟ ಮತ್ತು ಇನ್ನಿತರ ಸಮಸ್ಯೆಗಳ ಬಗ್ಗೆ ತಿಳಿದು ಕೊಂಡಿದ್ದರು, ಬಳಿಕ ಜನ ವಿಶ್ವಾಸ ಯಾತ್ರೆಯನ್ನು ಹಮ್ಮಿಕೊಂಡು ಜನರನ್ನು ಪಕ್ಷದತ್ತ ಸೆಳೆಯಲು ಪ್ರಯತ್ನಿಸಿದ್ದರು. ಅದಾಗ್ಯೂ ಕೂಡ ಬಿಜೆಪಿಯೊಳಗಿನ ಬಂಡಾಯದ ಬಿಸಿ ಇನ್ನೂ ತಗ್ಗಿಲ್ಲ. ಮುಂಬರುವ ಚುನಾವಣೆಯಲ್ಲಿ ಈ ಸಮಸ್ಯೆಯನ್ನು ಬಿಜೆಪಿ ಹೈಕಮಾಂಡ್ ಶಮನಗೊಳಿಸುತ್ತಾ ಅಥವಾ ಸರ್ಕಾರದ ಹುಳುಕುಗಳನ್ನು ವಿಪಕ್ಷಗಳು ಸರಿಯಾದ ರೀತಿಯಲ್ಲಿ ಬಳಸಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ