News18 India World Cup 2019

ಪ್ರಧಾನಿ ಮೋದಿ ಭ್ರಷ್ಟ, ರಫೇಲ್​ ಒಪ್ಪಂದದಲ್ಲಿ ಕೈವಾಡ ಬಹಿರಂಗ; ರಾಹುಲ್​ ಗಾಂಧಿ

ಫ್ರೆಂಚ್ ಮಾಧ್ಯಮಗಳಲ್ಲಿ ಬಿಜೆಪಿ ಕೈವಾಡದ ಬಗ್ಗೆ ವರದಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ದೇಶದ ಚೌಕಿದಾರರಲ್ಲ, ಅವರು ಅತಿದೊಡ್ಡ ಭ್ರಷ್ಟ; ರಾಹುಲ್​

Ganesh Nachikethu
Updated:October 11, 2018, 1:34 PM IST
ಪ್ರಧಾನಿ ಮೋದಿ ಭ್ರಷ್ಟ, ರಫೇಲ್​ ಒಪ್ಪಂದದಲ್ಲಿ ಕೈವಾಡ ಬಹಿರಂಗ; ರಾಹುಲ್​ ಗಾಂಧಿ
ರಾಹುಲ್​ ಗಾಂಧಿ
Ganesh Nachikethu
Updated: October 11, 2018, 1:34 PM IST
ನ್ಯೂಸ್​​-18 ಕನ್ನಡ

ನವದೆಹಲಿ(ಅ.11): ರಫೇಲ್ ಯುದ್ಧ ವಿಮಾನಗಳ ಖರೀದಿ ವಿಚಾರದಲ್ಲಿ ಫ್ರಾನ್ಸ್​​ನ  ಡಸ್ಸಾಲ್ಟ್​ ಸಂಸ್ಥೆಗೆ ರಿಲಯನ್ಸ್‌ ಡಿಫೆನ್ಸ್‌ ಜೊತೆಗಿನ ಪಾಲುದಾರಿಕೆ 'ಅನಿವಾರ್ಯ' ಮತ್ತು 'ಕಡ್ಡಾಯ'ವಾಗಿತ್ತು ಎಂದು ಫ್ರೆಂಚ್​​ ಮೂಲದ ‘ಮೀಡಿಯಾ ಪಾರ್ಟ್’​​ ಎಂಬ ವೆಬ್​​ಸೈಟ್​​ ವರದಿ ಮಾಡಿದೆ.

ಭಾರತದೊಂದಿಗೆ ಒಪ್ಪಂದದ ಅನ್ವಯ ಯುದ್ಧ ವಿಮಾನಗಳ ನಿರ್ಮಾಣಕ್ಕಾಗಿ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದ ಅಗತ್ಯವಿತ್ತು. ಅಲ್ಲದೇ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಯೋಜನೆ ರೂಪಿಸಲು ಇದೊಂದು ಉತ್ತಮ ಆಯ್ಕೆಯೂ ಕೂಡ ಆಗಿತ್ತು. ಈ ಕಾರಣಕ್ಕಾಗಿಯೇ ಅನಿಲ್ ಅಂಬಾನಿ ಅವರ ಮಾಲೀಕತ್ವದ ರಿಲಯನ್ಸ್ ಡಿಫೆನ್ಸ್ ಸಂಸ್ಥೆಯನ್ನು ಡಸ್ಸಾಲ್ಟ್​​ ಆಯ್ಕೆ ಮಾಡಿಕೊಂಡಿದೆ ಎಂದು ಮೀಡಿಯಾ ಪಾರ್ಟ್​​ ವರದಿ ಮಾಡಿದೆ.

ಮೋದಿ ಭ್ರಷ್ಟ:

ಇದರ ಬೆನ್ನಲ್ಲೇ ಕಾಂಗ್ರೆಸ್​ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯತೊಡಗಿದೆ. ರಫೇಲ್​ ಒಪ್ಪಂದದ ಬಗ್ಗೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್​ ರಾಷ್ಟ್ರಾಧ್ಯಕ್ಷ ರಾಹುಲ್​ ಗಾಂಧಿ, "ಇಡೀ ದೇಶವೇ ರಫೇಲ್ ಬಗ್ಗೆ ಚರ್ಚಿಸುತ್ತಿದೆ. ಆದರೆ ಪ್ರಧಾನಿ ಮೋದಿ ರಫೇಲ್ ಬಗ್ಗೆ ಏನೂ ಮಾತಾಡುತ್ತಿಲ್ಲ. ರಕ್ಷಣಾ ಸಚಿವೆ ಫ್ರಾನ್ಸ್​ಗೆ ಯಾವ ಕಾರಣಕ್ಕೆ ಹೋಗಿದ್ದಾರೆ?," ಎಂದು ಪ್ರಶ್ನಿಸಿದ್ದಾರೆ.

ಮುಂದುವರೆದ ರಾಹುಲ್​, "ಮೋದಿ ದೇಶಕ್ಕಾಗಿ ಅಲ್ಲ, ಉದ್ಯಮಿಗಳಿಗಾಗಿ ಶ್ರಮಿಸುತ್ತಿದ್ದಾರೆ. ಹಗರಣದಲ್ಲಿ ಬಿಜೆಪಿ ಕೈವಾಡ ಬಹಿರಂಗವಾಗಿದೆ. ಫ್ರೆಂಚ್ ಮಾಧ್ಯಮಗಳಲ್ಲಿ ಬಿಜೆಪಿ ಕೈವಾಡದ ಬಗ್ಗೆ ವರದಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ದೇಶದ ಚೌಕಿದಾರರಲ್ಲ, ಅವರು ಅತಿದೊಡ್ಡ ಭ್ರಷ್ಟ," ಎಂಬ ಗಂಭೀರ ಆರೋಪವನ್ನು ಮಾಡಿದರು.
Loading...

ಜತೆಗೆ ರಫೇಲ್​ ಒಪ್ಪಂದ ಸಂಬಂಧ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ರಾಹುಲ್ ಆಗ್ರಹಿಸಿದ್ದಾರೆ.

ಡಸ್ಸಾಲ್ಟ್​​ ಸಂಸ್ಥೆ ಸ್ಪಷ್ಟನೆ:

ಮೀಡಿಯಾ ಪಾರ್ಟ್​​ ವರದಿ ಬೆನ್ನಲ್ಲೇ ಅಧಿಕೃತವಾಗಿ ಡಸ್ಸಾಲ್ಟ್​​ ಸಂಸ್ಥೆಯೂ ಕೂಡ ರಫೇಲ್​​ ಒಪ್ಪಂದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದೆ. ಈ ಸಂಸ್ಥೆಯ ಡೆಪ್ಯೂಟಿ ಚೀಫ್​​ ಎಕ್ಸಿಕ್ಯೂಟಿವ್​​ ಅವರೇ ರಫೇಲ್​​ ಒಪ್ಪಂದಕ್ಕೆ ಅನಿಲ್​​ ಅಂಬಾನಿ ಅವರ ಒಡೆತನದ ರಿಲಾಯನ್ಸ್​​ ಸಂಸ್ಥೆಯನ್ನು ಸಹಭಾಗಿತ್ವ ಸಂಸ್ಥೆಯನ್ನಾಗಿಸಲು ನೇತೃತ್ವ ವಹಿಸಿದ್ದರು. ಇದು ನಮಗೆ ಉತ್ತಮ ಮತ್ತು ಅನಿವಾರ್ಯವಾಗಿತ್ತು. ಹೀಗಾಗಿ ರಿಲಾಯನ್ಸ್​​ ಸಂಸ್ಥೆಯನ್ನೇ ಆಯ್ಕೆ ಮಾಡಿಕೊಂಡೆವು ಎಂದು ಡಸ್ಸಾಲ್ಟ್​​​ ಸಂಸ್ಥೆ ತನ್ನ ವೆಬ್​​​ಸೈಟಿನಲ್ಲಿ ಪ್ರಕಟಿಸಿದೆ.

ಇನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​ ಅವರು ಮೂರು ದಿನಗಳ ಕಾಲ ಫ್ರಾನ್ಸ್​​ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿಯೇ ರೆಫೇಲ್​​ ಒಪ್ಪಂದದಲ್ಲಿ ಡಸ್ಸಾಲ್ಟ್​​ ಸಂಸ್ಥೆ ಯಾಕೆ ರಿಲಯನ್ಸ್​​ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿತು ಎಂಬ ವಿಚಾರವನ್ನು ಮೀಡಿಯಾ ಪಾರ್ಟ್​​ ವೆಬ್​​ಸೈಟ್​​ ಮುಂದಿಟ್ಟಿದೆ. ಅಲ್ಲದೇ 58 ಸಾವಿರ ಕೋಟಿ ರೂ. ಮೊತ್ತದ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಅನಿಲ್​​​ ಅಂಬಾನಿಯವರ ಸಹಿ ಅನಿವಾರ್ಯವಾಗಿತ್ತು ಎಂದು ಕೂಡ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಈ ಹಿಂದೆಯೂ ರೆಫೇಲ್​​ ಒಂಪ್ಪದದ ಸುತ್ತ ವಿವಾದ ಭುಗಿಲೇಳುತ್ತಿದ್ದಂತೆಯೇ ಅದಕ್ಕೂ ತನಗೂ ಸಂಬಂಧವಿಲ್ಲ ಎಂದು ಫ್ರಾನ್ಸ್ ಸರ್ಕಾರ ಹೇಳಿತ್ತು. ಈ ಬೆನ್ನಲ್ಲೇ ಫ್ರಾನ್ಸ್​ ಫೈಟರ್ ಜೆಟ್ ನಿರ್ಮಾಣ ಸಂಸ್ಥೆ ಡಸ್ಸಾಲ್ಟ್ ಕೂಡ ಒಪ್ಪಂದದ ವಿಚಾರದಲ್ಲಿ ಫ್ರಾನ್ಸ್​​ ಸರ್ಕಾರದ ಹಸ್ತಕ್ಷೇಪವಿಲ್ಲ. ರಿಲಯನ್ಸ್ ಸಂಸ್ಥೆಯನ್ನು ಆಯ್ಕೆ ಮಾಡಿದ್ದು ನಾವೇ ಎಂದು ಹೇಳುವ ಮೂಲಕ ವಿವಾದಕ್ಕೆ ಬ್ರೇಕ್​​ ಹಾಕಿತ್ತು.

ಸುಪ್ರೀಂ ಮಧ್ಯಪ್ರವೇಶ:

ಫ್ರಾನ್ಸ್​ನಿಂದ 36 ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಇದುವರೆಗೂ ಕಾಂಗ್ರೆಸ್​​ ಸೇರಿದಂತೆ ಪ್ರತಿಪಕ್ಷಗಳು ಆರೋಪ ಮಾಡುತ್ತಿದ್ದು, ಇದೀಗ ಸುಪ್ರೀಂಕೋರ್ಟ್ ಸಹ ಮಧ್ಯ ಪ್ರವೇಶಿಸಿದೆ. ಯುದ್ಧ ವಿಮಾನ ಖರೀದಿಗೆ ಕೈಗೊಂಡ ನಿರ್ಧಾರಕ್ಕೆ ಸಂಬಂಧಿಸಿದಂತೆ, ಸಂಪೂರ್ಣ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ ಸೂಚಿಸಿದೆ ಎನ್ನಲಾಗಿದೆ.

ಇನ್ನು ವಿಚಾರಣೆ ವೇಳೆ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ರಾಷ್ಟ್ರೀಯ ಭದ್ರತಾ ಹಿತಾಸಕ್ತಿ ಅಡಗಿದೆ. ಇದು ಗೌಪ್ಯ ವಿಚಾರವಾದ ಕಾರಣ ಮಾಹಿತಿ ನೀಡಲು ಸಾಧ್ಯವಾಗದು ಎಂದು ಕೇಂದ್ರ ಸರ್ಕಾರ ವಾದಿಸಿದೆ. ಆದರೂ ಕೇಂದ್ರದ ವಾದವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್​​, ಯುದ್ಧ ವಿಮಾನದ ತಾಂತ್ರಿಕ ಮಾಹಿತಿಯನ್ನು ನೀಡಬೇಕಿಲ್ಲ. ಖರೀದಿಗೆ ಕೈಗೊಂಡ ನಿರ್ಧಾರಕ್ಕೆ ಸಂಬಂಧಿಸಿದ ಮಾಹಿತಿ ನೀಡಿದರೆ ಸಾಕು ಎಂದು ಖಡಕ್​​ ಆದೇಶ ಹೊರಡಿಸಿದೆ.

ನಿರ್ಮಲಾ ಸೀತರಾಮನ್​​ ಪ್ರತಿಕ್ರಿಯೆ:

ಬಹುಕೋಟಿ ಮೌಲ್ಯದ ರಫೇಲ್‌ ಯುದ್ಧ ವಿಮಾನ ಖರೀದಿ ಘೋಷಣೆಗೆ ಸಂಬಂಧಿಸಿದಂತೆ "ಸಿಎನ್‌ಎನ್‌-ನ್ಯೂಸ್‌ 18' ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ನಿರ್ಮಲಾ ಸೀತರಾಮನ್​​ ಅವರು, ಖರೀದಿ ಒಪ್ಪಂದಕ್ಕೆ ಸಹಿ ಮಾಡುವುದಾದರೆ ಮಾತ್ರ ಸಿಸಿಎಸ್‌ ಅನುಮತಿ ಬೇಕು ಎಂದರು.

ಇನ್ನು 16 ತಿಂಗಳ ಕಾಲ ಮಾತುಕತೆ ನಡೆದ ಬಳಿಕ ಟಿಪ್ಪಣಿ ಸಿದ್ಧಪಡಿಸಲಾಗಿದೆ. ಇದಕ್ಕೆ ಭದ್ರತಾ ಸಮಿತಿ ಅನುಮೋದನೆ ನೀಡಿದೆ. ಬಳಿಕವೇ ನಾವು ರಫೇಲ್​​ ಒಪ್ಪಂದಕ್ಕೆ ಸಹಿ ಹಾಕಲಾಯಿತು. 2016ರ ಸೆಪ್ಟೆಂಬರ್‌ನಲ್ಲಿ ನಡೆದದ್ದೂ ಕೂಡ ಅದೇ ಎಂದು ನಿರ್ಮಲಾ ಸೀತಾರಾಮನ್​​ ವಿವರಿಸಿದರು. ಅಲ್ಲದೇ ಈ ಬೆಳವಣಿಗೆ ನಡುವೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ತಡರಾತ್ರಿಯಿಂದ ಫ್ರಾನ್ಸ್‌ ಪ್ರವಾಸ ಆರಂಭಿಸಿದ್ದಾರೆ.
First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...